Murder Case: ಚಿಕ್ಕಬಳ್ಳಾಪುರದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷನ ಪುತ್ರನ ಬರ್ಬರ ಹತ್ಯೆ; ಚರಂಡಿಯಲ್ಲಿ ಶವ ಪತ್ತೆ
Murder Case: ಚಿಕ್ಕಬಳ್ಳಾಪುರ ತಾಲೂಕಿನ ಹಾರೋಬಂಡೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷನ ಪುತ್ರನ ಕೊಲೆ ನಡೆದಿದೆ. ಕುಡಿದ ಅಮಲಿಯಲ್ಲಿ ಜತೆಗಿದ್ದ ಸಹಚರನಿಂದಲೇ ಕೊಲೆ ನಡೆದಿದೆ ಎನ್ನಲಾಗಿದ್ದು, ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಚಿಕ್ಕಬಳ್ಳಾಪುರ: ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷನ ಮಗನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತಾಲೂಕಿನಲ್ಲಿ ನಡೆದಿದೆ. ಹಾರೋಬಂಡೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಾಗರೆಡ್ಡಿ ಪುತ್ರ ಮಾರುತೇಶ್ (30) ಕೊಲೆಯಾದ ಯುವಕ. ಮೂರು ದಿನಗಳಿಂದ ನಾಪತ್ತೆಯಾಗಿದ್ದ ಯುವಕ ಶುಕ್ರವಾರ ಶವವಾಗಿ ಪತ್ತೆಯಾಗಿದ್ದಾನೆ.
ಪಾಳುಬಿದ್ದ ಬಡಾವಣೆಯೊಂದರ ಚರಂಡಿಯಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ. ಕೊಲೆಯಾದ ಮಾರುತೇಶ್ ಪ್ಲಂಬರ್ ಹಾಗೂ ಎಲೆಕ್ಟ್ರಿಕ್ ಕೆಲಸ ಮಾಡುತ್ತಿದ್ದ. ಕುಡಿದ ಅಮಲಿನಲ್ಲಿ ಜತೆಗಾರನಿಂದಲೇ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳದಲ್ಲಿ ಬೈಕ್ ಹಾಗೂ ಮದ್ಯದ ಬಾಟಲಿಗಳು ಪತ್ತೆಯಾಗಿವೆ.
ಸ್ಥಳಕ್ಕೆ ಚಿಕ್ಕಬಳ್ಳಾಪುರ ಎಸ್‌ಪಿ ಕುಶಾಲ್ ಚೌಕ್ಸಿ ಭೇಟಿ ಪರಿಶೀಲನೆ ನಡೆಸಿದರು. ಇನ್ನು ಶಂಕಿತ ಆರೋಪಿಯೊಬ್ಬ ಗ್ರಾಮದಲ್ಲಿ ಕೊಲೆ ಮಾಡಿರುವ ಬಗ್ಗೆ ಅಸ್ಪಷ್ಟವಾಗಿ ಮಾತನಾಡಿದ್ದ ಎನ್ನಲಾಗಿದ್ದು, ಇದರ ಸುಳಿವು ಮೇರೆಗೆ ಪರಿಶೀಲನೆ ಮಾಡಿದಾಗ ಮೃತದೇಹ ಇರುವುದು ಪತ್ತೆಯಾಗಿದೆ. ಹೀಗಾಗಿ ಪೊಲೀಸರು ಶಂಕಿತ ಆರೋಪಿಯ ಬೆನ್ನುಬಿದ್ದಿದ್ದಾರೆ, ಆತನ ಬಂಧನದ ಬಳಿಕ ಕೊಲೆಗೆ ಆಸಲಿ ಕಾರಣ ತಿಳಿದುಬರಲಿದೆ.
