ಅತ್ಯಾಚಾರ ಕೇಸ್ನಿಂದ ‘ಪಡವೆಟ್ಟು’ ನಿರ್ದೇಶಕ ಲಿಜು ಕೃಷ್ಣ ಖುಲಾಸೆ; ‘ಟಾಕ್ಸಿಕ್’ ಡೈರೆಕ್ಟರ್ ಗೀತು ಮೋಹನ್ದಾಸ್ ಮೇಲೆ ಗಂಭೀರ ಆರೋಪ
ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ 2022ರ ಅತ್ಯಾಚಾರ ಪ್ರಕರಣದಿಂದ ‘ಪಡವೆಟ್ಟು’ ನಿರ್ದೇಶಕ ಲಿಜು ಕೃಷ್ಣ ಅವರನ್ನು ಎರ್ನಾಕುಲಂ ನ್ಯಾಯಾಲಯ ಖುಲಾಸೆಗೊಳಿಸಿದೆ. ತೀರ್ಪಿನ ಬಳಿಕ ಮಾತನಾಡಿದ ಅವರು, ವೈಯಕ್ತಿಕ ದ್ವೇಷದಿಂದ ಗೀತು ಮೋಹನ್ದಾಸ್ ತಮ್ಮ ವಿರುದ್ಧ ಸುಳ್ಳು ಕೇಸ್ ದಾಖಲಿಸಲು ಕಾರಣರಾದರು ಎಂದು ಆರೋಪಿಸಿದ್ದಾರೆ.
-
ನಿವಿನ್ ಪೌಲಿ ಅಭಿನಯದ ಮಲಯಾಳಂ ‘ಪಡವೆಟ್ಟು’ ಸಿನಿಮಾದ ನಿರ್ದೇಶಕ ಲಿಜು ಕೃಷ್ಣ ಅವರು 2022ರಲ್ಲಿ ದಾಖಲಾಗಿದ್ದ ಅತ್ಯಾಚಾರ ಪ್ರಕರಣದಿಂದ ಖುಲಾಸೆಗೊಂಡಿದ್ದಾರೆ. ಪ್ರಕರಣದಲ್ಲಿ ಸಾಕ್ಷ್ಯಾಧಾರಗಳ ಕೊರತೆಯನ್ನು ಉಲ್ಲೇಖಿಸಿ ಎರ್ನಾಕುಲಂ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯವು ಲಿಜು ಅವರನ್ನು ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿ ತೀರ್ಪು ನೀಡಿದೆ. ನ್ಯಾಯಾಲಯದ ತೀರ್ಪಿನ ಬೆನ್ನಲ್ಲೇ ಮಾಧ್ಯಮಗಳೊಂದಿಗೆ ಮಾತನಾಡಿರುವ ಲಿಜು ಕೃಷ್ಣ, ನಟಿ, ‘ಟಾಕ್ಸಿಕ್’ ಚಿತ್ರದ ನಿರ್ದೇಶಕಿ ಗೀತು ಮೋಹನ್ದಾಸ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದು, ವೈಯಕ್ತಿಕ ದ್ವೇಷದಿಂದ ಗೀತು ಅವರೇ ತಮ್ಮ ವಿರುದ್ಧ ಸುಳ್ಳು ಪ್ರಕರಣ ದಾಖಲಾಗಲು ಕಾರಣ ಎಂದು ದೂರಿದ್ದಾರೆ.
ಶೂಟಿಂಗ್ ಸೆಟ್ನಿಂದಲೇ ಅರೆಸ್ಟ್
2020ರಲ್ಲಿ ಕಕ್ಕನಾಡಿನ ಫ್ಲ್ಯಾಟ್ ಹಾಗೂ ಕೆಲವು ಹೋಟೆಲ್ಗಳಲ್ಲಿ ಲಿಜು ಕೃಷ್ಣ ತಮ್ಮ ಮೇಲೆ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಕೊಚ್ಚಿ ಮೂಲದ ಮಹಿಳೆಯೊಬ್ಬರು ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ 2022ರ ಮಾರ್ಚ್ನಲ್ಲಿ ಕಣ್ಣೂರಿನಲ್ಲಿ ನಡೆಯುತ್ತಿದ್ದ ‘ಪಡವೆಟ್ಟು’ ಚಿತ್ರದ ಚಿತ್ರೀಕರಣದ ಸ್ಥಳದಿಂದಲೇ ಪೊಲೀಸರು ಲಿಜು ಅವರನ್ನು ಬಂಧಿಸಿದ್ದರು. ಇದರಿಂದಾಗಿ ಚಿತ್ರದ ಶೂಟಿಂಗ್ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.
