ಸತ್ಯಸಾಯಿ ಗ್ರಾಮದಲ್ಲಿ ಯಕ್ಷಗಾನ ವೈಭವ: ಸಂಸ್ಕೃತಿಯೇ ದೇಶದ ಅಸ್ಮಿತೆ ಎಂದ ಸದ್ಗುರು ಮಧುಸೂದನ ಸಾಯಿ
ಕರ್ನಾಟಕದ ಸಾಂಪ್ರದಾಯಿಕ ಕಲೆಯಾದ ಯಕ್ಷಗಾನವು ಸಾವಿರಾರು ಭಕ್ತರು ಹಾಗೂ ವಿದ್ಯಾರ್ಥಿ ಗಳನ್ನು ಮಂತ್ರಮುಗ್ಧಗೊಳಿಸಿತು. ಡಾ. ಕೆರೆಮನೆ ಶಿವಾನಂದ ಹೆಗಡೆ ಅವರ ನಿರ್ದೇಶನದಲ್ಲಿ ಮೂಡಿ ಬಂದ ಪ್ರಸಂಗದಲ್ಲಿ ರಾಮ, ಸೀತೆ, ಲಕ್ಷ್ಮಣ, ರಾವಣ ಹಾಗೂ ಮಾರೀಚನ ಪಾತ್ರಗಳನ್ನು ಕಲಾವಿದರು ಮನೋಜ್ಞವಾಗಿ ಅಭಿನಯಿಸಿದರು. ಭಾಗವತಿಕೆ ಮತ್ತು ವಾದ್ಯಗಳ ನಾದವು ಪ್ರದರ್ಶನದ ಮೆರುಗು ಹೆಚ್ಚಿಸಿತು.
-
ಚಿಕ್ಕಬಳ್ಳಾಪುರ: ಸಂಸ್ಕೃತಿಯೇ ದೇಶದ ಅಸ್ಮಿತೆಯಾಗಿದ್ದು, ಸಾಂಪ್ರದಾಯಿಕ ಕಲೆಗಳನ್ನು ಉಳಿಸಿ ಬೆಳೆಸುವುದು ಮುಂದಿನ ಪೀಳಿಗೆಯ ಜವಾಬ್ದಾರಿಯಾಗಿದೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ(Sadguru Madhusidhan Sai) ಹೇಳಿದರು.
ತಾಲ್ಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಶರನ್ನವರಾತ್ರಿ ಉತ್ಸವದ ಅಂಗವಾಗಿ ಹೊನ್ನಾವರ ತಾಲ್ಲೂಕಿನ ಕೆರೆಮನೆಯ ‘ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ’ಯ ಕಲಾವಿದರು ಪ್ರಸ್ತುತಪಡಿಸಿದ ‘ಸೀತಾಪಹರಣ’ ಯಕ್ಷಗಾನ ಪ್ರಸಂಗ ವೀಕ್ಷಿಸಿ ಅವರು ಆಶೀರ್ವಚನ ನೀಡಿದರು.
ಕರ್ನಾಟಕದ ಸಾಂಪ್ರದಾಯಿಕ ಕಲೆಯಾದ ಯಕ್ಷಗಾನವು ಸಾವಿರಾರು ಭಕ್ತರು ಹಾಗೂ ವಿದ್ಯಾರ್ಥಿ ಗಳನ್ನು ಮಂತ್ರಮುಗ್ಧಗೊಳಿಸಿತು. ಡಾ. ಕೆರೆಮನೆ ಶಿವಾನಂದ ಹೆಗಡೆ ಅವರ ನಿರ್ದೇಶನದಲ್ಲಿ ಮೂಡಿಬಂದ ಪ್ರಸಂಗದಲ್ಲಿ ರಾಮ, ಸೀತೆ, ಲಕ್ಷ್ಮಣ, ರಾವಣ ಹಾಗೂ ಮಾರೀಚನ ಪಾತ್ರಗಳನ್ನು ಕಲಾವಿದರು ಮನೋಜ್ಞವಾಗಿ ಅಭಿನಯಿಸಿದರು. ಭಾಗವತಿಕೆ ಮತ್ತು ವಾದ್ಯಗಳ ನಾದವು ಪ್ರದರ್ಶನದ ಮೆರುಗು ಹೆಚ್ಚಿಸಿತು.
