#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

SDM Hospital: ಉಜಿರೆಯ SDM ಆಸ್ಪತ್ರೆಯಲ್ಲಿ ಎಂಡೋಸ್ಕೋಪಿಕ್ ಸರ್ಜರಿ ಮೂಲಕ ವಿಶ್ವದ ಮೊದಲ ಸಂಪೂರ್ಣ ಬೆನ್ನುಮೂಳೆಯ ಗೆಡ್ಡೆ ನಿರ್ಮೂಲನೆ

ಗ್ರಾಮೀಣ ಭಾಗದ ರೋಗಿಗಳ ಪಾಲಿಗೆ ಆಶಾಕಿರಣವಾಗಿರುವ ಉಜಿರೆಯ ಎಸ್.ಡಿ.ಎಂ. ಆಸ್ಪತ್ರೆಯಲ್ಲಿ ಇದೀಗ ಎಂಡೋಸ್ಕೋಪಿಕ್ ಶಸ್ತ್ರಚಿಕಿತ್ಸೆಯಲ್ಲಿ ಹೊಸ ಮೈಲುಗಲ್ಲೊಂದು ದಾಖಲಾಗಿದೆ.

ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯಕೀಯ ಸಿಬ್ಬಂದಿಗಳ ತಂಡವನ್ನು ಅಭಿನಂದಿಸಿದ ಡಾ. ಹೆಗ್ಗಡೆ

ಡಾ. ಮಹೇಶ್ ಮತ್ತು ಡಾ. ಶತಾನಂದಪ್ರಸಾದ್ ರಾವ್ ಹಾಗೂ ತಂಡವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಗೌರವಿಸಿ ಅಭಿನಂದಿಸಿದರು.

Profile Sushmitha Jain Jan 27, 2025 12:30 PM

ಉಜಿರೆ: ಎಸ್.ಡಿ.ಎಂ. ಆಸ್ಪತ್ರೆಯ (SDM Multispecialty Hospital) ಡಾ. ಮಹೇಶ್ ಕೆ. ಮತ್ತು ಡಾ. ಶತಾನಂದಪ್ರಸಾದ್ ರಾವ್ ನೇತೃತ್ವದ ತಜ್ಞ ವೈದ್ಯರ ತಂಡ ಶಸ್ತ್ರಚಿಕಿತ್ಸೆಯ ಮೂಲಕ ಮಹಿಳೆಯೊಬ್ಬರ ಬೆನ್ನುಮೂಳೆಯಲ್ಲಿದ್ದ ಮೂರು ಸೆಂ. ಮೀ ಗಾತ್ರದ ಗೆಡ್ಡೆಯನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದೆ.

ಈ ಮೂಲಕ ಗ್ರಾಮೀಣ ಭಾಗದ ಆಸ್ಪತ್ರೆಯೊಂದು ಅತೀ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸುವ ಮೂಲಕ ರೋಗಿಗೆ ರೋಗಿಗೆ ಶಾಶ್ವತ ಪರಿಹಾರ ನೀಡುವಲ್ಲಿ ಹಾಗು ವಿಶ್ವದಲ್ಲೇ ಪ್ರಥಮ ಬಾರಿಗೆ ಇಂತಹ ಶಸ್ತ್ರಚಿಕಿತ್ಸೆಯನ್ನು ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯಲ್ಲಿ ಯಶಸ್ಸನ್ನು ಸಾಧಿಸಿದ ವೈದ್ಯರ ತಂಡವನ್ನು ಹಾಗೂ ಇದರಲ್ಲಿ ಭಾಗಿಯಾಗಿದ್ದ ಸಿಬ್ಬಂದಿ ವರ್ಗದವರನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು (Dr. D.Veerendra Heggade) ಜ.26ರಂದು ಗೌರವಿಸಿ ಅಭಿನಂದಿಸಿದರು.

ಯಾವುದೇ ಹೊಸ ಪ್ರಯೋಗ ಮತ್ತು ಶಸ್ತ್ರಚಿಕಿತ್ಸೆ ಮಾಡುವಾಗ ಅನುಭವ ಹಾಗೂ ಪರಿಣತಿಯೊಂದಿಗೆ ಹೆಚ್ಚಿನ ಧೈರ್ಯ ಮತ್ತು ಆತ್ಮವಿಶ್ವಾಸವೂ ಬೇಕಾಗುತ್ತದೆ. ದೇವರ ಅನುಗ್ರಹದಿಂದ ಗ್ರಾಮೀಣ ಪ್ರದೇಶದ ಆಸ್ಪತ್ರೆಯಲ್ಲಿ ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಶಸ್ತ್ರಚಿಕಿತ್ಸೆ ನಡೆಸಿದ ಬಗ್ಗೆ ಹೆಗ್ಗಡೆಯವರ ಸಂತಸ ವ್ಯಕ್ತಪಡಿಸಿದರು.

