ಪಹಣಿಗಳಲ್ಲಿ ಕೆಐಎಡಿಬಿ ಹೆಸರು ನಮೂದು ತೆಗೆಯುವಂತೆ ತಹಶೀಲ್ದಾರ್‌ಗೆ ಮನವಿ
ರೈತರ ಜಮೀನು ಭೂಸ್ವಾಧೀನದ ಆದೇಶದಲ್ಲಿನ ಖಾತೆದಾರರಿಗೆ ನಯಾ ಪೈಸೆ ಪರಿಹಾರ ವಿತರಿಸ ದಿದ್ದರೂ, ಪಹಣಿ ಗಳ ಸ್ವಾಧೀನದಾರರ ಕಾಲಂನಲ್ಲಿ ಕೆಐಎಡಿಬಿ(ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ) ಎಂದು ನಮೂದಾಗಿರುವುದನ್ನು ರದ್ದುಪಡಿಸಿ ಗೇಣಿದಾರ ರೈತರ ಹೆಸರನ್ನು ಈ ಕೂಡಲೇ ನಮೂದಿಸಬೇಕು


ಬಾಗೇಪಲ್ಲಿ: ತಾಲೂಕಿನ ಕೊಂಡರೆಡ್ಡಿಪಲ್ಲಿ ಮತ್ತು ಹೊಸಹುಡ್ಯ ಗ್ರಾಮದ 25 ಕುಟುಂಬಗಳಿಗೆ ಸೇರಿರುವ 65 ಎಕರೆ ಕೃಷಿ ಜಮೀನನ್ನು ಮಾಲೀಕರ ಒಪ್ಪಿಗೆ ಪಡೆಯದೆ, ಪರಿಹಾರ ಹಣ ನೀಡದೆ ಪರಮಾಧಿಕಾರ ಧೋರಣೆ ಅನುಸರಿಸಿ ಕೆಐಎಡಿಬಿ ಹೆಸರಿಗೆ ವರ್ಗಾವಣೆ ಮಾಡಿಕೊಂಡಿರುವುದು ಅನ್ಯಾಯ. ಇದನ್ನು ಸರಿಪಡಿಸಿ ಎಂದು ಬಾಗೇಪಲ್ಲಿ ತಾಲ್ಲೂಕು ಭೂಮಿ ಸಂತ್ರಸ್ಥರ ಹೋರಾಟ ಸಮಿತಿ ಹಾಗೂ ಕೊಂಡರೆಡ್ಡಿಪಲ್ಲಿ ಹಾಗೂ ಹೊಸಹುಡ್ಯ ರೈತರು ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನೀಶಾ ಮಹೇಶ್ ಎನ್.ಪತ್ರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಿಪಿಐಎಂ ಮುಖಂಡರಾದ ಚನ್ನರಾಯಪ್ಪ ಮಾತನಾಡಿ ರೈತರ ಜಮೀನು ಭೂಸ್ವಾಧೀನದ ಆದೇಶದಲ್ಲಿನ ಖಾತೆದಾರರಿಗೆ ನಯಾ ಪೈಸೆ ಪರಿಹಾರ ವಿತರಿಸದಿದ್ದರೂ, ಪಹಣಿ ಗಳ ಸ್ವಾಧೀನದಾರರ ಕಾಲಂನಲ್ಲಿ ಕೆಐಎಡಿಬಿ(ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ) ಎಂದು ನಮೂದಾಗಿರುವುದನ್ನು ರದ್ದುಪಡಿಸಿ ಗೇಣಿದಾರ ರೈತರ ಹೆಸರನ್ನು ಈ ಕೂಡಲೇ ನಮೂದಿ ಸಬೇಕು. ರೈತರಿಂದ ಸ್ವಾಧೀನಪಡಿಸಿಕೊಂಡಷ್ಟು ಜಮೀನಿಗೆ ಪರ್ಯಾಯವಾಗಿ ತಮ್ಮ ತಮ್ಮ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಜಮೀನು ಒದಗಿಸಬೇಕು.
