ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sadguru Sri Madhusudan Sai: ಸತ್ಯ ಸಾಯಿ ಗ್ರಾಮದಲ್ಲಿ ಶೀಘ್ರ ಡಿಜಿಟಲ್ ವ್ಯಸನ ಮುಕ್ತಿ ಕೇಂದ್ರ: ಸದ್ಗುರು ಶ್ರೀ ಮಧುಸೂದನ ಸಾಯಿ

Sathya Sai Grama: ಸಾಮಾಜಿಕ ಮಾಧ್ಯಮಗಳು ಮತ್ತು ಡಿಜಿಟಲ್ ಉಪಕರಣಗಳ ಅವಲಂಬನೆಯಿಂದ ಯುವಜನರ ಜೀವನದ ಗುಣಮಟ್ಟ ಕ್ಷೀಣಿಸುತ್ತಿದೆ. ಇದನ್ನು ತಡೆಯುವ ಸಲುವಾಗಿ ಸತ್ಯ ಸಾಯಿ ಗ್ರಾಮದಲ್ಲಿ ಶೀಘ್ರದಲ್ಲೇ ಡಿಜಿಟಲ್ ವ್ಯಸನ ನಿರ್ಮೂಲನಾ ಕೇಂದ್ರ ಆರಂಭಿಸುತ್ತೇವೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಘೋಷಿಸಿದರು.

ಸತ್ಯ ಸಾಯಿ ಗ್ರಾಮದಲ್ಲಿ ಶೀಘ್ರ ಡಿಜಿಟಲ್ ವ್ಯಸನ ಮುಕ್ತಿ ಕೇಂದ್ರ

-

Profile Siddalinga Swamy Oct 10, 2025 10:58 PM

ಚಿಕ್ಕಬಳ್ಳಾಪುರ: ಸಾಮಾಜಿಕ ಮಾಧ್ಯಮಗಳು ಮತ್ತು ಡಿಜಿಟಲ್ ಉಪಕರಣಗಳ ಅವಲಂಬನೆಯಿಂದ ಯುವಜನರ ಜೀವನದ ಗುಣಮಟ್ಟ ಕ್ಷೀಣಿಸುತ್ತಿದೆ. ಇದನ್ನು ತಡೆಯುವ ಸಲುವಾಗಿ ಸತ್ಯ ಸಾಯಿ ಗ್ರಾಮದಲ್ಲಿ ಶೀಘ್ರದಲ್ಲೇ ಡಿಜಿಟಲ್ ವ್ಯಸನ ನಿರ್ಮೂಲನಾ ಕೇಂದ್ರ ಆರಂಭಿಸುತ್ತೇವೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ (Sadguru Sri Madhusudan Sai) ಘೋಷಿಸಿದರು. ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ (Sathya Sai Grama) ನಡೆಯುತ್ತಿರುವ 'ಒಂದು ಜಗತ್ತು ಒಂದು ಕುಟುಂಬ ಜಾಗತಿಕ ಸಾಂಸ್ಕೃತಿಕ ಉತ್ಸವ'ದ 56ನೇ ದಿನವಾದ ಶುಕ್ರವಾರ ಆಶೀರ್ವಚನ ನೀಡಿದ ಅವರು, ಡಿಜಿಟಲ್ ವ್ಯಸನದ ಪರಿಣಾಮವಾಗಿ ಯುವ ಜನತೆ ಸಾಮಾಜಿಕ ಜೀವನವನ್ನೇ ಮರೆತಿದೆ ಎಂದು ವಿಷಾದಿಸಿದರು.

