Vitla Panchalingeshwara Jatre: ವಿಟ್ಲ ಜಾತ್ರೆ ವೇಳೆ ಅವಾಂತರ; ದೇವರ ಉತ್ಸವ ಮೂರ್ತಿಗೆ ಬಡಿದ ಡ್ರೋನ್
Vitla Panchalingeshwara Jatre: ಬಂಟ್ವಾಳ ತಾಲೂಕಿನಲ್ಲಿರುವ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರ ರಥೋತ್ಸವದ ವೇಳೆ ಅವಾಂತರ ನಡೆದಿದ್ದು, ರಥವೇರುತ್ತಿದ್ದ ದೇವರ ಉತ್ಸವ ಮೂರ್ತಿಗೆ ಡ್ರೋನ್ ಬಡಿದಿದೆ.
ವಿಟ್ಲ: ಇತ್ತೀಚಿನ ದಿನಗಳಲ್ಲಿ ಡ್ರೋನ್‌ಗಳ ಹಾವಳಿ ಹೆಚ್ಚಾಗಿದ್ದು, ಎಲ್ಲೆಂದರಲ್ಲಿ ಇದರ ಬಳಕೆ ಮಾಡುವುದರಿಂದ ಕೆಲವೊಮ್ಮೆ ಅನಾಹುತವೂ ನಡೆಯುತ್ತದೆ. ಇದಕ್ಕೆ ಉದಾಹರಣೆ ಎಂಬಂತೆ ರಥವೇರುತ್ತಿದ್ದ ದೇವರ ಉತ್ಸವ ಮೂರ್ತಿಗೆ ಡ್ರೋನ್ ಬಡಿದು ಅವಾಂತರ ಉಂಟಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಸಮೀಪದ ವಿಟ್ಲದಲ್ಲಿ(Vitla Panchalingeshwara Jatre) ನಡೆದಿದೆ.
ಬಂಟ್ವಾಳ ತಾಲೂಕಿನಲ್ಲಿರುವ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರ ರಥೋತ್ಸವದ ವೇಳೆ ಈ ಘಟನೆ ನಡೆದಿದೆ. ದೇವರ ರಥೋತ್ಸವದ ವೇಳೆ ಡ್ರೋನ್ ಹಾರಿಸಿ ಹುಚ್ಚಾಟ ಮರೆದವರ ವಿರುದ್ದ ಇದೀಗ ಆಕ್ರೋಶ ವ್ಯಕ್ತವಾಗುತ್ತಿದೆ.
ಏನಿದು ಘಟನೆ?
ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರೆ ನಡೆಯುತ್ತಿದೆ. ಇದರ ಅಂಗವಾಗಿ ಮಹಾರಥೋತ್ಸವ ಏರ್ಪಡಿಸಲಾಗಿತ್ತು. ಈ ವೇಳೆ ಕೆಲವರು ಡ್ರೋನ್ ಹಾರಿಸಿ ಚಿತ್ರೀಕರಣ ನಡೆಸುತ್ತಿದ್ದರು. ಈ ವೇಳೆ ರಥ ಏರುತ್ತಿದ್ದ ಪಂಚಲಿಂಗೇಶ್ವರ ಸ್ವಾಮಿಯ ಉತ್ಸವ ಮೂರ್ತಿ ಮತ್ತು ಅರ್ಚಕರಿಗೆ ಬಂದು ಡ್ರೋನ್ ಬಡಿದಿದೆ.
