Road Accident: ಮಾಡಿಕೆರೆ ಕ್ರಾಸ್‌ನಲ್ಲಿ ಭೀಕರ ರಸ್ತೆ ಅಪಘಾತ: ಆಂಧ್ರ ಬಸ್ ಮತ್ತು ಲಾರಿ ನಡುವೆ ಡಿಕ್ಕಿ, 10 ಮಂದಿಗೆ ಗಾಯ, ಮೂವರ ಸ್ಥಿತಿ ಗಂಭೀರ!
ನೆರೆಯ ಆಂಧ್ರಪ್ರದೇಶದ ಕಡಪದಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಉದಯಗಿರಿ ಡಿಪೋಗೆ ಸೇರಿದ ಸಾರಿಗೆ ಬಸ್,ಭಾನುವಾರ ಮುಂಜಾನೆ ಮಾಡಿಕೆರೆ ಕ್ರಾಸ್ ಬಳಿ ಬರುತ್ತಿದ್ದಂತೆ ನಿಯಂತ್ರಣ ತಪ್ಪಿ ಈ ಅವಗಡ ಸಂಭವಿಸಿದೆ ಲಾರಿಯ ಚಕ್ರ ಪಂಚರ್ ಆಗಿದ್ದ ಹಿನ್ನೆಲೆಯಲ್ಲಿ ಚಾಲಕ ರಸ್ತೆ ಬದಿಯಲ್ಲಿ ಲಾರಿ ಯನ್ನು ನಿಲ್ಲಿಸಿ ಟೈರ್ ಬದಲಾಯಿಸುತ್ತಿದ್ದ ಎನ್ನಲಾಗಿದೆ.
-
ಚಿಂತಾಮಣಿ: ನಗರದ ಹೊರವಲಯದ ಮಾಡಿಕೆರೆ ಕ್ರಾಸ್ ಬಳಿ ಭಾನುವಾರ ಮುಂಜಾನೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಆಂಧ್ರಪ್ರದೇಶದ ಸಾರಿಗೆ ಬಸ್ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ,10 ಮಂದಿ ಪ್ರಯಾಣಿಕರು ಗಾಯಗೊಂಡಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ.
ನೆರೆಯ ಆಂಧ್ರಪ್ರದೇಶದ ಕಡಪದಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಉದಯಗಿರಿ ಡಿಪೋಗೆ ಸೇರಿದ ಸಾರಿಗೆ ಬಸ್, ಭಾನುವಾರ ಮಾಡಿಕೆರೆ ಕ್ರಾಸ್ ಬಳಿ ಬರುತ್ತಿದ್ದಂತೆ ನಿಯಂತ್ರಣ ತಪ್ಪಿ ಈ ಅವಗಡ ಸಂಭವಿಸಿದೆ ಲಾರಿಯ ಚಕ್ರ ಪಂಚರ್ ಆಗಿದ್ದ ಹಿನ್ನೆಲೆಯಲ್ಲಿ ಚಾಲಕ ರಸ್ತೆ ಬದಿಯಲ್ಲಿ ಲಾರಿಯನ್ನು ನಿಲ್ಲಿಸಿ ಟೈರ್ ಬದಲಾಯಿಸುತ್ತಿದ್ದ ಎನ್ನಲಾಗಿದೆ.
ಇದನ್ನೂ ಓದಿ: Bengaluru Accident: ಬೆಂಗಳೂರಿನಲ್ಲಿ ರಸ್ತೆ ಗುಂಡಿಗೆ ಮತ್ತೊಂದು ಬಲಿ; ಶಾಲಾ ಬಸ್ ಹರಿದು ಮಗಳ ಕಣ್ಣೆದುರೇ ತಾಯಿ ಸಾವು!
ಈ ವೇಳೆ, ಜೋರು ಮಳೆ ಬೀಳುತ್ತಿದ್ದುದರಿಂದ ಆಂಧ್ರ ಬಸ್ ಚಾಲಕನ ನಿಯಂತ್ರಣ ತಪ್ಪಿ,ರಸ್ತೆ ಪಕ್ಕದಲ್ಲಿದ್ದ ಲಾರಿಗೆ ಹಿಂಬದಿಯಿಂದ ಜೋರಾಗಿ ಡಿಕ್ಕಿ ಹೊಡೆದಿದೆ.
ಅಪಘಾತದ ಸಮಯದಲ್ಲಿ ಬಸ್ಸಿನಲ್ಲಿ ಒಟ್ಟು 20 ಮಂದಿ ಪ್ರಯಾಣಿಕರಿದ್ದರು. ಡಿಕ್ಕಿಯ ರಭಸಕ್ಕೆ 10 ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ ನಂತರ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗಳಿಗೆ ರವಾನಿಸಲಾಗಿದೆ.
ತೀವ್ರವಾಗಿ ಗಾಯಗೊಂಡವರನ್ನು ಬೆಂಗಳೂರಿನ ಕೆ.ಆರ್.ಪುರಂ ನಿವಾಸಿ ಚನ್ನಕೇಶ್ವರಾವ್(42 ವರ್ಷ), ನೆಲ್ಲೂರಿನ ಸುನಿಲ್(23 ವರ್ಷ) ಹಾಗೂ ಯಾಬೋ (42 ವರ್ಷ) ಎಂದು ಗುರುತಿಸಲಾಗಿದೆ. ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಸ್ ಚಾಲಕ,ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಸಿ.ಎಚ್. ರಮೇಶ್(45 ವರ್ಷ) ಅವರಿಗೂ ಸಣ್ಣ ಪುಟ್ಟ ಗಾಯಗಳಾಗಿವೆ. ಲಾರಿ ಚಾಲಕನನ್ನು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಸುಧಾಕರ್ ಎಂದು ಗುರುತಿಸಲಾಗಿದೆ.
ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.