ತಂತ್ರಜ್ಞಾನ ಬಳಸಿ ಆದರೆ ವಿವೇಕವನ್ನು ಕಳೆದುಕೊಳ್ಳಬೇಡಿ: ಉಪನ್ಯಾಸಕ ಮುನಿರಾಜು ಎಂ ಅರಿಕೆರೆ
ಇಂದು ಯುವಕರ ಮುಂದೆ ಉದ್ಯೋಗದ ವಿಚಾರದಲ್ಲಿ ಸಾಕಷ್ಟು ಸವಾಲುಗಳಿರುವಂತೆ ಸ್ಪರ್ಧೆ ಹೆಚ್ಚಾಗಿದೆ. ಹೊಸ ತಂತ್ರಜ್ಞಾನಗಳು ಬರುತ್ತಿರುವಂತೆ ಕೆಲಸಗಳ ಸ್ವರೂಪವೂ ಬದಲಾಗುತ್ತಿದೆ. ಆದ್ದರಿಂದ ಕೇವಲ ಪದವಿ ಸಾಕಾಗುವುದಿಲ್ಲ.ಅದಕ್ಕೆ ತಕ್ಕ ಕೌಶಲ್ಯ ಬೇಕು. ಕಲಿಯುವ ಮನಸ್ಸು ಬೇಕು. ಹೊಸದನ್ನು ಸ್ವೀಕರಿಸುವ ಸಾಮರ್ಥ್ಯ ಬೇಕು.ಕೌಶಲ್ಯಕ್ಕಿಂತಲೂ ಮುಖ್ಯವಾದುದು ನಿಷ್ಠೆ ಯಾಗಿದೆ
ನಗರದ ಸರಕಾರಿ ಪದವಿ ಕಾಲೇಜಿನಲ್ಲಿ ನಡೆದ 'ಅನನ್ಯ ಗಾನ ಕಲರವ' ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮುನಿರಾಜು ಎಂ ಅರಿಕೆರೆ ಮಾತನಾಡಿದರು. -
ಚಿಕ್ಕಬಳ್ಳಾಪುರ: ಕಾಲೇಜು ವಿದ್ಯಾರ್ಥಿಗಳು ಬೇಕಾದ ಪದವಿ ಪಡೆಯಿರಿ ಆದರೆ ಅದೇ ಪದವಿ ಯೊಳಗೆ ಸಿಲುಕಿಕೊಳ್ಳಬೇಡಿ. ನಿಮ್ಮ ಒಳತಿಗಾಗಿ ತಂತ್ರಜ್ಞಾನ ಬಳಸಿ ಆದರೆ ಎಂದಿಗೂ ವಿವೇಕ ಕಳೆದುಕೊಳ್ಳಬೇಡಿ. ದೊಡ್ಡ ಕನಸು ಕಾಣಿರಿ, ಆದರೆ ಅಪ್ಪಿತಪ್ಪಿಯೂ ಮನುಷ್ಯರನ್ನು ಸಣ್ಣವರಾಗಿ ಕಾಣಬೇಡಿ. ಸಾಧನೆಯ ಮೂಲಕ ಉನ್ನತ ಸ್ಥಾನಕ್ಕೇರಿರಿ ಆದರೆ ನಿಮ್ಮ ಬೇರುಗಳನ್ನು ಮರೆಯದೆ ಕಾಪಿಟ್ಟುಕೊಳ್ಳಿ ಎಂದು ಉಪನ್ಯಾಸಕ ಮುನಿರಾಜು ಎಂ ಅರಿಕೆರೆ ತಿಳಿಸಿದರು.