ಮೊದಲು ಉತ್ಸವ ಮೂರ್ತಿಗೆ ಬಡಿದ ಡ್ರೋನ್ ಬಳಿಕ ಸಹಾಯಕ ಅರ್ಚಕರ ಮೇಲೆ ಬಿದ್ದಿದೆ. ತಕ್ಷಣ ಎಚ್ಚೆತ್ತ ಅರ್ಚಕರು ಡ್ರೋನ್ ಅನ್ನು ಹೊರಗೆಸೆದಿದ್ದಾರೆ. ಡ್ರೋನ್ ಆಪರೇಟರ್ ಹುಚ್ಚಾಟದ ವಿರುದ್ದ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಯಂತ್ರಣ ತಪ್ಪಿ ಡ್ರೋನ್ ಉತ್ಸವ ಮೂರ್ತಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಅದ್ಧೂರಿಯಾಗಿ ನೆರವೇರಿದ ಕೊಪ್ಪಳ ಗವಿ ಸಿದ್ದೇಶ್ವರ ಮಹಾರಥೋತ್ಸವ
ಕೊಪ್ಪಳ: ದಕ್ಷಿಣ ಭಾರತದ ಕುಂಭ ಮೇಳವೆಂದೇ ಪ್ರಸಿದ್ಧಿ ಪಡೆದಿರುವ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಜಾತ್ರೆ ಅಂಗವಾಗಿ ಗವಿಸಿದ್ದೇಶ್ವರ ಮಹಾರಥೋತ್ಸವವು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಇತ್ತೀಚೆಗೆ ಅದ್ಧೂರಿಯಾಗಿ ನೆರವೇರಿತು.
ಶ್ರೀ ಗವಿಸಿದ್ದೇಶ್ವರ ಜಾತ್ರೆಗೆ ಕಳೆದ 3 ತಿಂಗಳಿನಿಂದಲೂ ನಿರಂತರ ತಯಾರಿ ನಡೆಯುತ್ತಿತ್ತು. ಜ. 15ರಂದು ಬೆಳಗ್ಗೆಯಿಂದಲೇ ಗವಿಮಠದ ಮಹಾರಥೋತ್ಸವ ಅಂಗವಾಗಿ ಕರ್ತೃ ಗದ್ದುಗೆಗೆ ಅಲಂಕಾರ, ವಿಶೇಷ ಪೂಜೆಗಳು ಬೆಳಗ್ಗೆಯಿಂದಲೇ ನೆರವೇರಿದವು. ಸಂಜೆ 5ಕ್ಕೆ ರಥೋತ್ಸವ ನಿಗದಿಯಾಗಿದ್ದರಿಂದ ಬೆಳಗ್ಗೆಯಿಂದಲೇ ದೂರದ ಊರುಗಳಿಂದ ಮಕ್ಕಳು, ಹಿರಿಯರೊಂದಿಗೆ ಕುಟುಂಬದ ಸದಸ್ಯರು ಆಗಮಿಸಿದ್ದರು. ಸಂಜೆ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಸೇರಿ ವಿವಿಧ ಮಠಾಧೀಶರು, ಸ್ವಾಮೀಜಿಗಳು, ಗಣ್ಯರ ಸಮ್ಮುಖದಲ್ಲಿ ರಥವನ್ನು ಎಳೆಯಲಾಯಿತು. ಈ ವೇಳೆ ಹಣ್ಣು, ಧವನ ಎಸೆದು ಜನರು ಭಕ್ತಿ ಭಾವ ಮೆರೆದರು.
ಈ ಸುದ್ದಿಯನ್ನೂ ಓದಿ | Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು
ಗವಿಸಿದ್ದೇಶ್ವರ ಜಾತ್ರೆಗೆ ಆಗಮಿಸಿದ್ದರಿಂದ ಈ ಬಾರಿಯೂ ಕೊಪ್ಪಳ ಪೊಲೀಸರು ಎಲ್ಲಾ ಭಾಗಗಳಲ್ಲೂ ವಾಹನ ನಿಲುಗಡೆಗೆ ಅವಕಾಶ ಮಾಡಿಕೊಟ್ಟು, ನಗರದಲ್ಲಿ ಸಂಚಾರ ದಟ್ಟಣೆ ಆಗದಂತೆ ನೋಡಿಕೊಂಡರು. ವಾಹನ ಸವಾರರು ನಗರದೊಳಗೆ ಬಾರದಂತೆ ಅಲ್ಲಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು. ಅಲ್ಲದೇ ಭದ್ರತೆಗಾಗಿ ಸಾವಿರಾರು ಪೊಲೀಸರು ನಿಯೋಜನೆಗೊಂಡಿದ್ದರು.