ಮತದಾರರ ಸಮಗ್ರ ವಿಶೇಷ ಪರಿಷ್ಕರಣೆ ಸಂವಿಧಾನದ ಮೇಲಿನ ದಾಳಿ: ಚಿಂತಕ ಶಿವಸುಂದರ್ ಆತಂಕ
ಮತದಾರರ ಸಮಗ್ರ ವಿಶೇಷ ಪರಿಷ್ಕರಣೆ ಎಂಬುದು 140 ಕೋಟಿ ಭಾರತೀಯರ ಮೇಲಿನ ಕೇಂದ್ರ ಸರಕಾರ ಮಾಡಿರುವ ಎಫ್‌ಐಆರ್ ಎಂದರೆ ತಪ್ಪಿಲ್ಲ. ಇದು ಬಡವರು, ದಲಿತರು, ಮಹಿಳೆಯರು ಮತ್ತು ವಲಸೆ ಕಾರ್ಮಿಕರನ್ನು ಮತದಾರರ ಪಟ್ಟಿಯಿಂದ ಹೊರಗಿಡುವ, ನಾಗರೀಕರ ಹಕ್ಕುಗಳನ್ನು ಕಸಿದು ಕೊಳ್ಳುವ ಕರಾಳ ಶಾಸನವಾಗಿದೆ
-
ಚಿಕ್ಕಬಳ್ಳಾಪುರ: ಮತದಾರರ ಸಮಗ್ರ ವಿಶೇಷ ಪರಿಷ್ಕರಣೆ ಎಂಬುದು ನಾಗರಿಕರ ಹಕ್ಕು ಕಸಿದು ಕೊಳ್ಳುವ ಪ್ರಭುತ್ವದ ವ್ಯವಸ್ಥಿತ ಹುನ್ನಾರವಷ್ಟೇ ಅಲ್ಲದೆ ಸಂವಿಧಾನವನ್ನು ಮುಗಿಸುವ ದಾಳಿ ಯೆಂದು ಚಿಂತಕ ಶಿವಸುಂದರ್ ಆತಂಕ ವ್ಯಕ್ತಪಡಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ದಲಿತ ಸಂಘರ್ಷ ಸಮಿತಿ ಚಿಕ್ಕಬಳ್ಳಾಪುರ ತಾಲೂಕು ಶಾಖೆ ಏರ್ಪಡಿಸಿದ್ದ ಮತಪಟ್ಟಿ ವಿಶೇಷ ಪರಿಷ್ಕರಣೆ ಪ್ರಭುತ್ವದ ಹುನ್ನಾರಗಳು ಹಾಗೂ ಸಂವಿಧಾನ ಜಾಗೃತಿ ಅಭಿಯಾನದ ಸಂವಾದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಮತದಾರರ ಸಮಗ್ರ ವಿಶೇಷ ಪರಿಷ್ಕರಣೆ ಎಂಬುದು 140 ಕೋಟಿ ಭಾರತೀಯರ ಮೇಲಿನ ಕೇಂದ್ರ ಸರಕಾರ ಮಾಡಿರುವ ಎಫ್‌ಐಆರ್ ಎಂದರೆ ತಪ್ಪಿಲ್ಲ. ಇದು ಬಡವರು, ದಲಿತರು, ಮಹಿಳೆಯರು ಮತ್ತು ವಲಸೆ ಕಾರ್ಮಿಕರನ್ನು ಮತದಾರರ ಪಟ್ಟಿಯಿಂದ ಹೊರಗಿಡುವ, ನಾಗರೀಕರ ಹಕ್ಕುಗಳನ್ನು ಕಸಿದುಕೊಳ್ಳುವ ಕರಾಳ ಶಾಸನವಾಗಿದೆ ಎಂದು ಆರೋಪಿಸಿದರು.
