ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಆರೋಗ್ಯದ ಸಮಗ್ರ ಪರಿಕಲ್ಪನೆಗೆ ಯೋಗವೇ ಮಾರ್ಗ: ನ್ಯಾಯಮೂರ್ತಿ ಡಾ.ವಿ.ಶ್ರೀಶಾನಂದ

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಶ್ರೀ ಪ್ರಸನ್ನ ವೀರಾಂಜನೇಯ ಯೋಗ ಕೇಂದ್ರದ ವತಿಯಿಂದ ಆಯೋಜಿಸಲಾಗಿದ್ದ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿ ಯಾಗಿ ಮಾತನಾಡಿದ ಅವರು, ಆಯುರ್ವೇದದ ಪ್ರಕಾರ ಮನುಷ್ಯನ ದೇಹವು ವಾತ, ಪಿತ್ತ ಮತ್ತು ಕಫ ಎಂಬ ಮೂರು ಮೂಲ ಧಾತುಗಳ ಮೇಲೆ ನಿಂತಿದೆ

ಆರೋಗ್ಯದ ಸಮಗ್ರ ಪರಿಕಲ್ಪನೆಗೆ ಯೋಗವೇ ಮಾರ್ಗ

-

Profile
Ashok Nayak Jul 11, 2026 10:16 PM

ಬೆಂಗಳೂರು: "ಆರೋಗ್ಯವೆಂದರೆ ಕೇವಲ ರೋಗರಹಿತ ಸ್ಥಿತಿಯಲ್ಲ; ಅದು ದೇಹ, ಮನಸ್ಸು ಮತ್ತು ಆತ್ಮದ ಸಮತೋಲನದ ಸ್ಥಿತಿ. ಪ್ರತಿಯೊಬ್ಬ ವ್ಯಕ್ತಿಯ ದೇಹ ಪ್ರಕೃತಿ ವಿಭಿನ್ನವಾಗಿರುವುದರಿಂದ ಎಲ್ಲರ ಆರೋಗ್ಯವನ್ನು ಒಂದೇ ಅಳತೆಗೋಲಿನಿಂದ ಅಳೆಯಲು ಸಾಧ್ಯವಿಲ್ಲ" ಎಂದು ಕರ್ನಾಟಕ ಉಚ್ಚ ನ್ಯಾಯಾಲಯ(Karnataka High Court)ದ ನ್ಯಾಯಮೂರ್ತಿಗಳಾದ ಡಾ.ವಿ.ಶ್ರೀಶಾನಂದ ಅಭಿಪ್ರಾಯಪಟ್ಟರು.

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಶ್ರೀ ಪ್ರಸನ್ನ ವೀರಾಂಜನೇಯ ಯೋಗ ಕೇಂದ್ರದ ವತಿಯಿಂದ ಆಯೋಜಿಸಲಾಗಿದ್ದ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿ ಯಾಗಿ ಮಾತನಾಡಿದ ಅವರು, ಆಯುರ್ವೇದದ ಪ್ರಕಾರ ಮನುಷ್ಯನ ದೇಹವು ವಾತ, ಪಿತ್ತ ಮತ್ತು ಕಫ ಎಂಬ ಮೂರು ಮೂಲ ಧಾತುಗಳ ಮೇಲೆ ನಿಂತಿದೆ. ಈ ಧಾತುಗಳ ಸಮತೋಲನವೇ ಆರೋ ಗ್ಯದ ಮೂಲ ಲಕ್ಷಣವಾಗಿದ್ದು, ಅವುಗಳ ಪ್ರಮಾಣದಲ್ಲಿ ವ್ಯತ್ಯಾಸ ಉಂಟಾದಾಗ ಅನಾರೋಗ್ಯ ಕಾಣಿಸಿಕೊಳ್ಳುತ್ತದೆ ಎಂದು ವಿವರಿಸಿದರು.

ಒಬ್ಬ ವ್ಯಕ್ತಿಯ ದೈಹಿಕ ಸ್ವಭಾವ ಮತ್ತೊಬ್ಬರಂತಿರದು; ಒಂದೇ ಕುಟುಂಬದಲ್ಲಿಯೂ ಸಹ ಪ್ರತಿ ಯೊಬ್ಬರ ದೇಹ ಪ್ರಕೃತಿ ವಿಭಿನ್ನವಾಗಿರುತ್ತದೆ. ಹೀಗಾಗಿ ಆರೋಗ್ಯವನ್ನು ಕೇವಲ ಯಾಂತ್ರಿಕ ಮಾನದಂಡಗಳಿಂದ ಅಳೆಯುವುದು ಸೂಕ್ತವಲ್ಲ ಎಂದು ಹೇಳಿದರು.

