Gauribidanur News: ಸ್ವಯಂ ತೆರವುಗೊಳಿಸದಿದ್ದರೆ ಮುನ್ಸೂಚನೆ ಇಲ್ಲದೆ ನಗರಸಭೆಯಿಂದ ಕಾರ್ಯಾಚರಣೆ: ಪೌರಾಯುಕ್ತ ರಮೇಶ್
ನಗರದ ಬಿಎಚ್ ರಸ್ತೆ, ಎಂಜಿ ರಸ್ತೆ, ಬಜಾರ್ ರಸ್ತೆ ಸೇರಿದಂತೆ ವಿವಿಧ ರಸ್ತೆಗಳು ಹಾಗೂ ವೃತ್ತಗಳ ಪಾದ ಚಾರಿ ಮಾರ್ಗಗಳನ್ನು ಅಂಗಡಿ ವರ್ತಕರು ನಾಮಫಲಕ, ಸರಕು ಸಾಮಗ್ರಿ ಇಟ್ಟು ಒತ್ತುವರಿ ಮಾಡಿ ಕೊಂಡಿದ್ದಾರೆ. ಕೆಲವೆಡೆ ಶಾಶ್ವತ ಹಾಗೂ ತಾತ್ಕಾಲಿಕ ನಿರ್ಮಾಣಗಳನ್ನೂ ಮಾಡಲಾಗಿದೆ. ಇವುಗಳನ್ನು ತೆರವುಗೊಳಿಸಿ ಪಾದಚಾರಿಗಳ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.
-
ಗೌರಿಬಿದನೂರು: ನಗರದ ಪ್ರಮುಖ ರಸ್ತೆಗಳ ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮಾಡಿ ಕೊಂಡಿರುವ ಅಂಗಡಿ-ಮುಂಗಟ್ಟುಗಳ ಮಾಲೀಕರು ಹಾಗೂ ವರ್ತಕರು 15 ದಿನಗಳೊಳಗೆ ಸ್ವಯಂ ಒತ್ತುವರಿ ತೆರವುಗೊಳಿಸಬೇಕು. ಗಡುವು ಮುಗಿದ ಬಳಿಕ ಯಾವುದೇ ಮುನ್ಸೂಚನೆ ನೀಡದೆ ನಗರಸಭೆಯಿಂದ ತೆರವು ಕಾರ್ಯಾಚರಣೆ ಕೈಗೊಳ್ಳಲಾಗುವುದು ಎಂದು ಪೌರಾಯುಕ್ತ ರಮೇಶ್ ಎಚ್ಚರಿಸಿದರು.
ನಗರಸಭೆ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರ ಪ್ರದೇಶಗಳ ಪಾದಚಾರಿ ಮಾರ್ಗಗಳ ಒತ್ತುವರಿ ತೆರವುಗೊಳಿಸುವಂತೆ ಸರ್ವೋಚ್ಚ ನ್ಯಾಯಾಲಯ ನೀಡಿರುವ ಆದೇಶ ಹಾಗೂ ಜಿಲ್ಲಾಧಿಕಾರಿಗಳ ಸೂಚನೆಯ ಹಿನ್ನೆಲೆಯಲ್ಲಿ ಕ್ರಮಕ್ಕೆ ಮುಂದಾಗಲಾಗಿದೆ ಎಂದರು.
ಇದನ್ನೂ ಓದಿ: Garbage Collection: ಗುಡ್ ನ್ಯೂಸ್; ಇನ್ನುಮುಂದೆ ಬೆಂಗಳೂರಿನಲ್ಲಿ ರಾತ್ರಿಯೂ ಬರಲಿವೆ ಕಸ ಸಂಗ್ರಹ ವಾಹನಗಳು
ನಗರದ ಬಿಎಚ್ ರಸ್ತೆ, ಎಂಜಿ ರಸ್ತೆ, ಬಜಾರ್ ರಸ್ತೆ ಸೇರಿದಂತೆ ವಿವಿಧ ರಸ್ತೆಗಳು ಹಾಗೂ ವೃತ್ತಗಳ ಪಾದಚಾರಿ ಮಾರ್ಗಗಳನ್ನು ಅಂಗಡಿ ವರ್ತಕರು ನಾಮಫಲಕ, ಸರಕು ಸಾಮಗ್ರಿ ಇಟ್ಟು ಒತ್ತುವರಿ ಮಾಡಿಕೊಂಡಿದ್ದಾರೆ. ಕೆಲವೆಡೆ ಶಾಶ್ವತ ಹಾಗೂ ತಾತ್ಕಾಲಿಕ ನಿರ್ಮಾಣಗಳನ್ನೂ ಮಾಡಲಾಗಿದೆ. ಇವುಗಳನ್ನು ತೆರವುಗೊಳಿಸಿ ಪಾದಚಾರಿಗಳ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಬೀದಿಬದಿ ವ್ಯಾಪಾರಿಗಳಿಗೆ ಸಂತೆ ಮೈದಾನದಲ್ಲಿ ಸ್ಥಳ ನಿಗದಿಪಡಿಸಲಾಗಿದ್ದು, ಅಲ್ಲಿಯೇ ವ್ಯಾಪಾರ ನಡೆಸಬೇಕು. ಸೂಚನೆ ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದರು.
ನಗರಸಭೆ ಅಂಗಡಿ ಮಳಿಗೆಗಳ ಬಾಡಿಗೆ ರೂಪಾಯಿ ೩೩ ಲಕ್ಷ ಬಾಕಿಯಿದ್ದು, ಕೂಡಲೇ ಪಾವತಿಸ ಬೇಕು. ಇಲ್ಲವಾದಲ್ಲಿ ಮರುಹರಾಜಿನಲ್ಲಿ ಭಾಗವಹಿಸಲು ಅನರ್ಹರಾಗುತ್ತಾರೆ. ಖಾಲಿ ನಿವೇಶನಗಳ ಮಾಲೀಕರು ಸ್ವಚ್ಛಗೊಳಿಸದಿದ್ದರೆ ನಗರಸಭೆಯಿಂದ ಸ್ವಚ್ಛಗೊಳಿಸಿ ವೆಚ್ಚವನ್ನು ಕಂದಾಯ ಬಾಕಿಯಾಗಿ ವಸೂಲಿ ಮಾಡಲಾಗುವುದು ಎಂದರು.
ಪಿಎಸ್‌ಐ ವರಲಕ್ಷ್ಮಿ ಮಾತನಾಡಿ, ಬಿಎಚ್ ಹಾಗೂ ಬಜಾರ್ ರಸ್ತೆ ಬದಿಗಳಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ. ತುರ್ತು ವಾಹನಗಳ ಸಂಚಾರಕ್ಕೆ ಅಡಚಣೆಯಾಗದಂತೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು. ಇಂಜಿನಿಯರ್ ಕೆ.ಜಿ. ಶಿವಶಂಕರ್, ಆರೋಗ್ಯ ನಿರೀಕ್ಷಕ ನವೀನ್ ಇದ್ದರು.