ದಾಖಲೆ ಇಲ್ಲದಿದ್ದರೆ ಹಿಂಬರಹ ನೀಡಿ ಅರ್ಜಿಗಳನ್ನು ತ್ವರಿತವಾಗಿ ಖುಲಾಸೆಗೊಳಿಸಿ: ಲೋಕಾಯುಕ್ತ ಎಸ್ಪಿ ಜೆ.ಕೆ.ಆಂಟೋನಿ ಜಾನ್
ಬಾಗೇಪಲ್ಲಿ ತಾಲೂಕಿನ ರೇಕಾರ್ಡ್ ರೂಂನಲ್ಲಿ ಇರಬೇಕಾಗಿರುವ ಸರ್ಕಾರಿ ಜಮೀನಿನ ಮೂಲ ಕಡತ ಗಳು ಖಾಸಗಿ ವ್ಯಕ್ತಿಯ ಮನೆಯಲ್ಲಿದ್ದು, ಅಧಿಕಾರಿಗಳಿಗೆ ಲಂಚ ನೀಡಿದರೆ ಮಾತ್ರ ಮೂಲ ಕಡತದ ನಕಲು ಪ್ರತಿಗಳು ನೀಡುತ್ತಾರೆ. ಇಲ್ಲದಿದ್ದರೆ ತಿಂಗಳಾನುಗಟ್ಟಲೇ ರೈತರನ್ನು ಕಚೇರಿಗೆ ಅಲೆದಾಡಿಸುತ್ತಾರೆ. ರೈತರು, ಬಡವರು ಅಧಿಕಾರಿಗಳಿಗೆ ಲಂಚ ಎಲ್ಲಿಂದ ತಂದುಕೊಡುತ್ತಾರೆ

ಬಾಗೇಪಲ್ಲಿ ಪಟ್ಟಣದ ತಾಲೂಕು ಆಡಳಿತ ಭವನದಲ್ಲಿ ಕುಂದು ಕೊರತೆಗಳ ಅಹವಾಲು ಸ್ವೀಕರ ಸಭೆಯಲ್ಲಿ ಲೋಕಾಯುಕ್ತ ಪೋಲಿಸರಿಗೆ ರೈತರು ಅಹವಾಲು ಸಲ್ಲಿಸುತ್ತಿರುವುದು, ಎಸ್ಪಿ ಜೆ.ಕೆ.ಆಂಟೋನಿ ಜಾನ್, ತಹಶೀಲ್ದಾರ್ ಮನೀಷಾ ಎನ್ ಪತ್ರಿ, ತಾ.ಪಂ ಇಒ ಕೆ.ವಿ.ರಮೇಶ್ ಇದ್ದರು.

ಬಾಗೇಪಲ್ಲಿ: ಸರ್ಕಾರಿ ಅಧಿಕಾರಿಗಳು ಬರುತ್ತಾರೆ. ವರ್ಗಾವಣೆಗೊಂಡು ಬೇರೊಂದು ಕಡೆ ಹೋಗು ತ್ತಾರೆ. ಆದರೆ ಇರುವಷ್ಟು ಕಾಲ ತಮ್ಮ ತಮ್ಮ ಕಾರ್ಯಕ್ಷೇತ್ರದಲ್ಲಿ ಜನರನ್ನು ಕಚೇರಿಗೆ ಅಲೆದಾಡಿ ಸುವ ಕೆಲಸ ಮಾಡದೆ ಸಕಾಲಕ್ಕೆ ಕೆಲಸ ಮಾಡಿಕೊಡಿ. ದಾಖಲೆ ಇಲ್ಲದಿದ್ದರೆ ಹಿಂಬರಹ ನೀಡಿ ಅರ್ಜಿಗಳನ್ನು ತ್ವರಿತವಾಗಿ ಖುಲಾಸೆಗೊಳಿಸಿ ಎಂದು ಲೋಕಾಯುಕ್ತ ಎಸ್ಪಿ ಜೆ.ಕೆ.ಆಂಟೋನಿ ಜಾನ್ ಅಧಿಕಾರಿಗಳಿಗೆ ಸೂಚಿಸಿದರು.
ಬಾಗೇಪಲ್ಲಿ ಪಟ್ಟಣದ ತಾಲೂಕು ಆಡಳಿತ ಭವನದಲ್ಲಿ ಚಿಕ್ಕಬಳ್ಳಾಪುರ ಲೋಕಾಯುಕ್ತ ಪೋಲಿಸ್ ಆಧೀಕ್ಷಕರ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ಕುಂದುಕೊರತೆಗಳ ಅಹವಾಲು ಸ್ವೀಕರಿಸಿ ಮಾತನಾಡಿ ದರು.
