Digital use policy: ಶಾಲಾ ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿರ್ಬಂಧ: ಡಿಜಿಟಲ್ ಬಳಕೆ ಕರಡು ನೀತಿ ಬಿಡುಗಡೆ
ಕರಡು ನೀತಿ ಪ್ರಕಾರ, ಶಾಲಾ ಕೆಲಸ ಹೊರತುಪಡಿಸಿ ವಿದ್ಯಾರ್ಥಿಗಳು ದಿನಕ್ಕೆ ಗರಿಷ್ಠ 1 ಗಂಟೆ ಮಾತ್ರ ಮೊಬೈಲ್ ಬಳಸಬಹುದು. ಜೊತೆಗೆ, ನಿದ್ರೆಗೆ ಒಂದು ಗಂಟೆ ಮೊದಲು ಎಲ್ಲಾ ಡಿಜಿಟಲ್ ಸಾಧನಗಳನ್ನು ನಿಲ್ಲಿಸುವ ‘ಟೆಕ್ ಕರ್ಫ್ಯೂ' ಜಾರಿಗೊಳಿಸುವಂತೆ ಸೂಚಿಸಲಾಗಿದೆ. ಪ್ರತಿ ಶಾಲೆಯು ತನ್ನದೇ ಆದ ಡಿಜಿಟಲ್ ಬಳಕೆ ನೀತಿ ರೂಪಿಸಿ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಮತ್ತು ಡಿಜಿಟಲ್ ವೆಲ್‌ನೆಸ್ ಸಮಿತಿ ಸ್ಥಾಪಿಸಬೇಕು ಎಂದು ಸೂಚಿಸಲಾಗಿದೆ.
ಸಾಂದರ್ಭಿಕ ಚಿತ್ರ -
ಬೆಂಗಳೂರು, ಮಾ.24: ವಿದ್ಯಾರ್ಥಿಗಳಲ್ಲಿ (Students) ಹೆಚ್ಚುತ್ತಿರುವ ಡಿಜಿಟಲ್ ಗೀಳನ್ನು (digital obsession) ನಿಯಂತ್ರಿಸಲು ರಾಜ್ಯ ಸರ್ಕಾರ (Karnataka Government) ಮಹತ್ವದ ಹೆಜ್ಜೆ ಇಟ್ಟಿದ್ದು, ಜವಾಬ್ದಾರಿಯುತ ಡಿಜಿಟಲ್ ಬಳಕೆಗೆ (Digital use policy) ಸಂಬಂಧಿಸಿದ ಕರಡು ನೀತಿಯನ್ನು ಬಿಡುಗಡೆ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ಬಜೆಟ್ ಘೋಷಣೆಯ ನಂತರ ಈ ಕರಡು (draft) ನೀತಿ ರೂಪುಗೊಂಡಿದ್ದು, 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆಗೆ ನಿರ್ಬಂಧ ವಿಧಿಸುವ ದಿಕ್ಕಿನಲ್ಲಿ ಸರ್ಕಾರ ನಿರ್ಧಾರ ಕೈಗೊಳ್ಳಲು ಮುಂದಾಗಿದೆ.
ಈ ಕರಡು ನೀತಿ ಪ್ರಕಾರ, ಶಾಲಾ ಕೆಲಸ ಹೊರತುಪಡಿಸಿ ವಿದ್ಯಾರ್ಥಿಗಳು ದಿನಕ್ಕೆ ಗರಿಷ್ಠ 1 ಗಂಟೆ ಮಾತ್ರ ಮೊಬೈಲ್ ಬಳಸಬೇಕು ಎಂದು ಶಿಫಾರಸು ಮಾಡಲಾಗಿದೆ. ಜೊತೆಗೆ, ನಿದ್ರೆಗೆ ಒಂದು ಗಂಟೆ ಮೊದಲು ಎಲ್ಲಾ ಡಿಜಿಟಲ್ ಸಾಧನಗಳನ್ನು ನಿಲ್ಲಿಸುವ ‘ಟೆಕ್ ಕರ್ಫ್ಯೂ' ಜಾರಿಗೊಳಿಸುವಂತೆ ಸೂಚಿಸಲಾಗಿದೆ.
ಪ್ರತಿ ಶಾಲೆಯು ತನ್ನದೇ ಆದ ಡಿಜಿಟಲ್ ಬಳಕೆ ನೀತಿ ರೂಪಿಸಿ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಮತ್ತು ಡಿಜಿಟಲ್ ವೆಲ್‌ನೆಸ್ ಸಮಿತಿ ಸ್ಥಾಪಿಸಬೇಕು. ಈ ಸಮಿತಿಯಲ್ಲಿ ಪ್ರಾಂಶುಪಾಲರು, ಶಿಕ್ಷಕರು, ಮಾನಸಿಕ ಆರೋಗ್ಯ ತಜ್ಞರು, ಪೋಷಕರ ಪ್ರತಿನಿಧಿಗಳು, ವಿದ್ಯಾರ್ಥಿಗಳು ಮತ್ತು ಸೈಬರ್ ಕ್ರೈಂ ಪೊಲೀಸ್ ಅಧಿಕಾರಿಗಳು ಇರಬೇಕಾಗಿದೆ.
