ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Basavaraj Rayareddy: ರಾಜ್ಯದ 440 ಪದವಿ ಕಾಲೇಜುಗಳಿಗೆ ಶೀಘ್ರ ಕಾಯಂ ಪ್ರಾಚಾರ್ಯರ ನೇಮಕ: ಸಚಿವ ರಾಯರೆಡ್ಡಿ

ರಾಜ್ಯದ ಉನ್ನತ ಶಿಕ್ಷಣ ಕ್ಷೇತ್ರವನ್ನು ಬಲಪಡಿಸುವ ನಿಟ್ಟಿನಲ್ಲಿ ರಾಜ್ಯದ 440 ಸರಕಾರಿ ಪದವಿ ಕಾಲೇಜು ಗಳಿಗೆ ಶೀಘ್ರದಲ್ಲೇ ಕಾಯಂ ಪ್ರಾಚಾರ್ಯರನ್ನು ನೇಮಕ ಮಾಡಲಾಗುವುದು. ಇದರೊಂದಿಗೆ 2 ಸಾವಿರ ಪ್ರಾಧ್ಯಾಪಕರು ಹಾಗೂ ವಿಶ್ವವಿದ್ಯಾಲಯಗಳಿಗೆ 1 ಸಾವಿರ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆಗೂ ಚಾಲನೆ ನೀಡಲಾಗುವುದು

ರಾಜ್ಯದ 440 ಪದವಿ ಕಾಲೇಜುಗಳಿಗೆ ಶೀಘ್ರ ಕಾಯಂ ಪ್ರಾಚಾರ್ಯರ ನೇಮಕ

-

Profile
Ashok Nayak Nov 28, 2026 9:48 PM

ಗದಗ: ರಾಜ್ಯದ ಉನ್ನತ ಶಿಕ್ಷಣ ಕ್ಷೇತ್ರವನ್ನು ಬಲಪಡಿಸುವ ನಿಟ್ಟಿನಲ್ಲಿ ರಾಜ್ಯದ 440 ಸರಕಾರಿ ಪದವಿ ಕಾಲೇಜುಗಳಿಗೆ ಶೀಘ್ರದಲ್ಲೇ ಕಾಯಂ ಪ್ರಾಚಾರ್ಯರನ್ನು ನೇಮಕ ಮಾಡಲಾಗುವುದು. ಇದರೊಂದಿಗೆ 2 ಸಾವಿರ ಪ್ರಾಧ್ಯಾಪಕರು ಹಾಗೂ ವಿಶ್ವವಿದ್ಯಾಲಯಗಳಿಗೆ 1 ಸಾವಿರ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆಗೂ ಚಾಲನೆ ನೀಡಲಾಗುವುದು ಎಂದು ಉನ್ನತ ಶಿಕ್ಷಣ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರೆಡ್ಡಿ(Basavaraj Rayareddy) ಹೇಳಿದರು.

ಜಿಲ್ಲೆಯ ಮುಂಡರಗಿಯ ಅನ್ನದಾನೀಶ್ವರ ಮಹಾವಿದ್ಯಾಲಯದ ಮೈದಾನದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ನಾಡೋಜ ಜ.ಅನ್ನದಾನೀಶ್ವರ ಶ್ರೀಗಳಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ (Kannada Rajyotsava Award) ಪ್ರದಾನ ಮಾಡಿ ಮಾತನಾಡಿದರು.

