Vidhana Soudha lighting: ವಿಧಾನಸೌಧದ ನಿತ್ಯ ದೀಪಾಲಂಕಾರ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ
Vidhana Soudha lighting: ಈ ಮೊದಲು ರಾಷ್ಟ್ರೀಯ ಹಬ್ಬ ಹಾಗೂ ವಿಶೇಷ ಸಂದರ್ಭಗಳಲ್ಲಿ ಮಾತ್ರ ವಿಧಾನಸೌಧಕ್ಕೆ ದೀಪಾಲಂಕಾರ ಮಾಡಲಾಗುತ್ತಿತ್ತು. ಆದರೆ, ಇನ್ನುಮುಂದೆ ಪ್ರತಿದಿನ ಬಣ್ಣಬಣ್ಣದ ಬೆಳಕಿನಿಂದ ಶಕ್ತಿಸೌಧ ಕಂಗೊಳಿಸಲಿದೆ. ಭಾನುವಾರ ಸಂಜೆ ಸಿಎಂ ಸಿದ್ದರಾಮಯ್ಯ ಅವರು ವಿಧಾನಸೌಧದ ನಿತ್ಯ ದೀಪಾಲಂಕಾರವನ್ನು ಉದ್ಘಾಟಿಸಿದ್ದಾರೆ.


ಬೆಂಗಳೂರು: ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರ (Vidhana Soudha lighting) ವ್ಯವಸ್ಥೆ ಮಾಡಿದ್ದು, ಭಾನುವಾರ ಸಂಜೆ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ನಿತ್ಯ ದೀಪಾಲಂಕಾರವನ್ನು ಉದ್ಘಾಟಿಸಿದರು. ಈ ಮೊದಲು ರಾಷ್ಟ್ರೀಯ ಹಬ್ಬ ಹಾಗೂ ವಿಶೇಷ ಸಂದರ್ಭಗಳಲ್ಲಿ ಮಾತ್ರ ವಿಧಾನಸೌಧಕ್ಕೆ ದೀಪಾಲಂಕಾರ ಮಾಡಲಾಗುತ್ತಿತ್ತು. ಆದರೆ, ಇನ್ನುಮುಂದೆ ಪ್ರತಿದಿನ ಬಣ್ಣಬಣ್ಣದ ಬೆಳಕಿನಿಂದ ಶಕ್ತಿಸೌಧ ಕಂಗೊಳಿಸಲಿದೆ. ಪ್ರವಾಸಿಗರು ಹಾಗೂ ಬೆಂಗಳೂರಿಗರು ನಿತ್ಯ ಸಾವಿರಾರು ಸಂಖ್ಯೆಯಲ್ಲಿ ವಿಧಾನಸೌಧ ವೀಕ್ಷಿಸಲು ಆಗಮಿಸುವುದರಿಂದ ಶಾಶ್ವತ ದೀಪಾಲಂಕಾರವನ್ನು ರಾಜ್ಯ ಸರ್ಕಾರ ಮಾಡಿದೆ.

ವಿಧಾನಸೌಧ ನಿರ್ಮಾಣದ ಉದ್ದೇಶ ಈಡೇರಿಸಲು ಶ್ರಮಿಸೋಣ: ಸಿಎಂ
ವಿಧಾನಸೌಧದ ನೂತನ ನಿತ್ಯ ದೀಪಾಲಂಕಾರವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಸರ್ಕಾರದ ಕೆಲಸ ದೇವರ ಕೆಲಸ ಎನ್ನುವ ಮಾತು ಸಾರ್ಥಕಗೊಳಿಸುವ ಕೆಲಸ ನಮ್ಮಿಂದ ಆಗಬೇಕು. ರಾಜ್ಯದ ಕಟ್ಟ ಕಡೆಯ ಮನುಷ್ಯನಿಗೂ ನ್ಯಾಯ, ನೆಮ್ಮದಿ ಕೊಡಿಸಲು ಜನ ನಮ್ಮನ್ನು ವಿಧಾನಸೌಧಕ್ಕೆ ಆರಿಸಿ ಕಳುಹಿಸಿದ್ದಾರೆ ಎಂದು ತಿಳಿಸಿದರು.