ನೀತಿಯನ್ನು ರೂಪಿಸುವಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನಿಮ್ಹಾನ್ಸ್, ಶಿಕ್ಷಣ ಇಲಾಖೆ, ವಿವಿಧ ಶಿಕ್ಷಣ ಸಂಸ್ಥೆಗಳ ತಜ್ಞರು, ಪೋಷಕರು ಹಾಗೂ ಸೈಬರ್ ಕ್ರೈಂ ಇಲಾಖೆ ಭಾಗವಹಿಸಿವೆ.
Social Media Ban for Children: 16 ವರ್ಷದೊಳಗಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ಬಳಕೆ ನಿಷೇಧ: ಸಿಎಂ ಘೋಷಣೆ
ಈ ನೀತಿಯಡಿಯಲ್ಲಿ, ಶಾಲೆಗಳು ಸೈಬರ್ ಬುಲಿಯಿಂಗ್ ಮತ್ತು ಡಿಜಿಟಲ್ ದುರುಪಯೋಗ ತಡೆಯಲು ವಿಶೇಷ ಪ್ರೋಟೋಕಾಲ್ ರೂಪಿಸಬೇಕು. ಶಿಕ್ಷಕರಿಗೆ ವಿದ್ಯಾರ್ಥಿಗಳ ಡಿಜಿಟಲ್ ಬಳಕೆಯನ್ನು ನಿಯಂತ್ರಿಸುವುದು ಮತ್ತು ಸುರಕ್ಷಿತ ಬಳಕೆಯ ಬಗ್ಗೆ ಮಾರ್ಗದರ್ಶನ ನೀಡುವುದು ಪ್ರಮುಖ ಜವಾಬ್ದಾರಿಯಾಗಲಿದೆ. ಶಿಕ್ಷಕರಿಗೆ ವಿಶೇಷ ತರಬೇತಿ ನೀಡುವುದರಿಂದ, ವಿದ್ಯಾರ್ಥಿಗಳಲ್ಲಿ ಮೊಬೈಲ್ ಗೀಳಿನ ಲಕ್ಷಣಗಳನ್ನು ಗುರುತಿಸಲು ಸಹಾಯವಾಗುತ್ತದೆ ಎಂದು ಸೂಚಿಸಲಾಗಿದೆ.
ಇದಲ್ಲದೆ, ವಾಟ್ಸಾಪ್ ಮೂಲಕ ನೇರ ಸಂಪರ್ಕದ ಬದಲು ‘ಡೈರಿ ಸಿಸ್ಟಮ್’ ಬಳಕೆ ಮಾಡುವಂತೆ ಶಾಲೆಗಳಿಗೆ ಸಲಹೆ ನೀಡಲಾಗಿದೆ. ಡಿಜಿಟಲ್ ತಂತ್ರಜ್ಞಾನ ಮತ್ತು ಮೀಡಿಯಾ ಕ್ಷೇತ್ರಗಳೊಂದಿಗೆ ಸಹಕರಿಸಿ, ಮಕ್ಕಳಿಗೆ ಸೂಕ್ತವಾದ ವಿಷಯ ಅಭಿವೃದ್ಧಿ ಹಾಗೂ ವಯೋಮಿತಿ ನಿಯಂತ್ರಣದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.
ಏಪ್ರಿಲ್ 1 ರಿಂದ ಡಿಜಿಟಲ್ ಪಾವತಿಯಲ್ಲಿ ಬದಲಾವಣೆ; ಆರ್‌ಬಿಐ ಹೊಸ ನಿಯಮ ಹೇಳೋದೇನು?
ಮಕ್ಕಳ ವಯಸ್ಸಿಗೆ ಸೂಕ್ತವಾದ ಫೋನ್‌ಗಳನ್ನು ಅಭಿವೃದ್ಧಿಪಡಿಸಲು ಮತ್ತು ಅವರು ವಯಸ್ಸಾದಂತೆ ಸಾಧನಕ್ಕಾಗಿ OS ನವೀಕರಣವನ್ನು ನೀಡಲು ಸಹ ಕರೆ ನೀಡಸಲಾಗಿದೆ. ಆಡಿಯೋ-ಮಾತ್ರ ಹೊಂದಿರುವ ಫೋನ್‌ಗಳಿಗಾಗಿ ವಿಶೇಷ “ಮಕ್ಕಳ ಯೋಜನೆ”ಯನ್ನು ರೂಪಿಸಲು ಮತ್ತು ಸಂಜೆ 7 ಗಂಟೆಯೊಳಗೆ ಡೇಟಾ ಬಳಕೆಯನ್ನು ನಿಲ್ಲಿಸಲು ಸಹ ಇದು ಸೂಚಿಸಿದೆ.