ಇದನ್ನೂ ಓದಿ: Chikkaballapur News: ಆರು ತಿಂಗಳಿಂದ ಸ್ಥಗಿತಗೊಂಡ ರಿಜಿಸ್ಟರ್ ಖಾತೆಗಳು ಪ್ರಾರಂಭ
ಭೂಸ್ವಾಧೀನಪಡಿಸಿಕೊಂಡಿರುವ ಪ್ರತಿ ಜಮೀನಿಗೆ ಒಂದು ಎಕರೆಗೆ ಕನಿಷ್ಟ 2.00 ಕೋಟಿ ರೂಪಾಯಿ ಪರಿಹಾರ ನೀಡಬೇಕು. ಸದರಿ ಭೂಸ್ವಾಧೀನ ಆದೇಶದಲ್ಲಿನ ಖರಾಬು ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದು, ಮಂಜೂರಾಗದೇ ಇರುವ ಎಲ್ಲಾ ಅನುಭವದಾರರಿಗೆ, ಖಾತೆದಾರರಿಗೆ ನೀಡುವಷ್ಟೇ ಪರಿಹಾರ ಹಣ ನೀಡಬೇಕು. ಸದರಿ ಭೂಸ್ವಾಧೀನ ಆದೇಶದಲ್ಲಿನ ಮರಣ ಹೊಂದಿರುವ ಖಾತೆ ದಾರರ ವಾರಸುದಾರರ ಹೆಸರಿಗೆ ಫವತಿವಾರಸು ಖಾತೆ ಮಾಡಿ ಪರಿಹಾರ ಹಣ ನೀಡಬೇಕು.
ಸದರಿ ಗ್ರಾಮದಲ್ಲಿ ನಿವೇಶನ ರಹಿತರಿಗೆ ನಿವೇಶನ, ಸರ್ಕಾರಿ ಶಾಲೆಗೆ, ಸಮುದಾಯ ಮತ್ತು ಎಲ್ಲಾ ವರ್ಗಗಳ ಸ್ಮಶಾನಗಳಿಗಾಗಿ ಅಗತ್ಯವಿರುವಷ್ಟು ಜಮೀನು ಕಾಯ್ದಿರಿಸಬೇಕು. ಜಮೀನು ಕಳೆದು ಕೊಳ್ಳುವ ಪ್ರತಿ ಕುಟುಂಬಕ್ಕೂ ಅವರ ವಿದ್ಯಾರ್ಹತೆಗೆ ತಕ್ಕಂತೆ ಉದ್ಯೋಗ ನೀಡಬೇಕು. ಈ ಎಲ್ಲಾ ಪ್ರಕ್ರಿಯೆಗಳನ್ನು, ಭ್ರಷ್ಟಾಚಾರಕ್ಕೆ ಆಸ್ಪದವಿಲ್ಲದೇ ಪಾರದರ್ಶಕವಾಗಿ ಕೈಗೊಳ್ಳಲು ಸಂಬಂಧ ಪಟ್ಟ ವರಿಗೆ ಸೂಕ್ತ ಆದೇಶ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾ ನಿರತರಿಂದ ಮನವಿ ಸ್ವೀಕರಿಸಿ ಮಾತನಾಡಿ ತಹಸೀಲ್ದಾರ್ ಮನೀಷಾ ಮಹೇಶ್ ಎನ್.ಪತ್ರಿ ರೈತರ ಜಮೀನು ಪಹಣಿಗಳಲ್ಲಿ ಕೆಐಎಡಿಬಿ ಹೆಸರು ನಮೂದು ಆಗಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಜೊತೆ ಚರ್ಚಿಸಲಾಗುವುದು. ರೈತರು ಆತಂಕಕ್ಕೆ ಒಳಗಾಗುವುದು ಬೇಡ. ರೈತರ ಹೆಸರನ್ನು ಪಹಣಿಯಲ್ಲಿ ಇನ್ನೂ ಎರಡು ದಿನ ಗಳಲ್ಲಿ ಸೇರಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಹಶೀಲ್ದಾರ್ ಮನೀಷ್ ಎನ್.ಪತ್ರಿ ಸ್ಪಷ್ಟನೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಭೂಮಿ ಸಂತ್ರಸ್ತರ ಹೋರಾಟ ಸಮಿತಿ ಪದಾಧಿಕಾರಿಗಳಾದ ಪ.ಓಬಳರಾಜು, ಡಿ.ಟಿ.ಮುನಿಸ್ವಾಮಿ, ಎಸ್. ಲಕ್ಷ್ಮಣರೆಡ್ಡಿ, ರಾಮಕೃಷ್ಣಪ್ಪ, ರಮೇಶ್, ಶ್ರೀನಿವಾಸ ರೆಡ್ಡಿ, ಎಸ್. ಎಫ್.ಐ ಮುಖಂಡ ಸೋಮಶೇಖರ್, ಹೆಚ್.ಎಲ್.ಮಂಜುನಾಥ್, ಬಿಳ್ಳೂರು ನಾಗರಾಜು, ವಾಲ್ಮೀಕಿ ಅಶ್ವ ತ್ಥಪ್ಪ, ಕೃಷ್ಣಪ್ಪ, ಗೂಳೂರು ಕೃಷ್ಣಪ್ಪ ಹಾಗೂ ಕೊಂಡರೆಡ್ಡಿಪಲ್ಲಿ ಹಾಗೂ ಹೊಸಹುಡ್ಯ ರೈತರು ಹಾಜರಿದ್ದರು.