ಶಾಸಕ ಪ್ರದೀಪ್ ಈಶ್ವರ್‌ಗೆ ಜೀವಭಯ; ಹೆಚ್ಚುವರಿ ಪೊಲೀಸ್ ಭದ್ರತೆಗೆ ಗುಪ್ತಚರ ಇಲಾಖೆಯ ಶಿಫಾರಸು?
ಜೂನ್ 27ರಂದು ಸರ್ಕಾರದ ವತಿಯಿಂದ ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಶಾಸಕ ಪ್ರದೀಪ್ ಈಶ್ವರ್ ಕಾರ್ಯಕ್ರಮದಲ್ಲಿ ಇರಬಾರದು, ಕುಮಾರಸ್ವಾಮಿ ಮತ್ತು ದೇವೇಗೌಡರ ಕುಟುಂಬದ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ, ಗೋ ಬ್ಯಾಕ್ ಪ್ರದೀಪ್ ಈಶ್ವರ್(Go back Pradeep Eshwar) ಎಂದು ಘೋಷಣೆಗಳನ್ನು ಕೂಗುತ್ತಾ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಅಪಮಾನ ಮಾಡಿದ್ದರು.
-
ಕೆಂಪೇಗೌಡ ಜಯಂತಿ ಗದ್ದಲದ ಬಳಿಕ ಕ್ಷೇತ್ರದಲ್ಲಿ ಉದ್ವಿಗ್ನ ವಾತಾವರಣ – ಮಾಹಿತಿ ಕಲೆ ಹಾಕಿದ ರಾಜ್ಯ ಗುಪ್ತಚರ ಇಲಾಖೆ ಅಧಿಕಾರಿಗಳು
ಕೆಂಪೇಗೌಡ ಜಯಂತಿ ವಿವಾದದ ಪರಿಣಾಮ; ಚಿಕ್ಕಬಳ್ಳಾಪುರದತ್ತ ಗುಪ್ತಚರ ಇಲಾಖೆಯ ವಿಶೇಷ ನಿಗಾ
ಬೆಂಗಳೂರು/ಚಿಕ್ಕಬಳ್ಳಾಪುರ: ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ನಡೆದ ಗದ್ದಲ ಹಾಗೂ ಅದರ ನಂತರ ಜಿಲ್ಲೆಯ ರಾಜಕೀಯ ವಲಯದಲ್ಲಿ ಉಂಟಾಗಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಶಾಸಕ ಪ್ರದೀಪ್ ಈಶ್ವರ್(MLA Pradeep Eshwar) ಅವರಿಗೆ ಜೀವಭಯದ ಆತಂಕ ಎದುರಾಗಿರುವ ಕಾರಣ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸುವ ಅಗತ್ಯವಿದೆ ಎಂದು ರಾಜ್ಯ ಗುಪ್ತಚರ ಇಲಾಖೆ ಗೃಹ ಇಲಾಖೆಗೆ ವರದಿ ಸಲ್ಲಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಜೂನ್ 27ರಂದು ಸರ್ಕಾರದ ವತಿಯಿಂದ ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಶಾಸಕ ಪ್ರದೀಪ್ ಈಶ್ವರ್ ಕಾರ್ಯಕ್ರಮದಲ್ಲಿ ಇರಬಾರದು, ಕುಮಾರಸ್ವಾಮಿ ಮತ್ತು ದೇವೇಗೌಡರ ಕುಟುಂಬದ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ, ಗೋ ಬ್ಯಾಕ್ ಪ್ರದೀಪ್ ಈಶ್ವರ್(Go back Pradeep Eshwar) ಎಂದು ಘೋಷಣೆಗಳನ್ನು ಕೂಗುತ್ತಾ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಅಪಮಾನ ಮಾಡಿದ್ದರು.
ಇದರಿಂದ ಕುಪಿತರಾದ ಶಾಸಕರು ತೋಳು ತಟ್ಟಿ ಅಬ್ಬರಿಸಿದ್ದು ಭಾರೀ ಸುದ್ದಿಯಾಗಿತ್ತು . ಈ ಅನಿರೀಕ್ಷಿತ ಗಲಾಟೆ ಮತ್ತು ಗದ್ದಲ ಕ್ಷೇತ್ರದಲ್ಲಿ ಅಶಾಂತಿಗೆ ಕಾರಣವಾಗಿತ್ತು.
