ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Dr K Sudhakar: ಸಹಕಾರ ಸಂಘಗಳ ಮೂಲಕ ರೈತರ ಆರ್ಥಿಕ ಶಕ್ತಿ ಹೆಚ್ಚಲಿ: ಡಾ.ಕೆ.ಸುಧಾಕರ್

70 ವರ್ಷಕ್ಕೂ ಹೆಚ್ಚಿನ ಇತಿಹಾಸ ಹೊಂದಿರುವ ಈ ಸಂಸ್ಥೆ ರೈತರಿಗೆ ಸೇರಿದ್ದು, ಸುಮಾರು 3,500 ಷೇರುದಾರರನ್ನು ಹೊಂದಿದೆ. ರೈತರು ಒಗ್ಗಟ್ಟಾಗಿ ಸಂಸ್ಥೆಯನ್ನು ಬಲಪಡಿಸಿದರೆ ವಹಿವಾಟಿನ ಪ್ರಮಾಣವನ್ನು ದೊಡ್ಡ ಮಟ್ಟಕ್ಕೆ ಕೊಂಡೊಯ್ಯಬಹುದು. ಸಂಸ್ಥೆ ಆರಂಭವಾಗಿ 77 ವರ್ಷಗಳಾದರೂ ಇನ್ನೂ ಲಕ್ಷಗಳ ವಹಿವಾಟಿನ ಬಗ್ಗೆ ಚರ್ಚಿಸುತ್ತಿರುವುದು ಸರಿಯಲ್ಲ. ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು ನೂರಾರು ಕೋಟಿ ರೂಪಾಯಿ ವಹಿವಾಟು ನಡೆಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು

ಕೇಂದ್ರದ ಯೋಜನೆ ಬಳಸಿಕೊಂಡು ಸಂಸ್ಕರಣೆ, ಮಾರುಕಟ್ಟೆ ವಿಸ್ತರಣೆಗೆ ಕರೆ

-

Profile
Ashok Nayak Sep 25, 2026 9:56 PM

ಚಿಕ್ಕಬಳ್ಳಾಪುರ: ಒಬ್ಬ ರೈತನಿಗೆ ಪ್ರತ್ಯೇಕವಾಗಿ ವಹಿವಾಟು ನಡೆಸುವುದು ಕಷ್ಟ. ಆದರೆ ಸಾವಿರಾರು ರೈತರು ಸಹಕಾರ ಸಂಘದಡಿ ಒಗ್ಗೂಡಿ ವಹಿವಾಟು ನಡೆಸಿದರೆ ದೊಡ್ಡ ಆರ್ಥಿಕ ಶಕ್ತಿ ರೂಪು ಗೊಳ್ಳುತ್ತದೆ. ರೈತರು ಸಹಕಾರ ಕ್ಷೇತ್ರದ ಅವಕಾಶಗಳನ್ನು ಬಳಸಿಕೊಂಡು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಸಂಸದ ಡಾ.ಕೆ.ಸುಧಾಕರ್(MP Dr K Sudhakar) ಹೇಳಿದರು.

ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ ಚಿಕ್ಕಬಳ್ಳಾಪುರ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ 2025–26ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಮಹಾಸಭೆ ಉದ್ಘಾಟಿಸಿ ಅವರು ಮಾತನಾಡಿದರು.

‘ಸಹಕಾರ ಕ್ಷೇತ್ರಕ್ಕೆ ದೊಡ್ಡ ಅವಕಾಶ’

