Bhavantara Review: ಭಾವಾಂತರದಲ್ಲಿ ತೃತೀಯ ಲಿಂಗಿಗಳ ಮನದ ತಳಮಳದ ಪ್ರತಿಬಿಂಬ!
Bhavantara Movie Review: ʻಭಾವಾಂತರʼ ಸಿನಿಮಾದಲ್ಲಿ ಸಮಾಜದ ಅಂಚಿನಲ್ಲಿರುವ ತೃತೀಯಲಿಂಗಿಗಳ ಆಂತರಿಕ ನೋವು ಹಾಗೂ ಸಂಘರ್ಷವನ್ನು ಕಟ್ಟಿಕೊಡುವ ಮಹತ್ವದ ಪ್ರಯತ್ನವಾಗಿದೆ. ನಿರ್ದೇಶಕ ಕಾರ್ತಿಕ್ ಶರ್ಮಾ ಕೇವಲ ನಾಯಕನಾಗಿ ಮಾತ್ರವಲ್ಲದೆ, ತೃತೀಯಲಿಂಗಿಯ ಪಾತ್ರಕ್ಕೂ ಅದ್ಭುತವಾಗಿ ಜೀವ ತುಂಬಿದ್ದಾರೆ.
-
ಸಿನಿಮಾ: ಭಾವಾಂತರ
ತಾರಾಗಣ: ಕಾರ್ತಿಕ್ ಶರ್ಮಾ, ತನ್ವಿ ರಾವ್, ಪ್ರಣವ್ ಶ್ರೀಧರ್, ಶ್ರೀ ವೈಷ್ಣವ್, ವೇದಾ ರಾವ್
ನಿರ್ದೇಶನ: ಕಾರ್ತಿಕ್ ಶರ್ಮಾ
ಅವಧಿ: 1 ಗಂಟೆ 42 ನಿಮಿಷ
ರೇಟಿಂಗ್: 3/5
ಸಂಗೀತ ನಿರ್ದೇಶಕ ಕಾರ್ತಿಕ್ ಶರ್ಮಾಗೆ ಕಿರುತೆರೆಯಲ್ಲಿ ಉತ್ತಮ ಹೆಸರಿದೆ, ಅನೇಕ ಸೂಪರ್ ಹಿಟ್ ಧಾರಾವಾಹಿಗಳಿಗೆ ಅವರು ಶೀರ್ಷಿಕೆ ಗೀತೆ ಸಂಯೋಜಿಸಿದ್ದಾರೆ. ಬಾಲನಟರಾಗಿಯೂ ಗುರುತಿಸಿಕೊಂಡಿದ್ದ ಕಾರ್ತಿಕ್, ಈಗ ‘ಭಾವಾಂತರ’ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಮೊದಲ ಬಾರಿಗೆ ನಿರ್ಮಾಣ ಹಾಗೂ ನಿರ್ದೇಶನ ಮಾಡಿರುವ ಅವರೇ ಈ ಚಿತ್ರದ ನಾಯಕನೂ ಹೌದು. ಇಂದು ತೆರೆಕಂಡಿರುವ ಈ ಸಿನಿಮಾ ಹೇಗಿದೆ? ಇಲ್ಲಿದೆ ವಿಮರ್ಶೆ.
‘ಭಾವಾಂತರ’ ಚಿತ್ರದ ಕಥೆ ಏನು?
ಡಾಕ್ಯುಮೆಂಟರಿ ಮೇಕರ್ ಆಗಿರುವ ರಾಧಾಗೆ (ತನ್ವಿ ರಾವ್) ಯಾವುದೇ ವಿಚಾರದಲ್ಲೂ ತೃಪ್ತಿ ಇರುವುದಿಲ್ಲ. ಆಕೆಯ ಬಳಿ ಭಾವನೆಗಳಿಗೆ ನಯಾಪೈಸೆ ಜಾಗವಿರುವುದಿಲ್ಲ, ಪ್ರೀತಿಯೂ ಬೇಡವಾಗಿರುತ್ತದೆ. ಏನಾದರೂ ಒಂದು ವಿಭಿನ್ನ ವಸ್ತುವಿಷಯದ ಮೇಲೆ ಸಾಕ್ಷ್ಯಚಿತ್ರ ಮಾಡಬೇಕು ಎಂದುಕೊಳ್ಳುವ ಆಕೆಗೆ, ತೃತೀಯಲಿಂಗಿಗಳ ಕುರಿತು ಸಾಕ್ಷ್ಯಚಿತ್ರ ರೂಪಿಸುವ ಆಲೋಚನೆ ಬರುತ್ತದೆ. ಆ ಉದ್ದೇಶದಿಂದಲೇ ಆಕೆ ತನ್ನ ತಂಡದೊಂದಿಗೆ ತಮಿಳುನಾಡಿನ ಒಂದು ಊರಿಗೆ ತೆರಳುತ್ತಾಳೆ. ಆದರೆ ಅಲ್ಲಿ ಕಥೆಗೆ ಬಲವಾದ ತಿರುವುಗಳು ಎದುರಾಗುತ್ತವೆ. ‘ಭಾವಾಂತರ’ದಲ್ಲಿ ಭಾವನೆಗಳ ಅಲೆಗಳ ಅಬ್ಬರ ಹೆಚ್ಚಾಗುತ್ತದೆ, ರಾಧೆಯ ಬದುಕಿನ ಬಹುಮುಖ್ಯ ಘಟ್ಟಕ್ಕೆ ಆ ಪಯಣ ಸಾಕ್ಷಿಯಾಗುತ್ತದೆ. ಅಷ್ಟಕ್ಕೂ ರಾಧಾಳ ಬದುಕಿನಲ್ಲಿ ಏನೆಲ್ಲಾ ನಡೆದಿರುತ್ತದೆ? ತೃತೀಯಲಿಂಗಿಗಳಿಗೂ ಈ ಸಿನಿಮಾದ ಕಥೆಗೂ ಏನು ಸಂಬಂಧ? ಅವರ ಆಚರಣೆಗಳು ಹೇಗಿರುತ್ತವೆ? ಇದೆಲ್ಲದಕ್ಕೂ ‘ಭಾವಾಂತರ’ ಚಿತ್ರದಲ್ಲಿ ಭಾವನಾತ್ಮಕ ಉತ್ತರಗಳನ್ನು ನೀಡುತ್ತ ಸಾಗಿದ್ದಾರೆ ಕಾರ್ತಿಕ್.
ಮೇಕಿಂಗ್ ಹೇಗಿದೆ?
ತೃತೀಯಲಿಂಗಿಗಳ ಬದುಕು, ಭಾವನೆ ಮತ್ತು ಅವರ ಆಂತರಿಕ ಸಂಘರ್ಷಗಳನ್ನು ತೆರೆಯ ಮೇಲೆ ಕಟ್ಟಿಕೊಡುವ ಪ್ರಯತ್ನಗಳು ಕನ್ನಡ ಚಿತ್ರರಂಗದಲ್ಲಿ ತೀರಾ ಅಪರೂಪ. ಅಂತಹದೊಂದು ಗಂಭೀರ ಹಾಗೂ ಸೂಕ್ಷ್ಮ ವಸ್ತುವಿಷಯವನ್ನು ಕೈಗೆತ್ತಿಕೊಂಡು, ಪ್ರೇಕ್ಷಕರಲ್ಲಿ ಚಿಂತನೆ ಹುಟ್ಟುಹಾಕುವ ನಿಟ್ಟಿನಲ್ಲಿ ನಿರ್ದೇಶಕ ಕಾರ್ತಿಕ್ ಶರ್ಮಾ ‘ಭಾವಾಂತರ’ ಚಿತ್ರವನ್ನು ರೂಪಿಸಿದ್ದಾರೆ. ಹುಟ್ಟುವಾಗ ಗಂಡಾಗಿ ಜನಿಸಿ, ಆನಂತರ ಹೆಣ್ಣಾಗಿ ಬದಲಾಗುವ ವ್ಯಕ್ತಿಗಳ ಮಾನಸಿಕ ತಳಮಳ ಮತ್ತು ಸಮಾಜದಲ್ಲಿ ಅವರು ಎದುರಿಸುವ ತುಮುಲಗಳೇ ಈ ಚಿತ್ರದ ಕೇಂದ್ರಬಿಂದು. ಕೇವಲ ತೃತೀಯಲಿಂಗಿಗಳ ಮನಸ್ಥಿತಿಯಷ್ಟೇ ಅಲ್ಲದೆ, ಸಲಿಂಗಕಾಮದ ಸೂಕ್ಷ್ಮ ಎಳೆಗಳನ್ನು ಕೂಡ ಕಥೆಯಲ್ಲಿ ಅಳವಡಿಸಿಕೊಳ್ಳುವ ಮೂಲಕ ನಿರ್ದೇಶಕರು ಸಾಂಪ್ರದಾಯಿಕ ಕಮರ್ಷಿಯಲ್ ಚೌಕಟ್ಟನ್ನು ಮೀರಿ ಹೊಸ ಹಾದಿ ಹಿಡಿದಿದ್ದಾರೆ.