ಬಾಗೇಪಲ್ಲಿ ತಾಲೂಕಿನ ರೇಕಾರ್ಡ್ ರೂಂನಲ್ಲಿ ಇರಬೇಕಾಗಿರುವ ಸರ್ಕಾರಿ ಜಮೀನಿನ ಮೂಲ ಕಡತಗಳು ಖಾಸಗಿ ವ್ಯಕ್ತಿಯ ಮನೆಯಲ್ಲಿದ್ದು, ಅಧಿಕಾರಿಗಳಿಗೆ ಲಂಚ ನೀಡಿದರೆ ಮಾತ್ರ ಮೂಲ ಕಡತದ ನಕಲು ಪ್ರತಿಗಳು ನೀಡುತ್ತಾರೆ. ಇಲ್ಲದಿದ್ದರೆ ತಿಂಗಳಾನುಗಟ್ಟಲೇ ರೈತರನ್ನು ಕಚೇರಿಗೆ ಅಲೆದಾಡಿಸುತ್ತಾರೆ. ರೈತರು, ಬಡವರು ಅಧಿಕಾರಿಗಳಿಗೆ ಲಂಚ ಎಲ್ಲಿಂದ ತಂದುಕೊಡುತ್ತಾರೆ. ರೈತ ರಿಗೆ ನ್ಯಾಯ ಓದಗಿಸಿಕೊಡಿ ಎಂದು ರೈತ ಸಂಘದ ಮುಖಂಡರು ಲೋಕಾಯುಕ್ತ ಪೊಲೀಸರ ಬಳಿ ಅಳಲು ತೋಡಿಕೊಂಡಾಗ ಸ್ಥಳದಲ್ಲೇ ಇದ್ದ ಕಂದಾಯ ಇಲಾಖೆ ಅಧಿಕಾರಿಗಳನ್ನ, ಸಿಬ್ಬಂದಿ ವರ್ಗದವರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.
ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಜೆ.ಕೆ.ಆಂಟೋನಿ ಜಾನ್ ಮಾತನಾಡಿ, ಕಂದಾಯ ಇಲಾಖೆ, ಸರ್ವೇ, ಭೂ ದಾಖಲೆ ಕಛೇರಿಗೆ ಸಂಬಂಧಿಸಿದಂತೆ 32 ದೂರು ಅರ್ಜಿಗಳು ಬಂದಿದ್ದರೆ, ತಾಲೂಕು ಪಂಚಾಯತಿ ಸಂಬಂಧಿಸಿದಂತೆ 5, ಅರಣ್ಯ ಇಲಾಖೆ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ತಲಾ ಒಂದು ದೂರು ಅರ್ಜಿ ಸಲ್ಲಿಸಿದ್ದಾರೆ, ಸರ್ಕಾರಿ ಅಧಿಕಾರಿಗಳು ತಮ್ಮ ಕೆಲಸವನ್ನು ವಿಳಂಭ ಮಾಡದೆ ಸಕಾಲಕ್ಕೆ ಜನರ ಕೆಲಸ ಮಾಡಿಕೊಟ್ಟರೆ ನಿಮ್ಮ ವಿರುದ್ದ ಯಾರು ಸಲ್ಲಿಸುವುದಿಲ್ಲ ಎಂಬ ಕನಿಷ್ಠ ಜ್ಞಾನವನ್ನು ನೀವು ಅರ್ಥ ಮಾಡಿಕೊಂಡು ಕೆಲಸ ಮಾಡಿ, ಹಲವು ವರ್ಷಗಳಿಂದ ಸ್ಥಳೀಯವಾಗಿ ಕೆಲಸ ಮಾಡುತ್ತಿರುವ ಸಿಬ್ಬಂದಿ ವರ್ಗದವರ ಹಿಡಿತದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಕೆಲಸ ವನ್ನು ಮಾಡುತ್ತಿದ್ದಾರೆಂದು ದೂರುಗಳು ಬಂದಿವೆ, ಇದು ಅತ್ಯಂತ ನೋವಿನ ಸಂಗತಿಯಾಗಿದೆ. ಅವಧಿಯೊಳಗೆ ಬಡ ಜನರ, ರೈತರ ಅರ್ಜಿಗಳಿಗೆ ಪರಿಹಾರ ಕಲ್ಪಿಸದಿದ್ದರೆ ಅಂತಹವರ ವಿರುದ್ದ ಕ್ರಮ ಜರುಗಿಸುವಂತೆ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆಂದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಲೋಕಾಯುಕ್ತಾ ಡಿವೈಎಸ್ಪಿ ವೀರೇಂಧ್ರ ಕುಮಾರ್, ಇನ್ಸ್ ಪೆಕ್ಟರ್ ಶಿವಪ್ರಸಾದ್, ತಹಶೀಲ್ದಾರ್ ಮನೀಷಾ ಎನ್ ಪತ್ರಿ, ತಾ.ಪಂ. ಇಒ ಕೆ.ವಿ.ರಮೇಶ್, ಲೋಕಾಯುಕ್ತಾ ಸಿಬ್ಬಂದಿ ವರ್ಗದವರಾದ ಸತೀಶ್, ಅರುಣ್, ದೇವರಾಜು, ಮಾಳಪ್ಪ, ಸೌಮ್ಯ, ಗುರು ಮೂರ್ತಿ ಇದ್ದರು.