Chikkaballapur News: ಮೊಬೈಲ್ ಮೋಹಕ್ಕೆ ಒಳಗಾದವರಿಗೆ ಖಂಡಿತವಾಗಿ ಭವಿಷ್ಯವಿಲ್ಲ: ಪ್ರೊ.ಡಾ.ಶಂಕರ್ ಅಭಿಮತ
ಪದವಿ ಶಿಕ್ಷಣ ಎಂಬುದು ಕೇವಲ ಡಿಗ್ರಿ ಮಾತ್ರವಲ್ಲ ಬದಲಿಗೆ ಬದುಕು ಕಟ್ಟಿಕೊಳ್ಳಲು ಇಡುವ ಮಹತ್ವದ ಹೆಜ್ಜೆಯಾಗಿದೆ. ಒಂದು ದಿನವೂ ಗೈರುಹಾಜರಾಗದೆ ತರಗತಿಗಳಿಗೆ ಬರಬೇಕು. ಮನವಿಟ್ಟು ಉಪನ್ಯಾಸ ಕೇಳಬೇಕು. ಯಾರೋ ಕೊಡುವ ನೋಟ್ಸ್ ಮೇಲೆ ಅವಲಂಬಿತ ರಾಗಬೇಡಿ.
ಮೊಬೈಲ್ ಮೋಹಕ್ಕೆ ಒಳಗಾದವರಿಗೆ ಖಂಡಿತವಾಗಿ ಭವಿಷ್ಯವಿಲ್ಲ ಎಂದು ವಿಶ್ವವಿದ್ಯಾಲಯ ಕಾಲೇಜು ಶಿಕ್ಷಣ ವಿಭಾಗದ ಪ್ರೊ. ಡಾ.ಶಂಕರ್ ಅಭಿಪ್ರಾಯಪಟ್ಟರು. -
ಚಿಕ್ಕಬಳ್ಳಾಪುರ: ಸಾಧನೆಯ ಹಂಬಲವಿರುವ ಯಾವುದೇ ವಿದ್ಯಾರ್ಥಿಗಳನ್ನು ಗಮನಿಸಿದರೆ ಅವರು ಗ್ರಂಥಾಲಯವನ್ನು ಪ್ರೀತಿಸುತ್ತಾರೆ.ಕಠಿಣ ಪರಿಶ್ರಮದೊಂದಿಗೆ ಗುರುಗಳ ಮಾರ್ಗ ದರ್ಶನದಲ್ಲಿ ಮುಂದುವರೆಯುತ್ತಾರೆ.ಅದರೆ ಮೊಬೈಲ್ ಮೋಹಕ್ಕೆ ಒಳಗಾದವರಿಗೆ ಖಂಡಿತವಾಗಿ ಭವಿಷ್ಯವಿಲ್ಲ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಶಿಕ್ಷಣ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಶಂಕರ್ ಅಭಿಪ್ರಾಯಪಟ್ಟರು.