ತಮಿಳುನಾಡಿನಲ್ಲಿ ನಡೆಯುವ ಲಿಂಗಪರಿವರ್ತಿತರ ಉತ್ಸವವನ್ನು ಚಿತ್ರದಲ್ಲಿ ಅತ್ಯಂತ ಆಸಕ್ತಿಕರವಾಗಿ ತೆರೆದಿಡಲಾಗಿದೆ, ಅದನ್ನು ಕಥೆಯ ಭಾಗವಾಗಿಯೇ ಸಹಜವಾಗಿ ತೋರಿಸಿರುವುದು ವಿಶೇಷ. ಸಿನಿಮಾದ ಅವಧಿಯೂ (1 ಗಂಟೆ 42 ನಿಮಿಷ) ಕಾಂಪ್ಯಾಕ್ಟ್ ಆಗಿದ್ದು, ಅನಗತ್ಯ ದೃಶ್ಯಗಳನ್ನು ತುರುಕದೆ ನೇರವಾಗಿ ಕಥೆಯ ಮೇಲಷ್ಟೇ ಗಮನಹರಿಸಲಾಗಿದೆ. ಕಥಾವಸ್ತು ಗಂಭೀರವಾಗಿದ್ದರೂ ಅಲ್ಲಲ್ಲಿ ತಿಳಿಹಾಸ್ಯ ಮತ್ತು ಸೊಗಸಾದ ಹಾಡುಗಳನ್ನು ಸೇರಿಸಿ ಪ್ರೇಕ್ಷಕರಿಗೆ ಬೇಸರವಾಗದಂತೆ ನೋಡಿಕೊಳ್ಳಲಾಗಿದೆ. ಆದರೆ ಕ್ಲೈಮ್ಯಾಕ್ಸ್ ದೃಶ್ಯದ ಬರವಣಿಗೆಯಲ್ಲಿ ಇನ್ನಷ್ಟು ಸ್ಪಷ್ಟತೆ ಇರಬೇಕಿತ್ತು ಎನಿಸುತ್ತದೆ.
ಕಾರ್ತಿಕ್ ಶರ್ಮಾ ನಟನೆ ಹೇಗಿದೆ?
ಮಾಧವ ಪಾತ್ರದ ಜೊತೆಗೆ ತೃತೀಯಲಿಂಗಿಯ ಪಾತ್ರಕ್ಕೂ ಕಾರ್ತಿಕ್ ಶರ್ಮಾ ತಮ್ಮ ತೂಕಬದ್ಧ ನಟನೆಯ ಮೂಲಕ ಜೀವ ತುಂಬಿದ್ದಾರೆ. ತಮ್ಮ ಮೊದಲ ಸಿನಿಮಾದಲ್ಲಿಯೇ ಹಲವು ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಲು ಅವರು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ನಟನೆಯ ಜೊತೆಗೆ ಸಂಗೀತ ನಿರ್ದೇಶನದಲ್ಲೂ ಪೂರ್ಣಾಂಕ ಪಡೆಯುತ್ತಾರೆ ಕಾರ್ತಿಕ್. ರಾಧೆಯಾಗಿ ತನ್ವಿ ರಾವ್ ಅವರ ಅಭಿನಯವೂ ಉತ್ತಮವಾಗಿದೆ. ಮೊದಲಾರ್ಧದಲ್ಲಿ ತುಂಬಾ ಗಂಭೀರವಾಗಿ, ಯಾವುದೇ ಭಾವುಕತೆಗೆ ಒಳಗಾಗದ ಪಾತ್ರದಲ್ಲಿ ಮಿಂಚುವ ತನ್ವಿ, ದ್ವಿತೀಯಾರ್ಧದಲ್ಲಿ ಸಂಪೂರ್ಣ ಭಿನ್ನ ರೂಪದಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಎರಡೂ ಛಾಯೆಗಳ ಪಾತ್ರವನ್ನು ತನ್ವಿ ಅತ್ಯಂತ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಪ್ರಣವ್ ಶ್ರೀಧರ್, ಶ್ರೀ ವೈಷ್ಣವ್, ವೇದಾ ರಾವ್ ಪೋಷಕ ಪಾತ್ರಗಳಲ್ಲಿ ಮಿಂಚಿದ್ದಾರೆ.
ಕಮರ್ಷಿಯಲ್ ಮಸಾಲೆ ಸಿನಿಮಾಗಳ ನಡುವೆ, ಸಮಾಜದ ಅಂಚಿನಲ್ಲಿರುವ ಸಮುದಾಯವೊಂದರ ನೋವು-ನಲಿವುಗಳನ್ನು ಪ್ರಬುದ್ಧವಾಗಿ ಹೇಳಲು ಹೊರಟ ‘ಭಾವಾಂತರ’, ಸಣ್ಣಪುಟ್ಟ ನ್ಯೂನತೆಗಳ ನಡುವೆಯೂ ಒಂದು ವಿಭಿನ್ನ ಹಾಗೂ ಅರ್ಥಪೂರ್ಣ ಪ್ರಯತ್ನವಾಗಿ ಗಮನ ಸೆಳೆಯುತ್ತದೆ.