ದೇವಾಲಯಗಳಿಗಿಂತ ಶಾಲೆಗಳ ನಿರ್ಮಾಣಕ್ಕೆ ಆದ್ಯತೆ ನೀಡಿ : ಮಾಜಿ ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ
11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ಮಾದರಿ ಸಾಹಿತ್ಯ ಸಮ್ಮೇಳನವಾಗಿ ರೂಪುಗೊಂಡಿದೆ. ಅವಿಭಜಿತ ಕೋಲಾರ ಜಿಲ್ಲೆಯಾಗಿದ್ದ ಸಂದರ್ಭದಲ್ಲಿ ಹಿಂದುಳಿದ ಜಿಲ್ಲೆಯೆಂಬ ಹಣೆಪಟ್ಟಿ ಹೊಂದಿದ್ದ ಚಿಕ್ಕಬಳ್ಳಾಪುರ, ಪ್ರತ್ಯೇಕ ಜಿಲ್ಲೆಯಾದ ಬಳಿಕ ಅಭಿವೃದ್ಧಿಯತ್ತ ಮುನ್ನಡೆ ಯುತ್ತಿದೆ ಎಂದು ಹಿರಿಯ ಸಾಹಿತಿ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ( Dr. L. Hanumanthaiah)ಅಭಿಪ್ರಾಯಪಟ್ಟರು.
ಚಿಂತಾಮಣಿಯ ಅಂಬೇಡ್ಕರ್ ಭವನದಲ್ಲಿ ನಡೆದ 11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿ ಮಾಜಿ ರಾಜ್ಯಸಭಾ ಸದಸ್ಯ ಡಾ.ಎಲ್ ಹನುಮಂತಯ್ಯ ಮಾತನಾಡಿದರು. -
ಚಿಕ್ಕಬಳ್ಳಾಪುರ: 11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ಮಾದರಿ ಸಾಹಿತ್ಯ ಸಮ್ಮೇಳನವಾಗಿ ರೂಪುಗೊಂಡಿದೆ. ಅವಿಭಜಿತ ಕೋಲಾರ ಜಿಲ್ಲೆಯಾಗಿದ್ದ ಸಂದರ್ಭದಲ್ಲಿ ಹಿಂದುಳಿದ ಜಿಲ್ಲೆಯೆಂಬ ಹಣೆಪಟ್ಟಿ ಹೊಂದಿದ್ದ ಚಿಕ್ಕಬಳ್ಳಾಪುರ, ಪ್ರತ್ಯೇಕ ಜಿಲ್ಲೆಯಾದ ಬಳಿಕ ಅಭಿವೃದ್ಧಿಯತ್ತ ಮುನ್ನಡೆ ಯುತ್ತಿದೆ ಎಂದು ಹಿರಿಯ ಸಾಹಿತಿ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ( Dr. L. Hanumanthaiah)ಅಭಿಪ್ರಾಯಪಟ್ಟರು.
ನಗರದ ಅಂಬೇಡ್ಕರ್ ಭವನದಲ್ಲಿ ಗುರುವಾರ ನಡೆದ ಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇಳದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಪಂಪ ಮಹನೀಯ!!
ಕನ್ನಡ ಭಾಷೆಗೆ ಸುಮಾರು 2500 ವರ್ಷಗಳ ಭವ್ಯ ಇತಿಹಾಸವಿದೆ. ಕನ್ನಡದ ಆದಿಕವಿ ಪಂಪ ತಮ್ಮ ಕಾವ್ಯದ ಮೂಲಕ ಕನ್ನಡ ಭಾಷೆಯ ಬಗ್ಗೆ ಅಪಾರ ಅಭಿಮಾನ ಮೆರೆದಿದ್ದಾರೆ. 'ಮನುಷ್ಯಜಾತಿ ತಾನೊಂದೇ ವಲಂ' ಎಂಬ ಸಂದೇಶದ ಮೂಲಕ ಜಗತ್ತಿನ ಮಾನವರೆಲ್ಲರೂ ಒಂದೇ ಎಂಬ ವಿಶಾಲ ಮಾನವೀಯ ದೃಷ್ಟಿಕೋನವನ್ನು ಸಾರಿದ್ದಾರೆ. ಸಂಗೀತ, ಕಲೆ, ಸಾಹಿತ್ಯ, ತ್ಯಾಗ ಮತ್ತು ಭೋಗದ ಮೌಲ್ಯಗಳನ್ನು ಹೊಂದಿರುವವರೇ ಕನ್ನಡಿಗರು ಎಂಬ ಅಭಿಮಾನವನ್ನು ಪಂಪ ವ್ಯಕ್ತಪಡಿಸಿದ್ದಾರೆ. ಇಂತಹ ಮಹನೀಯರ ಹಾದಿ ನಮ್ಮದಾಗಲಿ ಎಂದರು.
ಅಪ್ಪಟ ಕನ್ನಡಿಗರು: 12ನೇ ಶತಮಾನದ ಶರಣರು ಅಪ್ಪಟ ಕನ್ನಡಿಗರು. ಹುಟ್ಟಿನಿಂದ ಯಾರೂ ಶ್ರೇಷ್ಠರಲ್ಲ ಎಂಬ ಸಮಾನತೆಯ ಸಂದೇಶವನ್ನು ವಚನಕಾರರು ಸಾರಿದರು. ಆಕಸ್ಮಿಕವಾಗಿ ಹುಟ್ಟಿದ ನಾವು ಜಾತಿ, ಧರ್ಮದ ಹೆಸರಿನಲ್ಲಿ ನಿರ್ಮಿಸಿಕೊಂಡಿರುವ ಬೇಲಿಗಳನ್ನು ಕಿತ್ತೊಗೆಯುವ ಕೆಲಸ ಮಾಡಬೇಕು. ಬಸವಣ್ಣ, ಮಾದಾರ ಚೆನ್ನಯ್ಯ ದೂಳಯ್ಯ , ಕಕ್ಕಯ್ಯ, ಸೂಳೆಳೆಸಂಕವ್ವೆ ಅವರನ್ನು ಉಲ್ಲೇಖಿಸುವ ಮೂಲಕ ಕುಲದ ಹಿರಿಮೆಯ ಕಲ್ಪನೆಯನ್ನು ಅವರು ಅಂದೇ ಪ್ರಶ್ನಿಸಿದ್ದರು. ಪರಿಹಾರ ಕಂಡುಕೊಂಡಿದ್ದರು. ಇಂದು ಯಾಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದರು.
ಶಾಲೆಗಳನ್ನು ಬೆಳೆಸೋಣ??
ಈ ಸಮಾಜದ ನಿರ್ಮಾಣದಲ್ಲಿ ಕುಶಲಕರ್ಮಿಗಳ ಕೊಡುಗೆ ಅಪಾರವಾಗಿದೆ. ಅವರನ್ನು ಹೊರತು ಪಡಿಸಿ ಸಮಾಜವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಇಂದು ಜಾತಿಗೊಂದು ದೇವಾಲಯ ನಿರ್ಮಿಸುವ ಕಾಲಘಟ್ಟದಲ್ಲಿದ್ದೇವೆ. ದೇವಾಲಯಗಳನ್ನು ಕಟ್ಟುವ ಬದಲು ಶಾಲೆಗಳನ್ನು ಕಟ್ಟುವ ಮತ್ತು ಶಿಕ್ಷಣ ಸಂಸ್ಥೆಗಳನ್ನು ಬಲಪಡಿಸುವ ಕೆಲಸಕ್ಕೆ ಆದ್ಯತೆ ನೀಡಬೇಕು. ದೇವಾಲಯಗಳಿಗೆ ವ್ಯಯಿಸುವ ಹಣವನ್ನು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಬಳಸಿದ್ದರೆ, ಮಕ್ಕಳಿಗೆ ಹವಾನಿಯಂತ್ರಿತ ತರಗತಿಗಳಲ್ಲಿಯೇ ಗುಣಮಟ್ಟದ ಶಿಕ್ಷಣ ಒದಗಿಸಲು ಸಾಧ್ಯವಾಗುತ್ತಿತ್ತು ಎಂದು ಅಭಿಪ್ರಾಯ ಪಟ್ಟರು.
