Dharmasthala: ನಮ್ಮಿಂದ ಯಾವ ತಪ್ಪುಗಳು ನಡೆದಿಲ್ಲ, ಆದರೂ ನಮ್ಮ ಮೇಲೆ ಯಾಕಿಷ್ಟು ಹಗೆತನ? ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ
ಶ್ರೀ ಮಂಜುನಾಥ ಸ್ವಾಮಿ ಹಾಗೂ ಶ್ರೀ ಅಣ್ಣಪ್ಪ ಸ್ವಾಮಿಯ ಭಕ್ತಾದಿಗಳು ಧರ್ಮಸ್ಥಳದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಮಂಜುನಾಥನ ಸನ್ನಿಧಿ ಮುಂದೆ ತೆಂಗಿನ ಕಾಯಿ ಒಡೆದು ಪ್ರಾರ್ಥನೆ ಸಲ್ಲಿಸಿದ ಭಕ್ತರು ಮೆರವಣಿಗೆ ಮೂಲಕ ಅಣ್ಣಪ್ಪ ಸ್ವಾಮಿ ಬೆಟ್ಟಕ್ಕೆ ಸಾಗಿ ಅಲ್ಲಿಯೂ ಪ್ರಾರ್ಥನೆ ಸಲ್ಲಿಸಿದರು. ಈ ಕಾರ್ಯಕ್ರಮದಲ್ಲಿ ಅನೇಕ ಸಂಖ್ಯೆಯಲ್ಲಿ ಮಹಿಳಾ ಭಕ್ತಾದಿಗಳು ಸೇರಿದ್ದರು. ನಂತರ ಮೆರವಣಿಗೆ ಅಮೃತವರ್ಷಿಣಿಗೆ ಸಾಗಿ ಸಹಸ್ರ ಲಲಿತಾ ಪಂಚಾಕ್ಷರಿ ನಾಮ ಪಠಣ ಸಲ್ಲಿಸಲಾಯಿತು.

ಡಾ.ಡಿ.ವೀರೇಂದ್ರ ಹೆಗ್ಗಡೆ -

ದಕ್ಷಿಣ ಕನ್ನಡ: ಧರ್ಮಸ್ಥಳ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ (SIT) ರಚಿಸಿದ್ದಕ್ಕಾಗಿ ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಧರ್ಮಸ್ಥಳದ (Dharmasthala) ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ(D.Veerendra Heggade) ಅವರು ಹೇಳಿದ್ದಾರೆ. ತಪ್ಪು ಮಾಡದಿದ್ದರೂ ನಮ್ಮ ಮೇಲೆ ಯಾಕಿಷ್ಟು ದ್ವೇಷ-ಆರೋಪ ಮಾಡುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಅವರು ಪ್ರಶ್ನೆಸಿದ್ದು, ಧರ್ಮಸ್ಥಳ ಕ್ಷೇತ್ರದ ವಿರುದ್ಧ ನಡೆದ ಷಡ್ಯಂತ್ರದ ಬಗ್ಗೆ ಮೌನ ಮುರಿದಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಭಕ್ತಾಧಿಗಳು (Dharmasthala villagers) ನಡೆಸಿದ ಸಾಮೂಹಿಕ ಪ್ರಾರ್ಥನೆ ಬಳಿಕ ಅಮೃತವರ್ಷಿಣಿ ಸಭಾಂಗಣದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತಾನಾಡಿದ ಅವರು, “ಊರವರ, ಕ್ಷೇತ್ರದ ಭಕ್ತರೆಲ್ಲರ ಪ್ರೀತಿ ವಿಶ್ವಾಸಗಳು ನಮ್ಮನ್ನು ಜೀವಂತವಾಗಿರಿಸಿದೆ. ಇದರಿಂದಾಗಿ ಇನ್ನೂ ಹೆಚ್ಚು-ಹೆಚ್ಚು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸೇವೆ ಮಾಡಬೇಕೆಂಬ ಚೈತನ್ಯ ಮೂಡುತ್ತಿದೆ. ಕೆಲವು ಸಮಯಗಳಿಂದ ಕ್ಷೇತ್ರದ ಮೇಲೆ ಸತತವಾಗಿ ಆರೋಪಗಳು, ದ್ವೇಷಗಳು ಬರತೊಡಗಿತು. ಅದಕ್ಕೆ ಕಾರಣವೇನು ಎಂದು ನನಗೆ ಇದುವರೆಗೂ ತಿಳಿದಿಲ್ಲ. ಈಗ ಸರ್ಕಾರ ನಡೆಸುತ್ತಿರುವ ತನಿಖೆಯಲ್ಲಿ ಸತ್ಯಗಳು ಹೊರ ಬರುತ್ತಿವೆ. ನಮ್ಮಿಂದ ಯಾವ ತಪ್ಪುಗಳು ನಡೆದಿಲ್ಲ ಎಂದು ತಿಳಿಯುತ್ತಿದೆ ಎಂದು ಹೇಳಿದರು.