ಇದನ್ನೂ ಓದಿ: Chikkaballapur News: ಚಿಕ್ಕಬಳ್ಳಾಪುರದ ಸದ್ಗುರು ಸನ್ನಿಧಿಯಲ್ಲಿ 4ನೇ ಮಹಾಶಿವರಾತ್ರಿಯ ಆಚರಣೆ: ಸ್ವಾಮಿ ವಿಮೋಹಾನಂದ ಸ್ವಾಮೀಜಿ
ಕೇಂದ್ರ ಸರಕಾರ ಅಕ್ಷರಶ: ಎಸ್‌ಐಆರ್ ಮೂಲಕ ಭಾರತದ ಬಡವರ ಮೇಲೆ ನೇರವಾದ ಯುದ್ಧ ಸಾರಿದೆ. ಸರಕಾರವು ಅಸಾಧ್ಯವಾದ ದಾಖಲೆಗಳನ್ನು ಕೇಳುವ ಮೂಲಕ ಜನಸಾಮಾನ್ಯರನ್ನು, ವಿಶೇಷವಾಗಿ ಅಂಚಿನಲ್ಲಿರುವ ದಲಿತರು, ಅಲ್ಪಸಂಖ್ಯಾತರನ್ನು ಪೌರತ್ವದಿಂದ ವಂಚಿತರನ್ನಾಗಿ ಮಾಡುತ್ತಿದೆ ಎಂದು ತಿಳಿಸಿದರು.
ಬಿಹಾರ ತಮಿಳುನಾಡು ಉತ್ತರ ಪ್ರದೇಶದಲ್ಲಿ ಈಗಾಗಲೇ ನಡೆದ ಪರಿಷ್ಕರಣೆಗಳಲ್ಲಿ ಲಕ್ಷಾಂತರ ಮತದಾರರ ಹೆಸರು ಕೈಬಿಟ್ಟು ಹೋಗಿದೆ.ಈ ಪ್ರಕ್ರಿಯೆ ಮುಗಿಯುವಾಗ 20-25 ಕೋಟಿ ಜನರು ಪಟ್ಟಿಯಿಂದ ಹೊರಗುಳಿಯಬಹುದು. ಆಮೂಲಕ ಆರ್‌ಎಸ್‌ಎಸ್ ಬಯಸುವಂತೆ ಬಿಜೆಪಿ ಪೂರ್ಣ ಬಹುಮತ ಪಡೆದು ನಂತರದಲ್ಲಿ ಎಲ್ಲಾ ವರ್ಗಗಳಿಗೂ ಮತದಾನದ ಹಕ್ಕಿನ ಮೂಲಕ ಸಮಾನತೆ ಯ ಬದುಕು ಕೊಟ್ಟಿರುವ ಸಂವಿಧಾನ ಬದಲಾವಣೆ ಮಾಡುತ್ತಾರೆ ಎಂದು ಎಚ್ಚರಿಸಿದರು.
ಆದಿಮ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಎನ್.ಮುನಿಸ್ವಾಮಿ ಮಾತನಾಡಿ ಕೇಂದ್ರ ಸರ್ಕಾರವು ತನ್ನ ಗುಪ್ತ ಅಜೆಂಡಾ ಜಾರಿಗೊಳಿಸಲು ಚುನಾವಣಾ ಆಯೋಗವನ್ನು ಬಳಸಿಕೊಳ್ಳುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಈ ಬಗ್ಗೆ ವಿರೋಧ ಪಕ್ಷಗಳು ಕೂಡ ದೊಡ್ಡ ಧನಿಯಲ್ಲಿ ವಿರೋಧ ವ್ಯಕ್ತಪಡಿಸಿರುವು ದನ್ನು ದೇಶವಾಸಿಗಳು ಕಂಡಿದ್ದಾರೆ.ಎಸ್‌ಐಆರ್ ಅನ್ನು ಕೂಡ ಇದೇ ಆಯೋಗವನ್ನು ಬಳಸಿ ಕೊಂಡು ಅಧಿಕೃತಗೊಳಿಸಲಾಗುತ್ತಿದೆ ಇದಕ್ಕೆ ದಸಂಸ ಅವಕಾಶ ಮಾಡಿಕೊಡುವುದಿಲ್ಲ ಎಂದು ಎಂದು ಗುಡುಗಿದರು.
