Gauribidanur News: ಛಾಯಾಗ್ರಾಹಕರು ತಂತ್ರಜ್ಞಾನ ಅಳವಡಿಸಿಕೊಳ್ಳುವ ಜತೆಗೆ ಸಂಘಟನೆಯ ಬಲ ಹೆಚ್ಚಿಸಬೇಕು: ಎನ್.ಎ. ರಾಮಚಂದ್ರ
ಸಂಘಟನೆಯ ಮೂಲಕ ಸರ್ಕಾರದ ವಿವಿಧ ಸೌಲಭ್ಯಗಳು, ತರಬೇತಿ ಕಾರ್ಯಕ್ರಮಗಳು ಹಾಗೂ ವೃತ್ತಿ ಅಭಿವೃದ್ಧಿಗೆ ಅಗತ್ಯವಾದ ಅವಕಾಶಗಳನ್ನು ಪರಿಣಾಮಕಾರಿಯಾಗಿ ಪಡೆಯಬಹುದು. ಛಾಯಾ ಗ್ರಾಹಕರ ಸಮಸ್ಯೆಗಳ ಪರಿಹಾರ, ಕಲ್ಯಾಣ ಮತ್ತು ವೃತ್ತಿ ಅಭಿವೃದ್ಧಿಗಾಗಿ ಸಂಘಟನೆ ನಿರಂತರವಾಗಿ ಶ್ರಮಿಸುತ್ತಿದ್ದು, ಎಲ್ಲ ಛಾಯಾಗ್ರಾಹಕರೂ ಸದಸ್ಯತ್ವ ಪಡೆದು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು
-
ಗೌರಿಬಿದನೂರು: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಛಾಯಾಗ್ರಾಹಕರು ಹೊಸ ತಂತ್ರಜ್ಞಾನ ವನ್ನು ಅಳವಡಿಸಿಕೊಳ್ಳುವುದರ ಜೊತೆಗೆ ತಮ್ಮ ವೃತ್ತಿಯ ಗೌರವ, ಹಕ್ಕುಗಳು ಹಾಗೂ ಸಾಮಾಜಿಕ ಭದ್ರತೆಯನ್ನು ಕಾಪಾಡಿಕೊಳ್ಳಲು ಸಂಘಟನೆಯ ಬಲವನ್ನು ಹೆಚ್ಚಿಸಬೇಕು ಎಂದು ಕರ್ನಾಟಕ ರಾಜ್ಯ ಛಾಯಾಗ್ರಾಹಕರ ಸಂಘದ ನಿರ್ದೇಶಕ ಎನ್.ಎ. ರಾಮಚಂದ್ರ ಕರೆ ನೀಡಿದರು.
ನಗರದ ನದಿದಡದ ಶ್ರೀ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ನಡೆದ ತಾಲೂಕು ಯುವ ಛಾಯಾಗ್ರಾಹಕರ ಸಭೆಯಲ್ಲಿ ಮಾತನಾಡಿದ ಅವರು, ಛಾಯಾಗ್ರಾಹಕರು ನಿರಂತರವಾಗಿ ತಮ್ಮ ಕೌಶಲ್ಯವನ್ನು ವೃದ್ಧಿಸಿಕೊಳ್ಳಬೇಕು. ಗುಣಮಟ್ಟದ ಸೇವೆ ನೀಡುವುದರೊಂದಿಗೆ ಸಮಾಜದ ಪ್ರಮುಖ ಘಟನೆಗಳನ್ನು ದಾಖಲಿಸುವ ಜವಾಬ್ದಾರಿಯನ್ನು ಅರಿತು ವೃತ್ತಿಪರತೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಇದನ್ನೂ ಓದಿ: Gauribidanur News: ಜು.18ರೊಳಗೆ ಹಂದಿಗಳನ್ನು ನಗರದಿಂದ ಸ್ಥಳಾಂತರಿಸಿ: ಸಾಕಾಣೆದಾರರಿಗೆ ನಗರಸಭೆ ಕಟ್ಟುನಿಟ್ಟಿನ ಸೂಚನೆ
