Chikkaballapur News: ಅರಣ್ಯ ಇಲಾಖೆ ದೌರ್ಜನ್ಯ ಖಂಡಿಸಿ ಜೂ.15ರಂದು ಬೃಹತ್ ಕಾಲ್ನಡಿಗೆ ಜಾಥಾ: ಕೆ.ಸಿ.ರಾಜಕಾಂತ್ ಹೇಳಿಕೆ
ಸಿಂಗಾಟಕದಿರೇನಹಳ್ಳಿಯ ಹಳೆಯ ಸರ್ವೇ ನಂ.67 ಹಾಗೂ ಹೊಸ ಸರ್ವೇ ನಂ.81, 82, 83, 84, 85 ಮತ್ತು 86ರಲ್ಲಿ ಸಾಗುವಳಿ ಚೀಟಿ, ಪಹಣಿ ಮ್ಯುಟೇಷನ್, ಸರ್ವೆ ಸ್ಕೆಚ್ ಹಾಗೂ ಇತರೆ ದಾಖಲೆಗಳನ್ನು ಹೊಂದಿರುವ ಬಡ ರೈತರು ಕಳೆದ 50ಕ್ಕೂ ಹೆಚ್ಚು ವರ್ಷಗಳಿಂದ ಕೃಷಿ ಮಾಡಿಕೊಂಡು ಬರುತ್ತಿದ್ದಾರೆ. ಆದರೆ ಈಗ ಅರಣ್ಯ ಇಲಾಖೆ ಅಧಿಕಾರಿಗಳು ಏಕಾಏಕಿ ಡೀಮ್ಡ್ ಫಾರೆಸ್ಟ್ ಹೆಸರಿನಲ್ಲಿ ದೌರ್ಜನ್ಯದಿಂದ ಭೂಮಿಯನ್ನು ವಶಪಡಿಸಿಕೊಳ್ಳಲು ಮುಂದಾಗಿದ್ದು, ರೈತರಿಗೆ ಉಳುಮೆ ಮಾಡಲು ಅವಕಾಶ ನೀಡುತ್ತಿಲ್ಲ
-
ಚಿಕ್ಕಬಳ್ಳಾಪುರ: ತಾಲೂಕಿನ ಸಿಂಗಾಟ-ಕದಿರೇನಹಳ್ಳಿ ಗ್ರಾಮದ ದಲಿತ ರೈತರಿಗೆ ಸೇರಿರುವ ಸಾಗು ವಳಿ ಭೂಮಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಲವಂತವಾಗಿ ತಮ್ಮ ವಶಕ್ಕೆ ಪಡೆಯಲು ಮುಂದಾಗಿರುವುದನ್ನು ಖಂಡಿಸಿ ಜೂ.15ರಂದು ಸಿಂಗಾಟಕದಿರೇನಹಳ್ಳಿಯಿಂದ ನಗರದ ಅರಣ್ಯ ಇಲಾಖೆ ಕಚೇರಿವರೆಗೆ ಬೃಹತ್ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಕೆ.ಸಿ.ರಾಜಕಾಂತ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಂಗಾಟಕದಿರೇನಹಳ್ಳಿಯ ಹಳೆಯ ಸರ್ವೇ ನಂ.67 ಹಾಗೂ ಹೊಸ ಸರ್ವೇ ನಂ.81, 82, 83, 84, 85 ಮತ್ತು 86ರಲ್ಲಿ ಸಾಗುವಳಿ ಚೀಟಿ, ಪಹಣಿ ಮ್ಯುಟೇಷನ್, ಸರ್ವೆ ಸ್ಕೆಚ್ ಹಾಗೂ ಇತರೆ ದಾಖಲೆ ಗಳನ್ನು ಹೊಂದಿರುವ ಬಡ ರೈತರು ಕಳೆದ 50ಕ್ಕೂ ಹೆಚ್ಚು ವರ್ಷಗಳಿಂದ ಕೃಷಿ ಮಾಡಿಕೊಂಡು ಬರುತ್ತಿದ್ದಾರೆ. ಆದರೆ ಈಗ ಅರಣ್ಯ ಇಲಾಖೆ ಅಧಿಕಾರಿಗಳು ಏಕಾಏಕಿ ಡೀಮ್ಡ್ ಫಾರೆಸ್ಟ್ ಹೆಸರಿನಲ್ಲಿ ದೌರ್ಜನ್ಯದಿಂದ ಭೂಮಿಯನ್ನು ವಶಪಡಿಸಿಕೊಳ್ಳಲು ಮುಂದಾಗಿದ್ದು, ರೈತರಿಗೆ ಉಳುಮೆ ಮಾಡಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದರು.
ಗೋಮಾಳ ಮತ್ತು ಕರಾಬ್ ಭೂಮಿಯನ್ನು ಬಡ ರೈತರು ಸುಮಾರು 50 ವರ್ಷಗಳಿಂದ ಉಳುಮೆ ಮಾಡಿಕೊಂಡು ಬಂದಿದ್ದಾರೆ. ಭೂಮಿಗೆ ಸಂಬಂಧಿಸಿದ ದಾಖಲೆಗಳು, ಸ್ಕೆಚ್‌ಗಳು ಹಾಗೂ ದುರಸ್ತಿ ದಾಖಲೆಗಳೂ ಇವೆ. ಆದರೂ ಅರಣ್ಯ ಇಲಾಖೆ ಅಧಿಕಾರಿಗಳು ಏಕಾಏಕಿ ರೈತರನ್ನು ಒಕ್ಕಲೆಬ್ಬಿಸಲು ಮುಂದಾಗಿರುವುದು ಖಂಡನೀಯ ಎಂದು ಹೇಳಿದರು.