70 ವರ್ಷಕ್ಕೂ ಹೆಚ್ಚಿನ ಇತಿಹಾಸ ಹೊಂದಿರುವ ಈ ಸಂಸ್ಥೆ ರೈತರಿಗೆ ಸೇರಿದ್ದು, ಸುಮಾರು 3,500 ಷೇರುದಾರರನ್ನು ಹೊಂದಿದೆ. ರೈತರು ಒಗ್ಗಟ್ಟಾಗಿ ಸಂಸ್ಥೆಯನ್ನು ಬಲಪಡಿಸಿದರೆ ವಹಿವಾಟಿನ ಪ್ರಮಾಣವನ್ನು ದೊಡ್ಡ ಮಟ್ಟಕ್ಕೆ ಕೊಂಡೊಯ್ಯಬಹುದು. ಸಂಸ್ಥೆ ಆರಂಭವಾಗಿ 77 ವರ್ಷ ಗಳಾದರೂ ಇನ್ನೂ ಲಕ್ಷಗಳ ವಹಿವಾಟಿನ ಬಗ್ಗೆ ಚರ್ಚಿಸುತ್ತಿರುವುದು ಸರಿಯಲ್ಲ. ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು ನೂರಾರು ಕೋಟಿ ರೂಪಾಯಿ ವಹಿವಾಟು ನಡೆಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಇದನ್ನೂ ಓದಿ: Dr K Sudhakar: ಜಿಲ್ಲೆಯಲ್ಲಿ ಭ್ರಷ್ಟಾಚಾರ ತಾಂಡವ, ಪೊಲೀಸ್‌ ಠಾಣೆಗಳು ವಸೂಲಿ ಕೇಂದ್ರಗಳಾಗಿವೆ: ಸುಧಾಕರ್‌

ಕೇಂದ್ರ ಸರ್ಕಾರ ಸಹಕಾರ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಕೃಷಿಗೆ ಸಂಬಂಧಿಸಿದ ವಿವಿಧ ವಾಣಿಜ್ಯ ಚಟುವಟಿಕೆಗಳನ್ನು ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಕೃಷಿಯಂತ್ರಧಾರೆ, ಬೆಳೆ ಸಂಸ್ಕರಣೆ, ಸಂಗ್ರಹಣೆ ಹಾಗೂ ಮೌಲ್ಯವರ್ಧನೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ರೈತರು ಸಹಕಾರ ಸಂಘಗಳ ಮೂಲಕ ಉದ್ಯಮ ಆರಂಭಿಸಬ ಹುದು ಎಂದರು.

ಟೊಮೆಟೊ ಸಂಸ್ಕರಣಾ ಘಟಕಕ್ಕೆ ಕರೆ

ಚಿಕ್ಕಬಳ್ಳಾಪುರದ ಪ್ರಮುಖ ಬೆಳೆಗಳಲ್ಲಿ ಒಂದಾದ ಟೊಮೆಟೊಗೆ ಮೌಲ್ಯವರ್ಧನೆ ಮಾಡುವ ನಿಟ್ಟಿನಲ್ಲಿ ರೈತರು ಒಗ್ಗೂಡಿ ಟೊಮೆಟೊ ಕೆಚಪ್ ಸೇರಿದಂತೆ ಸಂಸ್ಕರಣಾ ಘಟಕ ಆರಂಭಿಸಲು ಮುಂದೆ ಬರಬೇಕು. ಬ್ಯಾಂಕ್‌ಗಳಿಂದ ಅಗತ್ಯ ಸಾಲ ಸೌಲಭ್ಯ ಕೊಡಿಸಲು ತಾವು ಸಹಕಾರ ನೀಡುವು ದಾಗಿ ತಿಳಿಸಿದರು.

25cbpm3mp sudhakar

ದಾನ್ಯ ಸಂಗ್ರಹಾಗಾರ, ಶೀತಲ ಸಂಗ್ರಹಾಗಾರ ಸೇರಿದಂತೆ ಕೃಷಿ ಉತ್ಪನ್ನಗಳ ಸಂಗ್ರಹಣೆ ಮತ್ತು ಸಂಸ್ಕರಣಾ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವ ಮೂಲಕ ಸಂಘವನ್ನು ಲಾಭದಾಯಕ ಸಂಸ್ಥೆಯನ್ನಾಗಿ ರೂಪಿಸಬೇಕು. ಇದರಿಂದ ರೈತರು ಬೆಳೆಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವ ಅನಿವಾರ್ಯತೆ ತಪ್ಪಲಿದೆ ಎಂದರು.

