ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Chikkaballapur News: ಬಸವೇಶ್ವರರ ನೇತೃತ್ವದ ವಚನ ಚಳವಳಿ ಕಾಯಕ ತತ್ವದ ಮಹತ್ವವನ್ನು ಜಗತ್ತಿಗೆ ಸಾರಿದ ಮಹಾ ಚಳವಳಿಯಾಗಿದೆ : ಜಿಲ್ಲಾಧಿಕಾರಿ ಜಿ ಪ್ರಭು

ಇಂದಿನ ವಿದ್ಯಾರ್ಥಿ ಯುವ ಪೀಳಿಗೆ ಶರಣರ ಸಾರ್ವತ್ರಿಕ ಮತ್ತು ಸಾರ್ವಕಾಲಿಕ ಮೌಲ್ಯಗಳನ್ನು ಅಧ್ಯಯನ ಮಾಡಬೇಕು. ಆ ಮೂಲಕ ಸಾಮಾಜಿಕ ಬದಲಾವಣೆಗೆ ಕಾರಣವಾಗಬೇಕು. ಕಂದಾಚಾರ, ಮೌಢ್ಯ, ಮೇಲು ಕೀಳುಗಳಂತಹ ಅನಿಷ್ಟಗಳನ್ನು ತೊಡೆದು ಹಾಕಲು ವಚನಗಳನ್ನು ಪೂರಕವಾಗಿ ಮತ್ತು ಪ್ರೇರಕವಾಗಿ ಬಳಸಿಕೊಳ್ಳಬೇಕು

ವಚನ ಚಳವಳಿ ಕಾಯಕ ತತ್ವದ ಮಹತ್ವವನ್ನು ಜಗತ್ತಿಗೆ ಸಾರಿದ ಮಹಾ ಚಳವಳಿ

-

Profile
Ashok Nayak Apr 20, 2026 9:02 PM

ಚಿಕ್ಕಬಳ್ಳಾಪುರ: ಬಸವಣ್ಣನವರ ನೇತೃತ್ವದಲ್ಲಿ 900 ವರ್ಷಗಳ ಹಿಂದೆ ನಡೆದ ಶರಣ ಚಳುವಳಿ ಕಾಯಕ ತತ್ವದ ಮಹತ್ವವನ್ನು ಜಗತ್ತಿಗೆ ಸಾರಿದ ಮಹಾ ಚಳವಳಿಯಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಪ್ರಭು ತಿಳಿಸಿದರು.

ಚಿಕ್ಕಬಳ್ಳಾಪುರ ನಗರದ ಬಸವನಗುಡಿ ಮುಂಭಾಗದಲ್ಲಿ ಜಿಲ್ಲಾಡಳಿತ ಭವನ ಜಿಲ್ಲಾ ಪಂಚಾಯತ್ ವೀರಶೈವ ಸಮಾಜ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವಗುರು, ಸಾಂಸ್ಕೃತಿಕ ನಾಯಕ ಬಸವಣ್ಣನವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬಸವಣ್ಣ ರಾಜ್ಯಾಡಳಿತ ಮತ್ತು ಅಧಿಕಾರ ಒಂದೆಡೆಯೇ ಕೇಂದ್ರೀಕರಣವಾಗಿದ್ದ ಕಾಲಘಟ್ಟ ದಲ್ಲಿಯೇ ಸಮಾಜದ ಆರೋಗ್ಯಪೂರ್ಣ ಚಿಂತನೆಗೆ ಬಿಜ್ಜಳ ಆಸ್ಥಾನದಲ್ಲಿಯೇ ಅವಕಾಶ ಮಾಡಿ ಕೊಟ್ಟರು. ಅನ್ನ ಅಕ್ಷರ ವಸತಿ ಈ ತ್ರಿವಿಧ ದಾಸೋಹಕ್ಕೆ ಜೀವ ತುಂಬಿದವರು ಶರಣರು. ಲಿಂಗ ಸಮಾನತೆ, ಜಾತಿ ರಹಿತ ಸಮಾಜ ನಿರ್ಮಾಣಕ್ಕೆ ದಿಟ್ಟ ಹೆಜ್ಜೆಯಿಟ್ಟವರು ಬಸವಣ್ಣ ಆಗಿದ್ದಾರೆ ಎಂದರು.