ನಾಲ್ವಡಿ ಸದಾ ಆದರ್ಶರು!!
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ರಾಜಪ್ರಭುತ್ವದ ನಡುವೆಯೂ ಪ್ರಜಾಪ್ರಭುತ್ವ ವ್ಯವಸ್ಥೆ ಇರಬೇಕು ಎಂದು ಬಯಸಿದ್ದ ದೂರದೃಷ್ಟಿಯ ಆಡಳಿತಗಾರರಾಗಿದ್ದರು. ಸ್ವಾತಂತ್ರ್ಯ ಪೂರ್ವ ದಲ್ಲಿಯೇ ಅಸ್ಪೃಶ್ಯತೆ ನಿವಾರಣೆಗಾಗಿ ಶಾಲೆಗಳನ್ನು ತೆರೆಯಲು ಮುನ್ನುಡಿ ಬರೆದಿದ್ದರು. ಏಷ್ಯಾ ದಲ್ಲಿಯೇ ಉದ್ದನೆಯ ವಿದ್ಯುತ್ ಸರಬರಾಜು ವ್ಯವಸ್ಥೆ ಕಲ್ಪಿಸಿದ ಕೀರ್ತಿ ಅವರಿಗಿದೆ. ಆಡಳಿತದಲ್ಲಿ ಕನ್ನಡ ಭಾಷೆ ಜಾರಿಗೆ ತಂದ ಹೆಗ್ಗಳಿಕೆಯೂ ಅವರದ್ದಾಗಿದೆ. ಜನಪ್ರತಿನಿಧಿಗಳು ಜನಹಿತಕ್ಕಾಗಿ ಹೇಗೆ ಶ್ರಮಿಸಬೇಕು ಎಂಬುದನ್ನು ತಮ್ಮ ಆಡಳಿತದ ಮೂಲಕ ತೋರಿಸಿಕೊಟ್ಟವರು ಧೀಮಂತರಾದ ನಾಲ್ವಡಿಯವರು ಎಂದರು.
ಕುಲದ ಪ್ರಶ್ನೆಗೆ ಉತ್ತರವಿಲ್ಲ?
ಮಕ್ಕಳು ಏನನ್ನು ಓದದಿದ್ದರೂ ಪರವಾಗಿಲ್ಲ ಕನಿಷ್ಟ ಕುಮಾರವ್ಯಾಸ ಭಾರತ, ವಚನ ಸಾಹಿತ್ಯ ಹಾಗೂ ದಾಸ ಸಾಹಿತ್ಯವನ್ನು ಕಡ್ಡಾಯವಾಗಿ ಓದುವಂತಾಗಬೇಕು.ಕನ್ನಡ ಸಾರಸ್ವತ ಲೋಕವೂ ಸೇರಿದಂತೆ ನಾಗರೀಕ ಸಮಾಜದಲ್ಲಿ ಕನಕದಾಸರು ಎತ್ತಿದ ಕುಲದ ಪ್ರಶ್ನೆಗೆ ಇಂದಿಗೂ ಸಮರ್ಪಕ ಉತ್ತರ ಸಿಕ್ಕಿಲ್ಲ. ಬಸವಣ್ಣನವರ ವಿಚಾರಗಳು ಹಾಗೂ ಕುವೆಂಪು ಅವರ ಸಮಗ್ರ ಸಾಹಿತ್ಯವನ್ನು ಇನ್ನೂ ಸರಿಯಾಗಿ ಅರ್ಥಮಾಡಿಕೊಳ್ಳಬೇಕಿದೆ. ಗುಡಿ, ಚರ್ಚು, ಮಸೀದಿಗಳ ಸೀಮಿತ ಚೌಕಟ್ಟಿನಿಂದ ಹೊರಬಂದು ವಿಶಾಲ ಮಾನವೀಯ ಚಿಂತನೆ ಬೆಳೆಸಿಕೊಳ್ಳಬೇಕು ಎಂಬ ಕುವೆಂಪು ಅವರ ಆಶಯ ವನ್ನು ಪ್ರತಿಯೊಬ್ಬರೂ ಅರಿಯಬೇಕು. ಅವರ 'ವಿಚಾರ ಕ್ರಾಂತಿಗೆ ಆಹ್ವಾನ' ಕೃತಿಯನ್ನು ಎಲ್ಲರೂ ಓದಲೇಬೇಕು ಎಂದು ಕರೆ ನೀಡಿದರು.