ಸಂಘಟನೆಯ ಮೂಲಕ ಸರ್ಕಾರದ ವಿವಿಧ ಸೌಲಭ್ಯಗಳು, ತರಬೇತಿ ಕಾರ್ಯಕ್ರಮಗಳು ಹಾಗೂ ವೃತ್ತಿ ಅಭಿವೃದ್ಧಿಗೆ ಅಗತ್ಯವಾದ ಅವಕಾಶಗಳನ್ನು ಪರಿಣಾಮಕಾರಿಯಾಗಿ ಪಡೆಯಬಹುದು. ಛಾಯಾಗ್ರಾಹಕರ ಸಮಸ್ಯೆಗಳ ಪರಿಹಾರ, ಕಲ್ಯಾಣ ಮತ್ತು ವೃತ್ತಿ ಅಭಿವೃದ್ಧಿಗಾಗಿ ಸಂಘಟನೆ ನಿರಂತರವಾಗಿ ಶ್ರಮಿಸುತ್ತಿದ್ದು, ಎಲ್ಲ ಛಾಯಾಗ್ರಾಹಕರೂ ಸದಸ್ಯತ್ವ ಪಡೆದು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
'ಆಸರೆ' ಯೋಜನೆಯ ಸದುಪಯೋಗ ಪಡೆದುಕೊಳ್ಳಿ
ಸಂಘ ಜಾರಿಗೊಳಿಸಿರುವ 'ಆಸರೆ' ಯೋಜನೆಯು ಸದಸ್ಯರ ಸಂಕಷ್ಟದ ಸಮಯದಲ್ಲಿ ಆರ್ಥಿಕ ನೆರವು ನೀಡುವ ಮಹತ್ವದ ಕಲ್ಯಾಣ ಯೋಜನೆಯಾಗಿದೆ. ಸದಸ್ಯತ್ವ ಪಡೆಯುವ ಮೂಲಕ ಈ ಯೋಜನೆಯ ಪ್ರಯೋಜನಗಳನ್ನು ಪಡೆದುಕೊಳ್ಳಬೇಕು. ವಿವಿಧ ಸಂದರ್ಭಗಳಲ್ಲಿ ಸದಸ್ಯರಿಗೆ ಆರ್ಥಿಕ ನೆರವು ಹಾಗೂ ಅಗತ್ಯ ಸಹಾಯ ದೊರೆಯುವಂತೆ ಹಲವು ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದು ತಿಳಿಸಿದರು.
ತಾಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಅವುಲನ್ನ ಮಾತನಾಡಿ, ಛಾಯಾಗ್ರಾಹಕರ ವೃತ್ತಿ ಅಭಿವೃದ್ಧಿ, ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣಕ್ಕೆ ಸಂಘ ಆದ್ಯತೆ ನೀಡುತ್ತಿದ್ದು, ಎಲ್ಲರೂ ಸಂಘದೊಂದಿಗೆ ಕೈಜೋಡಿಸಿ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.
ಸಂಘದ ಗೌರವಾಧ್ಯಕ್ಷ ಫಣಿಲ್ ಕುಮಾರ್ ಮಾತನಾಡಿ, ಸದಸ್ಯರು ಕಡ್ಡಾಯವಾಗಿ ಸಂಘದ ಗುರುತಿನ ಚೀಟಿ ಮಾಡಿಸಿಕೊಳ್ಳಬೇಕು. ಇದರಿಂದ ಕೇಂದ್ರ ಸಂಘ ಹಾಗೂ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಭೆಯಲ್ಲಿ ಜಿಲ್ಲಾ ಸಂಘದ ಉಪಾಧ್ಯಕ್ಷ ನಂಜುಂಡಬಾಬು, ತಾಲೂಕು ಪ್ರಧಾನ ಕಾರ್ಯದರ್ಶಿ ಉಮಾಶಂಕರ್, ಖಜಾಂಚಿ ರವಿಚಂದ್ರ, ಕಾರ್ಯದರ್ಶಿ ಶ್ರೀಕಂಠ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.