ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Chikkaballapur News: ಆ.2ರಂದು 9 ಕೇಂದ್ರಗಳಲ್ಲಿ ಸಿವಿಲ್ ಪೊಲೀಸ್ ಕಾನ್‌ʼಸ್ಟೇಬಲ್‌ ಪರೀಕ್ಷೆ: ಅಕ್ರಮಕ್ಕೆ 12 ವರ್ಷ ಜೈಲು, 15 ಲಕ್ಷ ದಂಡ: ಜಿಲ್ಲಾಧಿಕಾರಿ ಎಚ್ಚರಿಕೆ

ಜಿಲ್ಲೆಯಲ್ಲಿ ಒಟ್ಟು 4526 ಅಭ್ಯರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು, ಬೆಳಗ್ಗೆ 10.30 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಪರೀಕ್ಷೆ ನಡೆಯಲಿದೆ. ಅಭ್ಯರ್ಥಿಗಳು ಕಡ್ಡಾಯವಾಗಿ ಬೆಳಗ್ಗೆ 8 ಗಂಟೆ ಯೊಳಗೆ ಪರೀಕ್ಷಾ ಕೇಂದ್ರ ತಲುಪಬೇಕು. ಭದ್ರತಾ ತಪಾಸಣೆ ಪೂರ್ಣಗೊಂಡ ಬಳಿಕವೇ ಪರೀಕ್ಷಾ ಕೊಠಡಿಗೆ ಪ್ರವೇಶ ನೀಡಲಾಗುತ್ತದೆ

ಆ.2ರಂದು 9 ಕೇಂದ್ರಗಳಲ್ಲಿ ಸಿವಿಲ್ ಪೊಲೀಸ್ ಕಾನ್‌ʼಸ್ಟೇಬಲ್‌ ಪರೀಕ್ಷೆ

ಇಂದು 9 ಕೇಂದ್ರಗಳಲ್ಲಿ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆ ಅಕ್ರಮಕ್ಕೆ 12 ವರ್ಷ ಜೈಲು, 15 ಲಕ್ಷ ದಂಡವಿದೆ ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು. -

Profile
Ashok Nayak Aug 1, 2026 9:23 PM

ಚಿಕ್ಕಬಳ್ಳಾಪುರ: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಸಿವಿಲ್ ಪೊಲೀಸ್ ಕಾನ್‌ʼಸ್ಟೇಬಲ್‌ ಹುದ್ದೆಗಳ ನೇರ ನೇಮಕಾತಿಗಾಗಿ ಆ.2ರಂದು ಜಿಲ್ಲೆಯ 9 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿರುವ ಲಿಖಿತ ಪರೀಕ್ಷೆಯನ್ನು ಸಂಪೂರ್ಣ ಪಾರದರ್ಶಕವಾಗಿ ನಡೆಸಲು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ವ್ಯಾಪಕ ಸಿದ್ಧತೆ ಕೈಗೊಂಡಿದ್ದು, ಪರೀಕ್ಷಾ ಅಕ್ರಮಗಳಲ್ಲಿ ತೊಡಗುವವರ ವಿರುದ್ಧ ಅತ್ಯಂತ ಬಿಎನ್‌ಎನ್‌ಎಸ್ ಕಾಯ್ದೆಯಂತೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಪ್ರಭು ಎಚ್ಚರಿಕೆ ನೀಡಿದರು.

ನಗರಹೊರವಲಯ ಜಿಲ್ಲಾಡಳಿತ ಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ದ ಅವರು, ಪರೀಕ್ಷೆಯಲ್ಲಿ ಅಕ್ರಮ ಎಸಗುವ ಅಭ್ಯರ್ಥಿಗಳಿಗೆ 5 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ರೂ.10 ಲಕ್ಷದವರೆಗೆ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಸಂಘಟನೆ, ಗುಂಪು ಅಥವಾ ಯಾವುದೇ ಸಂಸ್ಥೆ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿರುವುದು ಸಾಬೀತಾದರೆ 12 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ರೂ.15 ಲಕ್ಷದವರೆಗೆ ದಂಡ ವಿಧಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಜಿಲ್ಲೆಯಲ್ಲಿ ಒಟ್ಟು 4526 ಅಭ್ಯರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು, ಬೆಳಗ್ಗೆ 10.30 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಪರೀಕ್ಷೆ ನಡೆಯಲಿದೆ. ಅಭ್ಯರ್ಥಿಗಳು ಕಡ್ಡಾಯವಾಗಿ ಬೆಳಗ್ಗೆ 8 ಗಂಟೆಯೊಳಗೆ ಪರೀಕ್ಷಾ ಕೇಂದ್ರ ತಲುಪಬೇಕು. ಭದ್ರತಾ ತಪಾಸಣೆ ಪೂರ್ಣಗೊಂಡ ಬಳಿಕವೇ ಪರೀಕ್ಷಾ ಕೊಠಡಿಗೆ ಪ್ರವೇಶ ನೀಡಲಾಗುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ: Chikkaballapur News: ವ್ಯಸನ ಮುಕ್ತ ಸಮಾಜಕ್ಕಾಗಿ ಆರೋಗ್ಯಕರ ಬದುಕು ಅಳವಡಿಸಿಕೊಳ್ಳಿ: ಎಸ್‌ಪಿ ಕುಶಲ್ ಚೌಕ್ಸೆ ಅಭಿಮತ