ಕಂದಾಯ ಇಲಾಖೆ ಹಾಗೂ ತಹಸೀಲ್ದಾರ್ ಬಡವರ ಪರವಾಗಿ ನಿಲ್ಲದೇ ಪ್ರಭಾವಿಗಳ ಪರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಭೂಮಿ ಕಳೆದುಕೊಂಡಿರುವ ಫಲಾನುಭವಿಗಳಿಗೆ ಇದೇ ಇಲಾಖೆ ಯಿಂದ ದಾಖಲೆಗಳನ್ನು ನೀಡಲಾಗಿದ್ದರೂ, ಈಗ ಆ ದಾಖಲೆಗಳ ಸತ್ಯಾಸತ್ಯತೆಯನ್ನು ಸಮರ್ಥಿಸಿ ಕೊಳ್ಳುವ ಬದಲು ಜನರನ್ನು ಅರಣ್ಯ ಇಲಾಖೆಯತ್ತ ತಳ್ಳುವ ಕೆಲಸ ಮಾಡಲಾಗಿದೆ. ಇದರಿಂದ 14 ರಿಂದ 15 ಕುಟುಂಬಗಳು ಬೀದಿ ಪಾಲಾಗಿದ್ದು, ಅವರ ನೋವು ಅಕ್ಷರಶಃ ‘ಅರಣ್ಯರೋದನ’ವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಮಸ್ಯೆಗೆ ಪರಿಹಾರ ಕಲ್ಪಿಸುವಲ್ಲಿ ಜನಪ್ರತಿನಿಧಿಗಳೂ ವಿಫಲರಾಗಿದ್ದಾರೆ. ಹೀಗಾಗಿ ಜೂ.15ರಿಂದ ಹೋರಾಟದ ಭಾಗವಾಗಿ ಬೃಹತ್ ಕಾಲ್ನಡಿಗೆ ಜಾಥಾ ನಡೆಸಲಾಗುತ್ತಿದ್ದು, ರೈತರಿಗೆ ತೊಂದರೆ ನೀಡುತ್ತಿರುವ ಅಧಿಕಾರಿಗಳ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ (ಅಟ್ರಾಸಿಟಿ) ಅಡಿಯಲ್ಲಿ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಸಂಚಾಲಕ ಸಿ.ಜಿ.ಗಂಗಪ್ಪ ಮಾತನಾಡಿ, ಸಾಗುವಳಿದಾರರನ್ನು ‘ಡೀಮ್ಡ್ ಫಾರೆಸ್ಟ್’ ಹೆಸರಿ ನಲ್ಲಿ ಒಕ್ಕಲೆಬ್ಬಿಸುವ ಪ್ರಯತ್ನವನ್ನು ತಕ್ಷಣ ನಿಲ್ಲಿಸಬೇಕು. ಕಂದಾಯ ಇಲಾಖೆ ಜನರ ಪರವಾಗಿ ನಿಲ್ಲಬೇಕು. ಇದೇ ಉದ್ದೇಶದಿಂದ ಜೂ.15ರಂದು ಕಾಲ್ನಡಿಗೆ ಜಾಥಾವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಜೀವಿಕ ಸಂಘಟನೆಯ ಮುಖಂಡರು ಮಾತನಾಡಿ, ಈ ಭೂಮಿ ಡೀಮ್ಡ್ ಫಾರೆಸ್ಟ್ ವ್ಯಾಪ್ತಿಗೆ ಸೇರಿಲ್ಲ. ಅರಣ್ಯ ಇಲಾಖೆಯ ಅನ್ಯಾಯದ ವಿರುದ್ಧ ಸಿಂಗಾಟಕದಿರೇನಹಳ್ಳಿ ಗ್ರಾಮದ ಬಡ ರೈತರ ಪರವಾಗಿ ಮತ ಪಡೆದು ಆಯ್ಕೆಯಾದ ಜನಪ್ರತಿನಿಧಿಗಳು ಧ್ವನಿಯಾಗಬೇಕು. ಶಾಸಕ, ಸಚಿವ ಹಾಗೂ ಸಂಸದರು ಈ ವಿಚಾರದಲ್ಲಿ ಮಧ್ಯಪ್ರವೇಶಿಸದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಿ.ಜಿ. ಗಂಗಪ್ಪ, ಚಿನ್ನಪ್ಪ, ಕರಗಪ್ಪ, ವೆಂಕಟನಾರಾಯಣಮ್ಮ, ರಾಮಕೃಷ್ಣ ಮುನಿಯಪ್ಪ, ಚಿಕ್ಕಬಳ್ಳಾಪುರ ತಾಲೂಕು ಸಂಚಾಲಕ ಎನ್.ಪರಮೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.