Lambodhara 2.0 Review: ಕೃತಕ ಸಂತೋಷ ಹುಡುಕುವ ಜೆನ್-ಝೀ ಜಗತ್ತಿನ ವಾಸ್ತವದ ಅನಾವರಣ!
Lambodhara 2.0 Movie Review: ನಿರ್ದೇಶಕ ಸಿಂಪಲ್ ಸುನಿ ಸಾರಥ್ಯದ ‘ಲಂಬೋದರ 2.0’ ಚಿತ್ರವು ತಂತ್ರಜ್ಞಾನ ಮತ್ತು ಕೃತಕ ಸಂತೋಷದ ಬೆನ್ನಟ್ಟಿರುವ ಆಧುನಿಕ ಜೆನ್-ಝೀ ಪೀಳಿಗೆಯ ಕರಾಳ ಸತ್ಯವನ್ನು ಬಿಚ್ಚಿಡುತ್ತದೆ. ಅನಿಲ್ ಶೆಟ್ಟಿ ಹೀರೋ ಆಗಿ ಈ ಚಿತ್ರದ ಪದಾರ್ಪಣೆ ಮಾಡಿದ್ದು, ‘ಹ್ಯಾಪಿನೆಸ್ ಬ್ಯಾಂಡ್’ ಹೆಸರಿನಲ್ಲಿ ನಡೆಯುವ ಸೈಬರ್ ಜಾಲದ ಸುತ್ತ ಕಥೆ ಸಾಗುತ್ತದೆ.
-
ಸಿನಿಮಾ: ಲಂಬೋದರ 2.0
ತಾರಾಗಣ: ಅನಿಲ್ ಶೆಟ್ಟಿ, ಸಾಚಿ ಬಿಂದ್ರಾ, ಕುನಾಲ್ ಕಪೂರ್, ರಘು ರಮಣಕೊಪ್ಪ, ಮೇಘನಾ ಗಾಂವ್ಕರ್, ಮ್ಯಾಕ್ವಿನ್ ಇಯಾನ್ ಡಿಸೋಜಾ
ನಿರ್ದೇಶನ: ಸುನಿ
ನಿರ್ಮಾಣ: ಅನಿಲ್ ಶೆಟ್ಟಿ
ಸಂಗೀತ: ವೀರ್ ಸಮರ್ಥ್
ಅವಧಿ: 2 ಗಂಟೆ 17 ನಿಮಿಷ
ರೇಟಿಂಗ್: 3/5
ನಿರ್ದೇಶಕ ಸಿಂಪಲ್ ಸುನಿ ಅವರು ಸ್ಯಾಂಡಲ್ವುಡ್ನಲ್ಲಿ ಎರಡು ವಿಚಾರಗಳಿಗೆ ಗಮನ ಸೆಳೆಯುತ್ತಾರೆ. ಒಂದು ಹೊಸ ಪ್ರತಿಭೆಗಳನ್ನು ಹೀರೋ ಆಗಿ ಲಾಂಚ್ ಮಾಡುವುದರಲ್ಲಿ, ಮತ್ತೊಂದು ಹೊಸ ಹೊಸ ಜಾನರ್ಗಳ ಕಥಾಹಂದರವನ್ನು ಪ್ರಯತ್ನಿಸುವುದರಲ್ಲಿ. ಹೌದು, ಸುನಿ ಈವರೆಗೂ ಒಂದಕ್ಕಿಂತ ಒಂದು ಭಿನ್ನ ಜಾನರ್ನ ಸಿನಿಮಾಗಳನ್ನೇ ಮಾಡಿದ್ದಾರೆ. ಹಾಗೆಯೇ ಸಾಕಷ್ಟು ಮಂದಿಯನ್ನು ನಾಯಕರನ್ನಾಗಿ ಪರಿಚಯಿಸಿದ್ದಾರೆ. ಇದೀಗ ‘ಲಂಬೋದರ 2.0’ ಮೂಲಕ ಹೊಸದೆನಿಸುವ ಸೈನ್ಸ್ ಫಿಕ್ಷನ್ ಸೋಶಿಯಲ್ ಥ್ರಿಲ್ಲರ್ ಕಥೆಯನ್ನು ಕೈಗೆತ್ತಿಕೊಳ್ಳುವುದರ ಜೊತೆಗೆ ಅನಿಲ್ ಶೆಟ್ಟಿ ಅವರನ್ನು ಹೀರೋ ಆಗಿ ಲಾಂಚ್ ಮಾಡಿದ್ದಾರೆ. ಈ ಸಿನಿಮಾ ಹೇಗಿದೆ? ಇಲ್ಲಿದೆ ಓದಿ ಸಿನಿಮಾ ವಿಮರ್ಶೆ.