ತಾವು ನಡೆಸಿದ ಶಸ್ತ್ರಚಿಕಿತ್ಸೆಯ ವಿಧಾನವನ್ನು ವೀಡಿಯೊ ಪ್ರದರ್ಶನದ ಮೂಲಕ ವೈದ್ಯರು ಡಾ. ಹೆಗ್ಗಡೆಯವರಿಗೆ ವಿವರಿಸಿದರು.

ಪ್ರಕರಣದ ವಿವರ: ಶಿಶಿಲ ಗ್ರಾಮದ 65 ವರ್ಷ ಪ್ರಾಯದ ಧರ್ಣಮ್ಮ ಎಂಬ ಮಹಿಳೆ ಬೆನ್ನುನೋವು ಪೀಡಿತರಾಗಿ ಚಿಕಿತ್ಸೆಗೆಂದು ಉಜಿರೆಯ ಎಸ್.ಡಿ.ಎಮ್. ಆಸ್ಪತ್ರೆಗೆ ಬಂದಿದ್ದರು. ಆಕೆಯನ್ನು ಪರೀಕ್ಷಿಸಿದಾಗ ಬೆನ್ನುಮೂಳೆಯಲ್ಲಿ 3 ಸೆಂ. ಮೀ. ಗಾತ್ರದ ಗೆಡ್ಡೆ ಕಂಡು ಬಂದಿತ್ತು.

ಸತತ ಆರು ಗಂಟೆಗಳ ಕಾಲ ಎಂಡೋಸ್ಕೋಪಿಕ್ ತಂತ್ರಜ್ಞಾನ ಬಳಸಿ ನಡೆಸಿದ ಈ ಶಸ್ತ್ರಚಿಕಿತ್ಸೆಯಲ್ಲಿ ಕೇವಲ ಒಂದು ಸೆಂ. ಮೀ. ಛೇದನದೊಂದಿಗೆ ಮೂರು ಸೆಂ. ಮೀ. ಗೆಡ್ಡೆಯನ್ನು ಯಶಸ್ವಿಯಾಗಿ ಹೊರತೆಗೆಯಲಾಯಿತು. ಹೆಚ್ಚಿನ ರಕ್ತಸ್ರಾವವಾಗದಂತೆ ಹಾಗೂ ಇತರ ಅಂಗಾಂಗಗಳಿಗೆ ಹಾನಿಯಾಗದಂತೆ ನೋವುರಹಿತ ಶಸ್ತ್ರಚಿಕಿತ್ಸೆ ಮೂಲಕ ಆಕೆ ಈಗ ಪೂರ್ಣ ಆರೋಗ್ಯವನ್ನು ಹೊಂದಿದ್ದಾರೆ.

ಹಿಂದೆ ಇಂತಹ ಶಸ್ತ್ರ ಚಿಕಿತ್ಸೆಯನ್ನು ತೆರೆದ ತಂತ್ರಜ್ಞಾನ ಬಳಸಿ ಮಾಡಲಾಗುತ್ತಿತ್ತು. ರೋಗಿಗೆ ರಕ್ತ ನಷ್ಟ ಹಾಗೂ ಸ್ನಾಯುಗಳಿಗೆ ಹಾನಿಯಾಗುವ ಸಾಧ್ಯತೆ ಇತ್ತು ಎಂದು ವೈದ್ಯರು ತಿಳಿಸಿದ್ದಾರೆ.