ಇದನ್ನೂ ಓದಿ: Bangalore Mews: ಗ್ಲೋಬಲ್ ಸಿಟಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಆಡಳಿತ ಕಚೇರಿ ಉದ್ಘಾಟನೆ

ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಸಿಸೇರಿಯನ್ ಪ್ರಸವ ಕ್ರಮದ ಕುರಿತು ಹಾಸ್ಯಮಿಶ್ರಿತವಾಗಿ ಪ್ರಸ್ತಾಪಿಸಿದ ಅವರು, ಪ್ರಕೃತಿಯ ಸಹಜ ನಿಯಮಗಳಿಗೆ ಹೆಚ್ಚಿನ ಮಹತ್ವ ನೀಡಬೇಕೆಂಬ ಸಂದೇಶ ನೀಡಿದರು.

ಯೋಗದ ಮಹತ್ವವನ್ನು ವಿವರಿಸಿದ ನ್ಯಾಯಮೂರ್ತಿಗಳು, ಸಾವಿರಾರು ವರ್ಷಗಳ ಹಿಂದೆಯೇ ಭಾರತೀಯ ಋಷಿಮುನಿಗಳು ಯೋಗವನ್ನು ದೈಹಿಕ ಹಾಗೂ ಮಾನಸಿಕ ಆರೋಗ್ಯದ ಸಾಧನವಾಗಿ ಬಳಸಿಕೊಂಡಿದ್ದರು ಎಂದು ಹೇಳಿದರು. ಮಹರ್ಷಿ ಪತಂಜಲಿಗಳು ಯೋಗಕ್ಕೆ ವೈಜ್ಞಾನಿಕ ಮತ್ತು ವ್ಯವಸ್ಥಿತ ರೂಪವನ್ನು ನೀಡಿದ್ದು, ಇಂದಿಗೂ ಅದು ಮಾನವಕುಲಕ್ಕೆ ದಾರಿದೀಪವಾಗಿದೆ ಎಂದರು.

ವಿಶ್ವದಾದ್ಯಂತ ಯೋಗದತ್ತ ಜನರ ಒಲವು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಸಂತಸದ ಬೆಳವಣಿಗೆ. ಭಾರತವು ಜಗತ್ತಿಗೆ ನೀಡಿರುವ ಈ ಅಮೂಲ್ಯ ಕೊಡುಗೆ ಬಗ್ಗೆ ಪ್ರತಿಯೊಬ್ಬ ಭಾರತೀಯ ರೂ ಹೆಮ್ಮೆಪಡಬೇಕೆಂದು ಹೇಳಿದರು.

shuntu 1 ok

ತಮ್ಮ ಉಪನ್ಯಾಸದಲ್ಲಿ ಅಷ್ಟಾಂಗ ಯೋಗದ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾ ಹಾರ, ಧಾರಣಾ, ಧ್ಯಾನ ಮತ್ತು ಸಮಾಧಿ ಎಂಬ ಎಂಟು ಅಂಗಗಳ ಮಹತ್ವವನ್ನು ಸವಿಸ್ತಾರ ವಾಗಿ ವಿವರಿಸಿ, ಯೋಗವನ್ನು ಕೇವಲ ಆಸನಗಳಿಗೆ ಸೀಮಿತಗೊಳಿಸದೆ ಜೀವನ ಮೌಲ್ಯಗಳಾಗಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಪದ್ಮಶ್ರೀ ಡಾ.ಶುಭ ವೆಂಕಟೇಶ ಅಯ್ಯಂಗಾರ್ ಅವರ ಸಾಧನೆಗೆ ಮೆಚ್ಚುಗೆ

ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದ ಪದ್ಮಶ್ರೀ ಡಾ. ಶುಭ ವೆಂಕಟೇಶ ಅಯ್ಯಂಗಾರ್ ಅವರು ತಮ್ಮ ಯಶಸ್ಸಿನ ಪಯಣವನ್ನು ಸ್ಮರಿಸುತ್ತಾ, ತಮ್ಮ ಜೀವನದ ವಿವಿಧ ಹಂತಗಳಲ್ಲಿ ಮಾರ್ಗದರ್ಶನ ನೀಡಿದ ತೀರ್ಥಸ್ವರೂಪರಾದ ನಾಲ್ವರು ಹಿರಿಯರನ್ನು ಕೃತಜ್ಞತೆ ಯಿಂದ ನೆನಪಿಸಿಕೊಂಡರು. ತಮಗೆ ದೊರೆತ ಸಾಧನೆ ಮತ್ತು ಗೌರವಗಳ ಹಿಂದೆ ಗುರುಗಳು, ಪೋಷಕರು ಮತ್ತು ಮಾರ್ಗದರ್ಶಕರ ಆಶೀರ್ವಾದ ಹಾಗೂ ಪ್ರೇರಣೆಯೇ ಮುಖ್ಯ ಕಾರಣ ಎಂದು ವಿನಯದಿಂದ ಹೇಳಿದರು.

ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಪಿಎಚ್.ಡಿ.ವರೆಗೆ ಪ್ರತಿಯೊಂದು ಹಂತದಲ್ಲಿಯೂ ಶ್ರೇಷ್ಠ ಸಾಧನೆ ತೋರಿದ ಅವರು, ಭಾರತೀಯ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.

ರಾಷ್ಟ್ರೀಯ ವೈಮಾನಿಕ ಪ್ರಯೋಗಾಲಯ (NAL) ನಲ್ಲಿ ಸೇವೆ ಸಲ್ಲಿಸಿರುವ ಅವರು, ಅಗ್ನಿ ಕ್ಷಿಪಣಿಗೆ ಅಗತ್ಯವಾದ ಸೂಕ್ಷ್ಮ ತಾಂತ್ರಿಕ ಘಟಕಗಳ ಅಭಿವೃದ್ಧಿ, ವಿಮಾನ ನಿಲ್ದಾಣಗಳಲ್ಲಿ ದಟ್ಟ ಮಂಜಿನ ನಡುವೆಯೂ ಪೈಲಟ್‌ಗಳಿಗೆ ರನ್‌ವೇ ಗೋಚರಿಸುವಂತೆ ಮಾಡುವ ‘ದೃಷ್ಟಿ’ ಉಪಕರಣದ ಅಭಿವೃದ್ಧಿ, ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಉಪಯುಕ್ತವಾದ ಅನೇಕ ವೈಜ್ಞಾನಿಕ ಉಪಕರಣಗಳ ವಿನ್ಯಾಸ ಮತ್ತು ಪೂರೈಕೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.

ತಮ್ಮ ಮಾತಿನ ಕೊನೆಯಲ್ಲಿ ಅವರು ಸಮಾಜದ ಮುಂದೆ ಒಂದು ಹೃದಯಸ್ಪರ್ಶಿ ಮನವಿಯನ್ನು ಇಟ್ಟರು. "ನಮ್ಮನ್ನು ಸಾಕಿ ಬೆಳೆಸಿದ ಮಾತಾಪಿತರನ್ನು ವೃದ್ಧಾಪ್ಯದಲ್ಲಿ ವೃದ್ಧಾಶ್ರಮಗಳಿಗೆ ಕಳುಹಿಸ ಬೇಡಿ; ಅವರ ಅಂತಿಮ ದಿನಗಳಲ್ಲಿ ಪ್ರೀತಿ, ಗೌರವ ಮತ್ತು ಕಾಳಜಿಯಿಂದ ನೋಡಿಕೊಳ್ಳುವುದು ನಮ್ಮ ಕರ್ತವ್ಯ" ಎಂದು ಅವರು ಕಳಕಳಿಯಿಂದ ಮನವಿ ಮಾಡಿದರು. ಈ ಮಾತು ಸಭಿಕರ ಮನಸ್ಸನ್ನು ಆಳವಾಗಿ ಸ್ಪರ್ಶಿಸಿತು.

