Chimul Election: ಚಿಮುಲ್ ಚುನಾವಣೆ: ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಆಕ್ರೋಶ, ಭರಣಿ ವೆಂಕಟೇಶ್ ಅವರ ಖಾಲಿ ಡಬ್ಬಾ ಹೇಳಿಕೆಗೆ ತೀವ್ರ ಖಂಡನೆ: ಕ್ಷಮೆ ಕೋರಲು ಆಗ್ರಹ
ಚುನಾವಣೆಯಲ್ಲಿ ನನ್ನ ಸೋಲಿಗೆ ನಾನೇ ಕಾರಣ. ಚುನಾವಣಾ ಪೂರ್ವ ತಯಾರಿಗೆ ಸಮಯದ ಅಭಾವ ವಿತ್ತು. ಸಹಕಾರಿ ಕ್ಷೇತ್ರದ ಚುನಾವಣೆಯಲ್ಲಿ ಇದು ನನ್ನ ಮೊದಲ ಅನುಭವ. ಗೋಪಾಲಕರ ಸೇವೆ ಮಾಡುವ ಉದ್ದೇಶದಿಂದ ಸ್ಪರ್ಧಿಸಿ ಆತುರದ ನಿರ್ಧಾರದ ಕಾರಣ ಸೋಲು ಕಂಡೆ. ಇನ್ನೂ ಗೆದ್ದ ಸಂತೋಷದಲ್ಲಿ ಭರಣಿ ವೆಂಕಟೇಶ್ ಅವರು ನನ್ನ ಹಿಂದೆ ಇದ್ದವರು ಖಾಲಿ ಡಬ್ಬಾಗಳು ಎಂದು ಹೇಳಿರುವುದು ಘನತೆಗೆ ತಕ್ಕದಲ್ಲ.ನಾವು ಖಾಲಿ ಡಬ್ಬಾಗಳೆ ಆಗಿರಲಿ.
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ಮುಖಂಡರು ಮಾತನಾಡಿದರು. -
ಚಿಕ್ಕಬಳ್ಳಾಪುರ: ಕೋಲಾರ ಹಾಲು ಒಕ್ಕೂಟದಿಂದ ಬೇರ್ಪಟ್ಟ ನಂತರ ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟದ ಆಡಳಿತ ಮಂಡಳಿ ನಿರ್ದೇಶಕರ ಆಯ್ಕೆಗೆ ನಡೆದ ಪ್ರಥಮ ಚುನಾವಣೆಯು ಫೆ.1ರಂದು ಮುಕ್ತಾಯಗೊಂಡು ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಆಕ್ರೋಶ ಭುಗಿಲೆದ್ದಿದೆ.
ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಮಾಜಿ ನಿರ್ದೇಶಕ ಎನ್.ಸಿ.ವೆಂಕಟೇಶ್ ಹಾಗೂ ಗ್ಯಾರಂಟಿ ಯೋಜನೆ ಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಯಲುವಳ್ಳಿ ಎನ್.ರಮೇಶ್ ಸ್ಪರ್ಧಿಸಿದ್ದರು.
ಇಬ್ಬರೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳೆಂದು ಘೋಷಿಸಿಕೊಂಡಿದ್ದರೂ,ಈ ಕ್ಷೇತ್ರದಲ್ಲಿ ಎನ್‌ಡಿಎ ಬೆಂಬಲಿತ ಅಭ್ಯರ್ಥಿ ಇರಲಿಲ್ಲ. ಪರಿಣಾಮವಾಗಿ ಕಾಂಗ್ರೆಸ್ ಬೆಂಬಲಿತ ಇಬ್ಬರ ನಡುವೆ ಯೇ ನೇರ ಹಣಾಹಣಿ ಏರ್ಪಟ್ಟಿತ್ತು.ಈ ಚುನಾವಣೆಯಲ್ಲಿ ಮಾಜಿ ನಿರ್ದೇಶಕ ಎನ್.ಸಿ.ಭರಣಿ ವೆಂಕಟೇಶ್ ಜಯ ಸಾಧಿಸಿದರು.
ಚುನಾವಣೆ ಫಲಿತಾಂಶದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಭರಣಿ ವೆಂಕ ಟೇಶ್, ರಮೇಶ್ ಅವರ ಹಿಂದೆ ಇದ್ದವರು ಬಿಳಿತಲೆಯ ಖಾಲಿ ಡಬ್ಬಾಗಳು, ಹಣಕ್ಕಾಗಿ ಅವರ ಹಿಂದೆ ಇದ್ದವರಾಗಿದ್ದಾರೆ ಎಂದು ಟೀಕಿಸಿದ್ದರು.