ಇದೀಗ ತೀರ್ಪಿನ ಬಳಿಕ ತಮ್ಮ ನೋವು ತೋಡಿಕೊಂಡಿರುವ ಲಿಜು, "ಸತ್ಯಕ್ಕೆ ಜಯ ಸಿಕ್ಕಿದೆ. ಕಳೆದ ಐದು ವರ್ಷಗಳು ನನಗೆ ಮತ್ತು ನನ್ನ ಕುಟುಂಬಕ್ಕೆ ದುರಂತಮಯವಾಗಿದ್ದವು. ಈ ಸುಳ್ಳು ಪ್ರಕರಣದಿಂದಾಗಿ ಕಳೆದ ಐದು ವರ್ಷಗಳಿಂದ ನನ್ನ ವೃತ್ತಿಯಲ್ಲಿ ಮುಂದುವರಿಯಲು ಸಾಧ್ಯವಾಗಲಿಲ್ಲ, ಇದರಿಂದ ಉಂಟಾದ ಪರಿಣಾಮಗಳನ್ನು ವಿವರಿಸಲು ಸಾಧ್ಯವಿಲ್ಲ" ಎಂದು ಭಾವುಕರಾಗಿ ನುಡಿದಿದ್ದಾರೆ.
ಭಿನ್ನಾಭಿಪ್ರಾಯಗಳೇ ಇದಕ್ಕೆ ಕಾರಣವೇ?
ಗೀತು ಮೋಹನ್ದಾಸ್ ಅವರ ಹೆಸರನ್ನು ನೇರವಾಗಿ ಪ್ರಸ್ತಾಪಿಸಿದ ಲಿಜು, ತಮ್ಮಿಬ್ಬರ ನಡುವಿನ ಸೃಜನಶೀಲ ಭಿನ್ನಾಭಿಪ್ರಾಯಗಳೇ ಈ ಪ್ರಕರಣಕ್ಕೆ ಮೂಲ ಕಾರಣ ಎಂದು ಆರೋಪಿಸಿದ್ದಾರೆ. "ನನ್ನ ಮೊದಲ ಸಿನಿಮಾ ‘ಪಡವೆಟ್ಟು’ ಚಿತ್ರೀಕರಣ ಪ್ರಾರಂಭವಾಗುವ ಮುನ್ನ ಕಥೆಯ ಚರ್ಚೆಯ ಸಮಯದಲ್ಲಿ ನನಗೂ ಮತ್ತು ಗೀತು ಮೋಹನ್ದಾಸ್ ನಡುವೆ ತೀವ್ರ ಅಭಿಪ್ರಾಯ ಭೇದಗಳು ಮೂಡಿದ್ದವು. ಆ ಭಿನ್ನಾಭಿಪ್ರಾಯ ವಾಗ್ವಾದಕ್ಕೆ ತಿರುಗಿ ದ್ವೇಷಕ್ಕೆ ದಾರಿ ಮಾಡಿಕೊಟ್ಟಿತ್ತು. ಅದೇ ಹಗೆತನದ ಕಾರಣಕ್ಕೆ ನನ್ನ ವಿರುದ್ಧ ಸುಳ್ಳು ಕೇಸ್ ದಾಖಲಾಯಿತು. ವಿಚಾರಣೆ ವೇಳೆ ಈ ಪ್ರಕರಣದ ಹಿಂದೆ ಗೀತು ಮೋಹನ್ದಾಸ್ ಕೈವಾಡ ಇರುವ ಬಗ್ಗೆಯೂ ನ್ಯಾಯಾಲಯದಲ್ಲಿ ಉಲ್ಲೇಖ ಬಂದಿತ್ತು" ಎಂದು ಅವರು ತಿಳಿಸಿದ್ದಾರೆ.
