ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಗೃಹಲಕ್ಷ್ಮಿ ಯೋಜನೆ ದುರುಪಯೋಗ; ಮೃತರ ಹೆಸರಿಗೆ 22 ಕೋಟಿ ರುಪಾಯಿ ಜಮೆ

Gruhalakshmi Scheme: ರಾಜ್ಯ ಸರ್ಕಾರ ಜಾರಿಗೆ ತಂದ ಗೃಹಲಕ್ಷ್ಮಿ ಯೋಜನೆಯಲ್ಲಿ ಭಾರಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಗೃಹಲಕ್ಷ್ಮಿ ಯೋಜನೆಯಡಿ ಮೃತ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಬರೋಬ್ಬರಿ 22 ಕೋಟಿ ರುಪಾಯಿ ವರ್ಗಾಯಿಸಿರುವ ಘಟನೆ ದಕ್ಷಿಣ ಕನ್ನಡದಲ್ಲಿ ನಡೆದಿದ್ದು ಸಮಗ್ರ ತನಿಖೆ ನಡೆಯುತ್ತಿದೆ.

ಮೃತರ ಹೆಸರಿಗೆ ಗೃಹಲಕ್ಷ್ಮಿ ಯೋಜನೆಯ 22 ಕೋಟಿ ರುಪಾಯಿ ಜಮೆ

ಸಾಂದರ್ಭಿಕ ಚಿತ್ರ -

Ramesh Ballamoole
Ramesh Ballamoole May 13, 2026 2:07 PM

ಬೆಂಗಳೂರು, ಮೇ 13: ಬಡ ಮಹಿಳೆಯರಿಗೆ, ಕುಟುಂಬಕ್ಕೆ ನೆರವಾಗಲು ರಾಜ್ಯ ಸರ್ಕಾರ ಜಾರಿಗೆ ತಂದ ಗೃಹಲಕ್ಷ್ಮಿ ಯೋಜನೆಯಲ್ಲಿ (Gruhalakshmi Scheme) ಭಾರಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಗೃಹಲಕ್ಷ್ಮಿ ಯೋಜನೆಯಡಿ ಮೃತ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಬರೋಬ್ಬರಿ 22 ಕೋಟಿ ರುಪಾಯಿ ವರ್ಗಾಯಿಸಿರುವ ಘಟನೆ ದಕ್ಷಿಣ ಕನ್ನಡದಲ್ಲಿ ನಡೆದಿದ್ದು (Dakshina Kannada News), ಭಾರಿ ಆಕ್ರೋಶ ವ್ಯಕ್ತವಾಗಿದೆ. ಸದ್ಯ ಪ್ರಕರಣದ ಸಮಗ್ರ ತನಿಖೆಗೆ ಸರ್ಕಾರ ಆದೇಶ ಹೊರಡಿಸಿದೆ.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನಲ್ಲಿ ಮಂಗಳವಾರ (ಮೇ 12) ನಡೆದ ಜಿಲ್ಲಾ ಮಟ್ಟದ ಖಾತರಿ ಯೋಜನೆಗಳ ಅನುಷ್ಠಾನ ಪರಿಶೀಲನಾ ಸಮಿತಿ ಸಭೆಯಲ್ಲಿ ಈ ವಿಷಯ ಬಹಿರಂಗಗೊಂಡಿದೆ. ಈ ಹಣವನ್ನು ಹಿಂಪಡೆಯಲು ತಕ್ಷಣ ಕ್ರಮಗಳನ್ನು ತೆಗೆದು ಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು. ನಿಷ್ಕ್ರಿಯ ಖಾತೆಗಳಿಗೆ ಹಣವನ್ನು ನಿರಂತರವಾಗಿ ವರ್ಗಾಯಿಸುವ ಬಗ್ಗೆ ರಾಜ್ಯ ಕಚೇರಿಯಿಂದ ಮಾಹಿತಿ ಬಂದಿದೆ. ದಾಖಲೆಗಳಲ್ಲಿ ಹಲವು ವ್ಯತ್ಯಾಸವಿರುವುದು ಪತ್ತೆಯಾಗಿದೆ.

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಹಣ ತಿಂಗಳು ತಿಂಗಳು ಸರಿಯಾಗಿ ಪಾವತಿಯಾಗುತ್ತಿಲ್ಲ ಎಂಬ ಜನರ ಆರೋಪದ ನಡುವೆ ಭಾರಿ ಪ್ರಮಾಣದ ಅಕ್ರಮ ಪತ್ತೆಯಾಗಿದೆ.

