ವಿದ್ಯಾರ್ಥಿಗಳು ಸ್ಪರ್ಧಾ ಮನೋಭಾವ ಬೆಳೆಸಿಕೊಳ್ಳಬೇಕು: ದಿಯಾ ಅಜಯ್
SDM College: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಬಿ.ಕಾಂ ಹಾಗೂ ಬಿ.ಬಿ.ಎ. ವಿಭಾಗಗಳು ಜಂಟಿಯಾಗಿ ಶನಿವಾರ ಇಂದ್ರಪ್ರಸ್ಥ ಸಭಾಂಗಣದಲ್ಲಿ ಒಂದು ದಿನದ ರಾಜ್ಯಮಟ್ಟದ ಅಂತರ್ ಕಾಲೇಜು ಫೆಸ್ಟ್ 'ವೆಂಚುರ- 2026' ನಡೆಸಿದವು. ಕರ್ನಾಟಕ ಮತ್ತು ಕೇರಳದ ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕಿನ ಕಸ್ಟಮರ್ ಕೇರ್ ಆಪರೇಷನ್ಸ್ ಮುಖ್ಯಸ್ಥೆ ದಿಯಾ ಅಜಯ್ ಕಾರ್ಯಕ್ರಮ ಉದ್ಘಾಟಿಸಿದರು.
ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ರಾಜ್ಯಮಟ್ಟದ ಅಂತರ್ ಕಾಲೇಜು ಫೆಸ್ಟ್ ಜರಗಿತು. -
ಉಜಿರೆ, ಏ. 4: ವಿದ್ಯಾರ್ಥಿಗಳು ಸ್ಪರ್ಧಾ ಮನೋಭಾವ ಬೆಳೆಸಿಕೊಳ್ಳುವುದರಿಂದ ಸೃಜನಶೀಲತೆ ಮತ್ತು ಕ್ರಿಯಾತ್ಮಕತೆ ಬೆಳೆಯುತ್ತದೆ. ಜತೆಗೆ ಸ್ಪರ್ಧೆಗಳು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಅನುಭವ ನೀಡುತ್ತವೆ. ಹಾಗಾಗಿ ವಿದ್ಯಾರ್ಥಿಗಳು ಭಯ, ಹಿಂಜರಿಕೆಯಿಲ್ಲದೆ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು ಎಂದು ಕರ್ನಾಟಕ ಮತ್ತು ಕೇರಳದ ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕಿನ ಕಸ್ಟಮರ್ ಕೇರ್ ಆಪರೇಷನ್ಸ್ ಮುಖ್ಯಸ್ಥೆ ದಿಯಾ ಅಜಯ್ ಹೇಳಿದರು. ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಬಿ.ಕಾಂ ಹಾಗೂ ಬಿ.ಬಿ.ಎ ವಿಭಾಗಗಳು ಶನಿವಾರ (ಏಪ್ರಿಲ್ 4) ಇಂದ್ರಪ್ರಸ್ಥ ಸಭಾಂಗಣದಲ್ಲಿ ಆಯೋಜಿಸಿದ್ದ ಒಂದು ದಿನದ ರಾಜ್ಯಮಟ್ಟದ ಅಂತರ್ ಕಾಲೇಜು ಫೆಸ್ಟ್ 'ವೆಂಚುರ- 2026' ಉದ್ಘಾಟಿಸಿ ಅವರು ಮಾತನಾಡಿದರು.
ಸ್ಪರ್ಧೆಗಳಲ್ಲಿ ಸೋಲು-ಗೆಲುವು ಸಹಜ. ಸೋಲಿನ ಭೀತಿಯಿಲ್ಲದೆ ವಿದ್ಯಾರ್ಥಿಗಳು ಈ ರೀತಿಯ ಫೆಸ್ಟ್‌ಗಳಲ್ಲಿ ಭಾಗವಹಿಸುವುದರ ಮೂಲಕ ವೃತ್ತಿಪರತೆಯ ಅನುಭವ ಪಡೆದುಕೊಳ್ಳಬೇಕು. ಇದು ತಮ್ಮ ವೃತ್ತಿ ಬದುಕಿನಲ್ಲಿ ಸಹಾಯವಾಗುತ್ತದೆ. ಹಾಗಾಗಿ ವಿದ್ಯಾರ್ಥಿ ದೆಸೆಯಲ್ಲಿ ಇಂತಹ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಶ್ವನಾಥ ಪಿ. ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳು ತುಂಬಾ ಮುಖ್ಯ. ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತವಾಗದೆ, ಕೌಶಲಗಳನ್ನು ಹಾಗೂ ಪ್ರಾಯೋಗಿಕ ಅನುಭವವನ್ನು ಪಡೆದುಕೊಂಡಾಗ ಮಾತ್ರ ಉಜ್ವಲ ಭವಿಷ್ಯ ಕಟ್ಟಿಕೊಳ್ಳಲು ಸಾಧ್ಯ. ಭಿನ್ನವಾದ ಆಲೋಚನೆಗಳು ಮತ್ತು ಸೃಜನಶೀಲತೆಯನ್ನು ರೂಢಿಸಿಕೊಳ್ಳಬೇಕು. ಹಾಗಾಗಿ ವಿದ್ಯಾರ್ಥಿಗಳ ಪ್ರಾಯೋಗಿಕ ಕಲಿಕೆಗೆ ಪೂರಕವಾದ ಚಟುವಟಿಕೆಗಳನ್ನು ನಮ್ಮ ಕಾಲೇಜು ನಿರಂತರವಾಗಿ ಆಯೋಜಿಸುತ್ತಿದೆ. ವಿದ್ಯಾರ್ಥಿಗಳು ಈ ಎಲ್ಲ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ವಾರ್ಷಿಕೋತ್ಸವ ಸಂಭ್ರಮ
ಅತಿಥಿ ದಿಯಾ ಅಜಯ್ ಅವರಿಗೆ ಸ್ಮರಣಿಕೆ ನೀಡಲಾಯಿತು. ಫೆಸ್ಟ್ ಸಂಯೋಜಕರಾದ ಬಿ.ಕಾಂ. ವಿಭಾಗದ ಅಧ್ಯಾಪಕಿ ಫಾತಿಮಾ ಸಫೀರಾ, ಬಿ.ಬಿ.ಎ. ವಿಭಾಗದ ಅಧ್ಯಾಪಕ ಗುರುರಾಜ್, ವಿದ್ಯಾರ್ಥಿ ಪ್ರತಿನಿಧಿಗಳು, ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು, ಅಧ್ಯಾಪಕರು ಹಾಗೂ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಬಿ.ಕಾಂ ವಿಭಾಗದ ಮುಖ್ಯಸ್ಥೆ ರತ್ನಾವತಿ ಸ್ವಾಗತಿಸಿ, ವಿದ್ಯಾರ್ಥಿ ಪ್ರತಿನಿಧಿ ಸ್ಪಂದನಾ ವಂದಿಸಿ ಹಾಗೂ ಧರಿತ್ರಿ ಬೀಡೆ ನಿರೂಪಿಸಿದರು.
ವರದಿ: ರಂಗು, ಚಿತ್ರದುರ್ಗ