N.H.Shivashankara Reddy: ಯುವ ಸಮುದಾಯ ಬಹುತ್ವ ಸಾಂಸ್ಕೃತಿಕ ಮೌಲ್ಯಗಳನ್ನು ಗಟ್ಟಿಗೊಳಿಸಲಿ: ಎನ್.ಎಚ್. ಶಿವಶಂಕರರೆಡ್ಡಿ
ಪ್ರಸ್ತುತ ದೇಶದಲ್ಲಿ ಹಲವು ರೀತಿಯ ಸಾಮಾಜಿಕ ಸಮಸ್ಯೆಗಳು ಎದುರಾಗುತ್ತಿದ್ದು, ವಿದ್ಯಾರ್ಥಿ-ಯುವ ಜನರು ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಶ್ರಮಿಸಬೇಕು. ಅದೇ ವೇಳೆ ನಮ್ಮ ಪೂರ್ವಿಕರು ಬಳುವಳಿಯಾಗಿ ನೀಡಿರುವ ಕಲೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಿ ಮುಂದಿನ ತಲೆಮಾರಿಗೆ ಹಸ್ತಾಂತರಿಸುವ ಹೊಣೆಗಾರಿಕೆಯನ್ನೂ ಅರಿತುಕೊಳ್ಳಬೇಕು
-
ಗೌರಿಬಿದನೂರು: ಭಾರತದ ಬಹುತ್ವ ಹಾಗೂ ಸಾಂಸ್ಕೃತಿಕ ವೈವಿಧ್ಯತೆಯ ಮೌಲ್ಯಗಳು ಸಮ ಸಮಾಜವನ್ನು ಒಗ್ಗೂಡಿಸುವ ಶಕ್ತಿಯಾಗಿದ್ದು, ಅವುಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಜವಾಬ್ದಾರಿಯನ್ನು ಯುವ ಸಮುದಾಯ ಹೊತ್ತುಕೊಳ್ಳಬೇಕು ಎಂದು ಮಾಜಿ ಸಚಿವ ಎನ್.ಎಚ್. ಶಿವಶಂಕರರೆಡ್ಡಿ(N.H.Shivashankara Reddy) ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಶ್ರಯದಲ್ಲಿ ಆಯೋಜಿಸಿದ್ದ ಯುವ ಸೌರಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ದೇಶದಲ್ಲಿ ಹಲವು ರೀತಿಯ ಸಾಮಾಜಿಕ ಸಮಸ್ಯೆಗಳು ಎದುರಾಗುತ್ತಿದ್ದು, ವಿದ್ಯಾರ್ಥಿ-ಯುವಜನರು ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಶ್ರಮಿಸಬೇಕು. ಅದೇ ವೇಳೆ ನಮ್ಮ ಪೂರ್ವಿಕರು ಬಳುವಳಿಯಾಗಿ ನೀಡಿರುವ ಕಲೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಿ ಮುಂದಿನ ತಲೆಮಾರಿಗೆ ಹಸ್ತಾಂತರಿಸುವ ಹೊಣೆಗಾರಿಕೆಯನ್ನೂ ಅರಿತುಕೊಳ್ಳಬೇಕು. ಯುವ ಜನರಲ್ಲಿ ಸಾಂಸ್ಕೃತಿಕ ಮೌಲ್ಯಗಳನ್ನು ಬಿತ್ತುವ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಎಂದರು.
ಇದನ್ನೂ ಓದಿ: Chikkaballapur News: ಮೃತ ನೌಕರರ ಕುಟುಂಬಕ್ಕೆ ತಿಂಗಳೊಳಗೆ ಅನುಕಂಪದ ನೇಮಕಾತಿ ಆದೇಶ
ಕರ್ನಾಟಕ ಜನಪದ ಅಕಾಡೆಮಿ ಅಧ್ಯಕ್ಷ ಹಾಗೂ ಸಾಹಿತಿ ಡಾ. ಗೊಲ್ಲಹಳ್ಳಿ ಶಿವಪ್ರಸಾದ್ ಮಾತ ನಾಡಿ, ಆಧುನಿಕತೆಯ ಭರಾಟೆಯಲ್ಲಿ ನಮ್ಮ ತಲೆಮಾರುಗಳ ಜನಪದ ಸಂಸ್ಕೃತಿಯನ್ನು ಮರೆಯು ತ್ತಿರುವುದು ನೋವಿನ ಸಂಗತಿ. ಸಾಧಕರು ಚರಿತ್ರೆಯಲ್ಲಿ ಉಳಿಯುತ್ತಾರೆ; ಸಮಯ ಸಾಧಕರು ಮರೆಯಾಗುತ್ತಾರೆ. ನಿನ್ನೆ ಮತ್ತು ಮೊನ್ನೆಯನ್ನು ಮರೆತು, ಇಂದನ್ನು ಅರಿಯದೆ ಹೋದರೆ ನಾಳೆಯನ್ನು ರೂಪಿಸಲು ಸಾಧ್ಯವಿಲ್ಲ. ಜನಪದ ಸಂಸ್ಕೃತಿ ಸಂಬಂಧಗಳನ್ನು ಬೆಸೆಯುವುದರ ಜೊತೆಗೆ ಮೌಲ್ಯಗಳನ್ನು ಬೆಳೆಸುತ್ತದೆ. ಹೀಗಾಗಿ ಸಾಂಸ್ಕೃತಿಕ ಬೇರುಗಳನ್ನು ಗಟ್ಟಿಗೊಳಿಸುವ ಮೂಲಕ ಭವಿಷ್ಯವನ್ನು ಕಟ್ಟಿಕೊಳ್ಳಬೇಕು ಎಂದರು.
ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ವಕೀಲ ಜಿ.ಆರ್. ರಂಗರಾಜ್ ಮಾತನಾಡಿ, ಕರ್ನಾಟಕದ ದೇಸಿ ಸಂಸ್ಕೃತಿಯ ವೈವಿಧ್ಯತೆಯನ್ನು ಯುವಜನತೆ ಮುಂದುವರಿಸಿಕೊಂಡು ಹೋಗಬೇಕು. ಕಲೆ, ಸಂಸ್ಕೃತಿ, ಭಾಷೆ ಮತ್ತು ಸಂಪ್ರದಾಯಗಳು ಜನರ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುತ್ತವೆ. ನಶಿಸುತ್ತಿರುವ ಗ್ರಾಮೀಣ ಕಲೆಗಳನ್ನು ಇಂತಹ ಕಾರ್ಯಕ್ರಮಗಳ ಮೂಲಕ ಉಳಿಸಬಹುದು. ಯುವಜನರು ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗದೆ ನೆಲದ ಸಂಸ್ಕೃತಿಯನ್ನು ಗಟ್ಟಿಗೊಳಿಸಬೇಕು ಎಂದು ಕರೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಡಿ.ಎಂ. ರವಿಕುಮಾರ್, ಗ್ರಾಮೀಣ ಭಾಗದ ಸಾಂಸ್ಕೃತಿಕ ಸಂಬಂಧಗಳನ್ನು ಗಟ್ಟಿಗೊಳಿಸುವ ಹಾಗೂ ಯುವಜನರಿಗೆ ಸಂಸ್ಕೃತಿಯ ಪರಿಚಯ ಮಾಡಿಸುವ ಉದ್ದೇಶದಿಂದ ಇಲಾಖೆ ಯುವ ಸೌರಭ, ಸಾಂಸ್ಕೃತಿಕ ಸೌರಭ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ರೂಪಿಸುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ. ಎಚ್.ಎಸ್. ವೆಂಕಟಾಚಲಪತಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಆರ್. ಮಂಜುನಾಥ್, ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಹಾಗೂ ಚಲನಚಿತ್ರ ಗಾಯಕ ಮೋಹನ್ ಕುಮಾರ್, ಸಾಂಸ್ಕೃತಿಕ ಸಮಿತಿ ಸಂಚಾಲಕ ಡಾ. ಮಂಜುನಾಥ್, ಪ್ರಾಧ್ಯಾಪಕ ಡಾ. ವೆಂಕಟೇಶ್, ಕಲಾವಿದರಾದ ಗೊಟ್ಲುಗುಂಟೆ ವೆಂಕಟರಮಣಪ್ಪ, ಇಡಗೂರು ಪ್ರಸನ್ನ, ರಾಮಕೃಷ್ಣ ಕಾಲೇಜಿನ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತ ರಿದ್ದರು.
ಕಾರ್ಯಕ್ರಮದಲ್ಲಿ ಜಂಬೆ ಜಲಕ್, ಸುಗಮ ಸಂಗೀತ, ಸಮೂಹ ನೃತ್ಯ, ಕರ್ನಾಟಕ ಕಥಾ ವೈಭವ, ಬೊಂಬೆಯಾಟ, ತಮಟೆ ಹಾಗೂ ಜನಪದ ಗಾಯನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಗಳು ಪ್ರೇಕ್ಷಕರ ಗಮನ ಸೆಳೆದವು.