ಈ ವರ್ಷ ಅವರಿಗೆ ಪ್ರದಾನವಾಗಿರುವ ಪದ್ಮಶ್ರೀ ಪ್ರಶಸ್ತಿ ದೇಶದ ಗೌರವವನ್ನು ಮತ್ತಷ್ಟು ಹೆಚ್ಚಿಸಿದೆ. ಇಷ್ಟೆಲ್ಲಾ ಸಾಧನೆಗಳ ನಡುವೆಯೂ ಯಾವುದೇ ಗರ್ವ ಅಥವಾ ಅಹಂಕಾರವಿಲ್ಲದ ಅವರ ಸರಳ ವ್ಯಕ್ತಿತ್ವ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

"ಶ್ರದ್ಧೆ ಮತ್ತು ಪ್ರೀತಿಯಿಂದಲೇ ಶ್ರೇಷ್ಠ ಶಿಲ್ಪ ಸೃಷ್ಟಿ" : ಶ್ರೀ ಅರುಣ್ ಯೋಗಿರಾಜ್

ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಬಾಲರಾಮನ ದಿವ್ಯ ವಿಗ್ರಹದ ಶಿಲ್ಪಿ, ಖ್ಯಾತ ಕಲಾವಿದ ಶ್ರೀ ಅರುಣ್ ಯೋಗಿರಾಜ್ ಅವರನ್ನು ಈ ಸಂದರ್ಭದಲ್ಲಿ ಶ್ರೀ ಪ್ರಸನ್ನ ವೀರಾಂಜನೇಯ ಯೋಗ ದತ್ತಿಯ ವತಿಯಿಂದ ಗೌರವಿಸಲಾಯಿತು.

ಗೌರವ ಸ್ವೀಕರಿಸಿ ಮಾತನಾಡಿದ ಅವರು, "ಒಂದು ಸುಂದರ ಮೂರ್ತಿಯನ್ನು ಸೃಷ್ಟಿಸಲು ಕೇವಲ ಪರಿಶ್ರಮ ಸಾಕಾಗುವುದಿಲ್ಲ; ಅದರೊಂದಿಗೆ ಶ್ರದ್ಧೆ, ಭಕ್ತಿ ಮತ್ತು ಕೆಲಸದ ಮೇಲಿನ ಪ್ರೀತಿಯೂ ಇರಬೇಕು" ಎಂದು ಹೇಳಿದರು. ಶಿಲ್ಪಕಲೆ ಕೇವಲ ವೃತ್ತಿಯಲ್ಲ, ಅದು ಒಂದು ಸಾಧನೆ ಮತ್ತು ತಪಸ್ಸು ಎಂದು ಅವರು ಅಭಿಪ್ರಾಯಪಟ್ಟರು.

ಮೈಸೂರಿನ ಹೊರವಲಯದಲ್ಲಿ ತಾವು ಹೊಸದಾಗಿ ನಿರ್ಮಿಸಿರುವ ಅತ್ಯಾಧುನಿಕ ಕಲಾಮಂದಿರ ಮತ್ತು ಶಿಲ್ಪಕಲಾ ತರಬೇತಿ ಕೇಂದ್ರದ ಕುರಿತು ವಿವರಿಸಿದ ಅವರು, ಹೊಸ ತಲೆಮಾರಿನ ಯುವಕರು ಹಾಗೂ ಕಲಾಸಕ್ತರಿಗೆ ಶಾಸ್ತ್ರೋಕ್ತ ಮತ್ತು ಗುಣಮಟ್ಟದ ಶಿಲ್ಪಕಲಾ ಶಿಕ್ಷಣ ನೀಡುವ ಉದ್ದೇಶದಿಂದ ಅತ್ಯಾಧುನಿಕ ಕೆತ್ತನೆ ಸೌಲಭ್ಯಗಳನ್ನು ಅಲ್ಲಿ ನಿರ್ಮಿಸಲಾಗಿದೆ ಎಂದು ತಿಳಿಸಿದರು.

ಭಾರತೀಯ ಶಿಲ್ಪಕಲೆಯ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಯುವ ಪೀಳಿಗೆಯು ಹೆಚ್ಚಿನ ಆಸಕ್ತಿ ತೋರಬೇಕು ಎಂದು ಕರೆ ನೀಡಿದ ಅವರು, ಇತ್ತೀಚಿನ ವರ್ಷಗಳಲ್ಲಿ ಕಲ್ಲಿನ ಶಿಲ್ಪಕಾರರಿಗೆ ಸಮಾಜದಲ್ಲಿ ಉತ್ತಮ ಮನ್ನಣೆ ಮತ್ತು ಗೌರವ ದೊರೆಯುತ್ತಿರುವುದು ಸಂತೋಷ ದಾಯಕ ಬೆಳವಣಿಗೆ ಎಂದು ಹೇಳಿದರು.