ದಸಂಸ ಮಾಜಿ ರಾಜ್ಯ ಸಂಚಾಲಕ ಎನ್.ವೆಂಕಟೇಶ್ ಮಾತನಾಡಿ, ಮತಪಟ್ಟಿ ಪರಿಷ್ಕರಣೆಯನ್ನು ಯಾರೂ ಕೂಡ ವಿರೋಧಿಸುತ್ತಿಲ್ಲ. ಆದರೆ, ಅದಕ್ಕೆ ಸಂಬಂಧಿಸಿದ ಮಾನದಂಡಗಳು ಸೂಕ್ತವಲ್ಲ. ಈ ದೇಶದ ಬಹುಸಂಖ್ಯಾತ ಜನರ ಬಳಿ ಅವರ ಪೂರ್ವಜರು, ಅವರ ದಾಖಲೆಗಳೇ ಇಲ್ಲ. ಹೀಗಿರುವಾಗ ಈ ದೇಶದ ನಾಗರಿಕ ಎನ್ನುವುದಕ್ಕೆ ಯಾವುದಾದರೂ ಪುರಾವೆ ಕೊಡಬೇಕೆಂದು ಷರತ್ತು ವಿಧಿಸಿರು ವುದು ದೊಡ್ಡ ಹುನ್ನಾರವಲ್ಲದೆ ಮತ್ತೇನು ಎಂದು ಪ್ರಶ್ನಿಸಿದರು.
ಈ ದೇಶದ ಮತದಾರನಾಗಲು ಈ ದೇಶದಲ್ಲಿ ಹುಟ್ಟಿರಬೇಕಾದದ್ದು ಬಹಳ ಮುಖ್ಯ. ವಿದೇಶಿ ನುಸುಳುಕೋರರನ್ನು ಹುಡುಕಿ ಹೊರ ಹಾಕುತ್ತೇವೆ ಎಂದು ಕೇಂದ್ರ ಸರಕಾರ ಹೇಳಿದೆ. ಆ ಕೆಲಸ ಮಾಡಲಿ. ಆದರೆ, ದೇಶದ ಎಲ್ಲ ಪ್ರಜೆಗಳನ್ನು ಎಸ್‌ಐಆರ್ ಮೂಲಕ ವಿಚಾರಿಸುತ್ತಿದ್ದಾರೆ. ಇದು ಮತಪಟ್ಟಿ ಪರಿಷ್ಕರಣೆ ಅಲ್ಲ, ಭಾರತೀಯರ ನಾಗರಿಕತ್ವ ಗುರುತಿಸುವ ಕೆಲಸ ಮಾಡಲಾಗುತ್ತಿದೆ. ನೆಪ ಹೇಳಿಕೊಂಡು ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟರೆ ಭಾರತದ ನಾಗರಿಕನಲ್ಲ ಎಂದರ್ಥ. ಇಲ್ಲಿನ ಮೂಲನಿವಾಸಿ ಬದುಕಿಯೂ ಸತ್ತಂತಿರಬೇಕಾಗುತ್ತದೆ ಎಂದು ಹೇಳಿದ ಅವರು ಇದನ್ನು ತಡೆಯಬೇಕಾದರೆ ದೇಶಾದ್ಯಂತ ಸಂಘಟಿತ ಹೋರಾಟ ಅಗತ್ಯ. ಇದಕ್ಕೆ ಎಲ್ಲಾ ಪ್ರಗತಿ ಪರರು ಕೈಜೋಡಿಸಬೇಕು ಎಂದು ಚಿಂತಕ ಶಿವಸುಂದರ್ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಡಿಎಸ್‌ಎಸ್ ಹಿರಿಯ ಮುಖಂಡ ಕೆ.ಸಿ.ರಾಜಾಕಾಂತ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ವೇಳೆ ದಸಂಸ ಜಿಲ್ಲಾ ಸಂಚಾಲಕ ಸಿ.ಜಿ.ಗಂಗಪ್ಪ, ಸಂಘಟನಾ ಸಂಚಾಲಕ ಬಿ.ವಿ.ವೆಂಕಟ ರಮಣಪ್ಪ, ಎನ್.ಎ.ವೆಂಕಟೇಶ್, ಖಜಾಂಚಿ ಜಿ.ವಿ.ಗಂಗಪ್ಪ, ಗೌರಿಬಿದನೂರಿನ ಪಿ.ನರಸಿಂಹ ಮೂರ್ತಿ, ಚಿಕ್ಕಬಳ್ಳಾಪುರದ ಡಿ.ಎನ್.ಪರಮೇಶ್, ಶಿಡ್ಲಘಟ್ಟ ತಿರುಮಳಪ್ಪ, ಗುಡಿಬಂಡೆ ರಮಣ, ಚೇಳೂರು ನರಸಿಂಹಪ್ಪ ಸೇರಿ ನೂರಾರು ಕಾರ್ಯಕರ್ತರು ಇದ್ದರು.