ನಗರದ ಸರ್ಕಾರಿ ಪದವಿ ಕಾಲೇಜಿನಲ್ಲಿ ಅನನ್ಯ ಕಲಾ ರಂಗ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ವತಿಯಿಂದ ಆಯೋಜಿಸಿದ್ದ 'ಅನನ್ಯ ಗಾನ ಕಲರವ' ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಇದನ್ನೂ ಓದಿ: Chikkaballapur News: ಬರದ ಹೊಡೆತಕ್ಕೆ ರೈತ ಸಂಘ ಆಕ್ರೋಶ; ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಲು ಎಕೆಆರ್‌ಎಸ್ ಆಗ್ರಹ
ಇಂದು ಯುವಕರ ಮುಂದೆ ಉದ್ಯೋಗದ ವಿಚಾರದಲ್ಲಿ ಸಾಕಷ್ಟು ಸವಾಲುಗಳಿರುವಂತೆ ಸ್ಪರ್ಧೆ ಹೆಚ್ಚಾಗಿದೆ. ಹೊಸ ತಂತ್ರಜ್ಞಾನಗಳು ಬರುತ್ತಿರುವಂತೆ ಕೆಲಸಗಳ ಸ್ವರೂಪವೂ ಬದಲಾಗುತ್ತಿದೆ. ಆದ್ದರಿಂದ ಕೇವಲ ಪದವಿ ಸಾಕಾಗುವುದಿಲ್ಲ. ಅದಕ್ಕೆ ತಕ್ಕ ಕೌಶಲ್ಯ ಬೇಕು. ಕಲಿಯುವ ಮನಸ್ಸು ಬೇಕು. ಹೊಸದನ್ನು ಸ್ವೀಕರಿಸುವ ಸಾಮರ್ಥ್ಯ ಬೇಕು. ಕೌಶಲ್ಯಕ್ಕಿಂತಲೂ ಮುಖ್ಯವಾದುದು ನಿಷ್ಠೆ ಯಾಗಿದೆ ಎಂದರು.
ನೀವು ವೈದ್ಯರಾಗಬಹುದು, ವಕೀಲರಾಗಬಹುದು, ಶಿಕ್ಷಕರಾಗಬಹುದು, ಪತ್ರಕರ್ತರಾಗಬಹುದು, ವಿಜ್ಞಾನಿಯಾಗಬಹುದು, ಉದ್ಯಮಿಯಾಗಬಹುದು, ರೈತನ ಮಗನಾಗಬಹುದು, ಸರ್ಕಾರಿ ನೌಕರ ರಾಗಬಹುದು. ಯಾವ ವೃತ್ತಿಯಾದರೂ ಪರವಾಗಿಲ್ಲ. ಕೆಲಸದಲ್ಲಿ ದೊಡ್ಡದು ಚಿಕ್ಕದು ಇರಲ್ಲ; ಕೆಲಸ ಮಾಡುವ ಮನಸ್ಸು ದೊಡ್ಡದಿರಬೇಕು ಅಷ್ಟೇ ಎಂದರು.
ಪದವಿಯನ್ನು ಪಡೆಯಿರಿ ಆದರೆ ಪದವಿಯೊಳಗೆ ಸಿಲುಕಿಕೊಳ್ಳಬೇಡಿ. ತಂತ್ರಜ್ಞಾನ ಬಳಸಿ ಆದರೆ ವಿವೇಕವನ್ನು ಕಳೆದುಕೊಳ್ಳಬೇಡಿ. ದೊಡ್ಡ ಕನಸು ಕಾಣಿರಿ, ಆದರೆ ಮನುಷ್ಯರನ್ನು ಸಣ್ಣವರಾಗಿ ಕಾಣಬೇಡಿ.