ಅವರಿಗೆ ಕಣ್ಣುಗಳನ್ನು ನೋಡಿ ಮಾತನಾಡಲು, ಒಂದೇ ಕೊಠಡಿಯಲ್ಲಿ ಮೂವರು ಕೆಲ ಹೊತ್ತು ಇರಲು ಸಾಧ್ಯವಾಗುತ್ತಿಲ್ಲ. ಒಬ್ಬೊಬ್ಬರೇ ಪ್ರತ್ಯೇಕವಾಗಿ ಇರಲು ಬಯಸುತ್ತಾರೆ. ತಮ್ಮವರೊಂದಿಗೂ ಸಂವಹನ ನಡೆಸದೇ, ಚಾಟ್‌ಜಿಪಿಟಿಯಂತಹ ತಂತ್ರಜ್ಞಾನಕ್ಕೆ ದಾಸರಾಗುತ್ತಿರುವುದು ಕಳವಳಕಾರಿ. ನಿಮ್ಹಾನ್ಸ್‌ನಲ್ಲಿ ಡಿಜಿಟಲ್ ವ್ಯಸನ ಮುಕ್ತಿ ಕೇಂದ್ರವನ್ನು ಸ್ಥಾಪಿಸಲಾಗಿದೆ. ಶೀಘ್ರದಲ್ಲಿಯೇ ನಾವೂ ಡಿಜಿಟಲ್ ವ್ಯಸನ ಮುಕ್ತಿ ಕೇಂದ್ರವನ್ನು ಸ್ಥಾಪಿಸುತ್ತಿದ್ದೇವೆ ಎಂದು ಹೇಳಿದರು.

ಮಕ್ಕಳಿಂದ ಮೊಬೈಲ್ ಫೋನ್ ಕಸಿದುಕೊಂಡರೆ ಅವರು ಕೋಪಗೊಳ್ಳುತ್ತಾರೆ. ಹೆತ್ತವರಿಗೆ ಹಾನಿ ಮಾಡುವುದಕ್ಕೂ ಹಿಂಜರಿಯುತ್ತಿಲ್ಲ. ಇಡೀ ಜಗತ್ತಿನಲ್ಲಿ ಇಂತಹ ಪರಿಸ್ಥಿತಿ ಇದೆ. ಮತ್ತೊಂದು ವಿಚಾರವೆಂದರೆ ಮಕ್ಕಳಿಂದ ಪೋಷಕರು ನಿರೀಕ್ಷೆಗೂ ಮೀರಿದ ಫಲಿತಾಂಶಗಳನ್ನು ಬಯಸುತ್ತಿದ್ದಾರೆ. ಇದು ಮಕ್ಕಳಲ್ಲಿ ಒತ್ತಡಕ್ಕೆ ಕಾರಣವಾಗುತ್ತಿದೆ. ಇದೇ ಕಾರಣಕ್ಕೆ ಅವರು ತಪ್ಪು ದಾರಿ ಹಿಡಿಯುತ್ತಿದ್ದಾರೆ ಎಂದು ವಿಶ್ಲೇಷಿಸಿದರು.

ಈ ಸುದ್ದಿಯನ್ನೂ ಓದಿ | Sri Madhusudan Sai: ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವ ಎಲ್ಲರಿಗೂ ಲಭ್ಯವಾಗಬೇಕು: ಶ್ರೀ ಮಧುಸೂದನ ಸಾಯಿ

ಡಿವಿಜಿ ಹೇಳಿದ್ದಂತೆ ಹಳೇ ಬೇರು, ಹೊಸ ಚಿಗುರು, ಕೂಡಿರಲು ಮರ ಸೊಬಗು, ಎಲ್ಲ ಬೇರುಗಳು ಮತ್ತು ಹೊಸ ಚಿಗುರುಗಳು ಭೂಮಿಯನ್ನು ಚಂದಗಾಣಿಸುತ್ತವೆ. ಒಂದು ಕಡೆ ಶಾಸ್ತ್ರ ಎಂಬ ಪ್ರಾಚೀನ ಗ್ರಂಥಗಳಿವೆ. ಇನ್ನೊಂದು ಬದಿಯಲ್ಲಿ ನಮ್ಮಲ್ಲಿ ಅತ್ಯಂತ ಮುಂದುವರಿದ ವೈಜ್ಞಾನಿಕ ಸಾಧನಗಳಿವೆ. ಜಾಗತಿಕವಾಗಿ ಮುನ್ನಡೆಸುತ್ತಿರುವ ಕಂಪನಿಗಳು ನಾವೀನ್ಯತೆ ಮತ್ತು ಪ್ರಗತಿಗೆ ಹೆಸರುವಾಸಿಯಾಗಿದೆ. ನಾವು ಒಂದೇ ಸಮಯದಲ್ಲಿ ಹಳಬರು ಮತ್ತು ಹೊಸಬರು ಎಂಬುದು ಭಾರತದ ಸಂಸ್ಕೃತಿಯ ಸೌಂದರ್ಯ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದರು.

