ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

CHIMUL: ಹಾಲಿನ ಖರೀದಿ ದರ ಹೆಚ್ಚಳಕ್ಕೆ ಆಗ್ರಹಿಸಿ ಜಿಲ್ಲಾಡಳಿತ ಭವನದ ಎದುರು ಸಾವಿರಾರು ಹಾಲು ಉತ್ಪಾದಕರ ಪ್ರತಿಭಟನೆ

ಜಿಲ್ಲೆಯಲ್ಲಿ ಬಹುತೇಕ ಸಣ್ಣ ರೈತರಿದ್ದು, ಹೆಚ್ಚಿನವರು ನೀರಾವರಿ ಕೊರತೆಯಿಂದ ಹೈನುಗಾರಿಕೆಯನ್ನೇ ಪ್ರಮುಖ ಆದಾಯದ ಮೂಲವನ್ನಾಗಿ ಮಾಡಿಕೊಂಡಿದ್ದಾರೆ. ಸುಮಾರು 38 ಸಾವಿರ ಹಾಲು ಉತ್ಪಾದ ಕರು ಚಿಮುಲ್‌ಗೆ ಹಾಲು ಪೂರೈಸುತ್ತಿದ್ದು, ಪ್ರತಿದಿನ ಸುಮಾರು 5.47 ಲಕ್ಷ ಕೆ.ಜಿ. ಹಾಲು ಸಂಗ್ರಹವಾಗು ತ್ತಿದೆ

ಪ್ರತಿ ಲೀಟರ್‌ಗೆ 10 ರೂಪಾಯಿ ಹೆಚ್ಚಳಕ್ಕೆ ಒಕ್ಕೊರಲ ಆಗ್ರಹ

ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಹಾಲು ಉತ್ಪಾದಕರು ಮತ್ತು ಮನವಿ ಸ್ವೀಕರಿಸುತ್ತಿರುವ ಜಿಲ್ಲಾಧಿಕಾರಿಗಳ ಚಿತ್ರ. -

Profile
Ashok Nayak Aug 24, 2026 9:01 PM

ಚಿಕ್ಕಬಳ್ಳಾಪುರ: ಗೋವು ಸಾಕಣೆ ಮತ್ತು ಹಾಲಿನ ಉತ್ಪಾದನಾ ವೆಚ್ಚ ದಿನದಿಂದ ದಿನಕ್ಕೆ ಹೆಚ್ಚು ತ್ತಿರುವ ಹಿನ್ನೆಲೆಯಲ್ಲಿ ಹಾಲು ಖರೀದಿ ದರವನ್ನು ಪ್ರತಿ ಲೀಟರ್‌ಗೆ 10 ರೂಪಾಯಿ ಹೆಚ್ಚಿಸಬೇಕು, ಸರ್ಕಾರ ನೀಡುವ ಪ್ರೋತ್ಸಾಹಧನವನ್ನು ನೇರವಾಗಿ ಹಾಲು ಉತ್ಪಾದಕರ ಖಾತೆಗೆ ಜಮೆ ಮಾಡ ಬೇಕೆಂದು ಆಗ್ರಹಿಸಿ ಜಿಲ್ಲೆಯ ಸಾವಿರಾರು ಹಾಲು ಉತ್ಪಾದಕರು ಸೋಮವಾರ ಜಿಲ್ಲಾಡಳಿತ ಭವನದ ಎದುರು ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ನಗರ ಹೊರವಲಯ ಜಿಲ್ಲಾಡಳಿತ ಭವನದ ಎದುರು ನಡೆಸಿದ ಬೃಹತ್ ಪ್ರತಿಭಟನೆಯಲ್ಲಿ ಹಾಲು ಉತ್ಪಾದಕರ ಪರವಾಗಿ ಮಾತನಾಡಿದ ಬಾಗೇಪಲ್ಲಿ ಮುಖಂಡ ಮಂಜುನಾಥ ರೆಡ್ಡಿ, ಜಿಲ್ಲೆಯಲ್ಲಿ ಬಹುತೇಕ ಸಣ್ಣ ರೈತರಿದ್ದು, ಹೆಚ್ಚಿನವರು ನೀರಾವರಿ ಕೊರತೆಯಿಂದ ಹೈನುಗಾರಿಕೆಯನ್ನೇ ಪ್ರಮುಖ ಆದಾಯದ ಮೂಲವನ್ನಾಗಿ ಮಾಡಿಕೊಂಡಿದ್ದಾರೆ. ಸುಮಾರು 38 ಸಾವಿರ ಹಾಲು ಉತ್ಪಾದಕರು ಚಿಮುಲ್‌ಗೆ ಹಾಲು ಪೂರೈಸುತ್ತಿದ್ದು, ಪ್ರತಿದಿನ ಸುಮಾರು 5.47 ಲಕ್ಷ ಕೆ.ಜಿ. ಹಾಲು ಸಂಗ್ರಹವಾಗುತ್ತಿದೆ ಎಂದರು.