ನಗರದ ಸರಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನಲ್ಲಿ ಏರ್ಪಡಿಸಿದ್ದ 2025-26ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್‌ಎಸ್‌ಎಸ್,ಎನ್‌ಸಿಸಿ, ಸ್ಕೌಟ್ಸ್, ಅಂಡ್ ಗೈಡ್ಸ್ ಹಾಗೂ ರೆಡ್ಕಾçಸ್ ಚಟವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಪದವಿ ಶಿಕ್ಷಣ ಎಂಬುದು ಕೇವಲ ಡಿಗ್ರಿ ಮಾತ್ರವಲ್ಲ ಬದಲಿಗೆ ಬದುಕು ಕಟ್ಟಿಕೊಳ್ಳಲು ಇಡುವ ಮಹತ್ವದ ಹೆಜ್ಜೆಯಾಗಿದೆ. ಒಂದು ದಿನವೂ ಗೈರು ಹಾಜರಾಗದೆ ತರಗತಿಗಳಿಗೆ ಬರಬೇಕು.ಮನವಿಟ್ಟು ಉಪನ್ಯಾಸ ಕೇಳಬೇಕು. ಯಾರೋ ಕೊಡುವ ನೋಟ್ಸ್ ಮೇಲೆ ಅವಲಂಬಿತರಾಗಬೇಡಿ.ನೋಟ್ಸ್ ನಂಬಿ ಪರೀಕ್ಷೆ ಬರೆವವರು ಸಾಮಾನ್ಯ ವಿದ್ಯಾರ್ಥಿ ಗಳಾಗುತ್ತಾರೆ. ಪಠ್ಯವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ ನಿಮ್ಮ ನೋಟ್ಸ್ ನೀವೇ ಮಾಡಿಕೊಂಡಾಗ ಮಾತ್ರ ಸಾಧಕರಾಗಲು ಸಾಧ್ಯ. ಎಂದು ಕಿವಿ ಮಾತು ಹೇಳಿದರು.
ವಿಶ್ವವಿದ್ಯಾಲಯ, ಪದವಿ ಕಾಲೇಜುಗಳ ಬೋಧಕರು ವಿದ್ಯಾರ್ಥಿಗಳಿಗೆ ಓದಿ ಎಂದು ಹೇಳುತ್ತಾರೆ ವಿನಃ ಹೇಗೆ ಓದಬೇಕು ಎಂದು ಹೇಳುವುದಿಲ್ಲ. ಹೇಳಿ ಕೊಡುವುದಿಲ್ಲ. ಯಾವುದೇ ವಿಷಯವಿರಲಿ ಸಂಪೂರ್ಣ ಮನನ ಆಗುವವರೆಗೆ ಓದಬೇಕು. ನಿರಂತರವಾಗಿ ಗ್ರಂಥಾ ಲಯದ ಸ್ನೇಹ ಬೆಳೆಸಬೇಕು. ಮೂಡುವ ಅನುಮಾನವನ್ನು ಅಲ್ಲಿಯೇ ಚಿವುಟಿ ಹಾಕಬೇಕು. ಆಗ ಮಾತ್ರ ವಿದ್ಯಾರ್ಥಿಗಳು ಓದಿನಲ್ಲಿ ಆಸಕ್ತಿ ಹೊಂದುತ್ತಾರೆ. ಅವರ ನೋಟ್ಸ್ ಅವರೇ ತಯಾರಿ ಮಾಡಿಕೊಳ್ಳುತ್ತಾರೆ. ಕಂಠಪಾಠದ ಮಾದರಿ ಕಾಲೇಜು ವಿದ್ಯಾರ್ಥಿಗಳಿಗೆ ಒಪ್ಪುವು ದಿಲ್ಲ ಎಂದು ಹೇಳಿದರು.
ಮಹಿಳಾ ಕಾಲೇಜಿನ ಹೆಣ್ಣು ಮಕ್ಕಳು ಓದನ್ನು ಬಿಟ್ಟು ಬೇರೆ ಸಲ್ಲದ ವಿಚಾರಗಳ ಕಡೆ ಗಮನ ನೀಡಬಾರದು. ನಿಮ್ಮ ಗುರಿ ಸ್ಪಷ್ಟವಾಗಿರಲಿ. ಬಿ.ಎ.,ಬಿಕಾಂ,ಬಿಎಸ್ಸಿ, ಬಿಬಿಎ, ಬಿಸಿಎ ಯವುದೂ ಕನಿಷ್ಟವಲ್ಲ. ಎಲ್ಲಾ ಪದವಿಗಳಿಗೂ ಅದರದೇ ಆದ ತೂಕವಿದೆ.ನೀವು ಆರಿಸಿ ಕೊಂಡ ವಿಷಯಕ್ಕೆ ಗೌರವ ಪ್ರೀತಿ ತೋರಬೇಕು. ನಿಮ್ಮ ಐಚ್ಛಿಕ ವಿಷಯವೇ ನಿಮಗೆ ದೇವರಾಗಲಿದೆ. 21ನೇ ಶತಮಾನದಲ್ಲಿಯೂ ಸಮಾಜ ವಿಜ್ಞಾನಕ್ಕೆ ಬೆಲೆಯಿದೆ. ಉತ್ತಮ ಓದು ಒಳ್ಳೆಯ ಉತ್ತಮ ಅಂಕಗಳಿಗೆ ದಾರಿಯಾಗಲಿದೆ ಎಂದರು.