ಈ ‘ಲಂಬೋದರ’ನ ಕಥೆ ಏನು?
ಹ್ಯಾಕರ್ ಅವ್ಯಕ್ತ ಅಲಿಯಾಸ್ ಎವಿ (ಅನಿಲ್ ಶೆಟ್ಟಿ) ದೊಡ್ಡ ಮೊತ್ತವನ್ನು ಲಪಟಾಯಿಸಿ ಜನರನ್ನು ಕಾಡುವವನಲ್ಲ; ಬದಲಿಗೆ ಸಣ್ಣಪುಟ್ಟ ಮೊತ್ತವನ್ನು ಕಬಳಿಸಿ, ಅವರಿಗೆ ಎಚ್ಚರಿಕೆ ನೀಡುವವನು. ಆತನೊಂದಿಗೆ ಇರುವ ‘ಶ್ರೀಕೃಷ್ಣ’ ಇದೆಲ್ಲದಕ್ಕೂ ಸಾಥ್ ನೀಡುತ್ತಿರುತ್ತಾನೆ. ಅಂದಹಾಗೆ, ಈ ಶ್ರೀಕೃಷ್ಣ ಯಾರು ಎಂಬುದನ್ನು ಸಿನಿಮಾದಲ್ಲೇ ನೋಡಿ ತಿಳಿದರೆ ಚೆಂದ. ಇನ್ನು, ಸದಾ ಒಂಟಿಯಾಗಿ, ಯಾರ ಗೊಡವೆಯೂ ಬೇಡವೆಂದು ತನ್ನ ಪಾಡಿಗೆ ಇರುವ ಎವಿಗೆ 'ಹ್ಯಾಪಿನೆಸ್ ಬ್ಯಾಂಡ್' ಕಣ್ಣಿಗೆ ಬೀಳುತ್ತದೆ. ಈ ಹ್ಯಾಪಿನೆಸ್ ಬ್ಯಾಂಡ್ ಟಾಸ್ಕ್ ಮೂಲಕ ಭಾರತವನ್ನು 'ಹ್ಯಾಪಿನೆಸ್ ಇಂಡೆಕ್ಸ್'ನಲ್ಲಿ ಮೊದಲ ಸ್ಥಾನಕ್ಕೆ ತರುವುದು ಈ ಬ್ಯಾಂಡ್ ಕಂಡುಹಿಡಿದಿರುವ ರಾಘವ್ ಕಶ್ಯಪ್ (ಕುನಾಲ್ ಕಪೂರ್) ಉದ್ದೇಶ. ಹಾಗಂತ ಎಲ್ಲರನ್ನೂ ರಾಘವ್ ನಂಬಿಸಿರುತ್ತಾನೆ. ಅದೇ ಸಮಯಕ್ಕೆ ಸರಿಯಾಗಿ ಎವಿ ಬಾಳಿಗೆ ‘ಸಮಯ’ (ಸಾಚಿ ಬಿಂದ್ರಾ) ಎಂಟ್ರಿ ಕೊಡುತ್ತಾಳೆ. ಎವಿ ಮತ್ತು ಸಮಯ ನಡುವೆ ಪ್ರೀತಿ ಮೂಡಬೇಕು ಎನ್ನುವಷ್ಟರಲ್ಲಿ ಹ್ಯಾಪಿನೆಸ್ ಬ್ಯಾಂಡ್ ಟಾಸ್ಕ್ನಿಂದ ಎಲ್ಲವೂ ತಲೆಕೆಳಗಾಗಿ ಬಿಡುತ್ತದೆ. ಅಷ್ಟಕ್ಕೂ ಈ ಜೋಡಿಗೂ ಆ ಹ್ಯಾಪಿನೆಸ್ ಬ್ಯಾಂಡ್ ಟಾಸ್ಕ್ಗೂ ಏನು ಸಂಬಂಧ? ಈ ರಾಘವ್ ಕಶ್ಯಪ್ ಯಾರು? ಭಾರತ ನಿಜಕ್ಕೂ ಹ್ಯಾಪಿನೆಸ್ ಇಂಡೆಕ್ಸ್ನಲ್ಲಿ ಮೊದಲ ಸ್ಥಾನಕ್ಕೆ ಬರುತ್ತದೆಯೇ? ಈ ಅಂಶಗಳನ್ನು ಇಟ್ಟುಕೊಂಡು ಕಥೆ ಸಾಗುತ್ತದೆ.