ಮಳೆ ಕೊರತೆ, ಕೃಷಿ ಉತ್ಪಾದನಾ ವೆಚ್ಚದ ಹೆಚ್ಚಳ ಹಾಗೂ ತರಕಾರಿ ಬೆಳೆಗಳ ಬೆಲೆ ಏರಿಳಿತದಿಂದ ರೈತರಿಗೆ ಸ್ಥಿರ ಆದಾಯ ದೊರೆಯುತ್ತಿಲ್ಲ. ಹೀಗಾಗಿ ಪ್ರತಿದಿನ ಆದಾಯ ನೀಡುವ ಹೈನುಗಾರಿಕೆಯೂ ರೈತರಿಗೆ ಹೊರೆಯಾಗಿ ಪರಿಣಮಿಸಿದೆ. ಪ್ರಸ್ತುತ ಖರೀದಿ ದರದಿಂದಾಗಿ ರೈತರಿಗೆ ನಷ್ಟವಾಗುತ್ತಿದೆ, ಕೂಲಿಯೂ ಹುಟ್ಟುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ: CHIMUL: ರಾಸು ವಿಮಾ ಯೋಜನೆಯಡಿ 6 ಫಲಾನುಭವಿಗಳಿಗೆ 3.75 ಲಕ್ಷ ಪರಿಹಾರ ವಿತರಣೆ ಮಾಡಿದ ಕೆಎಂಎಫ್ ಪ್ರತಿನಿಧಿ ಭರಣಿ ವೆಂಕಟೇಶ್

ಜಾನುವಾರುಗಳ ಮೇವು, ಪಶು ಆಹಾರ, ಔಷಧಿ, ಚಿಕಿತ್ಸೆ, ನೀರು ಹಾಗೂ ಕೊಟ್ಟಿಗೆ ನಿರ್ವಹಣೆಯ ವೆಚ್ಚ ಹೆಚ್ಚಾಗಿದ್ದು, ರೈತರ ಶ್ರಮಕ್ಕೆ ಯಾವುದೇ ಮೌಲ್ಯ ಸಿಗುತ್ತಿಲ್ಲ. ಪ್ರಸ್ತುತ ಪ್ರತಿ ಲೀಟರ್‌ಗೆ 35.40 ರೂಪಾಯಿ ನೀಡಲಾಗುತ್ತಿದ್ದು, ಉತ್ಪಾದನಾ ವೆಚ್ಚಕ್ಕೆ ಹೋಲಿಸಿದರೆ ಈ ದರ ಸಮರ್ಪಕವಾಗಿಲ್ಲ. ಆದ್ದರಿಂದ ತಕ್ಷಣ 10 ರೂಪಾಯಿ ಹೆಚ್ಚಳ ಮಾಡುವ ಜತೆಗೆ ಹೆಚ್ಚುವರಿ ಪ್ರೋತ್ಸಾಹಧನವನ್ನು ನೇರವಾಗಿ ರೈತರ ಖಾತೆಗೆ ನೀಡಬೇಕು ಎಂದು ಒತ್ತಾಯಿಸಿದರು.