ಇ-ಮಾರುಕಟ್ಟೆಯಿಂದ ಪಾರದರ್ಶಕ ವಹಿವಾಟು

ರೈತರು ಬೆಳೆದ ಉತ್ಪನ್ನಗಳಿಗೆ ಸೂಕ್ತ ಬೆಲೆ ಹಾಗೂ ಉತ್ತಮ ಮಾರುಕಟ್ಟೆ ವ್ಯವಸ್ಥೆ ಅಗತ್ಯ. ಈ ಹಿಂದೆ ಮಾರುಕಟ್ಟೆಯಲ್ಲಿ ತೂಕ ಹಾಗೂ ಬೆಲೆ ನಿಗದಿಯಲ್ಲಿ ರೈತರಿಗೆ ತೊಂದರೆ ಉಂಟಾಗುತ್ತಿದ್ದ ಹಿನ್ನೆಲೆ ಯಲ್ಲಿ ಕೇಂದ್ರ ಸರ್ಕಾರ ಇ-ರಾಷ್ಟ್ರೀಯ ಕೃಷಿ ಮಾರುಕಟ್ಟೆ ವ್ಯವಸ್ಥೆ ಜಾರಿಗೆ ತಂದಿದೆ. ಆನ್‌ಲೈನ್‌ ಮೂಲಕ ಹೆಚ್ಚಿನ ಬೆಲೆ ನೀಡುವ ಖರೀದಿದಾರರಿಗೆ ಉತ್ಪನ್ನ ಮಾರಾಟ ಮಾಡಲು ಅವಕಾಶವಿದ್ದು, ವಹಿವಾಟಿನ ಮೊತ್ತ ನೇರವಾಗಿ ರೈತರ ಖಾತೆಗೆ ಜಮೆಯಾಗುವ ವ್ಯವಸ್ಥೆ ರೈತರಿಗೆ ಅನುಕೂಲವಾಗಿದೆ ಎಂದು ಹೇಳಿದರು.

‘ಸಹಕಾರ ಸಂಘದ ಸಭೆಗೆ ಸದಸ್ಯರು ತಪ್ಪದೆ ಬರಬೇಕು’

ಸಹಕಾರ ಸಂಘಗಳ ಸಾಮಾನ್ಯ ಸಭೆಗೆ ಸದಸ್ಯರು ಕೇವಲ ಸಹಿ ಮಾಡಲು ಅಥವಾ ಸದಸ್ಯತ್ವ ರದ್ದಾಗಬಹುದು ಎಂಬ ಕಾರಣಕ್ಕೆ ಬರಬಾರದು. ಸಂಸ್ಥೆಯ ವಹಿವಾಟು, ಲಾಭ-ನಷ್ಟ ಹಾಗೂ ಆಡಳಿತದ ಬಗ್ಗೆ ಪ್ರಶ್ನಿಸಿ ಮಾಹಿತಿ ಪಡೆಯುವ ಜವಾಬ್ದಾರಿಯನ್ನು ಸದಸ್ಯರು ಹೊಂದಿರಬೇಕು. ಸದಸ್ಯರು ಸಕ್ರಿಯವಾಗಿ ಭಾಗವಹಿಸಿದಾಗ ಮಾತ್ರ ಸಹಕಾರ ಸಂಸ್ಥೆಗಳು ಉಳಿದು ಬೆಳೆಯಲು ಸಾಧ್ಯ ಎಂದರು.

ಸಹಕಾರಿ ಸಂಸ್ಥೆಗಳು ಯಾವುದೇ ಕಾರಣಕ್ಕೂ ನಷ್ಟಕ್ಕೆ ಸಿಲುಕದಂತೆ ಎಚ್ಚರಿಕೆ ವಹಿಸಬೇಕು. ತಪ್ಪು ಹೂಡಿಕೆ ಹಾಗೂ ಯೋಜನೆಗಳ ವೈಫಲ್ಯದಿಂದ ಉಂಟಾಗುವ ನಷ್ಟದ ಹೊರೆ ಅಂತಿಮವಾಗಿ ರೈತರ ಮೇಲೆಯೇ ಬೀಳುತ್ತದೆ. ಆದ್ದರಿಂದ ಲಾಭದಾಯಕ ಯೋಜನೆಗಳಿಗೆ ಆದ್ಯತೆ ನೀಡಿ ಸಂಸ್ಥೆಯನ್ನು ಬಲಪಡಿಸಬೇಕು ಎಂದು ಹೇಳಿದರು.