ಇದನ್ನೂ ಓದಿ: Chikkaballapur News: ಆಲೂಗಡ್ಡೆಗೆ ಬೆಂಬಲ ಬೆಲೆ, ಸರಕಾರಿ ಕೋಲ್ಡ್ ಸ್ಟೋರೇಜ್ ಸ್ಥಾಪನೆಗೆ ಆಗ್ರಹಿಸಿ ಪ್ರತಿಭಟನೆ

ಇಂದು ಸಂವಿಧಾನದ ಬೆಳಕಲ್ಲಿ ನ್ಯಾಯಾಡಳಿತ, ಪೊಲೀಸ್ ವ್ಯವಸ್ಥೆ, ಶಾಸಕಾಂಗ ಏನೆಲ್ಲಾ ಇದೆ. ಆದರೆ 900 ವರ್ಷಗಳ ಹಿಂದೆ ಸಂವಿಧಾನದ ಆಶಯಗಳಿಗೆ ಜೀವ ತುಂಬಿದವರು. ಕಾಯಕ ತತ್ವದ ಮೂಲಕ ಇಷ್ಟದೈವದ ಆಚರಣೆಗೆ ಮೇಲ್ಪಂಕ್ತಿ ಹಾಕಿಕೊಟ್ಟವರು ನಡೆ ನುಡಿ ಏಕವಾಗಿ ಹೊಂದಿದ್ದ ವಿಶ್ವ ಗುರು ಜಗಜ್ಯೋತಿ ಬಸವಣ್ಣ ಆಗಿದ್ದಾರೆ ಎಂದರು.

12ನೇ ಶತಮಾನದಲ್ಲಿ ನಡೆದ ವಚನ ಚಳುವಳಿ ಒಂದು ವಿಶಿಷ್ಟ ಕ್ರಾಂತಿಯನ್ನೇ ಹುಟ್ಟು ಹಾಕಿದ್ದು, ಶರಣರ ಜೀವನಾನುಭವದಿಂದ ಬಂದ ವಚನಗಳು ಸಮಾಜಕ್ಕೆ ಸಮಾನತೆಯ ಸಂದೇಶವನ್ನು ಅಂಕುಡೊಂಕುಗಳ ತಿದ್ದುವಿಕೆಗೆ ಕಾರಣವಾದವು.

ಅಣ್ಣ ಬಸವಣ್ಣ ಅವರ ನೇತೃತ್ವದಲ್ಲಿ ಅಲ್ಲಮಪ್ರಭುಗಳ ಅಧ್ಯಕ್ಷತೆಯಲ್ಲಿ ಸೇರುತ್ತಿದ್ದ ಅನುಭವ ಮಂಟಪವೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ಚುನಾಯಿತ ಜನಪ್ರತಿನಿಧಿಗಳಿಂದ ಕೂಡರುವ ಆಧುನಿಕ ಸಂಸತ್ತಿಗೆ ಮಾದರಿಯಾಗಿದೆ. ಅನುಭವ ಮಂಟಪದಲ್ಲಿನ ಚಿಂತನ ಮಂಥನಗಳು ದೊಡ್ಡ ಜ್ಞಾನವನ್ನೇ ಜಗತ್ತಿಗೆ ಪಸರಿಸಿವೆ ಎಂದರು.

1k

ಇಂದಿನ ವಿದ್ಯಾರ್ಥಿ ಯುವ ಪೀಳಿಗೆ ಶರಣರ ಸಾರ್ವತ್ರಿಕ ಮತ್ತು ಸಾರ್ವಕಾಲಿಕ ಮೌಲ್ಯಗಳನ್ನು ಅಧ್ಯಯನ ಮಾಡಬೇಕು. ಆ ಮೂಲಕ ಸಾಮಾಜಿಕ ಬದಲಾವಣೆಗೆ ಕಾರಣವಾಗಬೇಕು. ಕಂದಾಚಾರ, ಮೌಢ್ಯ, ಮೇಲು ಕೀಳುಗಳಂತಹ ಅನಿಷ್ಟಗಳನ್ನು ತೊಡೆದು ಹಾಕಲು ವಚನಗಳನ್ನು ಪೂರಕವಾಗಿ ಮತ್ತು ಪ್ರೇರಕವಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಅಣ್ಣ ಬಸವಣ್ಣನವರ ಕಣ್ಣಳತೆಯಲ್ಲಿ ನಡೆಯುತ್ತಿದ್ದ ಅನುಭವ ಮಂಟಪವೇ ಸಂಸತ್ತಿನ ಸ್ಥಾನ ಮಾನ ಹೊಂದಿತ್ತು.ಅಲ್ಲಿ ನಡೆಯುತ್ತಿದ್ದ ಚಿಂತನ ಮಂಥನಗಳು ಸಮಸಮಾಜದ ಜೀವನಾಡಿ ಯಾಗಿತ್ತು ಎಂದರು.