ಹೈನುಗಾರಿಕೆಯನ್ನು ಅವಲಂಬಿಸಿರುವ ಸಾವಿರಾರು ಕುಟುಂಬಗಳ ಜೀವನೋಪಾಯ ರಕ್ಷಿಸಲು ಸರ್ಕಾರ ಕೂಡಲೇ ಸೂಕ್ತ ಆರ್ಥಿಕ ನೆರವು ಘೋಷಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

24cbpmdm _chimu

ಬೇಡಿಕೆಗಳು:
1.ಹಾಲಿನ ಖರೀದಿ ದರವನ್ನು ಪ್ರತಿ ಲೀಟರ್‌ಗೆ 10 ಹೆಚ್ಚಿಸಲು ತುರ್ತುಕ್ರಮ ಕೈಗೊಳ್ಳಬೇಕು.
2.ಪ್ರಸ್ತುತ ಸರಕಾರ ನೀಡುತ್ತಿರುವ ಪ್ರತಿ ಲೀಟರ್‌ಗೆ 5 ರೂ ಪ್ರೋತ್ಸಾಹ ಧನವನ್ನು ರೂ 7ಕ್ಕೆ ಹೆಚ್ಚಿಸಲು ಕೋರುತ್ತಿದ್ದೇವೆ.
3.ಖಾಸಗಿ ಪಶು ಆಹಾರದ ಬೆಲೆಗಳು ನಿರಂತರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ಕೈಗೆಟುಕುವ ದರದಲ್ಲಿ ನಂದಿನಿ ಪಶುಆಹಾರ ದೊರೆಯುವಂತೆ ಸರಕಾರದಿಂದ ಮತ್ತು ಕೆಎಂಎಫ್ ವತಿಯಿಂದ ಪಶು ಆಹಾರ ಮಾರಾಟಕ್ಕೆ ವಿಶೇಷ ಸಹಯಧನ/ಸಬ್ಸಿಡಿ ನೀಡಬೇಕು.
4. ಬರಪೀಡಿತ ಜಿಲ್ಲೆಯಾಗಿರುವ ಕಾರಣ ಮೇವು ಬ್ಯಾಂಕ್ ಜತೆಗೆ ಗೋಶಾಲೆ ತೆರೆಯಬೇಕು.
5. ಹಸಿಮೇವು ಬೆಳೆಯುವ ರೈತರಿಗೆ ಬೇಕಾದ ಅನುಕೂಲ ಮಾಡಿಕೊಡಬೇಕು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಜಿ.ಪ್ರಭು ಅವರು ಹಾಲು ಉತ್ಪಾದಕರ ಮನವಿ ಸ್ವೀಕರಿಸಿ ಸರ್ಕಾರಕ್ಕೆ ಸಲ್ಲಿಸುವುದಾಗಿ ಭರವಸೆ ನೀಡಿದರು. ಬೇಸಿಗೆ ಸಂದರ್ಭದಲ್ಲಿ ಚಿಮೂಲ್ ವತಿಯಿಂದ ರೈತರಿಗೆ ಸಾಧ್ಯವಿರುವ ಎಲ್ಲ ಸೌಲಭ್ಯ ಒದಗಿಸಲು ಜಿಲ್ಲಾಡಳಿತ ಸಹಕಾರ ನೀಡಲಿದೆ ಎಂದರು. ಬಳಿಕ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

ಪ್ರತಿಭಟನೆಯಲ್ಲಿ ಚಿಮುಲ್ ಅಧ್ಯಕ್ಷ ಮಂಜುನಾಥರೆಡ್ಡಿ, ನಿರ್ದೇಶಕರಾದ ಕೆ.ವಿ.ನಾಗರಾಜ್, ಕೆಂ.ಎಂ.ಎಫ್ ಪ್ರತಿನಿಧಿ ಭರಣಿ ವೆಂಕಟೇಶ್, ಸರಕಾರಿ ನಾಮನಿರ್ದೇಶಿತ ಸದಸ್ಯ ಕಾಕಲಚಿಂತೆ ರಾಜಣ್ಣ,  ಕಾಂತರಾಜ್ ಸೇರಿ ಸಾವಿರಾರು ಹಾಲು ಉತ್ಪಾದಕರು ಇದ್ದರು.