Bantwal civic worker: ಕಸ ಗುಡಿಸಲು ಫಾರ್ಚುನರ್ ಕಾರಿನಲ್ಲಿ ಬರುವ ಪೌರ ಕಾರ್ಮಿಕ; ಬಂಟ್ವಾಳದ ಶ್ರಮಿಕನ ವಿಡಿಯೊ ವೈರಲ್!
ಬಂಟ್ವಾಳದಲ್ಲಿ 50 ರೂ. ದಿನಗೂಲಿಯಿಂದ ಆರಂಭವಾದ ಪೌರ ಕಾರ್ಮಿಕರೊಬ್ಬರ ಬದುಕು ಈಗ ಐಷರಾಮಿ ಕಾರಿನಲ್ಲಿ ಓಡಾಡುವ ಹಂತಕ್ಕೆ ಬಂದಿದೆ. ಸ್ವಂತ ಮನೆಯನ್ನೂ ಹೊಂದಿದ್ದಾರೆ. ಪ್ರತಿದಿನ ಬೆಳಗ್ಗೆ 5ರಿಂದ ಮಧ್ಯಾಹ್ನ 12ರವರೆಗೂ ಅವರು ರಸ್ತೆ ಬದಿ ಕಸ ಗುಡಿಸುವ ಜತೆಗೆ ವಿವಿಧ ಕೆಲಸಗಳನ್ನು ಮಾಡುತ್ತಾ ಬದುಕು ಕಟ್ಟಿಕೊಂಡಿರುವ ಇವರ ಕಥೆ ಹಲವರಿಗೆ ಸ್ಫೂರ್ತಿಯಾಗಿದೆ.
-
ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ 45 ವರ್ಷದ ಪೌರ ಕಾರ್ಮಿಕನ (civic worker) ಕಥೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿದೆ. ಬಂಟ್ವಾಳ ಪಟ್ಟಣ ಪುರಸಭೆಯಲ್ಲಿ ಪೌರ ಕಾರ್ಮಿಕರಾಗಿರುವ ಸೇಸಪ್ಪ (Sesappa) ಎಂಬುವವರು ಪ್ರತಿದಿನ ಬೆಳಗ್ಗೆ 5ರಿಂದ ಮಧ್ಯಾಹ್ನ 12ರವರೆಗೂ ರಸ್ತೆ ಬದಿ ಕಸ ಗುಡಿಸುತ್ತಾರೆ. ಇದರಲ್ಲೇನು ವಿಶೇಷ ಅಂತೀರಾ?, ಈ ಪೌರ ಕಾರ್ಮಿಕ ಕೆಲಸಕ್ಕೆ ಬರುವುದೇ ತನ್ನದೇ ಐಷಾರಾಮಿ ಫಾರ್ಚೂನರ್ ಕಾರಿನಲ್ಲಿ!
ಹೌದು, ನಂಬಲು ಆಗುತ್ತಿಲ್ಲ ಎಂದಾದರೆ, ನೀವು ಬಂಟ್ವಾಳದ ಬಿ.ಸಿ. ರೋಡ್‌ಗೆ ಬಂದರೆ ಕಣ್ಣಾರೆ ನೋಡಬಹುದು. ಬಂಟ್ವಾಳದ ಸೇಸಪ್ಪಣ್ಣ ಎಂಬ ಪೌರ ಕಾರ್ಮಿಕ ಪ್ರತಿನಿತ್ಯ ಕೆಲಸದ ಸ್ಥಳಕ್ಕೆ ತಮ್ಮದೇ ಫಾರ್ಚೂನರ್ ಕಾರನ್ನು ಸ್ವತಃ ಚಾಲನೆ ಮಾಡಿಕೊಂಡು ಬರುತ್ತಾರೆ. ಒಂದು ಜಾಗದಲ್ಲಿ ಅದನ್ನು ನಿಲ್ಲಿಸಿ ಬೆಳಗ್ಗೆ 5ಕ್ಕೇ ಪೊರಕೆ ಹಿಡಿದು ತಮ್ಮ ಕೆಲಸ ಆರಂಭಿಸುತ್ತಾರೆ. 50 ರೂ. ದಿನಗೂಲಿಯಿಂದ ಆರಂಭವಾದ ಅವರ ಬದುಕು ಈಗ ಐಷರಾಮಿ ಕಾರಿನಲ್ಲಿ ಓಡಾಡುವ ಹಂತಕ್ಕೆ ಬಂದಿದೆ. ಸ್ವಂತ ಮನೆಯನ್ನೂ ಹೊಂದಿದ್ದಾರೆ.
