ದೇವಿರಮ್ಮ ಬೆಟ್ಟದ ತುದಿಯಲ್ಲಿ ದುರಂತ: ಸುರಕ್ಷತಾ ಕಂಬಿ ಮುರಿದು ಬಿದ್ದು 20ಕ್ಕೂ ಹೆಚ್ಚು ಭಕ್ತರಿಗೆ ಗಂಭೀರ ಗಾಯ!
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪ್ರಸಿದ್ಧ ಬಿಂಡಿಗ ದೇವಿರಮ್ಮ ಬೆಟ್ಟದಲ್ಲಿ ಭಕ್ತರ ದರ್ಶನದ ವೇಳೆ ಭೀಕರ ದುರಂತವೊಂದು ಸಂಭವಿಸಿದೆ. ಬೆಟ್ಟದ ತುದಿಯಲ್ಲಿ ಅಳವಡಿಸಲಾಗಿದ್ದ ಕಬ್ಬಿಣದ ಸುರಕ್ಷತಾ ಕಂಬಿ (ರೈಲಿಂಗ್) ದಿಢೀರ್ ಮುರಿದುಬಿದ್ದ ಪರಿಣಾಮ, ಓರ್ವ ಬಾಲಕ ಸೇರಿದಂತೆ 20ಕ್ಕೂ ಹೆಚ್ಚು ಭಕ್ತರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಸಂಗ್ರಹ ಚಿತ್ರ -
ಚಿಕ್ಕಮಗಳೂರು: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪ್ರಸಿದ್ಧ ಬಿಂಡಿಗ ದೇವಿರಮ್ಮ (Deviramma Hill) ಬೆಟ್ಟದಲ್ಲಿ ಭಕ್ತರ ದರ್ಶನದ ವೇಳೆ ಭೀಕರ ದುರಂತವೊಂದು ಸಂಭವಿಸಿದೆ. ಬೆಟ್ಟದ ತುದಿಯಲ್ಲಿ ಅಳವಡಿಸಲಾಗಿದ್ದ ಕಬ್ಬಿಣದ ಸುರಕ್ಷತಾ ಕಂಬಿ (ರೈಲಿಂಗ್) ದಿಢೀರ್ ಮುರಿದುಬಿದ್ದ ಪರಿಣಾಮ, ಓರ್ವ ಬಾಲಕ ಸೇರಿದಂತೆ 20ಕ್ಕೂ ಹೆಚ್ಚು ಭಕ್ತರು ಗಂಭೀರವಾಗಿ ಗಾಯಗೊಂಡಿದ್ದಾರೆ. ವರ್ಷಕ್ಕೊಮ್ಮೆ ಮಾತ್ರ ತೆರೆಯುವ ದೇವಿರಮ್ಮನ ದರ್ಶನ ಪಡೆಯಲು ದೀಪಾವಳಿ ಅಂಗವಾಗಿ ಲಕ್ಷಾಂತರ ಭಕ್ತರು ಬೆಟ್ಟಕ್ಕೆ ಹರಿದುಬಂದಿದ್ದರು.
ಕಿರಿದಾದ ಕಡಿದಾದ ಹಾದಿಯಲ್ಲಿ ನಿರೀಕ್ಷೆಗೂ ಮೀರಿ ಭಕ್ತರ ಸಂಖ್ಯೆ ಹೆಚ್ಚಾಗಿದ್ದರಿಂದ, ಬೆಟ್ಟದ ತುದಿಯಲ್ಲಿದ್ದ ಕಬ್ಬಿಣದ ಸುರಕ್ಷತಾ ಕಂಬಿಯ ಮೇಲೆ ಭಾರ ತಡೆಯಲಾರದಷ್ಟು ಒತ್ತಡ ಉಂಟಾಗಿದೆ. ಪರಿಣಾಮವಾಗಿ ಕಂಬಿ ಮುರಿದುಬಿದ್ದಿದೆ. ಕಂಬಿ ಮುರಿದ ತಕ್ಷಣ ನಿಯಂತ್ರಣ ತಪ್ಪಿದ ಭಕ್ತರು ಕಡಿದಾದ ಹಾದಿಯಲ್ಲಿ ಒಬ್ಬರ ಮೇಲೊಬ್ಬರು ಉರುಳಿ ಬಿದ್ದಿದ್ದಾರೆ. ಸ್ಥಳದಲ್ಲಿ ತಕ್ಷಣವೇ ಕಾಲ್ತುಳಿತದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಭಕ್ತರು ಪ್ರಾಣಭಯದಿಂದ ಚೀರಾಡಿದ್ದಾರೆ. ಗಾಯಗೊಂಡವರಲ್ಲಿ ಹಲವರಿಗೆ ತಲೆ ಹಾಗೂ ಕೈಕಾಲುಗಳಿಗೆ ತೀವ್ರ ಪೆಟ್ಟಾಗಿದೆ.
ಘಟನೆ ಸಂಭವಿಸುತ್ತಿದ್ದಂತೆ ಸ್ಥಳದಲ್ಲಿದ್ದ ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರು ಹಾಗೂ ಸ್ವಯಂಸೇವಕರು ತಕ್ಷಣವೇ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಗಾಯಾಳುಗಳನ್ನು ಸ್ಟ್ರೆಚರ್ ಹಾಗೂ ಹೆಗಲ ಮೇಲೆ ಹೊತ್ತು ಬೆಟ್ಟದಿಂದ ಕೆಳಗಿಳಿಸಲಾಗುತ್ತಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗುತ್ತಿದೆ. ಇದಕ್ಕೂ ಮುನ್ನ, ಮುಂಜಾನೆ ಬೆಟ್ಟ ಏರುತ್ತಿದ್ದ ಬೆಂಗಳೂರು ಮೂಲದ ಲಕ್ಷ್ಮಣ್ ಎಂಬ ಭಕ್ತರೊಬ್ಬರು ಹೃದಯಾಘಾತದಿಂದ ದಾರಿ ಮಧ್ಯದಲ್ಲೇ ಮೃತಪಟ್ಟಿದ್ದರು.
ಹೊಸೂರಿನಲ್ಲಿ ಕಟ್ಟಡ ಕಾಮಗಾರಿ ವೇಳೆ ದುರಂತ: ಮೂವರು ಕಾರ್ಮಿಕರು ಸಾವು, ನಾಲ್ವರಿಗೆ ಗಂಭೀರ ಗಾಯ
ಚಿಕ್ಕಮಗಳೂರು ಜಿಲ್ಲೆಯ ಬಿಂಡಿಗ ದೇವಿರಮ್ಮ ದೇವಸ್ಥಾನವು ಕರ್ನಾಟಕದ ಅತ್ಯಂತ ಪವಿತ್ರ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿದೆ. ಬೆಟ್ಟದ ಮೇಲಿರುವ ದೇವಿರಮ್ಮನ ಗುಡಿಯು ವರ್ಷಕ್ಕೆ ಕೇವಲ ಎರಡು ದಿನ ಮಾತ್ರ (ದೀಪಾವಳಿಯ ನರಕ ಚತುರ್ದಶಿ ಮತ್ತು ಅಮಾವಾಸ್ಯೆಯ ದಿನ) ಭಕ್ತರಿಗಾಗಿ ತೆರೆದಿರುತ್ತದೆ. ಉಳಿದ 363 ದಿನಗಳು ಬೆಟ್ಟದ ಮೇಲೆ ಯಾರಿಗೂ ಪ್ರವೇಶವಿರುವುದಿಲ್ಲ.