ಪದವಿಯ ನಂತರ ಬಿಇಡಿ, ಎಂಕಾಂ,ಎಂಎ, ಎಂಎಸ್‌ಸಿ ಎಂಬಿಎ ಹೀಗೆ ಯಾವುದೇ ಸ್ನಾತಕೋತ್ತರ ಪದವಿ ಮಾಡಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಮೂಲಕ ಉತ್ತಮ ಭವಿಷ್ಯ ಕಟ್ಟಿಕೊಳ್ಳಿ..ಸರಕಾರಿ ಕಾಲೇಜಿನಲ್ಲಿ ಬಿಇಡಿ ಸೀಟು ಪಡೆಯಲು ನೀವು ಗಳಿಸಿದ ಅತಿಹೆಚ್ಚು ಅಂಕಗಳೇ ಮಾನದಂಡವಾಗಲಿದೆ ಎಂದರು.
ಮೊಬೈಲ್ ಬಳಕೆ ಕಡಿಮೆ ಮಾಡಿ,ಅದು ನಿಮ್ಮ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತದೆ. ಮೊಬೈಲ್ ಮೋಹಕ್ಕೆ ಒಳಗಾದವರಿಗೆ ಭವಿಷ್ಯವಿಲ್ಲ. ನಮ್ಮ ಕಾಲದಲ್ಲಿ ಮೊಬೈಲ್ ಇರಲಿಲ್ಲ. ಇದ್ದಿದ್ದರೆ ಇಂದಿನ ಯುವಜನಾಂಗದಂತೆ ಹಾಳಾಗುತ್ತಿದ್ದೆವೇನೋ? ಸೋಷಿ ಯಲ್ ಮೀಡಿಯಾದಲ್ಲಿ ವಿದ್ಯಾರ್ಥಿಗಳಿಗೆ ಏನೂ ಕೆಲಸವಿಲ್ಲ. ಶಿಕ್ಷಕರು ಅಪ್ಡೇಟ್ ಆಗದಿದ್ದರೆ ವಿದ್ಯಾರ್ಥಿಗಳಿಂದ ತಿರಸ್ಕೃತರಾಗುತ್ತಾರೆ ಎಂದು ಎಚ್ಚರಿಕೆ ನೀಡಿದರು.
ಅಮೆರಿಕದ ಮಿಚಿಗನ್ ವಿಶ್ವವಿದ್ಯಾನಿಲಯ ಒಂದು ಸಮೀಕ್ಷೆ ನಡೆಸಿದೆ. ಬದುಕಿನಲ್ಲಿ ಯಶಸ್ವಿಯಾದ ಮಂದಿಯನ್ನು ಕೂಡಿಸಿಕೊಂಡು ಅವರಿಗೆ ಒಂದು ಪ್ರಶ್ನೆ ಕೇಳುತ್ತಾರೆ. ಯಶಸ್ಸಿನ ತುತ್ತತುದಿಯಲ್ಲಿರುವ ನೀವು ಬೆಳಿಗ್ಗೆ ಎಷ್ಟು ಗಂಟೆಗೆ ಏಳುತ್ತೀರಾ? ಎಂದು ಕೇಳಿದರು. ಎಲ್ಲರದ್ದೂ ಒಂದೇ ಉತ್ತರ ಸೂರ್ಯೋದಯಕ್ಕೆ ಮೊದಲೇ ನಾವು ಹಾಸಿಗೆ ಯಿಂದ ಏಳುತ್ತೇವೆ ಎಂಬುದು ಎಲ್ಲರ ಉತ್ತರವಾಗಿತ್ತು. ಹೀಗಾಗಿ ಯಶಸ್ಸಿನ ಹಿಂದೆ ನಮ್ಮ ಹವ್ಯಾಸಗಳೂ ಪ್ರಧಾನ ಪಾತ್ರ ವಹಿಸುತ್ತವೆ ಎಂದರು.