Meet Mr. Sesanna from Bantwal, Kudla,
— Vije (@vijeshetty) August 23, 2026
who arrives every morning at 5 for civic work with his Fortuner Car 👌 pic.twitter.com/7g1xJB2kCM
ಕೇವಲ 50 ರೂ. ದಿನಗೂಲಿಗೆ ಕೆಲಸ ಆರಂಭ
1996ರಲ್ಲಿ ಕೇವಲ 50 ರೂ. ದಿನಗೂಲಿಗೆ ಪೌರಕಾರ್ಮಿಕರಾಗಿ ಕೆಲಸ ಆರಂಭಿಸಿದ ಸೇಸಪ್ಪಣ್ಣ, ದಿನ ಕಳೆದಂತೆ ಕಾಯಂ ನೌಕರರಾದರು. 3ನೇ ತರಗತಿಯ ವಿದ್ಯಾಭ್ಯಾಸ ಹೊಂದಿದ್ದರೂ, ಬದುಕಿನ ಪಾಠಗಳನ್ನು ಅವರು ಅನುಭವದಿಂದ ಕಲಿತರು. ಜೀವನದ ಒಂದು ಹಂತದಲ್ಲಿ ವೈಯಕ್ತಿಕ ಮತ್ತು ಕೌಟುಂಬಿಕ ಕಾರಣಗಳಿಂದ ಕುಡಿತದ ಚಟಕ್ಕೆ ಒಳಗಾಗಿದ್ದರು. ಆದರೆ ಅದನ್ನು ತಮ್ಮ ಬದುಕಿನ ಅಂತಿಮ ಅಧ್ಯಾಯವಾಗಲು ಅವರು ಬಿಡಲಿಲ್ಲ.
2005ರ ಬಳಿಕ ಬದುಕನ್ನು ಬದಲಿಸಿಕೊಳ್ಳುವ ದೃಢ ನಿರ್ಧಾರ ಕೈಗೊಂಡರು. ಆಗ ಎಸ್‌ಐ ಆಗಿದ್ದ ಬೆಳ್ಳಿಯಪ್ಪ ಅವರ ಮಾತು ಅವರಿಗೆ ಪ್ರೇರಣೆಯಾಯಿತು. ಕುಡಿತವನ್ನು ಸಂಪೂರ್ಣವಾಗಿ ತ್ಯಜಿಸಿ, ದುಡಿಮೆಯ ದಾರಿಯಲ್ಲಿ ಹೊಸ ಬದುಕು ಆರಂಭಿಸಿದರು. ಅಲ್ಲಿಂದ ಸೇಸಪ್ಪಣ್ಣ ಜೀವನದ ದಿಕ್ಕೇ ಬದಲಾಯಿತು. ದುಡಿಮೆ ಜತೆಗೆ ಕಾರು ಖರೀದಿಸುವ ಕ್ರೇಜ್ ಶುರುವಾಯಿತು. ಒಂದೊಂದು ಕಾರಿನಿಂದ ಬಡ್ತಿ ಪಡೆದು ಈಗ ಫಾರ್ಚೂನರ್ ಮಟ್ಟಕ್ಕೆ ಬೆಳೆದಿದ್ದಾರೆ.

ಸೇಸಪ್ಪಣ್ಣ ಪೌರ ಕಾರ್ಮಿಕರಾಗಿ ಸೇವೆ ಸಲ್ಲಿಸುವ ಜತೆಗೆ ಅಗತ್ಯವಿದ್ದಾಗ ತ್ಯಾಜ್ಯ ವಿಲೇವಾರಿ ವಾಹನದ ಚಾಲಕರ ಜವಾಬ್ದಾರಿಯನ್ನೂ ನಿರ್ವಹಿಸಿದ್ದಾರೆ. ಮಧ್ಯಾಹ್ನದ ಬಳಿಕ ಹೈನುಗಾರಿಕೆ ಹಾಗೂ ಕೂಲಿ ಕೆಲಸಕ್ಕೂ ತೆರಳುತ್ತಾರೆ.