ಈ ಸುದ್ದಿಯನ್ನೂ ಓದಿ | Viral Video: ನ್ಯಾಯಾಲಯದ ಹೊರಗೆ ಕಕ್ಷಿದಾರರಿಗೆ ಹಿಗ್ಗಾಮುಗ್ಗಾ ಥಳಿಸಿದ ವಕೀಲರು; ವಿಡಿಯೊ ನೋಡಿ
ಮಾದಕ ಅಂಶವಿರುವ ಮಾತ್ರೆ ಮಾರಾಟ: 7 ಆರೋಪಿಗಳ ಬಂಧನ
ತುಮಕೂರು: ನಗರದಲ್ಲಿ ಮಾದಕ ವಸ್ತುಗಳನ್ನಾಗಿ ಟೈಡಾಲ್ ಮಾತ್ರೆಗಳನ್ನು ಆಕ್ರಮವಾಗಿ ಅಧಿಕ ಬೆಲೆಗೆ ಮಾರಾಟ ಮಾಡುತ್ತಿದ್ದ 7 ಆರೋಪಿಗಳನ್ನು ಹೊಸ ಬಡಾವಣೆ ಪೊಲೀಸರು ಬಂಧಿಸಿದ್ದಾರೆ. ರಾಘವೇಂದ್ರ (43), ಭಾನು ಪ್ರಕಾಶ್ (23) ಅಭಿಷೇಕ (23), ಮೊಹಮ್ಮದ್ ಸೈಪ್ (24), ಸೈಯದ್ ಲುಕ್ಮಾನ್(23), ಅಫ್ತಬ್ (24), ಗುರುರಾಜ್ (28) ಬಂಧಿತ ಆರೋಪಿಗಳು.
ಆರೋಪಿಗಳ ಬಳಿ ಇದ್ದ 10,500 ರೂ. ಬೆಲೆಯ 300 ಮಾತ್ರೆಗಳನ್ನು ಮತ್ತು ಸಿರಿಂಜ್, ಮೊಬೈಲ್ ಮತ್ತು ಬೈಕನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅತಿ ಚಿಕ್ಕ ವಯಸ್ಸಿನ ಮಕ್ಕಳು ಮತ್ತು ವಿದ್ಯಾರ್ಥಿಗಳ ಶರೀರ ಹಾಗೂ ಮೆದುಳಿನ ಮೇಲೆ ಪರಿಣಾಮ ಬೀರುವ ಮಾದಕ ಮಾತ್ರೆಗಳನ್ನು ಮಾರಾಟ ಮಾಡಿರುವ ಕಾರಣಕ್ಕೆ ಬಂಧಿತರ ವಿರುದ್ಧ
13/2025 ಕಲಂ 123, 278, 280 ರೆ.ವಿ. 3 (5) ಬಿ.ಎನ್.ಎಸ್. ಆ್ಯಕ್ಟ್ ಅಡಿ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪ್ರಕರಣದ ವಿವರ
ಹೊಸ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯ ಎಸ್.ಐ.ಟಿ. ಬಡಾವಣೆ, ರೈಲ್ವೆ ಹಳಿಗಳ ಪಕ್ಕ ಹಾಗೂ ಉಪ್ಪಾರಹಳ್ಳಿ ಬ್ರಿಡ್ಜ್ ಶ್ರೀದೇವಿ ಕಾಲೇಜುಗಳ ಬಳಿಯ ಮೆಡಿಕಲ್ ಶಾಪ್‌ಗೆ ತೆರಳಿದ ಕೆಲವು ಹುಡುಗರು ಟೈಡಾಲ್ ಮಾತ್ರೆಗಳನ್ನು ಕೊಡುವಂತೆ ಕೇಳುತ್ತಿದ್ದರು. ಇದರಿಂದ ಪ್ರೇರೇಪಿತನಾದ ತುಮಕೂರು ನಗರದ ಮಧುಗಿರಿ ರಸ್ತೆಯಲ್ಲಿರುವ ಮೆಡಿಕಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಭಾನು ಪ್ರಕಾಶ್ ಎಂಬಾತ ಮೆಡಿಕಲ್ ರೆಪ್ರೆಸೆಂಟೇಟಿವ್ ಬಳಿ ಟೈಡಾಲ್ ಮಾತ್ರೆಗಳನ್ನು ತಂದುಕೊಡುವಂತೆ ತಿಳಿಸಿದ್ದ.