ಇದನ್ನೂ ಓದಿ: Chimul Election: ಬಿಳಿ ತಲೆಯ ಖಾಲಿ ಡಬ್ಬಗಳು ಸೋತಿದ್ದು, ಕೂಲಿ ಪಡೆದ ತೃಪ್ತಿಯಿದೆ: ಭರಣಿ ವೆಂಕಟೇಶ್
ಈ ಹೇಳಿಕೆಗೆ ಚಿಕ್ಕಬಳ್ಳಾಪುರ ಕಾಂಗ್ರೆಸ್ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದ್ದು ಕ್ಷಮಾ ಪಣೆ ಕೋರಬೇಕೆಂಬ ಒತ್ತಾಯ ಜೋರಾಗಿ ಕೇಳಿ ಬಂದಿದೆ.
ನಗರದ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಪರಾಜಿತ ಅಭ್ಯರ್ಥಿ ಯಲುವಳ್ಳಿ ಎನ್.ರಮೇಶ್,ಬೀಜ ನಿಗಮದ ಅಧ್ಯಕ್ಷ ಅಂಜನಪ್ಪ,ಹಿರಿಯ ಮುಖಂಡರಾದ ಸೋಮಶೇಖರ್ ಹಾಗೂ ಲಾಯರ್ ನಾರಾಯಣಸ್ವಾಮಿ,ಕೆ.ಎಂ. ಮುನೇಗೌಡ ಅವರು, ಭರಣಿ ವೆಂಕಟೇಶ್ ಅವರು ಕೂಡಲೇ ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿ ಅವರ ಗುಣಗಾನ ಮಾಡಿದ ಪ್ರಸಂಗ ನಡೆಯಿತು.
ಪರಾಜಿತ ಅಭ್ಯರ್ಥಿ ಯಲುವಳ್ಳಿ ಎನ್. ರಮೇಶ್ ಮಾತನಾಡಿ, ಚುನಾವಣೆಯಲ್ಲಿ ನನ್ನ ಸೋಲಿಗೆ ನಾನೇ ಕಾರಣ. ಚುನಾವಣಾ ಪೂರ್ವ ತಯಾರಿಗೆ ಸಮಯದ ಅಭಾವವಿತ್ತು. ಸಹಕಾರಿ ಕ್ಷೇತ್ರದ ಚುನಾವಣೆಯಲ್ಲಿ ಇದು ನನ್ನ ಮೊದಲ ಅನುಭವ.ಗೋಪಾಲಕರ ಸೇವೆ ಮಾಡುವ ಉದ್ದೇಶದಿಂದ ಸ್ಪರ್ಧಿಸಿ ಆತುರದ ನಿರ್ಧಾರದ ಕಾರಣ ಸೋಲು ಕಂಡೆ. ಇನ್ನೂ ಗೆದ್ದ ಸಂತೋಷದಲ್ಲಿ ಭರಣಿ ವೆಂಕಟೇಶ್ ಅವರು ನನ್ನ ಹಿಂದೆ ಇದ್ದವರು ಖಾಲಿ ಡಬ್ಬಾಗಳು ಎಂದು ಹೇಳಿರುವುದು ಘನತೆಗೆ ತಕ್ಕದಲ್ಲ.ನಾವು ಖಾಲಿ ಡಬ್ಬಾಗಳೆ ಆಗಿರಲಿ. ಮೊದಲ ಬಾರಿಗೆ ಸ್ಪರ್ಧಿಸಿ 80 ಮತಗಳಲ್ಲಿ 30 ಮತ ಗಳನ್ನು ಪಡೆದಿರುವುದು ನನಗೆ ತೃಪ್ತಿ ನೀಡಿದೆ ಎಂದು ಟಾಂಗ್ ನೀಡಿದರು.