ನನ್ನ ವೃತ್ತಿ ಬದುಕು ನಾಶ ಮಾಡಿದರು
ತಮ್ಮ ಬಂಧನದ ನಂತರ ‘ಪಡವೆಟ್ಟು’ ಚಿತ್ರದಿಂದ ತಮ್ಮ ಹೆಸರನ್ನು ತೆಗೆದುಹಾಕಲು ಮತ್ತು ಸಿನಿಮಾ ಬಿಡುಗಡೆಯನ್ನು ತಡೆಯಲು ಗೀತು ಪ್ರಯತ್ನಿಸಿದ್ದರು ಎಂದು ಲಿಜು ದೂರಿದ್ದಾರೆ. ‘ವುಮೆನ್ ಇನ್ ಸಿನಿಮಾ ಕಲೆಕ್ಟಿವ್’ (WCC) ಸದಸ್ಯೆಯಾಗಿರುವ ಅವರು ತಮ್ಮ ಪ್ರಭಾವವನ್ನು ಬಳಸಿಕೊಂಡು ಒತ್ತಡ ಹೇರಿದ್ದರು ಎಂದಿರುವ ಲಿಜು, ಚಿತ್ರದ ಬಿಡುಗಡೆ ತಡೆಯಲು ಕೇರಳದ ಹಲವು ಸಿನಿಮಾ ಸಂಸ್ಥೆಗಳಿಗೆ ಲೀಗಲ್ ನೋಟಿಸ್, ಇಮೇಲ್ ಮತ್ತು ಫೋನ್ ಕರೆಗಳನ್ನು ಮಾಡಲಾಗಿತ್ತು ಎಂದು ಆರೋಪಿಸಿದ್ದಾರೆ.
"ಒಂದು ಸಂಸ್ಥೆಯಾಗಿ WCC ಬಗ್ಗೆ ನನಗೆ ಗೌರವವಿದೆ ಮತ್ತು ಚಿತ್ರರಂಗದಲ್ಲಿ ಅದರ ಅಸ್ತಿತ್ವ ಮುಖ್ಯವೆಂದು ನಂಬುತ್ತೇನೆ. ಆದರೆ, ನನ್ನ ಕರಿಯರ್ ನಾಶಮಾಡಲು ಒಬ್ಬ ವ್ಯಕ್ತಿ ಆ ಸಂಸ್ಥೆಯ ಪ್ರಭಾವವನ್ನು ದುರುಪಯೋಗಪಡಿಸಿಕೊಂಡರು" ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"ಈ ಹಂತದಲ್ಲಿ ಯಾರ ವಿರುದ್ಧವೂ ಹೋರಾಟ ನಡೆಸಲು ನನಗೆ ಆಸಕ್ತಿಯಿಲ್ಲ, ಆದರೆ ಕೆಲವು ಸತ್ಯಗಳನ್ನು ಹೇಳಲೇಬೇಕಿದೆ. ನಿಜವಾಗಿಯೂ ದೌರ್ಜನ್ಯಕ್ಕೆ ಒಳಗಾಗಿ ನ್ಯಾಯಕ್ಕೆ ಅರ್ಹರಾಗಿರುವ ಮಹಿಳೆಯರ ವಿಶ್ವಾಸಾರ್ಹತೆಯ ಬಗ್ಗೆ ಇಂತಹ ಸುಳ್ಳು ಪ್ರಕರಣಗಳು ಅನುಮಾನ ಮೂಡಿಸಬಾರದು ಎಂಬ ಕಾರಣಕ್ಕಾಗಿ ನಾನು ಈಗ ಮಾತನಾಡುತ್ತಿದ್ದೇನೆ" ಎಂದು ಲಿಜು ಸ್ಪಷ್ಟಪಡಿಸಿದ್ದಾರೆ.
ಅಂದಹಾಗೆ, 2019ರ ಡಿಸೆಂಬರ್ನಲ್ಲಿ ಆರಂಭವಾಗಿದ್ದ ‘ಪಡವೆಟ್ಟು’ ಚಿತ್ರದ ಚಿತ್ರೀಕರಣ ಕೋವಿಡ್-19 ಹಾಗೂ ನಿರ್ದೇಶಕರ ಬಂಧನದಿಂದಾಗಿ ಹಲವು ವಿಳಂಬಗಳನ್ನು ಎದುರಿಸಿ ಅಂತಿಮವಾಗಿ 2022ರ ಅಕ್ಟೋಬರ್ನಲ್ಲಿ ಬಿಡುಗಡೆಯಾಗಿತ್ತು. ಶಮ್ಮಿ ತಿಲಕನ್, ರಮ್ಯಾ ಸುರೇಶ್ ಮತ್ತು ಅದಿತಿ ಬಾಲನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದ ಈ ಚಿತ್ರವು ವಿಮರ್ಶಕರಿಂದ ಮೆಚ್ಚುಗೆ ಪಡೆದರೂ, ಗಲ್ಲಾಪೆಟ್ಟಿಗೆಯಲ್ಲಿ ಗೆಲ್ಲಲಿಲ್ಲ.