ಇದನ್ನೂ ಓದಿ: MLA Pradeep Eshwar: ಎಸ್‌ಪಿ ಕಚೇರಿಗೆ ಮುತ್ತಿಗೆ ಹಾಕಿದ ಮುಖಂಡರ ನಿಯೋಗ; ಪ್ರಚೋದನೆ, ಅಧಿಕಾರ ದುರ್ಬಳಕೆ ಆರೋಪ
ಮೇಲಾಗಿ ಈ ಘಟನೆ ರಾಜಕೀಯವಾಗಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ-ಜೆಡಿಎಸ್ ಮುಖಂಡರ ನಡುವೆ ಆರೋಪ-ಪ್ರತ್ಯಾರೋಪ, ದೂರು ಪ್ರತಿದೂರಿಗೆ ಕಾರಣವಾಗಿದೆ.
ಈ ಬೆಳವಣಿಗೆಗಳ ಬೆನ್ನಲ್ಲೇ ಜುಲೈ 2ರಂದು ರಾಜ್ಯ ಗುಪ್ತಚರ ಇಲಾಖೆಯ ಹಿರಿಯ ಅಧಿಕಾರಿಗಳು ಚಿಕ್ಕಬಳ್ಳಾಪುರ ಜಿಲ್ಲೆಗೆ ಭೇಟಿ ನೀಡಿ ಕ್ಷೇತ್ರದ ವಿವಿಧ ಭಾಗಗಳಲ್ಲಿ ಸಂಚರಿಸಿ ಮಾಹಿತಿ ಕಲೆ ಹಾಕಿರುವುದು ಗಮನಾರ್ಹವಾಗಿದೆ.
ಶಾಸಕರ ಬೆಂಬಲಿಗರು, ಸ್ಥಳೀಯ ಮುಖಂಡರು, ನಾಗರೀಕರು ಹಾಗೂ ಪೊಲೀಸ್ ಅಧಿಕಾರಿಗಳಿಂದ ಘಟನೆಯ ಸಂಪೂರ್ಣ ಮಾಹಿತಿ ಸಂಗ್ರಹಿಸಿರುವುದಾಗಿ ತಿಳಿದು ಬಂದಿದೆ.
ಗದ್ದಲದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಹೇಳಿಕೆಗಳು, ಪ್ರತಿಭಟನೆಗಳ ಎಚ್ಚರಿಕೆ ಹಾಗೂ ರಾಜಕೀಯ ಆರೋಪಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಶಾಸಕ ಪ್ರದೀಪ್ ಈಶ್ವರ್ ಅವರ ಭದ್ರತೆ ಕುರಿತು ಗುಪ್ತಚರ ಇಲಾಖೆ ವಿಶೇಷ ಗಮನ ಹರಿಸಿದೆ ಎನ್ನಲಾಗಿದೆ.
ಇದೀಗ ಸಲ್ಲಿಕೆಯಾಗಿರುವ ವರದಿಯಲ್ಲಿ ಶಾಸಕರಿಗೆ ಹೆಚ್ಚುವರಿ ಪೊಲೀಸ್ ಭದ್ರತೆ ಒದಗಿಸುವುದು, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭದ್ರತಾ ವ್ಯವಸ್ಥೆಯನ್ನು ಬಲಪಡಿಸುವುದು ಹಾಗೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡಲಾಗಿದೆ ಎಂಬ ಮಾಹಿತಿ ಉನ್ನತ ಮೂಲಗಳಿಂದ ತಿಳಿದುಬಂದಿದೆ.
ಆದರೆ ಈ ಕುರಿತು ಪೊಲೀಸ್ ಇಲಾಖೆ ಅಥವಾ ಗೃಹ ಇಲಾಖೆಯಿಂದ ಅಧಿಕೃತ ಮಾಹಿತಿ ಇನ್ನೂ ಹೊರಬಂದಿಲ್ಲ.
ಕೆಂಪೇಗೌಡ ಜಯಂತಿ ಗದ್ದಲದ ಬಳಿಕ ಚಿಕ್ಕಬಳ್ಳಾಪುರದ ರಾಜಕೀಯ ವಾತಾವರಣ ದಿನದಿಂದ ದಿನಕ್ಕೆ ಕಾವೇರುತ್ತಿದ್ದು, ಶಾಸಕ ಪ್ರದೀಪ್ ಈಶ್ವರ್ ಅವರಿಗೆ ಹೆಚ್ಚುವರಿ ಭದ್ರತೆ ಒದಗಿಸುವ ಕುರಿತು ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ಇದೀಗ ಜಿಲ್ಲೆಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.