ಇದುವರೆಗೂ ಅನೇಕರು ಶ್ರೀ ಕ್ಷೇತ್ರಕ್ಕೆ ಆಗಮಿಸಿ ಕ್ಷೇತ್ರದ ಜೊತೆಗೆ ಇದ್ದೇವೆ ಎಂದು ಹೇಳಿದ್ದಾರೆ. ಊರವರೂ ಕೂಡ ಕ್ಷೇತ್ರದ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾ ಕ್ಷೇತ್ರದ ಕಾರ್ಯಗಳಿಗೆ ಬೆಂಬಲವಾಗಿ ನಿಂತಿದ್ದಾರೆ. ನಿಮ್ಮೆಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಪ್ರೀತಿ, ವಿಶ್ವಾಸಗಳು ಹೀಗೆಯೇ ಇರಲಿ ಎಂದರು.
ಸಿದ್ಧಗಂಗಾ ಮಠದ ಸ್ವಾಮಿಯವರ ಕೃತಿಯನ್ನು ಓದುತ್ತಿದ್ದೆ. ಒಂದು ಕಡೆ ಶ್ರೀ ಕ್ಷೇತ್ರ ಧರ್ಮಸ್ಥಳದ ಸಾಮೂಹಿಕ ವಿವಾಹ ಹಾಗೂ ಅನೇಕ ಯೋಜನೆಗಳ ಬಗೆ ಮೆಚ್ಚುಗೆ ಮಾತುಗಳನ್ನು ಆಡಿರುವುದನ್ನು ನೋಡಿದೆ. ತುಂಬಾ ಸಂತೋಷವಾಯಿತು. ಶ್ರೀ ಕ್ಷೇತ್ರದ ಮೂಲಕ ಇಂತಹ ಸೇವಾ ಕಾರ್ಯ ನೆರವೇರಲು ನಾನು ನಿಮಿತ್ತ ಮಾತ್ರ ಆಗಿದ್ದೇನೆ. ಶ್ರೀ ಸ್ವಾಮಿಯ ಅನುಗ್ರಹ, ನಿಮ್ಮೆಲ್ಲರ ಹಾರೈಕೆ ಹಾಗೂ ಕುಟುಂಬಸ್ಥರ ಸಹಕಾರದಿಂದ ಗ್ರಾಮೀಣಾಭಿವೃದ್ದಿ, ವಿದ್ಯಾಸಂಸ್ಥೆ, ಆಸ್ಪತ್ರೆ ಮುಂತಾದ ಹಲವು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮುನ್ನಡೆಸಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಇನ್ನು ಕಾರ್ಯಕ್ರಮಕ್ಕೂ ಮುನ್ನ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ನಡೆಸುತ್ತಿರುವವರ ಮೇಲೆ ಭಕ್ತರು ಹಾಗೂ ಧರ್ಮಸ್ಥಳ ಗ್ರಾಮಸ್ಥರು ಸಿಡಿದೆದ್ದಿದ್ದಾರೆ. ಮುಖ್ಯವಾಗಿ ತಲೆಬುರುಡೆ ಕಥೆ ಸೃಷ್ಟಿಸಿ, ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಿದ್ದಾರೆ ಎಂಬ ಆರೋಪ ಹೊತ್ತಿರುವವರ ವಿರುದ್ಧ ಮಂಜುನಾಥ ಸ್ವಾಮಿ ಹಾಗೂ ಅಣ್ಣಪ್ಪ ಸ್ವಾಮಿಗೆ ಭಕ್ತರು ಪೂಜೆ ಸಲ್ಲಿಸಿ, ಪ್ರಾರ್ಥನೆ ಸಲ್ಲಿಸಿದ್ದಾರೆ.
ಕ್ಷೇತ್ರದ ವಿರುದ್ಧ ಸುಳ್ಳು ಆರೋಪ ಮತ್ತು ಷಡ್ಯಂತ್ರ ಮಾಡಿದವರಿಗೆ ಶ್ರೀ ಅಣ್ಣಪ್ಪ ಸ್ವಾಮಿ, ಶ್ರೀ ಮಂಜುನಾಥ ಸ್ವಾಮಿ ಹಾಗೂ ಉಲ್ಲಾಳ್ತಿ ತಕ್ಕ ಶಾಸ್ತಿ ಮಾಡಿದ್ದಾರೆ ಎಂದು ತಮ್ಮ ಆಕ್ರೋಶವನ್ನು ಹೊರ ಹಾಕಿದ ಭಕ್ತಾದಿಗಳು ಮಂಜುನಾಥನ ಸನ್ನಿಧಿ ಮುಂದೆ ತೆಂಗಿನ ಕಾಯಿ ಒಡೆದು ಪ್ರಾರ್ಥನೆ ಸಲ್ಲಿಸಿದರು.