ಹೆಣ್ಣು ಮಕ್ಕಳ ಕಲಿಕೆಗೆ ಇಂದು ವಿಶೇಷ ಮಹತ್ವವಿದೆ. ನಿಮ್ಮ ಜ್ಞಾನ ಮತ್ತು ಕಲಿಕೆ ಮನೆಗೆ ಬೆಳಕಾಗಲಿದೆ. ಅಂದಕಾರ ಅಜ್ಞಾನ ದೂರವಾಗಲಿದೆ. ಉತ್ತಮ ಅವಕಾಶಗಳು ನಿಮ್ಮನ್ನು ಅರಸಿ ಬರಲಿವೆ. ಹೀಗಾಗಿ ಕ್ಷಣಿಕ ಸುಖಕ್ಕೆ ಮನಸೋಲದೆ ಶಾಶ್ವತವಾದ ಬದಕಿನತ್ತ ದಿಟ್ಟವಾದ ಹೆಜ್ಜೆಗಳನ್ನು ಹಾಕಿ. ನಿಮಗೆಲ್ಲಾ ಒಳಿತಾಗಲಿ ಎಂದು ಶುಭ ಹಾರೈಸಿದರು.
ಸರಕಾರಿ ಪದವಿ ಕಾಲೇಜಿನ ಪ್ರಾಧ್ಯಾಪಕ ಡಾ.ವೆಂಕಟೇಶ್ ಮಾತನಾಡಿ, ವಿದ್ಯಾರ್ಥಿಗಳು ಪದವಿ ಹಂತದಲ್ಲಿಯೇ ನಿರ್ಧಿಷ್ಟ ಗುರಿಯೊಂದಿಗೆ ಸಾಗಬೇಕು.ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಈಗಿನಿಂದಲೇ ಪ್ರಯತ್ನಪಟ್ಟರೆ ಉತ್ತಮ ಬದುಕು ನಿಮ್ಮದಾಗುತ್ತದೆ. ಉತ್ತರ ಭಾರತದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಸಕ್ಸಸ್ ರೇಟ್ ಹೆಚ್ಚು. ದಕ್ಷಿಣ ಭಾರತದಲ್ಲಿ ಕಡಿಮೆ ಯಾಕೆ ಎಂದು ನೋಡಿದರೆ ನಮಗೆ ಸೌಕರ್ಯಗಳು ಹೆಚ್ಚು. ಅದಕ್ಕೆ ಓದುವುದಿಲ್ಲ. ವಿದ್ಯಾರ್ಥಿನಿಯರು ಪ್ರಯತ್ನ ಪಟ್ಟರೆ ಏನು ಬೇಕಾದರೂ ಆಗಬಹುದು ಎಂಬುದಕ್ಕೆ ಸಾಕಷ್ಟು ಮಾದರಿಗಳಿವೆ. ಏನೇ ಆಗಲಿ ನಿಮ್ಮ ಮನಸ್ಸಿನಂತಾಗಲಿ ಎಂದರು.