ರೈತರ ಆದಾಯ ಹೆಚ್ಚಿದರೆ ದೇಶದ ಆದಾಯ ಹೆಚ್ಚಳ

ರೈತರ ಆದಾಯ ಹೆಚ್ಚಾದಾಗ ಮಾತ್ರ ದೇಶದ ತಲಾದಾಯವೂ ಹೆಚ್ಚಾಗಲು ಸಾಧ್ಯ. ಪ್ರತಿಯೊಂದು ಬೆಳೆಗೂ ರೈತರು ಬೆಳೆ ವಿಮೆ ಮಾಡಿಸಿಕೊಳ್ಳಬೇಕು. ಮನುಷ್ಯರಿಗೆ ಆರೋಗ್ಯ ವಿಮೆ ಇರುವಂತೆ ಬೆಳೆಗಳಿಗೂ ರಕ್ಷಣೆ ಅಗತ್ಯ ಎಂಬ ಪರಿಕಲ್ಪನೆಯಡಿ ಬೆಳೆ ವಿಮೆ ಯೋಜನೆಗಳನ್ನು ಜಾರಿಗೊಳಿಸ ಲಾಗಿದೆ. ರೈತರು ಇಂತಹ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳ ಅತಿಯಾದ ಬಳಕೆಯಿಂದ ಆಹಾರದ ಗುಣಮಟ್ಟದ ಬಗ್ಗೆ ಆತಂಕ ಮೂಡುತ್ತಿದೆ. ರೈತರು ಸಾಧ್ಯವಾದಷ್ಟು ಸಾವಯವ ಕೃಷಿ ಪದ್ಧತಿಗೆ ಆದ್ಯತೆ ನೀಡುವ ಮೂಲಕ ಆರೋಗ್ಯಕರ ಆಹಾರ ಉತ್ಪಾದನೆಗೆ ಮುಂದಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಆವಲಕೊಂಡರಾಯಪ್ಪ ಕೆ., ಕೆ.ವಿ. ನವೀನ್ ಕಿರಣ್, ಕೆ.ವಿ. ನಾಗರಾಜ್, ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಮುನಿಯಪ್ಪ, ಮರಳುಕುಂಟೆ ಕೃಷ್ಣಮೂರ್ತಿ, ರಾಮಸ್ವಾಮಿ, ಉಪಾಧ್ಯಕ್ಷ ಎಂ.ಲಕ್ಷ್ಮೀನರಸಪ್ಪ, ನಿರ್ದೇಶಕರಾದ ವಿ.ಮಧುಚಂದ್ರ, ಆವಲಗುರ್ಕಿ ನಾಗರಾಜ್, ದೊಡ್ಡಮುರಳಿ ನಾರಾಯಣಸ್ವಾಮಿ, ವರದಹಳ್ಳಿ ಲಿಂಗಾರೆಡ್ಡಿ, ಸಂತೋಷ್ ಡಿ.ಪಿ., ಗೊಳ್ಳು ಈರಚಿನ್ನಪ್ಪ, ಪಟ್ರೇನಹಳ್ಳಿ ರಾಕೇಶ್ ಮೋಹನ್, ಬಿಸೇಗಾರಹಳ್ಳಿ ನಾಗೇಶ್, ಮಹಿಳಾ ನಿರ್ದೇಶಕ ರಾದ ಸುಜಾತ ಎಸ್., ಸುಮಾ ಎಸ್. ಅನಿಲ್, ನಾಮನಿರ್ದೇಶಿತ ನಿರ್ದೇಶಕ ಕೇಶವರ್ ಸತೀಶ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕೆ.ಬಿ. ಸೇರಿದಂತೆ ಸಂಘದ ನಿರ್ದೇಶಕರು, ಸಿಬ್ಬಂದಿ ಹಾಗೂ ಸದಸ್ಯರು ಭಾಗವಹಿಸಿದ್ದರು.