ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನಿರ್ಮಾಣ ಹಂತದ ಗುಂಡಿಗೆ ಬಿದ್ದು ಒಂದುವರೆ ವರ್ಷದ ಹಸುಗೂಸು ಸಾವು

ಕಾಮಗಾರಿ ಸ್ಥಳದಲ್ಲಿ ಲಿಫ್ಟ್ ನಿರ್ಮಾಣಕ್ಕಾಗಿ ಅಗಲವಾದ ಗುಂಡಿಯನ್ನು ತೋಡಲಾಗಿದ್ದು, ಇತ್ತೀಚಿನ ಮಳೆಯಿಂದಾಗಿ ಅದರಲ್ಲಿ ಸಾಕಷ್ಟು ನೀರು ತುಂಬಿಕೊಂಡಿತ್ತು. ಆದರೆ ಅಪಾಯಕಾರಿ ಗುಂಡಿಯ ಸುತ್ತ ಯಾವುದೇ ಸುರಕ್ಷತಾ ಬೇಲಿ, ಎಚ್ಚರಿಕೆ ಫಲಕ ಅಥವಾ ರಕ್ಷಣಾ ವ್ಯವಸ್ಥೆ ಕಲ್ಪಿಸಿಲ್ಲ ಎಂಬ ಆರೋಪ ಕೇಳಿಬಂದಿದೆ. ಆಟವಾಡುತ್ತಿದ್ದ ವೇಳೆ ಮಗು ಪಲ್ಲವಿ ಆ ನೀರು ತುಂಬಿದ್ದ ಗುಂಡಿಗೆ ಜಾರಿ ಬಿದ್ದ ಪರಿಣಾಮ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ

ನಿರ್ಮಾಣ ಹಂತದ ಗುಂಡಿಗೆ ಬಿದ್ದು ಒಂದುವರೆ ವರ್ಷದ ಹಸುಗೂಸು ಸಾವು

ನಗರದ ಹಿರೇಬಿದನೂರಿನಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಿಂಭಾಗದಲ್ಲಿ ನಿರ್ಮಾಣವಾಗುತ್ತಿರುವ ಹೊಸ ಸರ್ಕಾರಿ ಕಟ್ಟಡ ಕಾಮಗಾರಿಯಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ಒಂದೂವರೆ ವರ್ಷದ ಮಗು ಸಾವನ್ನಪ್ಪಿರುವ ಘಟನೆ ಸಂಭವಿಸಿದೆ. -

Profile
Ashok Nayak Jun 17, 2026 12:52 AM

ಗೌರಿಬಿದನೂರು : ನಗರದ ಹಿರೇಬಿದನೂರಿನಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಿಂಭಾಗದಲ್ಲಿ ನಿರ್ಮಾಣವಾಗುತ್ತಿರುವ ಹೊಸ ಸರ್ಕಾರಿ ಕಟ್ಟಡ ಕಾಮಗಾರಿಯಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ಒಂದೂವರೆ ವರ್ಷದ ಮಗು ಸಾವನ್ನಪ್ಪಿದ ಘಟನೆ ಸಂಭವಿಸಿದೆ.

ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದ ಬಂದಿರುವ ಕೂಲಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ಅದೇ ಕಾಮಗಾರಿಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ರಾಜಪಾಲ್ ಹಾಗೂ ಶ್ವೇತಾ ದಂಪತಿಯ ಮಗಳಾದ ಪಲ್ಲವಿ (1.5) ದುರಂತವಾಗಿ ಮೃತಪಟ್ಟಿದ್ದಾಳೆ.

ಕಾಮಗಾರಿ ಸ್ಥಳದಲ್ಲಿ ಲಿಫ್ಟ್ ನಿರ್ಮಾಣಕ್ಕಾಗಿ ಅಗಲವಾದ ಗುಂಡಿಯನ್ನು ತೋಡಲಾಗಿದ್ದು, ಇತ್ತೀಚಿನ ಮಳೆಯಿಂದಾಗಿ ಅದರಲ್ಲಿ ಸಾಕಷ್ಟು ನೀರು ತುಂಬಿಕೊಂಡಿತ್ತು. ಆದರೆ ಅಪಾಯಕಾರಿ ಯಾದ ಆ ಗುಂಡಿಯ ಸುತ್ತ ಯಾವುದೇ ಸುರಕ್ಷತಾ ಬೇಲಿ, ಎಚ್ಚರಿಕೆ ಫಲಕ ಅಥವಾ ರಕ್ಷಣಾ ವ್ಯವಸ್ಥೆ ಕಲ್ಪಿಸಿಲ್ಲ ಎಂಬ ಆರೋಪ ಕೇಳಿಬಂದಿದೆ. ಆಟವಾಡುತ್ತಿದ್ದ ವೇಳೆ ಮಗು ಪಲ್ಲವಿ ಆ ನೀರು ತುಂಬಿದ್ದ ಗುಂಡಿಗೆ ಜಾರಿ ಬಿದ್ದ ಪರಿಣಾಮ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: Chinthamani Crime: ಮರೀನಾಯಕನಹಳ್ಳಿ ಗೇಟ್ ಬಳಿ ಅಕ್ರಮ ದಂಧೆಗೆ ಬ್ರೇಕ್: ಮೂವರ ವಿರುದ್ಧ ಪ್ರಕರಣ ದಾಖಲು!