ಶಾಲೆಗಳು ವಿದ್ಯಾರ್ಥಿಗಳ ಮಾನಸಿಕ ಆರೋಗ್ಯವನ್ನು ಗಮನದಲ್ಲಿಟ್ಟು, ಕೌನ್ಸೆಲಿಂಗ್‌ಗೆ ಸಂಬಂಧಿಸಿದ ಮಾಹಿತಿಯನ್ನು ಗೌಪ್ಯವಾಗಿ ದಾಖಲಿಸಬೇಕು ಮತ್ತು ಸೈಬರ್ ಬುಲಿಯಿಂಗ್ ಪ್ರಕರಣಗಳನ್ನು ತ್ವರಿತವಾಗಿ ಪರಿಹರಿಸಬೇಕು. ವಿದ್ಯಾರ್ಥಿಗಳಲ್ಲಿ ಯಾವುದೇ ಅನುಮಾನಾಸ್ಪದ ಅಥವಾ ಅಪಾಯಕಾರಿ ಆನ್‌ಲೈನ್ ವರ್ತನೆ ಕಂಡುಬಂದರೆ, ಅಧಿಕಾರಿಗಳು ಅಥವಾ ಕೌನ್ಸೆಲರ್‌ಗೆ ತಿಳಿಸಲು ಪ್ರೋತ್ಸಾಹಿಸಲಾಗುತ್ತದೆ. ಜೊತೆಗೆ, ಸಲಹೆಗಾಗಿ ಟೆಲಿ ಮಾನಸ್ – 14416 ಸಂಪರ್ಕಿಸಲು ಜಾಗೃತಿ ಮೂಡಿಸಲಾಗುತ್ತದೆ.
ಈ ನೀತಿ ಶಾಲೆಗಳಷ್ಟೇ ಅಲ್ಲದೆ, ಶಿಕ್ಷಕರ ತರಬೇತಿ ಕಾರ್ಯಕ್ರಮಗಳಲ್ಲೂ ಸೇರಿಸಬಹುದಾಗಿದೆ. NIMHANS ತಜ್ಞರ ಸಹಾಯದಿಂದ ಶಿಕ್ಷಕರಿಗೆ ತರಬೇತಿ ನೀಡುವ ವ್ಯವಸ್ಥೆ ಮಾಡಬಹುದು ಎಂದು ಸೂಚಿಸಲಾಗಿದೆ.
ಇದಲ್ಲದೆ, ಪೋಷಕರಿಗೂ ಮಹತ್ವದ ಜವಾಬ್ದಾರಿ ನೀಡಲಾಗಿದ್ದು, ಮಕ್ಕಳೊಂದಿಗೆ ಹೆಚ್ಚು ಆಫ್‌ಲೈನ್ ಸಂವಹನ, ಆಟ, ಓದು ಚಟುವಟಿಕೆಗಳು ನಡೆಸುವಂತೆ ಸಲಹೆ ನೀಡಲಾಗಿದೆ. ಮಕ್ಕಳು ಬಳಸುವ ಆ್ಯಪ್‌ಗಳು, ಆನ್‌ಲೈನ್ ಸ್ನೇಹಿತರು ಮತ್ತು ಅವರು ಹಂಚಿಕೊಳ್ಳುವ ಮಾಹಿತಿಯ ಬಗ್ಗೆ ನಿಯಮಿತವಾಗಿ ಗಮನ ನೀಡುವುದು ಅಗತ್ಯ ಎಂದು ಹೇಳಲಾಗಿದೆ.
ಒಟ್ಟಿನಲ್ಲಿ, ಈ ಕರಡು ನೀತಿ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ, ಸುರಕ್ಷತೆ ಮತ್ತು ಸಮತೋಲನದ ಡಿಜಿಟಲ್ ಬಳಕೆ ಕಡೆಗೆ ದೊಡ್ಡ ಹೆಜ್ಜೆಯಾಗಿದೆ. ಕರಡು ನೀತಿಯನ್ನು ಆರೋಗ್ಯ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದ್ದು, ಸಾರ್ವಜನಿಕ ಅಭಿಪ್ರಾಯವನ್ನು ಆಹ್ವಾನಿಸಲಾಗಿದೆ.