ವೈಜ್ಞಾನಿಕ ಚಿಂತನೆ ಬೆಳೆಸಲು ಕೆಜೆವಿಎಸ್ ನಿರಂತರ ಪ್ರಯತ್ನ: ಈ.ಬಸವರಾಜು
ಕಳೆದ ಏಳು ವರ್ಷಗಳಿಂದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಹಾಗೂ ಸ್ವಾತಂತ್ರ‍್ಯ ಚಳವಳಿ ಕುರಿತ ರಾಜ್ಯಮಟ್ಟದ ಆನ್‌ಲೈನ್ ರಸಪ್ರಶ್ನೆ ಸ್ಪರ್ಧೆಗಳನ್ನು ಆಯೋಜಿಸಿ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸಲಾಗುತ್ತಿದೆ. ರಾಜ್ಯ, ಜಿಲ್ಲೆ, ತಾಲೂಕು ಹಾಗೂ ಶಾಲಾ ಮಟ್ಟದಲ್ಲಿ ಬಹುಮಾನ ನೀಡಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲಾಗುತ್ತಿದೆ
-
ಚಿಕ್ಕಬಳ್ಳಾಪುರ: ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ (ಕೆಜೆವಿಎಸ್) ವತಿಯಿಂದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ರಾಜ್ಯಮಟ್ಟದ ಆನ್‌ಲೈನ್ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ಸಾಧನೆ ಮಾಡಿದ ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನಗರದ ನಂದಿ ರಂಗಮಂದಿರದಲ್ಲಿ ಸೋಮವಾರ ಬಹುಮಾನ ವಿತರಣೆ ಸಮಾರಂಭ ನಡೆಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೆಜೆವಿಎಸ್ ರಾಜ್ಯ ಕಾರ್ಯದರ್ಶಿ ಈ. ಬಸವರಾಜು ಮಾತನಾಡಿ, ವಿಜ್ಞಾನವನ್ನು ಜನಸಾಮಾನ್ಯರಿಗೆ ತಲುಪಿಸುವುದು, ವೈಜ್ಞಾನಿಕ ಮನೋಭಾವ ಬೆಳೆಸುವುದು, ಪರಿಸರ ಸಂರಕ್ಷಣೆ ಹಾಗೂ ಸಮಾಜದ ಸುಸ್ಥಿರ ಅಭಿವೃದ್ಧಿಗೆ ಪೂರಕವಾದ ಚಟುವಟಿಕೆಗಳನ್ನು ಸಂಘಟನೆ ನಿರಂತರವಾಗಿ ನಡೆಸುತ್ತಿದೆ ಎಂದರು.
ಕಳೆದ ಏಳು ವರ್ಷಗಳಿಂದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಹಾಗೂ ಸ್ವಾತಂತ್ರ‍್ಯ ಚಳವಳಿ ಕುರಿತ ರಾಜ್ಯಮಟ್ಟದ ಆನ್‌ಲೈನ್ ರಸಪ್ರಶ್ನೆ ಸ್ಪರ್ಧೆಗಳನ್ನು ಆಯೋಜಿಸಿ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸಲಾಗುತ್ತಿದೆ. ರಾಜ್ಯ, ಜಿಲ್ಲೆ, ತಾಲೂಕು ಹಾಗೂ ಶಾಲಾ ಮಟ್ಟದಲ್ಲಿ ಬಹುಮಾನ ನೀಡಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ: Chikkaballapur News: ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು ಉತ್ತಮ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕು : ಕೃಷ್ಣಕುಮಾರಿ