ಉನ್ನತ ಸ್ಥಾನಕ್ಕೇರಿ ಆದರೆ ನಿಮ್ಮ ಬೇರುಗಳನ್ನು ಮರೆಯಬೇಡಿ. ನಿಮ್ಮ ಕೈಯಲ್ಲಿ ಪುಸ್ತಕವಿರಲಿ, ಮನಸ್ಸಿನಲ್ಲಿ ಕನಸಿರಲಿ, ಬುದ್ಧಿಯಲ್ಲಿ ಪ್ರಶ್ನೆಯಿರಲಿ, ಹೃದಯದಲ್ಲಿ ಮಾನವೀಯತೆ ಯಿರಲಿ. ಆಗ ನಿಮ್ಮ ಯಶಸ್ಸು ಕೇವಲ ನಿಮ್ಮ ಯಶಸ್ಸಾಗುವುದಿಲ್ಲ; ಅದು ನಿಮ್ಮ ಕುಟುಂಬದ, ನಿಮ್ಮ ಕಾಲೇಜಿನ ಮತ್ತು ನಿಮ್ಮ ಸಮಾಜದ ಯಶಸ್ಸಾಗುತ್ತದೆ ಎಂದು ಕರೆ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕ ಡಿ.ಎಂ.ರವಿಕುಮಾರ್ ಮಾತನಾಡಿ ಸಂಸ್ಕೃತಿಯ ಮೂಲಧಾತುಗಳಾದ ಕೆರೆ,ಕುಂಟೆ, ಬಾವಿ, ಗೋವು, ಗೋಕಟ್ಟೆ,ಸುತ್ತಣ ಪರಿಸರವನ್ನು ಹಿರಿಯರ ಮಾರ್ಗದರ್ಶನದಲ್ಲಿ ಕಾಪಾಡುವ ಹೊಣೆಗಾರಿಕೆ ಯುವಜನಾಂಗದ ಹೆಗಲ ಮೇಲಿದೆ.ಜ್ಞಾನ ವಿಜ್ಞಾನ ತಂತ್ರಜ್ಞಾನದಲ್ಲಿ ನಾವೆಷ್ಟೇ ಬೆಳೆದಿದ್ದರೂ ನೆಲಮೂಲದ ಬದುಕನ್ನು ದಾಟಿ ಹೋಗಲಾಗಿಲ್ಲ. ಹೀಗಾಗಿಯೇ ಭಾರತ ವಿವಿಧತೆಯಲ್ಲಿ ಏಕತೆಯನ್ನು ಉಳಿಸಿಕೊಂಡು ಬೆಳೆಸಿ ಕೊಂಡು ಸಾಗಿದೆ. ಅನನ್ಯ ಕಲಾ ರಂಗ ಸಂಸ್ಥೆಯು ಈ ದಿಸೆಯಲ್ಲಿ ಶಾಲಾ ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳಲ್ಲಿ ಹುದುಗಿರುವ ಸುಪ್ತ ಪ್ರತಿಭೆಯನ್ನು ಹೊರತೆಗೆಯುವ ಕೆಲಸವನ್ನು ಮಾಡುತ್ತಿರು ವುದು ಸಂತೋಷದ ವಿಚಾರವಾಗಿದೆ ಎಂದರು.
ಹಿರಿಯ ವರದಿಗಾರ ಕಾಗತಿ ನಾಗರಾಜಪ್ಪ ಮಾತನಾಡಿ ಇಂದಿನ ಶಾಲಾ ಕಾಲೇಜು ವಿದ್ಯಾರ್ಥಿಗಳು ಸಮಾಜ ಮತ್ತು ವರ್ತಮಾನದ ವಿದ್ಯಮಾನಗಳ ಬಗ್ಗೆ ಸೂಕ್ಷ್ಮತೆ ಹಾಗೂ ಕಾಳಜಿಯನ್ನು ಕಳೆದು ಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು.
ಸಂಗೀತ ಮತ್ತು ಸಾಹಿತ್ಯ ಮನುಷ್ಯನಲ್ಲಿ ಉತ್ತಮ ಗುಣಗಳನ್ನು ಬೆಳೆಸುವ ಜೊತೆಗೆ ಸಮಾಜದ ಬಗ್ಗೆ ಸೂಕ್ಷ್ಮತೆ ಬೆಳೆಸುತ್ತವೆ. ಬಡವರು, ಕಾರ್ಮಿಕರು ಹಾಗೂ ತುಳಿತಕ್ಕೊಳಗಾದ ಸಮುದಾಯಗಳ ಬಗ್ಗೆ ಯುವಜನತೆ ಕಾಳಜಿ ಹೊಂದಬೇಕು. ಸಮಾಜದಲ್ಲಿನ ಭ್ರಷ್ಟಾಚಾರದ ವಿರುದ್ಧ ವಿದ್ಯಾರ್ಥಿಗಳು ಧ್ವನಿ ಎತ್ತುವ ಮನೋಭಾವ ಬೆಳೆಸಿಕೊಳ್ಳಬೇಕು. ಪರಿಶ್ರಮವಿಲ್ಲದೆ ಯಾವುದೇ ಕ್ಷೇತ್ರದಲ್ಲೂ ಯಶಸ್ಸು ಸಾಧ್ಯವಿಲ್ಲ ಎಂದು ಹೇಳಿದರು.
