ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ST tag for Kurubas: ಕುರುಬರಿಗೆ ಎಸ್‌ಟಿ ಮೀಸಲಾತಿ; ನಾವು ಸಂವಿಧಾನಬದ್ಧ ಹಕ್ಕು ಪಡೆಯುತ್ತಿದ್ದೇವೆ ಎಂದ ನಿರಂಜನಾನಂದಪುರಿ ಶ್ರೀ

Niranjanaanandapuri Swamiji: ಕುರುಬರಿಗೆ ಎಸ್‌ಟಿ ಮೀಸಲಾತಿ ನೀಡುವುದಕ್ಕೆ ನಾಯಕ (ವಾಲ್ಮೀಕಿ) ಸಮುದಾಯವು ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಸ್ಪಷ್ಟನೆ ನೀಡಿದ್ದಾರೆ. ಕುರುಬ ಸಮುದಾಯದವರು ಯಾವುದೇ ಜಾತಿಯ ಹಕ್ಕು ಕಿತ್ತುಕೊಳ್ಳದೇ ಸಂವಿಧಾನಿಕ ಹಕ್ಕನ್ನು ಪಡೆದುಕೊಳ್ಳುತ್ತಿದೆ. ಊಹಾಪೋಹಗಳ ಹೇಳಿಕೆ ಕೊಡುವುದು ಸಮಂಜಸವಲ್ಲ ಎಂದು ಸ್ವಾಮೀಜಿ ಹೇಳಿದ್ದಾರೆ.

ನಾವು ಸಂವಿಧಾನಬದ್ಧ ಹಕ್ಕು ಪಡೆಯುತ್ತಿದ್ದೇವೆ: ನಿರಂಜನಾನಂದಪುರಿ ಶ್ರೀ

-

Profile Siddalinga Swamy Oct 8, 2025 10:54 PM

ಹಾವೇರಿ: ಕುರುಬ ಸಮುದಾಯದವರು (ST tag for Kurubas) ಯಾವುದೇ ಜಾತಿಯ ಹಕ್ಕು ಕಿತ್ತುಕೊಳ್ಳದೇ ಸಂವಿಧಾನಿಕ ಹಕ್ಕನ್ನು ಪಡೆದುಕೊಳ್ಳುತ್ತಿದೆ. ಊಹಾಪೋಹಗಳ ಹೇಳಿಕೆ ಕೊಡುವುದು ಸಮಂಜಸವಲ್ಲ ಎಂದು ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ತಿಳಿಸಿದ್ದಾರೆ. ಕುರುಬರಿಗೆ ಎಸ್‌ಟಿ ಮೀಸಲಾತಿ (ST Reservation) ನೀಡುವುದಕ್ಕೆ ನಾಯಕ (ವಾಲ್ಮೀಕಿ) ಸಮುದಾಯವು ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಪತ್ರಿಕಾ ಪ್ರಕಟಣೆ ಮೂಲಕ ಸ್ವಾಮೀಜಿ ಸ್ಪಷ್ಟನೆ ನೀಡಿದ್ದಾರೆ.

2021ರಲ್ಲಿ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರು ಪೀಠ, ಕರ್ನಾಟಕ ರಾಜ್ಯ ಕುರುಬರ ಎಸ್.ಟಿ ಹೋರಾಟ ಸಮಿತಿಯ ಕೆ. ವಿರುಪಾಕ್ಷಪ್ಪ, ಕೆ.ಎಸ್. ಈಶ್ವರಪ್ಪ, ಎಚ್. ವಿಶ್ವನಾಥ, ಎಚ್.ಎಂ. ರೇವಣ್ಣ, ಬಂಡೆಪ್ಪ ಕಾಶಂಪುರ್, ಹಾಲುಮತ ಮಹಾಸಭಾದ ರುದ್ರಣ್ಣ ಗುಳಗುಳಿ ಹಾಗೂ ಮುಖಂಡರು ಮತ್ತು ಕುರುಬ ಸಮಾಜದ ಎಲ್ಲಾ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಕಟ್ಟ ಕಡೆಯ ಕುರುಬರಿಗೂ ಎಸ್. ಟಿ. ಮೀಸಲಾತಿ ನೀಡುವಂತೆ ಕಾಗಿನೆಲೆಯಿಂದ ಬೆಂಗಳೂರಿನವರೆಗೆ 360 ಕಿ. ಮೀ ಪಾದಯಾತ್ರೆ ನಡೆಸಿ, ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಮಾಡಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು.