ಪರೀಕ್ಷೆಯ ಭದ್ರತೆಗಾಗಿ ಪ್ರಶ್ನೆಪತ್ರಿಕೆ ಹಾಗೂ ಉತ್ತರ ಪತ್ರಿಕೆಗಳ ಸಾಗಣೆಗೆ ಮಾರ್ಗಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಜಾಗೃತಿ ದಳ ಹಾಗೂ ವಿಚಕ್ಷಣ ದಳಗಳನ್ನು ರಚಿಸಲಾಗಿದೆ. ಎಲ್ಲಾ ಪರೀಕ್ಷಾ ಕೊಠಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಪರೀಕ್ಷಾ ಕೇಂದ್ರಗಳ ಸುತ್ತ ಭಾರತೀಯ ನ್ಯಾಯ ಸಂಹಿತೆಯಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಅನಧಿಕೃತ ವ್ಯಕ್ತಿಗಳ ಪ್ರವೇಶ ಹಾಗೂ ಗುಂಪು ಸೇರುವಿಕೆಗೆ ಅವಕಾಶ ಇರುವುದಿಲ್ಲ ಎಂದರು.

ಮೊಬೈಲ್ ಫೋನ್, ಬ್ಲೂಟೂತ್, ಇಯರ್‌ ಫೋನ್, ಕ್ಯಾಲ್ಕುಲೇಟರ್, ಕೈಗಡಿಯಾರ, ಪೆನ್‌ಡ್ರೈವ್, ಕ್ಯಾಮೆರಾ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ಸಾಧನಗಳನ್ನು ಪರೀಕ್ಷಾ ಕೇಂದ್ರಕ್ಕೆ ತರಲು ಅವಕಾಶವಿಲ್ಲ. ಉದ್ದ ತೋಳಿನ ಉಡುಪು, ಮುಖ ಅಥವಾ ತಲೆ ಸಂಪೂರ್ಣ ಮುಚ್ಚುವ ಉಡುಪು, ಶೂ ಹಾಗೂ ಲೋಹದ ಆಭರಣಗಳನ್ನು ಧರಿಸಿ ಬರುವಂತಿಲ್ಲ. ಧಾರ್ಮಿಕ ಉಡುಪು ಧರಿಸುವ ಅಭ್ಯರ್ಥಿಗಳು ಎರಡು ಗಂಟೆ ಮುಂಚಿತವಾಗಿ ಬಂದು ವಿಶೇಷ ತಪಾಸಣೆಗೆ ಒಳಗಾಗಬೇಕು ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ ಮಾತನಾಡಿ, ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಸಂವಹನ ಸಾಧನಗಳನ್ನು ನಿಷ್ಕ್ರಿಯಗೊಳಿಸಲು ಜಾಮರ್‌ಗಳನ್ನು ಅಳವಡಿಸಲಾಗಿದ್ದು, ವೆಬ್‌ಕಾಸ್ಟಿಂಗ್ ಮೂಲಕ ನಿರಂತರ ನಿಗಾ ವಹಿಸಲಾಗು ತ್ತಿದೆ. ಸಾಮಾಜಿಕ ಜಾಲತಾಣಗಳ ಮೇಲೂ ವಿಶೇಷ ನಿಗಾ ಇಡಲಾಗಿದ್ದು, ವದಂತಿ ಅಥವಾ ಅಕ್ರಮಗಳಿಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪಂಡರಿನಾಥ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ್ ಹಾಗೂ ಪರೀಕ್ಷಾ ಕರ್ತವ್ಯಕ್ಕೆ ನಿಯೋಜಿತ ಅಧಿಕಾರಿಗಳು ಉಪಸ್ಥಿತ ರಿದ್ದರು.