ಘಟನೆ ನಡೆದ ನಂತರ ಮಗುವಿನ ಕುಟುಂಬಸ್ಥರು ತೀವ್ರ ದುಃಖಕ್ಕೆ ಒಳಗಾಗಿದ್ದಾರೆ. ದೂರದ ಊರಿನಿಂದ ಜೀವನೋಪಾಯಕ್ಕಾಗಿ ಗೌರಿಬಿದನೂರಿಗೆ ಬಂದಿದ್ದ ಈ ಕುಟುಂಬಕ್ಕೆ ಸ್ಥಳೀಯವಾಗಿ ಯಾವುದೇ ಸಂಬಂಧಿಕರು ಅಥವಾ ಬೆಂಬಲಿಗರು ಇಲ್ಲದ ಕಾರಣ, ಗೌರಿಬಿದನೂರು ಸಾರ್ವಜನಿಕ ಆಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೊಠಡಿ ಮುಂಭಾಗವೇ ಕುಳಿತು ಕಣ್ಣೀರು ಹಾಕುತ್ತಿರುವ ದೃಶ್ಯ ಕಂಡುಬಂದಿತು. ಇದನ್ನು ಕಂಡ ಸಾರ್ವಜನಿಕರು ಹಾಗೂ ಸ್ಥಳೀಯರು ಕುಟುಂಬದ ನೋವಿಗೆ ಸ್ಪಂದಿಸಿದರು.

ಘಟನೆಯ ಕುರಿತು ಮಾತನಾಡಿದ ಸಾರ್ವಜನಿಕರು, ಕಾಮಗಾರಿ ಸ್ಥಳದಲ್ಲಿ ಕನಿಷ್ಠ ಸುರಕ್ಷತಾ ಕ್ರಮ ಗಳನ್ನು ಅನುಸರಿಸಿದ್ದರೆ ಅಮಾಯಕ ಮಗುವಿನ ಜೀವ ಉಳಿಯಬಹುದಾಗಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು. ನಿರ್ಮಾಣ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರನ ಬೇಜವಾಬ್ದಾರಿ ಹಾಗೂ ಸಂಬAಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣವಾಗಿದೆ ಎಂದು ಆರೋಪಿಸಿದರು.

ಮೃತ ಮಗುವಿನ ಕುಟುಂಬಕ್ಕೆ ಸರ್ಕಾರದಿಂದ ತಕ್ಷಣವೇ ಸೂಕ್ತ ಪರಿಹಾರ ನೀಡಬೇಕು. ಜೊತೆಗೆ ಕಾಮಗಾರಿ ಸ್ಥಳದಲ್ಲಿ ಸುರಕ್ಷತಾ ನಿಯಮಗಳನ್ನು ಪಾಲಿಸದ ಗುತ್ತಿಗೆದಾರನ ವಿರುದ್ಧ ಹಾಗೂ ಮೇಲ್ವಿಚಾರಣೆಯ ಜವಾಬ್ದಾರಿ ಹೊಂದಿದ್ದ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಈ ದುರ್ಘಟನೆ ನಿರ್ಮಾಣ ಕಾಮಗಾರಿಗಳಲ್ಲಿ ಸುರಕ್ಷತಾ ಕ್ರಮಗಳ ಅಗತ್ಯತೆಯನ್ನು ಮತ್ತೊಮ್ಮೆ ನೆನಪಿಸಿದ್ದು, ಇಂತಹ ಘಟನೆಗಳು ಮರುಕಳಿಸದಂತೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕೆಂಬ ಆಗ್ರಹ ಕೇಳಿಬಂದಿದೆ.