ಯೋಗ ಕ್ಷೇತ್ರದ ಹಿರಿಯ ಸಾಧಕರಿಗೆ ಗೌರವ

ಯೋಗದ ಪ್ರಸಾರ ಮತ್ತು ಸೇವೆಯಲ್ಲಿ ವಿಶಿಷ್ಟ ಕೊಡುಗೆ ನೀಡಿರುವ ಹಿರಿಯ ಸಾಧಕರನ್ನು ಈ ಸಂದರ್ಭದಲ್ಲಿ ಶ್ರೀ ಪ್ರಸನ್ನ ವೀರಾಂಜನೇಯ ಸೇವಾ ಟ್ರಸ್ಟ್ ವತಿಯಿಂದ ಗೌರವಿಸಲಾಯಿತು.

ದಶಕಗಳ ಕಾಲ ಯೋಗ ಶಿಕ್ಷಣ, ತರಬೇತಿ ಹಾಗೂ ಯೋಗದ ಮೌಲ್ಯಗಳನ್ನು ಸಮಾಜದ ವಿವಿಧ ವರ್ಗಗಳಿಗೆ ತಲುಪಿಸುವಲ್ಲಿ ಸಲ್ಲಿಸಿದ ಅನನ್ಯ ಸೇವೆಯನ್ನು ಪರಿಗಣಿಸಿ ಶ್ರೀ ವಿರೂಪಾಕ್ಷ ಬೆಳವಾಡಿ ಅವರಿಗೆ "ಯೋಗ ರತ್ನ" ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಅದೇ ರೀತಿ, ಯೋಗಾಭ್ಯಾಸ, ಯೋಗ ಪ್ರಚಾರ ಹಾಗೂ ಸಮಾಜದಲ್ಲಿ ಆರೋಗ್ಯ ಜಾಗೃತಿ ಮೂಡಿಸು ವಲ್ಲಿ ಸಲ್ಲಿಸಿದ ಮಹತ್ವದ ಸೇವೆಯನ್ನು ಗುರುತಿಸಿ ಶ್ರೀ ಅಶೋಕ ವಿ. ಅವರಿಗೆ "ಯೋಗ ಶ್ರೀ" ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, ಯೋಗ ಕ್ಷೇತ್ರದಲ್ಲಿ ಮೌನವಾಗಿ ಸೇವೆ ಸಲ್ಲಿಸುತ್ತಿರುವ ಸಾಧಕರನ್ನು ಗುರುತಿಸಿ ಗೌರವಿಸುವುದು ಸಮಾಜಕ್ಕೆ ಆದರ್ಶವಾಗಿದ್ದು, ಇಂತಹ ಸನ್ಮಾನಗಳು ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿವೆ ಎಂದು ಅಭಿಪ್ರಾಯಪಟ್ಟರು.

ಯೋಗ ಪ್ರದರ್ಶನಗಳು ಗಮನ ಸೆಳೆದವು

ಕಾರ್ಯಕ್ರಮದಲ್ಲಿ ಹಿರಿಯ ಯೋಗ ಶಿಕ್ಷಕರು, ಯೋಗ ಸಾಧಕರು ಹಾಗೂ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರನ್ನು ಸನ್ಮಾನಿಸಲಾಯಿತು. ಯೋಗ ವಿದ್ಯಾರ್ಥಿ ಗಳಿಂದ ಪ್ರದರ್ಶಿಸಲಾದ ಗುಂಪು ಯೋಗ ಪ್ರದರ್ಶನಗಳು, ವೈಯಕ್ತಿಕ ಯೋಗಾಸನ ಪ್ರದರ್ಶನಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದವು.

"ಆರೋಗ್ಯಕರ ವಯಸ್ಸಿಗೆ ಯೋಗ" ಎಂಬ ಈ ವರ್ಷದ ಅಂತರರಾಷ್ಟ್ರೀಯ ಯೋಗ ದಿನದ ಧ್ಯೇಯವಾಕ್ಯಕ್ಕೆ ಅನುಗುಣವಾಗಿ ನಡೆದ ಕಾರ್ಯಕ್ರಮದಲ್ಲಿ ಸುಮಾರು ಐನೂರಕ್ಕೂ ಹೆಚ್ಚು ಯೋಗಾಭಿಮಾನಿಗಳು, ಗಣ್ಯರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.