ಆ ಪೈಕಿ ಬೆಂಗಳೂರು ನಿವಾಸಿ ಮೆಡಿಕಲ್ ರೆಪ್ ರಾಘವೇಂದ್ರ ಎಂಬಾತ ಈ ಮಾತ್ರೆಗಳನ್ನು ಯಾವುದೇ ಬಿಲ್‌ಗಳಿಲ್ಲದೆ ಆಕ್ರಮವಾಗಿ ಮೊದಲು 345 ರೂ.ಗೆ ಒಂದು ಶೀಟ್‌ನಂತೆ 4 ಶೀಟ್ಗಳನ್ನು ತಂದು ತಂದುಕೊಟ್ಟಿದ್ದಾನೆ. ಇದೇ ವೇಳೆ ಮಾತ್ರೆಗಳಿಗೆ ಬೇಡಿಕೆ ಜಾಸ್ತಿಯಾಗಿದೆ. ಹೀಗಾಗಿ ಭಾನು ಪ್ರಕಾಶ್ ಮತ್ತು ರಾಘವೇಂದ್ರ ಸೇರಿಕೊಂಡು ಈ ಮಾತ್ರೆಗಳನ್ನು ಅಂಗಡಿಯಲ್ಲಿ ಮಾರಾಟ ಮಾಡದೆ ಕೇಳಿಕೊಂಡು ಬರುವ ಗಿರಾಕಿಗಳಿಗೆ ತಮ್ಮ ಮೊಬೈಲ್ ನಂಬರ್ ನೀಡಿ ಶ್ರೀದೇವಿ ಕಾಲೇಜ್ ಬಳಿ, ಇಂಡಸ್ಟ್ರೀಯಲ್ ಏರಿಯಾಗಳಿಗೆ ಕರೆಸಿಕೊಂಡು 10 ಮಾತ್ರೆಗಳಿರುವ ಒಂದು ಶೀಟ್ ಅನ್ನು 800 ರೂ.ಗಳಿಗೆ ಮಾರಾಟ ಮಾಡಲು ಆರಂಭಿಸಿದ್ದಾರೆ. ಇದಲ್ಲದೇ ಈ ಹಿಂದೆ ಕೆಲಸ ಮಾಡುತ್ತಿದ್ದ ಅಭಿಷೇಕ್ ಎಂಬವನಿಗೆ ಮೊಬೈಲ್ ಕೊಡಿಸಿ ವ್ಯವಹಾರ ಕುದುರಿಸುವಂತೆ ತಿಳಿಸಿದ್ದಾನೆ.
ಅದರಂತೆ ಅಭಿಷೇಕ್ ಮಾತ್ರೆ ಮತ್ತು ಸಿರಿಂಜ್‌ಗಳನ್ನು ಒಂದು ಬ್ಯಾಗ್‌ನಲ್ಲಿ ಇಟ್ಟುಕೊಂಡು ಭಾನುಪ್ರಕಾಶ್ ತಂದು ಕೊಡುತ್ತಿದ್ದ ಮಾತ್ರೆಗಳನ್ನು ಫೋನ್ ಮಾಡುತ್ತಿದ್ದ ಮೊಹಮ್ಮದ್ ಸೈಫ್, ಸೈಯದ್ ಲುಕ್ಕಾನ್, ಅಪ್ಲಬ್, ಗುರುರಾಜ್ ಎಂಬವರಿಗೆ ಮತ್ತು ಇತರರಿಗೆ ಶಿರಾಗೇಟ್ ಬಳಿ ಮತ್ತು ಇಂಡಸ್ಟ್ರಿಯಲ್ ಏರಿಯಾ ಬಳಿ ಕರೆಸಿಕೊಂಡು ಮಾರಾಟ ಮಾಡಿದ್ದಾನೆ.
ಈ ಸುದ್ದಿಯನ್ನೂ ಓದಿ | Economic Survey 2025: ಶೇ. 6.8ರವರೆಗೆ ಜಿಡಿಪಿ ಹೆಚ್ಚಳ ನಿರೀಕ್ಷೆ; ಆರ್ಥಿಕ ಸಮೀಕ್ಷೆಯಲ್ಲಿ ಏನೇನಿದೆ?
800 ರೂ.ಗಳಿಗೆ ತೆಗೆದುಕೊಂಡು ಹೋದ 10 ಮಾತ್ರೆಗಳಿರುವ ಶೀಟ್‌ಗಳನ್ನು ಆರೋಪಿಗಳು ಒಂದೊಂದು ಮಾತ್ರೆಗಳನ್ನು ಕವರ್ ಸಮೇತ ಕಟ್ ಮಾಡಿ ಒಂದು ಮಾತ್ರೆಗೆ 100 ರೂ. ರೂ.ಗಳಿಂದ 200 ರೂ.ಗಳ ವರೆಗೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಅವರು ಸಹ ಆಗಾಗ ಆ ಮಾತ್ರೆಗಳನ್ನು ಉಪಯೋಗಿಸುತ್ತಿದ್ದರು.ಈ ಮಾತ್ರೆಗಳನ್ನು ಸೇವಿಸುತ್ತಿದ್ದಂತೆ ನಶೆ ಏರುತ್ತದೆ ಎಂದು ತನಿಖೆಯಲ್ಲಿ ತಿಳಿದು ಬಂದಿದೆ.