ಮೌಲ್ಯಗಳನ್ನು ಪೋಷಿಸಬೇಕು!!
ಇಂದು ಸಂವಿಧಾನದ ಆಶಯಗಳ ಕುರಿತು ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ಸಾಹಿತ್ಯದ ಆಶಯ ಗಳು ಸಂವಿಧಾನದ ಮೌಲ್ಯಗಳಿಗೆ ಪೂರಕವಾಗಿರಬೇಕು. ಜಾತ್ಯತೀತ ಮೌಲ್ಯಗಳನ್ನು ಪೋಷಿಸುವ ಜವಾಬ್ದಾರಿ ಸಾಹಿತಿಗಳ ಮೇಲಿದೆ. ಸಾಹಿತ್ಯ ಸಮಾಜದ ಕೈಗನ್ನಡಿಯಾಗಿದ್ದು, ಇಂದಿನ ಯುವ ತಲೆಮಾರು ಸಮಾಜದ ಜ್ವಲಂತ ಸಮಸ್ಯೆಗಳನ್ನು ಸೂಕ್ಷ್ಮವಾಗಿ ಗ್ರಹಿಸುತ್ತಿರುವುದು ಸಂತೋಷದ ಸಂಗತಿ. ಆಧುನಿಕತೆ ಹೊಸ ಅವಾಂತರಗಳಿಗೆ ಕಾರಣವಾಗಬಾರದು. ಸಾಹಿತಿಗಳು ಸಾಮಾನ್ಯ ಜನರಿಂದ ಭಿನ್ನರಲ್ಲ ಎಂಬ ಎಚ್ಚರಿಕೆ ಪ್ರತಿಯೊಬ್ಬ ಬರಹಗಾರನಲ್ಲಿಯೂ ಇರಬೇಕು. ಈ ಸಮ್ಮೇಳನ ಇಂತಹ ಹೊಸತನಕ್ಕೆ ನಾಂದಿ ಹಾಡಲಿದೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದರು.
ಈ ವೇಳೆ ಸಮ್ಮೇಳನಾಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್(Gollahally Shivaprasad), ಶಾಸಕ ಡಾ.ಎಂ.ಸಿ.ಸುಧಾಕರ್(,ಕಸಾಪ ಜಿಲ್ಲಾಧ್ಯಕ್ಷ ಕೋಡಿರಂಗಪ್ಪ,ಜಿಲ್ಲಾಧಿಕಾರಿ ಜಿ.ಪ್ರಭು,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್,ಉಪವಿಭಾಗಾಧಿಕಾರಿ ಶೋಭಿತಾ. ಆರ್.ತಹಶೀಲ್ದಾರ್ ಸುದರ್ಶನ ಯಾದವ್, ಪೌರಾಯುಕ್ತ ಚಲಪತಿ ಇತರರು ಇದ್ದರು.