ಆತ್ಮಜ್ಯೋತಿ ಬೆಳಗಿಸುವುದೇ ನಿಜವಾದ ದೀಪಾವಳಿ: ರಾಜಯೋಗಿನಿ ಬಿ.ಕೆ. ಲಲಿತಕ್ಕ
ದೀಪಾವಳಿ ಸಂದರ್ಭದಲ್ಲಿ ಮಣ್ಣಿನ ದೀಪಗಳನ್ನು ಬೆಳಗಿಸುವುದಕ್ಕೂ ಮುನ್ನ ನಮ್ಮೊಳಗಿನ ಆತ್ಮಜ್ಯೋತಿಯನ್ನು ಜಾಗೃತಗೊಳಿಸಿಕೊಳ್ಳಬೇಕು. ಕೋಪ, ಲೋಭ, ಅಹಂಕಾರ ಮತ್ತು ಮತ್ಸರ ದಂತಹ ನಕಾರಾತ್ಮಕ ಗುಣಗಳನ್ನು ದೂರಮಾಡಿ, ಶಾಂತಿ, ಪವಿತ್ರತೆ ಹಾಗೂ ಪ್ರೀತಿಯ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದೇ ನಿಜವಾದ ದೀಪಾವಳಿ
-
ಚಿಕ್ಕಬಳ್ಳಾಪುರ: ದೀಪಾವಳಿ ಎಂದರೆ ಕೇವಲ ಬಾಹ್ಯವಾಗಿ ದೀಪಗಳನ್ನು ಬೆಳಗಿಸುವ ಹಬ್ಬವಲ್ಲ. ಪ್ರತಿಯೊಬ್ಬರೂ ತಮ್ಮೊಳಗಿನ ಆತ್ಮಜ್ಯೋತಿಯನ್ನು ಬೆಳಗಿಸಿ, ಅಜ್ಞಾನದ ಕತ್ತಲೆಯನ್ನು ದೂರ ಮಾಡಿಕೊಳ್ಳುವ ಪವಿತ್ರ ಆಚರಣೆಯಾಗಿದೆ ಎಂದು ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾ ಲಯ(Brahma Kumaris Ishwariya Vishwavidyalaya)ದ ಸ್ಥಾನಿಕ ಸಂಚಾಲಕಿ ರಾಜಯೋಗಿನಿ ಬಿ.ಕೆ. ಲಲಿತಕ್ಕ ತಿಳಿಸಿದರು.
ನಗರದ ಕೆ.ಟಿ. ರಸ್ತೆಯಲ್ಲಿರುವ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಸಹೋದರ-ಸಹೋದರಿಯರೊಂದಿಗೆ ದೀಪದಿಂದ ದೀಪ ಬೆಳಗಿಸುವ ಮೂಲಕ ಆಧ್ಯಾತ್ಮಿಕ ದೀಪಾವಳಿ ಆಚರಣೆಗೆ ಚಾಲನೆ ನೀಡಿ ಮಾತನಾಡಿದರು.
ದೀಪಾವಳಿ ಸಂದರ್ಭದಲ್ಲಿ ಮಣ್ಣಿನ ದೀಪಗಳನ್ನು ಬೆಳಗಿಸುವುದಕ್ಕೂ ಮುನ್ನ ನಮ್ಮೊಳಗಿನ ಆತ್ಮಜ್ಯೋತಿಯನ್ನು ಜಾಗೃತಗೊಳಿಸಿಕೊಳ್ಳಬೇಕು. ಕೋಪ, ಲೋಭ, ಅಹಂಕಾರ ಮತ್ತು ಮತ್ಸರ ದಂತಹ ನಕಾರಾತ್ಮಕ ಗುಣಗಳನ್ನು ದೂರಮಾಡಿ, ಶಾಂತಿ, ಪವಿತ್ರತೆ ಹಾಗೂ ಪ್ರೀತಿಯ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದೇ ನಿಜವಾದ ದೀಪಾವಳಿ ಎಂದು ಹೇಳಿದರು.
ಇದನ್ನೂ ಓದಿ: Chinthamani News: ಧರ್ಮ, ಜಾತಿ ಭೇದ ಮರೆತು ಎಲ್ಲರೂ ಒಗ್ಗಟ್ಟಿನಿಂದ ಪಾಲ್ಗೊಳ್ಳುವುದು ಮಾದರಿ: ವೇಣುಗೋಪಾಲ್
ರಾಜಯೋಗ ಧ್ಯಾನದ ಮೂಲಕ ಪರಮಪಿತ ಪರಮಾತ್ಮ ಶಿವಬಾಬಾರ ಸ್ಮರಣೆಯಲ್ಲಿ ತೊಡಗಿ, ಜ್ಞಾನದ ಬೆಳಕನ್ನು ಪಡೆದು ಆತ್ಮಜಾಗೃತಿ ಮೂಡಿಸಿಕೊಳ್ಳಬೇಕು. ಹಳೆಯ ನಕಾರಾತ್ಮಕ ಸಂಸ್ಕಾರ ಗಳು ಮತ್ತು ಕರ್ಮಗಳ ಲೆಕ್ಕಾಚಾರವನ್ನು ಕ್ಷಮಾಗುಣ ಹಾಗೂ ಶುಭ ಹಾರೈಕೆಗಳ ಮೂಲಕ ಮುಕ್ತಾಯಗೊಳಿಸಿ, ಸಕಾರಾತ್ಮಕ ಮತ್ತು ದೈವಿಗುಣಗಳೊಂದಿಗೆ ಹೊಸ ಜೀವನ ಆರಂಭಿಸಲು ದೀಪಾವಳಿ ಪ್ರೇರಣೆ ನೀಡುತ್ತದೆ ಎಂದರು.
ಈ ಸಂದರ್ಭದಲ್ಲಿ ದೀಪಾವಳಿಯ ವಿಶೇಷ ಆಧ್ಯಾತ್ಮಿಕ ಸಂದೇಶ ಸಾರುವ ‘ಮುರಳಿ’ಯನ್ನು ವಾಚಿಸಿ ಹಬ್ಬದ ಮಹತ್ವದ ಕುರಿತು ಜಾಗೃತಿ ಮೂಡಿಸಿದರು.
ಕಾರ್ಯಕ್ರಮದಲ್ಲಿ ಬಿ.ಕೆ. ಸಹೋದರಿಯರಾದ ಚಿನ್ನಮ್ಮ, ದೊಡ್ಡಲಕ್ಷ್ಮಿದೇವಕ್ಕ, ಮುನಿಯಮ್ಮ, ಸಾವಿತ್ರಮ್ಮ, ಚಿಕ್ಕಲಕ್ಷ್ಮಿದೇವಕ್ಕ, ನಾಗರತ್ನಕ್ಕ, ವಿಜಯಕ್ಕ ಹಾಗೂ ಬಿ.ಕೆ. ಸಹೋದರರಾದ ನಂಜುಂಡಾಚಾರಿ ಅಣ್ಣ, ಮಂಜಣ್ಣ, ನರಸಿಂಹಲು ಅಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಚಿತ್ರ ಶೀರ್ಷಿಕೆ: ನಗರದ ಕೆ.ಟಿ. ರಸ್ತೆಯ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಬಿ.ಕೆ. ಸಹೋದರ-ಸಹೋದರಿಯರು ಆತ್ಮಜ್ಯೋತಿ ಬೆಳಗಿಸುವ ಮೂಲಕ ಆಧ್ಯಾತ್ಮಿಕವಾಗಿ ದೀಪಾವಳಿ ಆಚರಿಸಿದರು.