ಸೆಮಿಸ್ಟರ್ ಪದ್ಧತಿ ವಿದ್ಯಾರ್ಥಿಗಳ ಮೇಲೆ ಶೈಕ್ಷಣಿಕ ಒತ್ತಡ ಹೆಚ್ಚಿಸುತ್ತಿದೆ. ಇದರ ನಡುವೆಯೂ ಪಠ್ಯೇತರ ಚಟುವಟಿಕೆಗಳಿಗೆ ಸಮಯ ಮೀಸಲಿಟ್ಟು, ತಮ್ಮ ಪ್ರತಿಭೆ ಹಾಗೂ ಸೃಜನಶೀಲತೆಯನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಂಗೀತ, ಸಾಹಿತ್ಯ ಸೇರಿದಂತೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು.ಎಲ್ಲಕ್ಕೂ ಮೇಲಾಗಿ ಜವಾಬ್ದಾರಿಯುತ ನಾಗರೀಕರಾಗುವುದು ಬಹಳ ಮುಖ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ವಸುಂಧರಾ ಮಾತನಾಡಿ, ವಿದ್ಯಾರ್ಥಿಗಳಲ್ಲಿ ರುವ ಪ್ರತಿಭೆಯನ್ನು ಅನಾವರಣಗೊಳಿಸಲು ಇಂತಹ ವೇದಿಕೆಗಳು ಅಗತ್ಯ. ಕಾಲಕಾಲಕ್ಕೆ ಸಂಘಸAಸ್ಥೆಗಳು , ಸರಕಾರದ ನೆರವಿನ ಮೂಲಕ ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಅವಕಾಶ ಕಲ್ಪಿಸುವುದು ಉನ್ನತ ಶಿಕ್ಷಣದ ಅವಿಭಾಜ್ಯ ಭಾಗವಾಗಿದೆ ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ ವೇದಿಕೆ ಸಂಚಾಲಕಿ ಪ್ರಭಾ ಮಾತನಾಡಿ, ಎಲ್ಲರ ಪರಿಶ್ರಮದಿಂದ ಕಾರ್ಯಕ್ರಮ ಯಶಸ್ವಿಯಾಗಿ ಮೂಡಿಬಂದಿದೆ. ಜ್ಞಾನಕುಮಾರ್ ಅವರ ಕೀಬೋರ್ಡ್ ಹಾಗೂ ನವೀನ್ ಕುಮಾರ್ ಅವರ ತಬಲಾ ಪಕ್ಕವಾದ್ಯ ಗಾಯಕರಾದ ಹರೀಶ್ ಕುಮಾರ್, ಆರ್,ನಟರಾಜ್ ಅವರ ಗಾಯನ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು ಎಂದರು.
ಕಾರ್ಯಕ್ರಮದ ಭಾಗವಾಗಿ ನಡೆದ ಗೀತಗಾಯನ ಕಾರ್ಯಕ್ರಮದಲ್ಲಿ ಉತ್ತಮವಾಗಿ ಹಾಡಿ ಪ್ರತಿಭೆ ಪ್ರದರ್ಶನ ನೀಡಿದ 10 ವಿದ್ಯಾಥಿಗಳಿಗೆ ಪುಸ್ತಕ ಬಹುಮಾನ ಸಹಿತ ಪ್ರಮಾಣ ಪತ್ರಗಳನ್ನು ನೀಡಲಾಯಿತು.
ವೇದಿಕೆಯಲ್ಲಿ ಹಿರಿಯ ಗಾಯಕ ರಂಗಕರ್ಮಿ, ಗ.ನ. ಅಶ್ವತ್ಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್ ಸೇರಿದಂತೆ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.