ಕಾರಿನ ಕ್ರೇಜ್
ಆರಂಭದಲ್ಲಿ ಸಣ್ಣ ಕಾರೊಂದನ್ನು ಖರೀದಿಸಿದ್ದ ಅವರು, ಬಳಿಕ ಆಲ್ಟೋ, ನಂತರ ಸ್ಕಾರ್ಪಿಯೋ ಕಾರನ್ನು ಹೊಂದಿದ್ದರು. ಪ್ರತಿಬಾರಿಯೂ ತಮ್ಮಲ್ಲಿದ್ದ ಹಳೆಯ ಕಾರನ್ನು ಬದಲಾಯಿಸಿ, ಅಗತ್ಯವಿದ್ದಷ್ಟು ಲೋನ್ ಪಡೆದು ಹೊಸ ಕಾರನ್ನು ಖರೀದಿಸುತ್ತಾ ಬಂದಿದ್ದಾರೆ. ಕಳೆದ ಕೆಲವು ತಿಂಗಳ ಹಿಂದೆ ತಮ್ಮಲ್ಲಿದ್ದ ಆಲ್ಟೋ ಮತ್ತು ಸ್ಕಾರ್ಪಿಯೋ 2 ಕಾರುಗಳನ್ನು ನೀಡಿ, ಅದರ ಜತೆಗೆ ಸಾಲ ಪಡೆದು 9 ಲಕ್ಷ ಬೆಲೆಯ ಸೆಕೆಂಡ್ ಹ್ಯಾಂಡ್ ಫಾರ್ಚೂನರ್ ಕಾರನ್ನು ಖರೀದಿಸಿದ್ದಾರೆ.
ಸೇಸಪ್ಪಣ್ಣ ಬದುಕಿನಲ್ಲಿ ಮರೆಯಲಾಗದ ನೋವುಗಳೂ ಇವೆ. ತಂದೆ ನಿಧನರಾದಾಗ ಅಂತ್ಯಸಂಸ್ಕಾರ ನಡೆಸಲು ಕೈಯಲ್ಲಿ ಹಣವಿರಲಿಲ್ಲ. ನೆರವಿಗೆ ಜನರೂ ಇರಲಿಲ್ಲ. ಕೊನೆಗೆ ತಂದೆಯ ಮೃತದೇಹವನ್ನು ತಾವೇ ಹೊತ್ತು ನೇತ್ರಾವತಿ ನದಿ ತೀರಕ್ಕೆ ಕೊಂಡೊಯ್ದು ಅಂತ್ಯಸಂಸ್ಕಾರ ನೆರವೇರಿಸಿದ ಘಟನೆ ಅವರ ಮನಸ್ಸಿನಲ್ಲಿ ಇಂದಿಗೂ ಅಚ್ಚಳಿಯದೆ ಉಳಿದಿದೆ.
ಸರಕಾರಿ ಭೂಮಿಯಲ್ಲೂ ಮರಳು ಎತ್ತುವಳಿ ಆರೋಪ : ಕೃಷಿ ಭೂಮಿಗೂ ಬಿಡದ ಮರಳುಗಾರಿಕೆ!
ಗೌರವಯುತವಾದ ಬದುಕು ಕಾಣುವ ಹಂಬಲ
ಬದುಕಿನಲ್ಲಿ ನಾನಾ ಕಷ್ಟಗಳನ್ನು ಎದುರಿಸಿದ್ದೇನೆ. ನನ್ನ ವೃತ್ತಿಯನ್ನು ಶ್ರದ್ಧೆಯಿಂದ ನಿರ್ವಹಿಸುತ್ತೇನೆ. ಜೊತೆಗೆ ನಾನು ಎಲ್ಲರ ಹಾಗೆ ಗೌರವಯುತವಾದ ಬದುಕು ಕಾಣುವ ಹಂಬಲದೊಂದಿಗೆ ಬೆಳೆಯುತ್ತಿದ್ದೇನೆ, ನನ್ನ ಮಕ್ಕಳನ್ನು ಬೆಳೆಸಿದ್ದೇನೆ ಎಂದು ಸೇಸಪ್ಪಣ್ಣ ಹೇಳುತ್ತಾರೆ.