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಉಪನಿರ್ದೇಶಕ ವೆಂಕಟೇಶ್ ಮಾತನಾಡಿ, ವಿದ್ಯಾರ್ಥಿಗಳ ಜ್ಞಾನ ವೃದ್ಧಿಗೆ ಇಂತಹ ಸ್ಪರ್ಧೆಗಳು ಪೂರಕವಾಗಿದ್ದು, ಅವುಗಳ ಸದುಪಯೋಗ ವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ನಗರ ಸಂಚಾರಿ ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕಿ ವಿದ್ಯಾಶ್ರೀ ಮಾತನಾಡಿ, ಶೈಕ್ಷಣಿಕ ಪ್ರಗತಿಯ ಜೊತೆಗೆ ಸಾಮಾಜಿಕ ಮೌಲ್ಯಗಳನ್ನು ಮೈಗೂಡಿಸಿಕೊಂಡು ಉತ್ತಮ ನಾಗರಿಕರಾಗಿ ರೂಪುಗೊಳ್ಳುವಲ್ಲಿ ಇಂತಹ ಚಟುವಟಿಕೆಗಳು ಸಹಕಾರಿಯಾಗುತ್ತವೆ ಎಂದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಯಲುವಹಳ್ಳಿ ಸೊಣ್ಣೇಗೌಡ ಮಾತನಾಡಿ, ಪರೀಕ್ಷೆ ಯಲ್ಲಿ ಹೆಚ್ಚು ಅಂಕ ಗಳಿಸುವುದರ ಜೊತೆಗೆ ಸಮಾಜದ ಸಾಧಕರು ಹಾಗೂ ಮಹನೀಯರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮನೋಭಾವ ವಿದ್ಯಾರ್ಥಿಗಳಲ್ಲಿ ಬೆಳೆಯಬೇಕು. ಕೆಜೆವಿಎಸ್‌ನ ಸ್ಪರ್ಧಾತ್ಮಕ ಕಾರ್ಯಕ್ರಮಗಳು ಅದಕ್ಕೆ ಪ್ರೇರಣೆಯಾಗಿವೆ ಎಂದು ಅಭಿಪ್ರಾಯ ಪಟ್ಟರು.
ಕೆಜೆವಿಎಸ್ ಜಿಲ್ಲಾಧ್ಯಕ್ಷ ಕೆ.ಎಂ. ರೆಡ್ಡಪ್ಪ ಮಾತನಾಡಿ, ಈ ವರ್ಷದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಗೆ ಚಿಕ್ಕಬಳ್ಳಾಪುರ ಜಿಲ್ಲೆಯಿಂದ 551 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, ಜಿಲ್ಲೆ, ತಾಲೂಕು ಹಾಗೂ ಶಾಲಾ ಮಟ್ಟದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು ಎಂದು ತಿಳಿಸಿದರು. ಸ್ಪರ್ಧೆಯ ಯಶಸ್ಸಿಗೆ ಸಹಕರಿಸಿದ ಶಾಲಾ ಸಂಯೋಜಕ ಶಿಕ್ಷಕರನ್ನೂ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕೆಜೆವಿಎಸ್ ತಾಲೂಕು ಅಧ್ಯಕ್ಷೆ ಸುಶೀಲಾ ಮಂಜುನಾಥ್ ಸಂಘಟನೆಯ ವಿವಿಧ ಶೈಕ್ಷಣಿಕ ಹಾಗೂ ವೈಜ್ಞಾನಿಕ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಮಾಜಿ ಸದಸ್ಯೆ ಜಿ. ಅಣ್ಣಮ್ಮ, ಸಮಾನ ಮನಸ್ಕರ ಪರಿಸರ ಸಂರಕ್ಷಣಾ ವೇದಿಕೆಯ ಕೆ.ಎಸ್. ನಾರಾಯಣಸ್ವಾಮಿ ಹಾಗೂ ಹೋಟೆಲ್ ರಾಮಣ್ಣ ಅವರಿಂದ ವಿಜೇತ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಹಾಗೂ ಲೇಖನಿಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್ ಎಫ್‌ಎಲ್‌ಸಿ ಅಧಿಕಾರಿ ಎ.ಎಂ. ಕವಿತಾ, ಕೆಜೆವಿಎಸ್ ಜಿಲ್ಲಾ ಕಾರ್ಯದರ್ಶಿ ವೆಂಕಟರಮಣನಾಯಕ್, ತಾಲೂಕು ಕಾರ್ಯದರ್ಶಿಗಳಾದ ಕಾವ್ಯ, ಶಶಿಕಲಾ, ಖಜಾಂಚಿ ಆನಂದಪ್ಪ, ಸೌಭಾಗ್ಯ ಹಾಗೂ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.