ಈ ಸುದ್ದಿಯನ್ನೂ ಓದಿ: Dharmasthala Case: ವಿಚಾರಣೆಗೆ ಹಾಜರಾಗದ ಮಹೇಶ್ ಶೆಟ್ಟಿ ತಿಮರೋಡಿ, ಮನೆ ಗೋಡೆಗೆ ನೋಟೀಸ್
ಅಣ್ಣಪ್ಪ ಸ್ವಾಮಿಗೆ ಭಕ್ತರಿಂದ ಪೂಜೆ
ಭಕ್ತರು ಮೆರವಣಿಗೆ ಮೂಲಕ ಕ್ಷೇತ್ರಪಾಲಕ ಅಣ್ಣಪ್ಪ ಸ್ವಾಮಿ ಬೆಟ್ಟಕ್ಕೆ ಸಾಗಿ ಅಲ್ಲಿಯೂ ತೆಂಗಿನ ಕಾಯಿ ಒಡೆದು ಪ್ರಾರ್ಥನೆ ಸಲ್ಲಿಸಿದರು. ಅಣ್ಣಪ್ಪ ಸ್ವಾಮಿಗೆ ಈಡುಗಾಯಿ ಒಡೆದು ಬೇಡಿಕೊಂಡ ಧರ್ಮಸ್ಥಳ ಗ್ರಾಮದ ಜನ ಹಾಗೂ ಭಕ್ತರು, ವಿಶೇಷ ಪ್ರಾರ್ಥನೆ ನಡೆಸಿದ್ರು. ಕುತಂತ್ರಿಗಳ ಕುತಂತ್ರ ಅನಾವರಣ ಆಗಿದ್ದು, ಮುಂದೆಯೂ ಅವರಿಗೆ ತಕ್ಕ ಶಿಕ್ಷೆ ಆಗಲಿದೆ ಎಂಬ ನಂಬಿಕೆಯನ್ನು ವ್ಯಕ್ತಪಡಿಸಿದ್ದರು.
ಕಾರ್ಯಕ್ರಮದಲ್ಲಿ ಅನೇಕ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗಿಯಾಗಿದ್ದು, ಮಹಿಳಾ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಅಣ್ಣಪ್ಪ ಸ್ವಾಮಿ ಬೆಟ್ಟದ ನಂತರ ಮೆರವಣಿಗೆ ಅಮೃತವರ್ಷಿಣಿಗೆ ಸಾಗಿ ಅಲ್ಲಿ ಸಹಸ್ರ ಲಲಿತಾ ಪಂಚಾಕ್ಷರಿ ನಾಮ ಪಠಣ ನಡೆಯಿತು. ಮಹಿಳಾ ಭಕ್ತಾದಿಗಳಿಗೆ ಬಾಗಿನ ನೀಡಿ ವಿಶೇಷವಾಗಿ ಗೌರವಿಸಲಾಯಿತು. ಇದೇ ವೇಳೆ ಕ್ಷೇತ್ರದ ವಿರುದ್ಧ ನಡೆದ ಎಲ್ಲಾ ಅಪಪ್ರಚಾರಗಳು ಒಂದೊಂದಾಗಿ ಹೊರಬರುತ್ತಿತ್ತು, ಎಲ್ಲಾ ಅಪಪ್ರಚಾರಗಳಿಗೂ ಮುಕ್ತಿ ಸಿಗಬೇಕು ಎಂದು ಗ್ರಾಮಸ್ಥರು ಪ್ರಾರ್ಥನೆ ಸಲ್ಲಿಸಿದರು.
ಸಭೆಯಲ್ಲಿ ಹೇಮಾವತಿ ವೀ. ಹೆಗ್ಗಡೆ, ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಶ್ರದ್ಧಾ ಅಮಿತ್, ನಂದೀಶ್ ಹಾಗೂ ಮೈತ್ರಿ ನಂದೀಶ್ ಉಪಸ್ಥಿತರಿದ್ದರು.
ಧರ್ಮಸ್ಥಳ ಹಿತರಕ್ಷಣಾ ವೇದಿಕೆಯ ಕೋಶಾಧಿಕಾರಿ ಶ್ರೀನಿವಾಸ್ ರಾವ್ ಧರ್ಮಸ್ಥಳ, ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಮಲಾ, ಹರಿದಾಸ್ ಗಾಂಭೀರ, ಧರ್ಮಸ್ಥಳ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ವಕೀಲರಾದ ಕೇಶವ ಪಿ. ಗೌಡ , ಸುಬ್ರಮಣ್ಯ ಪ್ರಸಾದ್, ಎ.ವಿ. ಶೆಟ್ಟಿ, ಪ್ರೀತಂ ಡಿ ಪೂಜಾರಿ ಧರ್ಮಸ್ಥಳ, ಶಾಂಭವಿ ರೈ ಧರ್ಮಸ್ಥಳ, ಧನಕೀರ್ತಿ ಅರಿಗ ಧರ್ಮಸ್ಥಳ, ಅಖಿಲ್ ಶೆಟ್ಟಿ ನೇತ್ರಾವತಿ, ಪ್ರಭಾಕರ್ ಪೂಜಾರಿ ಕನ್ಯಾಡಿ ಉಪಸ್ಥಿತರಿದ್ದರು. ಗ್ರಾಮಸ್ಥರು, ಧರ್ಮಸ್ಥಳದ ಹಿತರಕ್ಷಣಾ ವೇದಿಕೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.