ವೈದ್ಯರ ತಂಡ: ಡಾ. ಮಹೇಶ್ ಕೆ. ಮತ್ತು ಮೂಳೆ ಶಸ್ತ್ರಚಿಕಿತ್ಸಕರಾದ ಡಾ. ಶತಾನಂದ ಪ್ರಸಾದ್ ರಾವ್, ಅರೆವಳಿಕೆ ತಜ್ಞರಾದ ಉಜಿರೆಯ ಡಾ. ಚೈತ್ರಾ ಆರ್. ಇವರ ತಂಡ ಈ ಯಶಸ್ವಿ ಶಸ್ತ್ರಚಿಕಿತ್ಸೆಯನ್ನು ನಡೆಸಿದರು. ಅರೆವಳಿಕೆ ತಂತ್ರಜ್ಞರಾದ ರಂಜಿತ್ ಮತ್ತು ಅಮಿತಾ, ದಾದಿಯರಾದ ಜ್ಯೋತಿ ಮತ್ತು ಶ್ವೇತಲ್ ಸಹಕರಿಸಿದರು. ಎಂ.ಆರ್.ಐ. ಸ್ಕ್ಯಾನಿಂಗ್ ಮೂಲಕ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿರುವುದಾಗಿ ತಿಳಿದುಬಂದಿದೆ. ಕೇವಲ ಒಂದು ಲಕ್ಷದ ಎರಡು ಸಾವಿರ ರೂ ವೆಚ್ಚದಲ್ಲಿ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ.

ಈ ಸುದ್ದಿಯನ್ನೂ ಓದಿ: Dr D. Veerendra Heggade: ಕಠಿಣ ದುಡಿಮೆ, ಪರಿಶ್ರಮದಿಂದ  ಉತ್ಕೃಷ್ಟ  ಸಾಧನೆ: ಡಾ.ವೀರೇಂದ್ರ ಹೆಗ್ಗಡೆ

ಡೆಹರಾಡೂನ್‌ನಲ್ಲಿ ಇತ್ತೀಚೆಗೆ ನಡೆದ ಜಾಗತಿಕ ಬೆನ್ನುಮೂಳೆ ಶಸ್ತ್ರಚಿಕಿತ್ಸಕರ ಸಮಾವೇಶದಲ್ಲಿ ಉಜಿರೆಯ ಯಶಸ್ವಿ ಶಸ್ತ್ರಚಿಕಿತ್ಸೆ ಬಗ್ಗೆ ಪ್ರಸ್ತಾಪಿಸಿದಾಗ ವಿಶ್ವದಲ್ಲೇ ಇದು ಮೊದಲ ಯಶಸ್ವಿ ಎಂಡೋಸ್ಕೋಪಿಕ್ ಇಂಟ್ರಾಡ್ಯೂರಲ್ ಬೆನ್ನುಮೂಳೆಯ ಗೆಡ್ಡೆ ಹೊರತೆಗೆಯುವ ಯಶಸ್ವಿ ಶಸ್ತ್ರಚಿಕಿತ್ಸೆ ಎಂದು ಎಲ್ಲರೂ ಅಭಿನಂದಿಸಿದ್ದಾರೆ.

ಆಸ್ಪತ್ರೆಗೆ ಬೇಕಾದ ಹೊಸ ಎಂ.ಆರ್.ಐ. ಅಳವಡಿಸುವುದಾಗಿ ಹೆಗ್ಗಡೆಯವರು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು. ಹೇಮಾವತಿ ವೀ. ಹೆಗ್ಗಡೆಯವರು ಕೂಡಾ ವೈದ್ಯರ ಸೇವೆ, ಸಾಧನೆಯನ್ನು ಶ್ಲಾಘಿಸಿ ಅಭಿನಂದಿಸಿದರು. ವೈದ್ಯಕೀಯ ಅಧೀಕ್ಷಕ ಡಾ. ದೇವೇಂದ್ರ ಕುಮಾರ್ ಮತ್ತು ಅರೆವಳಿಕೆ ತಜ್ಞರಾದ ಉಜಿರೆಯ ಡಾ. ಚೈತ್ರಾ ಆರ್. ಉಪಸ್ಥಿತರಿದ್ದರು. ಶಸ್ತ್ರ ಚಿಕಿತ್ಸೆಯಿಂದ ಗುಣಮುಖರಾದ ಶಿಶಿಲದ ಧರ್ಣಮ್ಮ ಕೂಡಾ ಸಭೆಯಲ್ಲಿ ಉಪಸ್ಥಿತರಿದ್ದರು. ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ. ಜನಾರ್ದನ್ ಸ್ವಾಗತಿಸಿದರು. ಕಾರ್ಯಕ್ರಮ ನಿರ್ವಹಿಸಿದ ಸಾರ್ವಜನಿಕ ಸಂಪರ್ಕಾಧಿಕಾರಿ ಚಿದಾನಂದ ಧನ್ಯವಾದವಿತ್ತರು.