ಯಕ್ಷಗಾನ ಕಲಾವಿದರನ್ನು ಅಭಿನಂದಿಸಿದ ಸದ್ಗುರು ಮಧುಸೂದನ ಸಾಯಿ, ಪ್ರದರ್ಶನವು ಅತ್ಯಂತ ಅದ್ಭುತವಾಗಿ ಮೂಡಿಬಂದಿದ್ದು, ಪ್ರೇಕ್ಷಕರ ಗಮನವನ್ನು ಸಂಪೂರ್ಣವಾಗಿ ಸೆಳೆಯಿತು. ದೇಶದ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸುವಲ್ಲಿ ಕಲಾವಿದರ ಪಾತ್ರ ಮಹತ್ವದ್ದಾಗಿದೆ. ಹಲವು ಸವಾಲುಗಳ ನಡುವೆಯೂ ತ್ಯಾಗ ಮತ್ತು ಪರಿಶ್ರಮದಿಂದ ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುತ್ತಿರುವ ಕಲಾವಿದರು ಅಭಿನಂದನಾರ್ಹರು ಎಂದರು.
ಕೆರೆಮನೆ ಕುಟುಂಬದ ನಾಲ್ಕು ತಲೆಮಾರುಗಳ ಕಲಾ ಸೇವೆಯನ್ನು ಶ್ಲಾಘಿಸಿದ ಅವರು, ಯಕ್ಷಗಾನ ಗುರುಕುಲ ಮತ್ತಷ್ಟು ಅಭಿವೃದ್ಧಿ ಹೊಂದಲಿ. ಈ ಕಲಾ ಪರಂಪರೆಯನ್ನು ಭವಿಷ್ಯದ ಪೀಳಿಗೆ ದೇಶ-ವಿದೇಶಗಳಲ್ಲಿ ಪಸರಿಸಲಿ ಎಂದು ಹಾರೈಸಿದರು.
‘ನಾದ ಗುರುಕುಲ’ದ ಮುಖ್ಯಸ್ಥೆ ರೇವತಿ ರಾಮಚಂದ್ರನ್ ಮಾತನಾಡಿ, ಯಕ್ಷಗಾನವು ಅಭಿನಯ, ಸಂಗೀತ, ನೃತ್ಯ ಹಾಗೂ ವೇಷಭೂಷಣಗಳ ಸಮ್ಮಿಲನವಾಗಿದೆ. ಭಾಷೆ ತಿಳಿಯದವರೂ ಕಲಾವಿದರ ಭಾವಾಭಿನಯದ ಮೂಲಕ ಕಥೆಯನ್ನು ಅರ್ಥಮಾಡಿಕೊಳ್ಳುವ ವಿಶಿಷ್ಟ ಶಕ್ತಿ ಈ ಕಲೆಯಲ್ಲಿದೆ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮಂಡಳಿಯ ನಿರ್ದೇಶಕ ಡಾ. ಕೆರೆಮನೆ ಶಿವಾನಂದ ಹೆಗಡೆ, 1934ರಲ್ಲಿ ಸ್ಥಾಪನೆಯಾದ ಮಂಡಳಿಯು ದಶಕಗಳಿಂದ ನಿರಂತರ ಕಲಾ ಸೇವೆ ಸಲ್ಲಿಸುತ್ತಿದೆ. ಕಳೆದ 40 ವರ್ಷಗಳಿಂದ ಗುಣವಂತೆಯಲ್ಲಿ ಗುರುಕುಲ ನಡೆಸುತ್ತಿದ್ದು, ಉಚಿತವಾಗಿ ಯಕ್ಷಗಾನ ತರಬೇತಿ ನೀಡಲಾಗುತ್ತಿದೆ. ನಾಲ್ಕನೇ ತಲೆಮಾರಿನ ಕಲಾವಿದನಾಗಿ ಸತ್ಯಸಾಯಿ ಗ್ರಾಮದಲ್ಲಿ ಪ್ರದರ್ಶನ ನೀಡಿರುವುದು ಸಂತೋಷದ ಸಂಗತಿ ಎಂದರು.