ತೆಲಂಗಾಣದ ಪರಿಶಿಷ್ಟ ಪಂಗಡ, ಬುಡಕಟ್ಟು, ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆ ಕಲ್ಯಾಣ ಸಚಿವ ಅಡ್ಲೂರಿ ಲಕ್ಷ್ಮಣ್ ಕುಮಾರ್ ಮಾತನಾಡಿ, ತೆಲಂಗಾಣದಲ್ಲಿನ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 16 ಲಕ್ಷ ಮಕ್ಕಳಿಗೆ ಪ್ರತಿ ನಿತ್ಯ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಸಾಯಿ ಸ್ವಾಸ್ಥ್ಯ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ತೆಲಂಗಾಣದ ಗ್ರಾಮೀಣ ಭಾಗದ ಜನರಿಗೆ ಸೌಲಭ್ಯಗಳನ್ನು ಒದಗಿಸಬೇಕು. ಇದಕ್ಕಾಗಿ ಸರ್ಕಾರದಿಂದ ಎಲ್ಲ ರೀತಿಯ ಬೆಂಬಲವನ್ನು ನೀಡುತ್ತೇವೆ ಎಂದು ಘೋಷಿಸಿದರು. ಮಾಹಿತಿ ತಂತ್ರಜ್ಞಾನ, ವಿದ್ಯುನ್ಮಾನ ಮತ್ತು ಸಂವಹನ ಸಚಿವ ಡಾ. ದುಡ್ಡಿಲ್ಲ ಶ್ರೀಧರ್ ಬಾಬು ಮಾತನಾಡಿದರು.

'ಸೈಕ್ರಾಫ್ಟ್ ಎಜುಕೇಷನ್ & ಎಂಜಿನಿಯರಿಂಗ್ ಡಿಸೈನ್ ಪ್ರೈವೇಟ್ ಲಿಮಿಟೆಡ್'ನ ಸಿಇಒ ಪ್ರವೀಣ್ ಸುಬ್ರಹ್ಮಣ್ಯಂ, ಬಿಎನ್‌ಬಿ ಸೆಕ್ಯೂರಿಟಿ & ಆಟೊಮೇಷನ್ ಸಲ್ಯೂಷನ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆನಂದ್ ವೆಂಕಟರಮಣ ಭಟ್ ಅವರಿಗೆ ಸಿಎಸ್ಆರ್ ಸರ್ಕಲ್ ಆಫ್ ಹಾನರ್ ಪುರಸ್ಕಾರ ನೀಡಲಾಯಿತು.

ನಾರ್ವೆಯ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಮಾಡುತ್ತಿರುವ ಪ್ರೊ. ಜಾನ್ ಹ್ಯಾಕನ್ ಶುಲ್ಟ್ಜ್ (Jon-Hakon Schultz) ಅವರಿಗೆ 'ಒಂದು ಜಗತ್ತು ಒಂದು ಕುಟುಂಬ ಮಾನವೀಯ ಪುರಸ್ಕಾರ' ಘೋಷಿಸಲಾಯಿತು. ಹ್ಯಾಕನ್ ಅವರ ಅನುಪಸ್ಥಿತಿಯಲ್ಲಿ (ಹಸ್ಮೂನ್ ಹಾನಿಸ್ ಫಾರ್ಸ್ಟಾ) ಅವರು ಪ್ರಶಸ್ತಿ ಸ್ವೀಕರಿಸಿದರು. ಸ್ವೀಡನ್ ಪ್ರತಿನಿಧಿ ಡಾ ವಿಕ್ಕಿ ವೊರ್ವೌಲ್ಕಿಸ್ (Dr Vicky Vourvoulkis), ನಾರ್ವೆ ಪ್ರತಿನಿಧಿಗಳಾದ ಲೊಟೆ ಮೌರಿಟ್ಜೆನ್ ಪ್ರಸ್ಥಸ್ (Lotte Mauritzen Presthus), ಬೊಡಿಲ್ ಮಾರ್ಟಿಜನ್ (Bodil Mauritzen) ತಮ್ಮ ಅನುಭವಗಳನ್ನು ಹಂಚಿಕೊಂಡರು.