ಪ್ರಾಂಶುಪಾಲ ಜಿ.ಡಿ.ಚಂದ್ರಯ್ಯ ಮಾತನಾಡಿ, ಮಹಿಳಾ ಕಾಲೇಜು ಜಿಲ್ಲೆಯ ಮುಕುಟಮಣಿ ಯಂತಿದೆ. ಒಂದು ಸಾವಿರ ವಿದ್ಯಾರ್ಥಿಗಳಿರುವ ಬೃಹತ್ ಕಾಲೇಜು ಎಂಬ ಹಿರಿಮೆಗೆ ಒಳ ಗಾಗಲಿದೆ. ವಿದ್ಯಾರ್ಥಿಗಳಲ್ಲಿ ಓದಿನ ಜತೆಗೆ ಶಿಸ್ತು, ಸಮಯ ಪಾಲನಾ ಗುಣ ಹೆಚ್ಚಲಿ, ನಿಮ್ಮ ಕನಸು ನನಸಾಗಲಿ, ನಿಮ್ಮೆಲ್ಲಾ ಸಾಧನೆಗೆ ಕಾಲೇಜು ಸದಾ ನೆರಳಾಗಿ ಇರಲಿದೆ. ಕಾರ್ಯ ಕ್ರಮದ ಯಶಸ್ಸಿಗೆ ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ನೀಡಿದ ಡೊಳ್ಳು ಕುಣಿತದ ಪ್ರದರ್ಶನ, ಎನ್.ಸಿ.ಸಿ ವಿದ್ಯಾರ್ಥೀಗಳ ಮನಮೋಹಕ ಪಥಸಂಚಲನ, ವೇದಿಕೆ ಕಾರ್ಯಕ್ರಮದ ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಮನ ಮುಟ್ಟಿದವು.
ಕಾರ್ಯಕ್ರಮದಲ್ಲಿ ಕ್ರೀಡೆ,ಸಾಂಸ್ಕೃತಿಕ,ಎನ್‌ಸಿಸಿ,ಎನ್‌ಎಸ್‌ಎಸ್, ಶಿಕ್ಷಣ ಇತ್ಯಾದಿ ಚಟ ವಟಿಕೆಗಳಲ್ಲಿ ಸಾಧನೆ ತೋರಿದ ಸಾಧಕ ವಿದ್ಯಾರ್ಥಿಗಳನ್ನು ಹಾರ ತುರಾಯಿ ಪಾರಿತೋಷಕ ನೀಡಿ ಸನ್ಮಾನಿಸಲಾಯಿತು.
ಈ ವೇಳೆ, ಸಾಂಸ್ಕೃತಿಕ ಸಮಿತಿ ಸಂಚಾಲಕ ಮೋಹನ್‌ಕುಮಾರ್, ದೈಹಿಕ ಶಿಕ್ಷಣ ನಿರ್ದೇಶಕಿ ಶಾರದಮ್ಮ, ಸಮಾಜಶಾಸ್ತ್ರದ ಪ್ರಾಧ್ಯಾಪಕ ಡಾ.ರಾಮಕೃಷ್ಣಪ್ಪ, ರಾಜ್ಯಶಾಸ್ತ್ರ ಪ್ರಾಧ್ಯಾಪಕಿ ಪದ್ಮಕುಮಾರಿ, ಅರ್ಥಶಾಸ್ತ್ರದ ಪ್ರಾಧ್ಯಾಪಕ ಹರೀಶ್, ವಾಣಿಜ್ಯ ಶಾಸ್ತ್ರದ ಪ್ರಾಧ್ಯಾಪಕರಾದ ಅಶ್ವತ್ಥ್ನಾರಾಯಣ, ಡಾ.ನವೀನ್‌ಕುಮಾರ್, ಗ್ರಂಥಪಾಲಕ ಸಂತೋಷ್ ಕುಮಾರ್, ಮೇನೇಜರ್ ಸುಬ್ರಹ್ಮಣ್ಯ, ಅತಿಥಿ ಉಪನ್ಯಾಸಕ ಮುನಿರಾಜು ಎಂ ಅರಿಕೆರೆ ಸೇರಿದಂತೆ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿ ಇದ್ದರು.