ಕಲಾವಿದರ ನಟನೆ ಹೇಗಿದೆ?
ಈ ಚಿತ್ರಕ್ಕೆ ಸ್ಕ್ರಿಪ್ಟ್ ಬರೆದು, ಬಂಡವಾಳವನ್ನೂ ಹೂಡಿ, ನಾಯಕನಾಗಿಯೂ ನಟಿಸಿರುವುದು ಅನಿಲ್ ಶೆಟ್ಟಿ. ಇದು ಅವರ ಮೊದಲ ಸಿನಿಮಾ. ಪಾತ್ರಕ್ಕೆ ಅವರು ಸೂಕ್ತವಾಗಿ ಹೊಂದಿಕೊಂಡರೂ, ನಟನೆಯಲ್ಲಿ ಇನ್ನಷ್ಟು ಪಳಗಬೇಕು. ನಾಯಕಿಯಾಗಿ ಸಾಚಿ ಬಿಂದ್ರಾ ಮುದ್ದಾಗಿ ಕಾಣಿಸುವುದರ ಜೊತೆಗೆ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ರಾಘವ್ ಕಶ್ಯಪ್ ಪಾತ್ರದಲ್ಲಿ ಕುನಾಲ್ ಕಪೂರ್ ಗಮನ ಸೆಳೆಯುತ್ತಾರೆ. ಎಂದಿನಂತೆ ಅವರ ನಟನೆ ಕ್ಲಾಸ್ ಆಗಿದೆ. ಖಳನಾಯಕನಾಗಿದ್ದರೂ ನೋಡುಗರಿಗೆ ಅವರು ಇಷ್ಟವಾಗುತ್ತಾರೆ. ಪೊಲೀಸ್ ಅಧಿಕಾರಿ ಪಾತ್ರದಲ್ಲಿ ರಘು ರಮಣಕೊಪ್ಪ ನಗಿಸಲು ಪ್ರಯತ್ನಿಸಿದ್ದಾರೆ. ಚಿಕ್ಕ ಪಾತ್ರದಲ್ಲಿ ಹೀಗೆ ಬಂದು ಹಾಗೆ ಹೋಗುತ್ತಾರೆ ನಟಿ ಮೇಘನಾ ಗಾಂವ್ಕರ್. ಜಿಯಾ ಮತ್ತು ಶ್ರೀಕೃಷ್ಣನ ಕ್ರಿಯೇಟಿವಿಟಿ ಖುಷಿ ನೀಡುತ್ತದೆ. ಸ್ನೇಹಿತನ ಪಾತ್ರ ಮಾಡಿರುವ ಮ್ಯಾಕ್ವಿನ್ ಇಯಾನ್ ಡಿಸೋಜಾ ನಟನೆ ತುಸು ನಾಟಕೀಯ ಎನಿಸುತ್ತದೆ.
Simple Suni: ಸಿಂಪಲ್ ಸುನಿಯ ಲಂಬೋದರ 2.0 ಚಿತ್ರಕ್ಕೆ ಈ ಬಾಲಿವುಡ್ ನಿರ್ಮಾಪಕ ಸಾಥ್!
ಮೇಕಿಂಗ್ ಹೇಗಿದೆ?
