Chikkaballapur News: ಎಸ್‌ಐಆರ್ ಕಾರ್ಯ ಪಾರದರ್ಶಕವಾಗಿರಲಿ; ಅರ್ಹರ ಹೆಸರು ಸೇರ್ಪಡೆ, ಅನರ್ಹರ ಪರಿಶೀಲನೆಗೆ ಕಟ್ಟುನಿಟ್ಟಿನ ಕ್ರಮ: ಜಿಲ್ಲಾಧಿಕಾರಿ ಜಿ.ಪ್ರಭು
ಎಸ್‌ಐಆರ್-2026ರ ವೇಳಾಪಟ್ಟಿ ಹಾಗೂ ಪರಿಷ್ಕರಣೆ ಪ್ರಕ್ರಿಯೆಯ ವಿವಿಧ ಹಂತಗಳ ಕುರಿತು ಮಾಹಿತಿ ನೀಡಿದರು. ಸ್ವೀಕೃತ ಗಣತಿದಾರರ ನಮೂನೆಗಳ ಗಣಕೀಕರಣದ ಪ್ರಗತಿ ಪರಿಶೀಲಿಸುವ ಜತೆಗೆ ಗೈರು ಹಾಜರು, ಸ್ಥಳಾಂತರಗೊಂಡವರು, ಮೃತರು, ದ್ವಿಪ್ರತಿ ಸೇರಿದಂತೆ ವಿವಿಧ ಪ್ರಕರಣಗಳನ್ನು ನಿಯಮಾನುಸಾರ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು
-
ಚಿಕ್ಕಬಳ್ಳಾಪುರ: ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್)-2026ರಡಿ ನಡೆಯುತ್ತಿರುವ ಕರಡು ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ಸಂಪೂರ್ಣ ನಿಖರತೆ ಹಾಗೂ ಪಾರದರ್ಶಕತೆ ಯಿಂದ ಕೈಗೊಳ್ಳಬೇಕು. ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಯಾವುದೇ ಲೋಪಗಳಿಗೆ ಅವಕಾಶ ನೀಡಬಾರದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಜಿ.ಪ್ರಭು ಅಧಿಕಾರಿಗಳಿಗೆ ಸೂಚಿಸಿದರು.
ನಗರದಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಎಸ್‌ಐಆರ್-2026ರ ವೇಳಾಪಟ್ಟಿ ಹಾಗೂ ಪರಿಷ್ಕರಣೆ ಪ್ರಕ್ರಿಯೆಯ ವಿವಿಧ ಹಂತಗಳ ಕುರಿತು ಮಾಹಿತಿ ನೀಡಿದರು. ಸ್ವೀಕೃತ ಗಣತಿದಾರರ ನಮೂನೆಗಳ ಗಣಕೀಕರಣದ ಪ್ರಗತಿ ಪರಿಶೀಲಿಸುವ ಜತೆಗೆ ಗೈರುಹಾಜರು, ಸ್ಥಳಾಂತರಗೊಂಡವರು, ಮೃತರು, ದ್ವಿಪ್ರತಿ ಸೇರಿದಂತೆ ವಿವಿಧ ಪ್ರಕರಣಗಳನ್ನು ನಿಯಮಾನುಸಾರ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಇದನ್ನೂ ಓದಿ: Chikkamagaluru Eid Milad controversy: ಚಿಕ್ಕಮಗಳೂರಿನಲ್ಲಿ ಪಾಕ್ ಪರ ಹಾಡು ಬಳಸಿ ವಿಡಿಯೊ ಪೋಸ್ಟ್; ಎಫ್‌ಐಆರ್ ದಾಖಲು
18,146 ನಮೂನೆ ಸ್ವೀಕೃತಿ
ಜೂನ್ 16ರಿಂದ ಜುಲೈ 21ರವರೆಗೆ ಜಿಲ್ಲೆಯಲ್ಲಿ ಒಟ್ಟು 18,146 ನಮೂನೆಗಳು ಸ್ವೀಕೃತವಾಗಿವೆ. ನಮೂನೆ–6ರಡಿ 6,170, ನಮೂನೆ–7ರಡಿ 817 ಹಾಗೂ ನಮೂನೆ–8ರಡಿ 11,159 ಅರ್ಜಿಗಳು ಬಂದಿವೆ ಎಂದು ಜಿ.ಪ್ರಭು ತಿಳಿಸಿದರು.
ಕರಡು ಮತದಾರರ ಪಟ್ಟಿಯಲ್ಲಿರುವ ಮತದಾರರು ಹಾಗೂ ಸೇವಾ ಮತದಾರರ ವಿವರಗಳನ್ನು ಸಭೆಯಲ್ಲಿ ಮಂಡಿಸಲಾಯಿತು. ಅಸಂಗತತೆ ಹಾಗೂ ಹೊಂದಾಣಿಕೆಯಾಗದ ಪ್ರಕರಣಗಳ ಪರಿಶೀಲನೆಗೆ ಅಗತ್ಯವಿರುವ ದಾಖಲೆಗಳ ಬಗ್ಗೆಯೂ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಮಾಹಿತಿ ನೀಡಲಾಯಿತು.
68 ಹೊಸ ಮತಗಟ್ಟೆ ರಚನೆ
ಮತಗಟ್ಟೆಗಳ ತರ್ಕಬದ್ಧ ಮರುಹೊಂದಾಣಿಕೆ ಪ್ರಕ್ರಿಯೆಯಡಿ ಜಿಲ್ಲೆಯಲ್ಲಿ 68 ಹೊಸ ಮತಗಟ್ಟೆ ಗಳನ್ನು ರಚಿಸಲಾಗಿದೆ. ಜತೆಗೆ 7 ಹೊಸ ಮತಗಟ್ಟೆ ಮಟ್ಟದ ಅಧಿಕಾರಿಗಳನ್ನು ನೇಮಕ ಮಾಡುವ ಪ್ರಕ್ರಿಯೆಯ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು.
“ಮತದಾರರ ಪಟ್ಟಿ ಪರಿಷ್ಕರಣೆ ಪ್ರಜಾಪ್ರಭುತ್ವದ ಪ್ರಮುಖ ಪ್ರಕ್ರಿಯೆಯಾಗಿದೆ. ಪ್ರತಿಯೊಬ್ಬ ಅರ್ಹ ಮತದಾರರ ಹೆಸರು ಪಟ್ಟಿಯಲ್ಲಿ ಸೇರ್ಪಡೆಯಾಗುವಂತೆ ಹಾಗೂ ಅನರ್ಹ ಹೆಸರುಗಳನ್ನು ನಿಯಮಾನುಸಾರ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಸಹಕಾರ ನೀಡುವ ಮೂಲಕ ಪರಿಷ್ಕರಣೆ ಕಾರ್ಯವನ್ನು ನ್ಯಾಯಸಮ್ಮತ ಹಾಗೂ ಪಾರದರ್ಶಕವಾಗಿ ಪೂರ್ಣಗೊಳಿಸಲು ಕೈಜೋಡಿಸಬೇಕು,” ಎಂದು ಜಿ.ಪ್ರಭು ಮನವಿ ಮಾಡಿದರು.