ಪಾರ್ಲಿಮೆಂಟ್ ಮತ್ತು ವಿಧಾನಸೌಧ ಜನರ ಮತ್ತು ರಾಜ್ಯದ ಹಾಗೂ ದೇಶದ ಸಮಸ್ಯೆಗಳನ್ನು ಚರ್ಚಿಸಿ, ಪರಿಹಾರ ಕಂಡುಕೊಳ್ಳುವ ದೇಗುಲಗಳು. ಸರ್ಕಾರದ ಕೆಲಸ ದೇವರ ಕೆಲಸ ಎನ್ನುವ ಮಾತನ್ನು ಪ್ರತಿಯೊಬ್ಬರೂ ಸಾರ್ಥಕಗೊಳಿಸುವ ರೀತಿಯಲ್ಲಿ ಪ್ರತಿಯೊಬ್ಬರೂ ಕೆಲಸ ಮಾಡಿ ರಾಜ್ಯದ ಕಟ್ಟ ಕಡೆಯ ಮನುಷ್ಯನಿಗೂ ನ್ಯಾಯ, ನೆಮ್ಮದಿ ಕೊಡಿಸಬೇಕು ಎಂದರು.

ಸ್ವಾತಂತ್ರ್ಯ ಬಂದು, ಸಂವಿಧಾನ ರಚನೆಯಾಗಿ 75 ವರ್ಷಗಳಾದರೂ ಅಸಮಾನತೆಯನ್ನು ಇನ್ನೂ ತೆಗೆದುಹಾಕಲು ಸಾಧ್ಯವಾಗಿಲ್ಲ. ವಿಧಾನಸೌಧ, ಸುವರ್ಣಸೌಧ, ವಿಕಾಸಸೌಧದಲ್ಲಿ ಕುಳಿತು ಸಮ ಸಮಾಜ ತರುವ ದಿಕ್ಕಿನಲ್ಲಿ ಶ್ರಮಿಸಬೇಕು. ಕಾನೂನು ಸುವ್ಯವಸ್ಥೆ ಸುಗಮ ಆಗಿರಬೇಕಾದರೆ ಅಸಮಾನತೆ ಅಳಿಯಬೇಕು ಎಂದರು.

ಜನರ ಕೆಲಸ ಸರಿಯಾಗಿ ಮಾಡಲು ನಮ್ಮನ್ನು ವಿಧಾನಸೌಧಕ್ಕೆ ಕಳುಹಿಸಿದ್ದಾರೆ. ಈ ಉದ್ದೇಶಕ್ಕಾಗಿ ವಿಧಾನಸೌಧ ಕಟ್ಟಿಸಲಾಗಿದೆ. ಈ ಉದ್ದೇಶ ಈಡೇರಿಸಿ ಜನರ ಸಮಸ್ಯೆ ಬಗೆಹರಿಸುವ ಶಕ್ತಿ ನಮಗೆ ಬರಲಿ, ರಾಜ್ಯದ ಜನತೆಗೂ ಆರ್ಥಿಕ ಶಕ್ತಿ ತರಲು ಯತ್ನಿಸೋಣ ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ, ವಿಧಾನಸೌಧಕ್ಕೆ ಶಾಶ್ವತ ದೀಪಾಲಂಕಾರಕ್ಕೆ ಕಾಳಜಿ ವಹಿಸಿ ಕಾರ್ಯಗತ ಮಾಡಿದ ವಿಧಾನಸಭಾಧ್ಯಕ್ಷರಾದ ಯು.ಟಿ.ಖಾದರ್ ಅವರಿಗೆ ಸರ್ಕಾರದ ಪರವಾಗಿ ಮುಖ್ಯಮಂತ್ರಿಗಳು ಅಭಿನಂದಿಸಿದರು.

ಈ ಸುದ್ದಿಯನ್ನೂ ಓದಿ | Basanagouda Patil Yatnal: ಬಿಎಸ್‌ವೈ ಕುಟುಂಬದಿಂದ ಬಿಜೆಪಿ ಮುಕ್ತವಾದರೆ ಮತ್ತೆ ಪಕ್ಷ ಸೇರುವೆ: ಶಾಸಕ ಯತ್ನಾಳ್

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಸಚಿವರಾದ ಕೆ.ಜೆ.ಜಾರ್ಜ್, ಹೆಚ್.ಕೆ.ಪಾಟೀಲ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು, ನಸೀರ್ ಅಹಮದ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಅಪರ ಮುಖ್ಯಕಾರ್ಯದರ್ಶಿ ಎಲ್.ಕೆ.ಅತೀಕ್ ಅವರು ಈ ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾದರು.