ಭಾರತಕ್ಕೆ ಸತ್ಯ ಸಾಯಿ ಗ್ರಾಮವೇ ಮಾದರಿ

ಎಲ್ಲ ಭಾರತೀಯರೂ ಸತ್ಯ ಸಾಯಿ ಗ್ರಾಮಕ್ಕೆ ಬರಬೇಕು. ಇದು ನಿಜವಾದ ಭಾರತ. ಇಲ್ಲಿ ನಡೆಯುತ್ತಿರುವ ಚಟುವಟಿಕೆಗಳನ್ನು ಗಮನಿಸಿ, ತಮ್ಮ ಸ್ಥಳಗಳಲ್ಲಿಯೂ ಈ ಮಾದರಿಯನ್ನು ಆರಂಭಿಸಬೇಕು ಎಂದು ಜೆಎನ್‌ಯು ಪ್ರೊಫೆಸರ್, ಖ್ಯಾತ ವಿಜ್ಞಾನಿ ಡಾ ಆನಂದ್ ರಂಗನಾಥನ್ ಹೇಳಿದರು. ಸದ್ಗುರು ಶ್ರೀ ಮಧುಸೂದನ ಸಾಯಿ ಅವರಿಂದ 'ಒಂದು ಜಗತ್ತು ಒಂದು ಕುಟುಂಬ ಜಾಗತಿಕ ನಾಯಕತ್ವ ಪುರಸ್ಕಾರ' ಸ್ವೀಕರಿಸಿ ಅವರು ಮಾತನಾಡಿದರು.

ಈ ಸುದ್ದಿಯನ್ನೂ ಓದಿ | Sadguru Sri Madhusudan Sai: ಸತ್ಯ ಸಾಯಿ ವೈದ್ಯಕೀಯ ಕಾಲೇಜು ಕೇವಲ ಭಾರತಕ್ಕೆ ಮಾತ್ರವಲ್ಲ ಇಡೀ ಜಗತ್ತಿಗೆ ಕೊಡುಗೆ: ಶ್ರೀ ಮಧುಸೂದನ ಸಾಯಿ

ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ಈ ಸಾಧನೆ ನನಗೆ ಹೆಮ್ಮೆ ಎನಿಸುತ್ತಿದೆ. ನಾವು ಇದನ್ನು ಏಕೆ ಪುನರಾವರ್ತಿಸಲು ಸಾಧ್ಯವಿಲ್ಲ ಎಂಬುದು ನನಗೆ ಈ ಕ್ಷಣಕ್ಕೆ ವಿವರಿಸಲು ಸಾಧ್ಯವಾಗದ ವಿಷಯ. ಭಾರತೀಯ ನಾಗರಿಕತೆಯ ವಿಶಿಷ್ಟ ಲಕ್ಷಣವಾದ ಸತ್ಯಂ ಶಿವಂ ಸುಂದರಂ ಇಲ್ಲಿ ಕಾಣಿಸುತ್ತಿದೆ. ಸತ್ಯ ಸಾಯಿ ಗ್ರಾಮದ ಕ್ಯಾಂಪಸ್ ನೋಡಿದರೆ ಭಾರತೀಯ ಸನಾತನ ಜೀವನ ವಿಧಾನಕ್ಕೆ ಇದು ಅತ್ಯಗತ್ಯ. ಭಾರತದಾದ್ಯಂತ ಇಂತಹ ಸಾವಿರ ಕ್ಯಾಂಪಸ್‌ಗಳು ಬೆಳೆಯಬೇಕಿವೆ ಎಂಬುದು ಅರಿವಾಗುತ್ತದೆ ಎಂದರು.