ಇದನ್ನೂ ಓದಿ: Gadag Drought: ಗದಗ ತಾಲೂಕನ್ನು ಬರಪೀಡಿತ ಎಂದು ಘೋಷಿಸದಿದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಸರ್ಕಾರಕ್ಕೆ ಎಚ್.ಕೆ. ಪಾಟೀಲ್ ಎಚ್ಚರಿಕೆ

ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸರಕಾರ ನೀಡಿದಷ್ಟೇ ಕೊಡುಗೆಯನ್ನು ಮಠಮಾನ್ಯಗಳೂ ನೀಡಿವೆ. ಇದರಿಂದಾಗಿ ಕರ್ನಾಟಕದ ಸಾಕ್ಷರತಾ ಪ್ರಮಾಣ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿದೆ. ದೇಶದಲ್ಲೇ ಅತಿ ಹೆಚ್ಚು ವೈದ್ಯರನ್ನು ನಮ್ಮ ರಾಜ್ಯ ತಯಾರು ಮಾಡುತ್ತಿದೆ. ಬೆಂಗಳೂರೊಂದರಲ್ಲೇ 27 ಲಕ್ಷ ಎಂಜಿನಿಯರ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಕರ್ನಾಟಕವು ಭಾರತದ ಪ್ರಮುಖ ಜ್ಞಾನ ಕೇಂದ್ರ ವಾಗಿ ಹೊರಹೊಮ್ಮಿದೆ ಎಂದರು.

ಅನ್ನದಾನೀಶ್ವರ ಶ್ರೀಗಳಿಗೆ ಪ್ರಶಸ್ತಿ ನೀಡುವ ಮೂಲಕ ಸರಕಾರ ತನ್ನ ಘನತೆಯನ್ನು ಹೆಚ್ಚಿಸಿ ಕೊಂಡಿದೆ. ಶ್ರೀಗಳ ಸೇವಾ ಪರಂಪರೆ, ಸಮಾಜಮುಖಿ ಚಿಂತನೆ ಮತ್ತು ಸಾಂಸ್ಕೃತಿಕ ಕೊಡುಗೆಗೆ ಸಂದ ಗೌರವ‌, ವೀರಶೈವ ಲಿಂಗಾಯತ ಮಠಗಳು ಕೇವಲ ಧಾರ್ಮಿಕ ಬೋಧನೆಗೆ ಸೀಮಿತವಾಗದೆ, ಕಾಯಕ, ದಾಸೋಹ ಹಾಗೂ ಶಿಕ್ಷಣದ ಮೂಲಕ ಬಡ ಮತ್ತು ಮಧ್ಯಮ ವರ್ಗದವರಿಗೆ ಆಸರೆ ಯಾಗಿವೆ ಎಂದು ಬಣ್ಣಿಸಿದರು. ಅಲ್ಲದೆ, ಅನ್ನದಾನೀಶ್ವರ ಶ್ರೀಗಳ ಕಾಲೇಜು ಕಟ್ಟಡಕ್ಕೆ 2 ಕೋಟಿ ರು. ಅನುದಾನ ನೀಡುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದರು.

Gadag 2

1956ರ ನವೆಂಬರ್ 1ರಂದು ಭಾಷಾವಾರು ಪ್ರಾಂತ್ಯಗಳ ಆಧಾರದ ಮೇಲೆ ಕರ್ನಾಟಕ ಏಕೀಕರಣ ಗೊಂಡ ಹಿನ್ನೆಲೆಯನ್ನು ಸ್ಮರಿಸಿದ ಸಚಿವರು, ಶೇ.90ರಷ್ಟು ಕನ್ನಡ ಭಾಷಿಕರು ಒಂದಾಗಿದ್ದು, ಇನ್ನೂ ಕೆಲವು ಕನ್ನಡ ಪ್ರದೇಶಗಳು ರಾಜ್ಯಕ್ಕೆ ಸೇರ್ಪಡೆಯಾಗಬೇಕಿದೆ ಎಂದರು.