ತಮ್ಮ ರಾಜಕೀಯ ಜೀವನದ ಕುರಿತು ಮಾತನಾಡಿದ ಅವರು,ವಿದ್ಯಾಭ್ಯಾಸದ ಕಾಲದಿಂದಲೂ ಅನೇಕ ಚುನಾವಣೆಗಳನ್ನು ಎದುರಿಸಿದ್ದೇನೆ.ಬೆರಳು ಎಣಿಕೆಯಷ್ಟು ಚುನಾವಣೆಯಲ್ಲಿ ಸೋತಿದ್ದೇನೆ ನನಗೆ ಅಧಿಕಾರದ ಆಸೆ ಇಲ್ಲ.ಕೆ.ಬಿ.ಪಿಳ್ಳಪ್ಪ ಹಾಗೂ ಸಿ. ಬೈರಗೌಡ ಅವರ ಕಾಲದಿಂದಲೂ ನಾನು ಧರ್ಮಬದ್ಧ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ಅಧರ್ಮದ ಮಾರ್ಗ ನನಗೆ ಗೊತ್ತಿಲ್ಲ. ಚಿಮುಲ್ ಚುನಾವಣೆಯಲ್ಲಿ ಅತಿಯಾದ ಆಮಿಷ,ಗಿಫ್ಟ್ ಹಾಗೂ ಹಣದ ಹೊಳೆ ಹರಿಸಿ ಭರಣಿ ವೆಂಕಟೇಶ್ ಗೆದ್ದಿದ್ದಾರೆ ಎಂದು ರಮೇಶ್ ಆರೋಪಿಸಿದರು.ಚಿಮುಲ್ ಚುನಾವಣೆಯನ್ನು ನಾನು ನ್ಯಾಯಯುತವಾಗಿ ಎದುರಿಸಿದ್ದೇನೆ.ಸೋತಿದ್ದೇನೆ.ನನಗೆ ಮತ ನೀಡಿದ ಎಲ್ಲರಿಗೂ ಧನ್ಯವಾದಗಳು ಎಂದರು.
ರಾಜ್ಯ ಬೀಜ ನಿಗಮದ ಅಧ್ಯಕ್ಷ ನಂದಿ ಅಂಜನಪ್ಪ ಮಾತನಾಡಿ, ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಇಬ್ಬರು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಸ್ಪರ್ಧಿಸಿದ್ದರಿಂದ ಪಕ್ಷದೊಳಗೆ ಎರಡು ಗುಂಪುಗಳಾಗಿವೆ ಎಂಬ ಮಾತುಗಳು ಕೇಳಿಬಂದಿವೆ. ಈ ಕುರಿತು ಪಕ್ಷದ ವರಿಷ್ಠರು ಮುಂಚಿತವಾಗಿಯೇ ಅಭಿಪ್ರಾಯ ಸಂಗ್ರಹಿಸಿ ಸಂಧಾನ ಮಾಡಬೇಕಿತ್ತು. ಆದರೆ ಅದು ನಡೆಯಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಗೆದ್ದ ಅಭ್ಯರ್ಥಿ ಒಬ್ಬ ಹಿರಿಯ ಕಾಂಗ್ರೆಸ್ ಮುಖಂಡರ ಬಗ್ಗೆ ಖಾಲಿ ಡಬ್ಬಾ ಗಳು ಎಂದು ಹೇಳಿರು ವುದು ಸರಿಯಲ್ಲ. ನನ್ನ ರಾಜಕೀಯ ಜೀವನದಲ್ಲಿ ಹಲವಾರು ಮುಖಂಡರಿಗೆ ಸಹಕಾರ ನೀಡಿದ್ದೇನೆ ಅವರಲ್ಲಿ ಭರಣಿ ವೆಂಕಟೇಶ್ ಕೂಡ ಒಬ್ಬರು ಅವರು ಅವರು ಪರಾಮರ್ಶಿಸಿಕೊಳ್ಳಬೇಕು ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಸೋಮಶೇಖರ್ ಮಾತನಾಡಿ ಚುನಾವಣೆಯಲ್ಲಿ ಸೋಲುಗೆಲುವು ಸಹಜ. ವಿಧಾನ ಸಭೆ ಲೋಕಸಭೆ ಚುನಾವಣೆಯಲ್ಲಿ ಘಟಾನುಘಟಿಗಳೇ ಸೋಲು ಅನುಭವಿಸಿದ್ದಾರೆ. ಇಂದಿರಾಗಾಂಧಿ, ಜಾಲಪ್ಪ ತರದವರೇ ಸೋತಿದ್ದಾರೆ.ಅವರೆಲ್ಲಾ ನಿಮ್ಮ ಪ್ರಕಾರ ಖಾಲಿ ಡಬ್ಬಾಗಳೇ ಆಗಿದ್ದರಾ? ನಾಲಿಗೆ ಮೇಲೆ ಹಿಡಿತ ಇರಲಿ,ನಿಮ್ಮ ಮಾತು ಶೋಭೆ ತರುವಂತಿಲ್ಲ. ಕೂಡಲೇ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.