ಅಂದಿನ ಹೋರಾಟವನ್ನು ಗಂಭೀರವಾಗಿ ಪರಿಗಣಿಸಿದ ಅಂದಿನ ಬಿಜೆಪಿ ನೇತೃತ್ವದ ಬೊಮ್ಮಾಯಿ ಸರ್ಕಾರವು 2023 ಮಾರ್ಚ್ 24 ರಂದು ಸಚಿವ ಸಂಪುಟ ಸಭೆಯಲ್ಲಿ ಅನುಮೋದಿಸಿ, ಮಾರ್ಚ್ 28ರಂದು ಆದೇಶ ಮಾಡಿತು. ತದ ನಂತರದ ಕಾಂಗ್ರೇಸ್ ಸರ್ಕಾರ 2023 ಜುಲೈ 20ರಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿ ಕಳುಹಿಸಿ ಕೊಟ್ಟಿತು. ಪ್ರಸ್ತುತ ಕುರುಬರ ಎಸ್. ಟಿ. ಮೀಸಲಾತಿಯ ಕುರಿತು ಕೇಂದ್ರ ಸರ್ಕಾರವು ಹಲವು ಮಾಹಿತಿ ಕೇಳಿದ್ದು, ಅದನ್ನು ರಾಜ್ಯ ಸರ್ಕಾರವು ನೀಡುತ್ತಿದೆ ಎಂದು ತಿಳಿಸಿದ್ದಾರೆ.

ಈಗಾಗಲೇ ಎಸ್.ಟಿ ಮೀಸಲಾತಿ ಪಡೆಯುತ್ತಿರುವ ನಾಯಕ (ವಾಲ್ಮೀಕಿ) ಸಮುದಾಯದ ಬಂಧುಗಳು ಕುರುಬರಿಗೆ ಎಸ್‌ಟಿ ಮೀಸಲಾತಿ ಕೊಡಬಾರದು ನಮಗೆ ಅನ್ಯಾಯವಾಗುತ್ತದೆ. ನಾವುಗಳು ಉಗ್ರ ಹೋರಾಟ ಮಾಡುತ್ತೇವೆ ಎಂದು ಸರ್ಕಾರಕ್ಕೆ ಮನವಿ ನೀಡುವ ಮೂಲಕ ಹಾಗೂ ತೀವ್ರ ವಿರೋಧ ಮಾಡುತ್ತಿರುವ ಬಗ್ಗೆ ಶ್ರೀಕನಕ ಗುರುಪೀಠವು ನಾಯಕ(ವಾಲ್ಮೀಕಿ) ಬಂಧುಗಳಿಗೆ ಕುರುಬ ಸಮುದಾಯದ ಗುರಿ, ಉದ್ದೇಶವನ್ನು ಮನದಟ್ಟು ಮಾಡಿಕೊಡಲು ಬಯಸುತ್ತದೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ | Caste Census: ಗಣತಿದಾರರ ಸಮಸ್ಯೆ ಪರಿಹರಿಸಲು ಜಿಬಿಎ ಮುಖ್ಯ ಆಯುಕ್ತರಿಗೆ ಸರ್ಕಾರಿ ನೌಕರರ ಸಂಘ ಮನವಿ

ಲೋಕೂರು ಸಮಿತಿ ಮಾನದಂಡಗಳಂತೆ ಇರುವ‌ ಕುರುಬ ಸಮುದಾಯದ ಲಕ್ಷಣಗಳನ್ನು ಆಧರಿಸಿ ಕೇಂದ್ರ ಸರ್ಕಾರ ನಮಗೆ ಎಸ್.ಟಿ ಮೀಸಲಾತಿ ನೀಡಿದರೆ ಶೇ.7ರ ಮೀಸಲಾತಿಯಲ್ಲಿ‌ ನಾವು ಪಾಲನ್ನು ಪಡೆಯುವುದಿಲ್ಲ. ನಾವು ಈಗಾಗಲೇ 2ಎ ಮೀಸಲಾತಿಯಲ್ಲಿನ ಕುರುಬರ ಜನಸಂಖ್ಯೆಗನುಗುಣವಾಗಿ ಮೀಸಲಾತಿ ಪ್ರಮಾಣಪತ್ರವನ್ನು ಪಡೆದುಕೊಂಡು ಎಸ್.ಟಿ ಮೀಸಲಾತಿ ಪಡೆಯುತ್ತೇವೆ. ತಾವುಗಳು ಯಾವುದೇ ಊಹಾಪೋಹ, ಗೊಂದಲಕ್ಕೆ ಕಿವಿಗೊಡದೇ ನಾವು ಸಂವಿಧಾನಬದ್ದವಾಗಿ ನಮ್ಮ ಹಕ್ಕುಗಳನ್ನು ನಾವು ಪಡೆಯುತ್ತೇವೆ. ಸಹೋದರಂತೆ ಇರುವ ನಾವು ನೀವೇಲ್ಲ ಸಾಂವಿಧಾನಿಕ ಹಕ್ಕುಗಳನ್ನು ಪಡೆದುಕೊಳ್ಳಲು ಸಾಮರಸ್ಯ, ಸೌಹಾರ್ದತೆಯಿಂದ ಇದ್ದು, ಸಮಾಜದ ಸ್ವಾಸ್ಥ್ಯ ಕಾಪಾಡಿಕೊಳ್ಳೋಣ ಎಂದು ಕನಕ ಗುರು ಪೀಠದ ಶ್ರೀ ಜಗದ್ಗುರು ನಿರಂಜನಾನಂದಪುರಿ ಸ್ವಾಮೀಜಿ ಮನವಿ ಮಾಡಿದ್ದಾರೆ.