ಕುಕನೂರಿನ ಎಪಿಎಂಸಿಗೆ ಶ್ರೀಗಳು19 ಎಕರೆ ಜಮೀನು ನೀಡಿರುವುದನ್ನು ಸ್ಮರಿಸಿದ ಅವರು, ಎರಡು ತಿಂಗಳ ಹಿಂದೆಯೇ ಅದಕ್ಕೆ ನಾಡೋಜ ಜ. ಅನ್ನದಾನೀಶ್ವರ ಮಾರುಕಟ್ಟೆ ಎಂದು ನಾಮಕರಣ ಮಾಡಲು ನಿರ್ಧರಿಸಲಾಗಿದೆ. ಮುಂಡರಗಿ ತಾಲೂಕು ಆಸ್ಪತ್ರೆಗೂ ಶ್ರೀಗಳ ಹೆಸರಿಡುವ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗುವುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ(Dr Chandru Lamani) ಮಾತನಾಡಿ, ತುಂಗಭದ್ರಾ ನದಿ ಹರಿದರೂ ಶಿರಹಟ್ಟಿ ಕ್ಷೇತ್ರ ನೀರಾವರಿಯಿಂದ ವಂಚಿತವಾಗಿದೆ. ಕ್ಷೇತ್ರವನ್ನು ಸಂಪೂರ್ಣ ನೀರಾವರಿಗೆ ಒಳಪಡಿಸಬೇಕು ಹಾಗೂ ಬೆಳ್ಳಟ್ಟಿಯಲ್ಲಿ ಪದವಿ ಕಾಲೇಜು ಮತ್ತು ಕ್ಷೇತ್ರ ವ್ಯಾಪ್ತಿಯಲ್ಲಿ ಸರ್ಕಾರಿ ಎಂಜಿನಿಯರಿಂಗ್, ಡಿಪ್ಲೊಮಾ ಕಾಲೇಜು ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.

ವಿಪ ಸದಸ್ಯ ಎಸ್.ವಿ.ಸಂಕನೂರ(S V Sankanur) ಮಾತನಾಡಿ, ಹಿಂದುಳಿದ ತಾಲೂಕಿನಲ್ಲಿ ಶಿಕ್ಷಣ ಸಂಸ್ಥೆಗಳನ್ನು ತೆರೆದು ಶೈಕ್ಷಣಿಕ ಕ್ರಾಂತಿ ಮಾಡಿರುವ ಶ್ರೀಗಳು, ಮುಂಡರಗಿಯ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಆಸ್ಪತ್ರೆಗೆ ಜಾಗ ದಾನ ಮಾಡಿದ್ದಾರೆ. ಹೀಗಾಗಿ ಆ ಸಂಸ್ಥೆಗಳಿಗೆ ಶ್ರೀಗಳ ಹೆಸರನ್ನೇ ನಾಮಕರಣ ಮಾಡಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಎಚ್.ಎನ್., ಅಪರ ಜಿಲ್ಲಾಧಿಕಾರಿ ದುರುಗೇಶ ಕೆ.ಆರ್., ಜಿ.ಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಉಪವಿಭಾಗಾಧಿಕಾರಿ ಗಂಗಪ್ಪ ಎಂ., ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಸವರಾಜ ಬಳ್ಳಾರಿ, ಬಿ.ಜಿ. ಜವಳಿ, ರುದ್ರಗೌಡ ಪಾಟೀಲ, ಡಿ.ಡಿ.ಮೋರನಾಳ ಸೇರಿದಂತೆ ಹಲವು ಗಣ್ಯರು‌ ಇದ್ದರು. ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಸ್ವಾಗತಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಮಂಜುಶ್ರೀ ಎನ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಬಾಹುಬಲಿ ಜೈನರ್ ನಿರೂಪಿಸಿದರು.

ಮೆರವಣಿಗೆ ಜಿ ಎಸ್ ಪಾಟೀಲ ಚಾಲನೆ...

ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಸಮಾರಂಭದ ಅಂಗವಾಗಿ ವಿವಿಧ ಕಲಾ ತಂಡಗಳಿಂದ ಶ್ರೀಗಳನ್ನು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ವೇದಿಕೆಗೆ ತರಲಾಯಿತು. ಈ ಮೆರವಣಿಗೆಗೆ ವಿಧಾನ ಸಭಾಧ್ಯಕ್ಷ ಜಿ ಎಸ್ ಪಾಟೀಲರು ಚಾಲನೆ ನೀಡಿದರು.