Tuberculosis Detection Campaign: ಕ್ಷಯರೋಗದ ಲಕ್ಷಣಗಳಿದ್ದವರು ನಿರ್ಲಕ್ಷ್ಯ ಮಾಡದೆ ತಕ್ಷಣ ಪರೀಕ್ಷಿಸಿಕೊಳ್ಳಿ: ಡಾ.ವೈ. ನವೀನ್ ಭಟ್
ಆರೋಗ್ಯ ಸಿಬ್ಬಂದಿ ಮನೆಮನೆಗೆ ಭೇಟಿ ನೀಡಿ ಕ್ಷಯರೋಗದ ಲಕ್ಷಣಗಳಿರುವವರ ಕಫವನ್ನು ನ್ಯೂಕ್ಲಿಯಿಕ್ ಆಸಿಡ್ ಆಂಪ್ಲಿಫಿಕೇಶನ್ ಟೆಸ್ಟ್ (NAAT) ಪರೀಕ್ಷೆಗೆ ಒಳಪಡಿಸುತ್ತಿದ್ದಾರೆ. ಲಕ್ಷಣ ಗಳಿಲ್ಲದಿದ್ದರೂ ಅಪಾಯದ ಸಾಧ್ಯತೆ ಹೆಚ್ಚಿರುವ 60 ವರ್ಷ ಮೇಲ್ಪಟ್ಟವರು, ಮಧುಮೇಹಿಗಳು, ಎಚ್ಐವಿ ಸೋಂಕಿತರು ಹಾಗೂ ಅಪೌಷ್ಟಿಕತೆಯಿಂದ ಬಳಲುತ್ತಿರುವವರನ್ನು ಎದೆ ಕ್ಷ-ಕಿರಣ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.
-
ಚಿಕ್ಕಬಳ್ಳಾಪುರ: ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಅಕ್ಟೋಬರ್ 27ರಿಂದ ನವೆಂಬರ್ 4ರವರೆಗೆ ನಡೆದ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ (Tuberculosis Detection Campaign)ದಲ್ಲಿ 1,82,425 ದುರ್ಬಲ ವರ್ಗದ ಜನರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಈ ಪೈಕಿ 1,688 ಶಂಕಿತರ ಕಫ ಪರೀಕ್ಷೆಯಲ್ಲಿ ನಾಲ್ಕು ಹಾಗೂ 432 ಜನರ ಎದೆ ಕ್ಷ-ಕಿರಣ ಪರೀಕ್ಷೆಯಲ್ಲಿ ಒಂದು ಸೇರಿದಂತೆ ಒಟ್ಟು ಐದು ಕ್ಷಯರೋಗ ಪ್ರಕರಣಗಳು ದೃಢಪಟ್ಟಿವೆ. ಎಲ್ಲರಿಗೂ ಚಿಕಿತ್ಸೆ ಆರಂಭಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ವೈ.ನವೀನ್ ಭಟ್ ತಿಳಿಸಿದರು.
ಆರೋಗ್ಯ ಸಿಬ್ಬಂದಿ ಮನೆಮನೆಗೆ ಭೇಟಿ ನೀಡಿ ಕ್ಷಯರೋಗದ ಲಕ್ಷಣಗಳಿರುವವರ ಕಫವನ್ನು ನ್ಯೂಕ್ಲಿಯಿಕ್ ಆಸಿಡ್ ಆಂಪ್ಲಿಫಿಕೇಶನ್ ಟೆಸ್ಟ್ (NAAT) ಪರೀಕ್ಷೆಗೆ ಒಳಪಡಿಸುತ್ತಿದ್ದಾರೆ. ಲಕ್ಷಣ ಗಳಿಲ್ಲದಿದ್ದರೂ ಅಪಾಯದ ಸಾಧ್ಯತೆ ಹೆಚ್ಚಿರುವ 60 ವರ್ಷ ಮೇಲ್ಪಟ್ಟವರು, ಮಧುಮೇಹಿಗಳು, ಎಚ್ಐವಿ ಸೋಂಕಿತರು ಹಾಗೂ ಅಪೌಷ್ಟಿಕತೆಯಿಂದ ಬಳಲುತ್ತಿರುವವರನ್ನು ಎದೆ ಕ್ಷ-ಕಿರಣ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಕ್ಷಯರೋಗದ ಲಕ್ಷಣಗಳು ಕಂಡುಬಂದವರು ನಿರ್ಲಕ್ಷ್ಯ ಮಾಡದೆ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ತಾಲ್ಲೂಕು ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿ ಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಗಾಳಿಯ ಮೂಲಕ ಹರಡುವ ಸೋಂಕು: ಮೈಕೋಬ್ಯಾಕ್ಟೀರಿಯಂ ಟ್ಯೂಬರ್ಕ್ಯುಲೋಸಿಸ್ ಎಂಬ ರೋಗಾಣುವಿನಿಂದ ಉಂಟಾಗುವ ಕ್ಷಯರೋಗವು ಗಾಳಿಯ ಮೂಲಕ ಹರಡುತ್ತದೆ. ಚಿಕಿತ್ಸೆ ಪಡೆಯದ ಒಬ್ಬ ರೋಗಿಯಿಂದ ವರ್ಷಕ್ಕೆ ಸುಮಾರು 10 ಜನರಿಗೆ ಸೋಂಕು ಹರಡುವ ಸಾಧ್ಯತೆ ಯಿದೆ. ರೋಗಿಗಳಿಗೆ ನೇರ ನಿಗಾ ಚಿಕಿತ್ಸಾ ಪದ್ಧತಿ (ಡಾಟ್ಸ್) ಮೂಲಕ ಚಿಕಿತ್ಸೆ ನೀಡಲಾಗುತ್ತಿದ್ದು, ಸೋಂಕಿತರ ಸಂಪರ್ಕದಲ್ಲಿರುವವರಿಗೆ ತಡೆಗಟ್ಟುವ ಚಿಕಿತ್ಸೆ (ಟಿಪಿಟಿ) ಒದಗಿಸಲಾಗುತ್ತಿದೆ.
ಜಿಲ್ಲೆಯಲ್ಲಿ 2023ರಲ್ಲಿ 1,612, 2024ರಲ್ಲಿ 1,774 ಹಾಗೂ 2025ರಲ್ಲಿ 1,573 ಕ್ಷಯರೋಗ ಪ್ರಕರಣ ಗಳು ಪತ್ತೆಯಾಗಿದ್ದು, ಮೂರು ವರ್ಷಗಳಲ್ಲಿ ಒಟ್ಟು 4,959 ಪ್ರಕರಣಗಳು ವರದಿಯಾಗಿವೆ. ಚಿಕಿತ್ಸೆಯ ಯಶಸ್ಸಿನ ಪ್ರಮಾಣ ಶೇ.86ರಿಂದ ಶೇ.91ಕ್ಕೆ ಏರಿಕೆಯಾಗಿದೆ. ಮರಣ ಪ್ರಮಾಣ ಶೇ.8ರಿಂದ ಶೇ.6ಕ್ಕೆ ಇಳಿಕೆಯಾಗಿದೆ. ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಚಿಂತಾಮಣಿ ಹಾಗೂ ಗೌರಿಬಿದನೂರು ತಾಲ್ಲೂಕು ಗಳಲ್ಲಿ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿವೆ ಎಂದು ಮಾಹಿತಿ ನೀಡಿದರು.
ಕ್ಷಯರೋಗದ ಲಕ್ಷಣಗಳೇನು?
ಎರಡು ವಾರಕ್ಕಿಂತ ಹೆಚ್ಚು ಕಾಲ ಕೆಮ್ಮು ಅಥವಾ ಜ್ವರ, ತೂಕ ಇಳಿಕೆಯಾಗುವುದು, ಹಸಿವಾಗ ದಿರುವುದು, ಕಫದಲ್ಲಿ ರಕ್ತ ಕಾಣಿಸಿಕೊಳ್ಳುವುದು, ಎದೆನೋವು, ಉಸಿರಾಟದ ತೊಂದರೆ, ರಾತ್ರಿ ವೇಳೆ ಬೆವರುವಿಕೆ, ಆಯಾಸ ಹಾಗೂ ಕುತ್ತಿಗೆಯಲ್ಲಿ ಗಂಟು ಕಾಣಿಸಿಕೊಳ್ಳುವುದು ಕ್ಷಯರೋಗದ ಪ್ರಮುಖ ಲಕ್ಷಣಗಳಾಗಿವೆ.
ಇಂತಹ ಲಕ್ಷಣಗಳು ಕಂಡುಬಂದಲ್ಲಿ ತಡಮಾಡದೆ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ತಾಲ್ಲೂಕು ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾ ಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.