ಈ ಚಿತ್ರಕ್ಕಾಗಿ ಪ್ರಸ್ತುತ ಜೆನ್-ಝೀ ಮನಸ್ಥಿತಿಗೆ ತಕ್ಕಂತಹ ರಿಯಲಿಸ್ಟಿಕ್ ಕಾನ್ಸೆಪ್ಟ್ ಆಯ್ಕೆ ಮಾಡಿಕೊಂಡಿರುವುದು ಸಿಂಪಲ್ ಸುನಿ ಅವರ ಪ್ಲಸ್ ಪಾಯಿಂಟ್. ಫೈಟ್, ಡ್ಯುಯೆಟ್, ರೊಮ್ಯಾನ್ಸ್ ಹೀಗೆ ಕಮರ್ಷಿಯಲ್ ಸಿನಿಮಾದ ಸಿದ್ಧಸೂತ್ರಗಳನ್ನು ಬದಿಗಿಟ್ಟು, ಯುವ ಪೀಳಿಗೆಯ ಪ್ರೇಕ್ಷಕರನ್ನು ಸೆಳೆಯುವ ತಂತ್ರಜ್ಞಾನ ಮತ್ತು ಸೈಬರ್ ವಂಚನೆಯಂತಹ ಗಂಭೀರ ವಿಷಯವನ್ನು ಸುನಿ ಕೈಗೆತ್ತಿಕೊಂಡಿದ್ದಾರೆ. ಸಾಮಾನ್ಯವಾಗಿ ಸುನಿ ಅವರು ತಮ್ಮ ಸಿನಿಮಾಗಳಿಗೆ ತಾವೇ ಸ್ಕ್ರಿಪ್ಟ್ ಬರೆಯುತ್ತಾರೆ. ಆದರೆ ಈ ಬಾರಿ ನಿರ್ಮಾಪಕ ಅನಿಲ್ ಶೆಟ್ಟಿ ಬರೆದ ಸ್ಕ್ರಿಪ್ಟ್ಗೆ ದೃಶ್ಯರೂಪ ನೀಡಿದ್ದಾರೆ. ಚಿತ್ರಕಥೆಯ ನಿರೂಪಣೆಯಲ್ಲಿ ಕೆಲವೆಡೆ ಲಾಜಿಕ್ ಮಿಸ್ ಆಗಿದೆ ಎನಿಸುತ್ತದೆ.
ಹೊಸತನದ ಕಥಾವಸ್ತುಗಳನ್ನು ಸದಾ ಪ್ರೋತ್ಸಾಹಿಸುವ ಕನ್ನಡ ಪ್ರೇಕ್ಷಕರಿಗೆ ‘ಲಂಬೋದರ 2.0’ ಒಂದು ವಿಭಿನ್ನ ಪ್ರಯೋಗವಾಗಿ ಗಮನ ಸೆಳೆಯುತ್ತದೆ. ಹ್ಯಾಕಿಂಗ್ ಜಗತ್ತನ್ನು ತೆರೆಯ ಮೇಲೆ ತರಲು ತಂತ್ರಜ್ಞಾನದ ಮೂಲಕ ಸೃಷ್ಟಿಸಿರುವ 'ಕೃಷ್ಣ' ಮತ್ತು 'ಜಿಯಾ' ಪಾತ್ರಗಳು ಕಥೆಗೆ ವಿಶೇಷ ಮೆರುಗು ನೀಡಿವೆ. ವೀರ್ ಸಮರ್ಥ್ ಸಂಗೀತದ ‘ಕಣ್ಣಲ್ಲಿ ಒಮ್ಮೆ ಕಣ್ಣಿಟ್ಟು ನೋಡು’ ಹಾಡು ಗುನುಗುವಂತಿದೆ. ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಸಿನಿಮಾಕ್ಕೆ ಪೂರಕವಾಗಿದೆ.
ಒಟ್ಟಾರೆಯಾಗಿ, ತಂತ್ರಜ್ಞಾನದ ದುರುಪಯೋಗದಂತಹ ವಿಭಿನ್ನ ವಿಷಯವನ್ನು ಹೇಳಲು ಚಿತ್ರತಂಡ ಪ್ರಯತ್ನಿಸಿದೆ. ನಿರೂಪಣೆಯಲ್ಲಿ ಒಂದಷ್ಟು ನ್ಯೂನತೆಗಳಿದ್ದರೂ, ಆನ್ಲೈನ್ ಜಗತ್ತಿನಿಂದ ಏನೆಲ್ಲಾ ಅವಾಂತರಗಳು ಸೃಷ್ಟಿಯಾಗುತ್ತವೆ ಎಂಬ ಎಚ್ಚರಿಕೆಯ ಸಂದೇಶವಿರುವ ‘ಲಂಬೋದರ 2.0’ ಖಂಡಿತವಾಗಿಯೂ ಒಂದು ಹೊಸತನದ ಅನುಭವ ನೀಡಲಿದೆ.