ಇದಲ್ಲದೆ ಕೆಲವು ಜೀವಂತ ಫಲಾನುಭವಿಗಳನ್ನು ಇಲಾಖೆಯ ದಾಖಲೆಗಳಲ್ಲಿ ಮೃತಪಟ್ಟವರು ಎಂದು ಗುರುತಿಸಿರುವ ಗಂಭೀರ ಎಡವಟ್ಟೂ ಕಂಡು ಬಂದಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದ್ದು, ಜಿಲ್ಲೆಯಲ್ಲಿ ಗೃಹ ಲಕ್ಷ್ಮಿ ಯೋಜನೆಯಡಿ 4,25,759 ರೇಷನ್ ಕಾರ್ಡ್ ಹೊಂದಿದವರು ಇದ್ದು, ಇದುವರೆಗೆ 3,82,178 ಫಲಾನುಭವಿಗಳು ನೋಂದಾಯಿಸಿದ್ದಾರೆ.

ಮಹಿಳೆಯರಿಗೆ ಸಿಹಿ ಸುದ್ದಿ, ಗೃಹಲಕ್ಷ್ಮಿ ಯೋಜನೆಯ ಎರಡು ಕಂತಿನ ಹಣ ಬಿಡುಗಡೆ

ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಜೀವಿತ ಪ್ರಮಾಣ ಪತ್ರ ಕಡ್ಡಾಯ

ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಪ್ರಮುಖ ಯೋಜನೆ ಎನಿಸಿಕೊಂಡಿರುವ ಗೃಹಲಕ್ಷ್ಮಿ ಫಲಾನುಭವಿಗಳಿಗೆ ಸಂಬಂಧಿಸಿದಂತೆ ಸರ್ಕಾರ ಕೆಲವು ದಿನಗಳ ಹಿಂದೆ ಹೊಸ ಸೂಚನೆ ನೀಡಿತ್ತು. ಯೋಜನೆಯ ದುರ್ಬಳಕೆ ತಡೆಯಲು ಸರ್ಕಾರ ಮುಖ್ಯ ನಿರ್ಧಾರವೊಂದನ್ನು ತೆಗೆದುಕೊಂಡಿದ್ದು, ಇನ್ನುಮುಂದೆ ಫಲಾನುಭವಿಗಳು ಜೀವಿತ ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯವಾಗಲಿದೆ. ಮರಣ ಹೊಂದಿರುವ ಫಲಾನುಭವಿಗಳ ಖಾತೆಗೆ ಹಣ ಜಮಾ ಆಗುತ್ತಿರುವುದನ್ನು ತಪ್ಪಿಸಲು ಜೀವಿತ ಪ್ರಮಾಣ ಪತ್ರ ಸಲ್ಲಿಸುವುದನ್ನು ಕಡ್ಡಾಯಗೊಳಿಸುವ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಿತ್ತು.

ಜೀವಿತ ಪ್ರಮಾಣ ಪತ್ರ ಸಲ್ಲಿಕೆ ಬಗ್ಗೆ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಹಾಗೂ ಎಂಎಲ್‌ಸಿ ದಿನೇಶ್ ಗೂಳಿಗೌಡ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸೂಚಿಸಿದ್ದರು. ಅಲ್ಲದೆ ಈ ಬಗ್ಗೆ ಲಿಖಿತ ಮನವಿಯನ್ನೂ ಸಲ್ಲಿಸಿದ್ದರು.

ರಾಜ್ಯದಲ್ಲಿ ಸುಮಾರು 1.24 ಕೋಟಿಗೂ ಅಧಿಕ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿದ್ದಾರೆ. ಯೋಜನೆ ಜಾರಿದಾಗಾಗಿನಿಂದ ಸರ್ಕಾರ ಈವರೆಗೆ ಫಲಾನುಭವಿಗಳಿಗೆ ಸುಮಾರು 57,300 ಕೋಟಿ ರುಪಾಯಿ ವಿತರಿಸಿದೆ. ಅದಾಗ್ಯೂ ಈ ಯೋಜನೆಯನ್ನು ದುರುಪಯೋಗಪಡಿಸಲಾಗುತ್ತಿದೆ ಎನ್ನುವ ಆರೋಪ ಪದೇ ಪದೆ ಕೇಳಿ ಬರುತ್ತಿದೆ.

ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.