ಜನಸಾಮಾನ್ಯರಿಗೆ ಅರ್ಥವಾಗದ ಸಂಸ್ಕೃತ ಭಾಷೆಯನ್ನು ತೊರೆದು ಜನರನ್ನು ತಲುಪಲು ಆಡುಭಾಷೆಯನ್ನು ಮಾಧ್ಯಮವಾಗಿ ಬಳಸಿಕೊಂಡರು. ಅದರಲ್ಲಿಯೇ ವಚನಗಳನ್ನು ರಚಿಸಿದರು. ಇದೇ ವಿಶೇಷಗುಣದ ಕಾರಣವಾಗಿ ಜಗತ್ತಿನ ಅನೇಕ ಭಾಷೆಗಳಿಗೆ ವಚನಗಳು ಅನುವಾದವಾಗಿವೆ. ಈ ಆಚರಣೆಯಿಂದ ನಾವು ಏನನ್ನು ಕಲಿಯಬೇಕು ಎಂದರೆ ಮಹನೀಯರ ಆದರ್ಶಗಳನ್ನು, ಅವರು ಬೋಧಿಸಿದ ಸತ್ಯ ಸಂದೇಶಗಳನ್ನು ಅರಿತು ಬದುಕಲ್ಲಿ ಅಳವಡಿಸಿಕೊಳ್ಳುವುದೇ ಆಗಿದೆ. ಇದನ್ನು ಮನಗಂಡೇ ಸರಕಾರ 31 ಮಹನೀಯರ ಜಯಂತಿಗಳಿಗೆ ಚಾಲನೆ ನೀಡಿದೆ ಎಂದು ತಿಳಿಸಿದರು.

2kk

ಶಿಕ್ಷಣ ಒಬ್ಬ ವ್ಯಕ್ತಿಯನ್ನು ಗಟ್ಟಿ ಮಾಡಬಹುದು. ಆದರೆ ಸಂಸ್ಕಾರವು ವ್ಯಕ್ತಿತ್ವಕ್ಕೆ ಕಾರಣವಾಗಲಿದೆ. ಆದರೂ ಶಿಕ್ಷಣವಿಲ್ಲದ ಸಂಸ್ಕಾರ ಶೂನ್ಯವಾಗಲಿದೆ.ದಾಸೋಹಕ್ಕೆ ತ್ಯಾಗದ ಗುಣವಿದೆ. ಬಸವಣ್ಣ ಸೇರಿ ಶಿವಕುಮಾರ ಸ್ವಾಮೀಜಿ ತನಕ ಅನ್ನದಾನ ಶ್ರೇಷ್ಠ ದಾನ ಎಂದು ಕಲಿಸಿದರು. ಸಿದ್ದಗಂಗಾ ಮಠದ ದಾಸೋಹ ಶಿಕ್ಷಣ ವಸತಿ ಜಗತ್ತಿಗೆ ಮಾದರಿಯಾಗಿದೆ. ಶಿಕ್ಷಣದ ಜೊತೆ ಹೊರಗಿನ ಜ್ಞಾನ ವನ್ನು ನಮ್ಮ ಮಕ್ಕಳಿಗೆ ನೀಡಬೇಕು.ಜೀವನದ ಸಮಸ್ಯೆಗಳಿಗೆ ಸ್ಪಂದಿಸುವ ಗುಣ ಬೆಳೆಸಬೇಕು. ಗುರು ಪರಂಪರೆಯ ದಾರಿ ದೀಪವೇ ಶರಣ ಸಂಸ್ಕೃತಿಯಾಗಿದೆ ಎಂದು ಒತ್ತಿ ಹೇಳಿದರು.

ಪತ್ರಕರ್ತ ಸುನಿಲ್ ಆರಾಧ್ಯ ಅವರು ಬಸವಣ್ಣನವರ ಜೀವನ ಚರಿತ್ರೆಯ ವಿವಿಧ ಮಜಲುಗಳ ಬಗ್ಗೆ ಹಾಗೂ ಅವರ ವಿಚಾರಧಾರೆಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳು ಮತ್ತು ಇತರ ಗಣ್ಯರು ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿದರು.

ಇದೇ ಸಂದರ್ಭದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ ಮಾಡಿದ ಸಮುದಾಯದ ಸಾಧಕರನ್ನು, ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ಪ್ರತಿಭಾ ವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು. ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ಮಹಲಿಂಗಯ್ಯ ಮಠದ್ ಮತ್ತು ತಂಡ ವಚನ ಗೀತ ಗಾಯನ ಕಾರ್ಯಕ್ರಮದಲ್ಲಿ ಸೇರಿದ್ದ ಸಭಿಕರ ಗಮನ ಸೆಳೆಯಿತು.

ಈ ಸಂದರ್ಭದಲ್ಲಿ ಜಿ.ಪಂ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ವೈ ನವೀನ್ ಭಟ್, ಉಪ ವಿಭಾಗಾಧಿಕಾರಿ ಡಿ ಹೆಚ್ ಅಶ್ವಿನ್, ಸಮುದಾಯದ ಮುಖಂಡರಾದ ಮಹೇಶ್ ಬಸಾಪುರ, ಗಿರೀಶ್ ಸೇರಿದಂತೆ ಬಸವಣ್ಣನವರ ಅಭಿಮಾನಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಸಾರ್ವಜನಿಕರು ಹಾಜರಿದ್ದರು.