ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bidadi Township: ಟೌನ್‍ಶಿಪ್ ಬಗ್ಗೆ ತಲೆ ಕೆಡಿಸಿಕೊಳ್ಳದೇ ಉತ್ತರ ಕರ್ನಾಟಕದ ಅಭಿವೃದ್ಧಿ ಕಡೆ ಗಮನ ಕೊಡಿ: ವಿಜಯೇಂದ್ರ

BY Vijayendra: ರಾಜ್ಯದ ಮುಖ್ಯಮಂತ್ರಿಗಳಾಗಿ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕಾದ ಕರ್ತವ್ಯ ಅವರ ಮೇಲಿದೆ. ದಬ್ಬಾಳಿಕೆ ಮಾಡಲು ನೀವು ರಾಜ್ಯದ ಮುಖ್ಯಮಂತ್ರಿಗಳಾಗಿಲ್ಲ. ಈಗಲೂ ಕಾಲ ಮಿಂಚಿಲ್ಲ. ಜನರು ಈಗಾಗಲೇ ಬಿಡದಿ ವಿಚಾರದಲ್ಲಿ ಬೀದಿಗೆ ಇಳಿದಿದ್ದಾರೆ. ಟೌನ್‍ಶಿಪ್ ಬಗ್ಗೆ ತಲೆ ಕೆಡಿಸಿಕೊಳ್ಳದೇ ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ತಲೆ ಕೆಡಿಸಿಕೊಳ್ಳಿ ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಗ್ರಹಿಸಿದ್ದಾರೆ.

ಉತ್ತರ ಕರ್ನಾಟಕದ ಅಭಿವೃದ್ಧಿ ಕಡೆ ಗಮನ ಕೊಡಿ: ವಿಜಯೇಂದ್ರ ಆಗ್ರಹ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ಸಿಎಂ ಡಿ.ಕೆ. ಶಿವಕುಮಾರ್‌ (ಸಂಗ್ರಹ ಚಿತ್ರ) -

Profile
Siddalinga Swamy Jul 14, 2026 2:53 PM

ಕಲಬುರಗಿ, ಜು.14: ಬಿಡದಿಯ ರೈತರನ್ನು ಬೀದಿಗೆ ತಂದು ಜಮೀನು ಕಸಿದುಕೊಳ್ಳುವ ಭ್ರಮೆಯಲ್ಲಿ ಮುಖ್ಯಮಂತ್ರಿಗಳು ಇದ್ದಲ್ಲಿ ಆ ಭ್ರಮೆಯಿಂದ ಹೊರಕ್ಕೆ ಬರಬೇಕು ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಆಗ್ರಹಿಸಿದ್ದಾರೆ. ಕಲಬುರಗಿಯಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ರಾಜ್ಯದ ಮುಖ್ಯಮಂತ್ರಿಗಳಾಗಿ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕಾದ ಕರ್ತವ್ಯ ಅವರ ಮೇಲಿದೆ. ದಬ್ಬಾಳಿಕೆ ಮಾಡಲು ನೀವು ರಾಜ್ಯದ ಮುಖ್ಯಮಂತ್ರಿಗಳಾಗಿಲ್ಲ. ಈಗಲೂ ಕಾಲ ಮಿಂಚಿಲ್ಲ. ಜನರು ಈಗಾಗಲೇ ಬಿಡದಿ ವಿಚಾರದಲ್ಲಿ ಬೀದಿಗೆ ಇಳಿದಿದ್ದಾರೆ. ಟೌನ್‍ಶಿಪ್ ಬಗ್ಗೆ ತಲೆ ಕೆಡಿಸಿಕೊಳ್ಳದೇ ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ತಲೆ ಕೆಡಿಸಿಕೊಳ್ಳಿ ಎಂದು ಆಗ್ರಹಿಸಿದರು.

ರೈತರ ಜಮೀನು ಕಸಿದುಕೊಂಡು ಟೌನ್‍ಶಿಪ್ ಮಾಡಲು ಸಾಧ್ಯವಿಲ್ಲ

ಇಲ್ಲಿ ಬಂದು ಫೋಟೊ ಹೊಡೆಸಿಕೊಂಡು ಶಿವಪೂಜೆ ಮಾಡಿದ್ದು, ಆ ಕಪಟ ನಾಟಕವನ್ನು ಬದಿಗಿಟ್ಟು, ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕದ ಬಗ್ಗೆ ತಲೆ ಕೆಡಿಸಿಕೊಳ್ಳಿ. ರೈತರ ಬಗ್ಗೆ ತಲೆ ಕೆಡಿಸಿಕೊಳ್ಳಿ. ಕಾಂಗ್ರೆಸ್ ಸರ್ಕಾರ ಮತ್ತು ಮುಖ್ಯಮಂತ್ರಿಗಳಿಗೆ ರೈತರ ವಿಚಾರ ಆದ್ಯತೆ ಆಗಬೇಕೇ ವಿನಾ, ಟೌನ್‍ಶಿಪ್‍ಗಳಲ್ಲ. ಟೌನ್‍ಶಿಪ್ ಅಗತ್ಯವೇ? ಖಂಡಿತ ಅಗತ್ಯವಿದೆ. ಆದರೆ, ರೈತರ ಜಮೀನು ಕಸಿದುಕೊಂಡು ಮಾಡಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು. ನಿಜವಾಗಿಯೂ ನಿಮಗೆ ಅಭಿವೃದ್ಧಿಯ ಕಾಳಜಿ ಇದ್ದರೆ, ಬೆಂಗಳೂರಿನ ಅಭಿವೃದ್ಧಿಯೇ ರಾಜ್ಯದ ಅಭಿವೃದ್ಧಿ ಎಂಬ ಭ್ರಮೆಯಿಂದ ಕಾಂಗ್ರೆಸ್ ಸರ್ಕಾರ ಹೊರಕ್ಕೆ ಬರಲಿ. ಉತ್ತರ ಕರ್ನಾಟಕದ ಅಭಿವೃದ್ಧಿ ಕಡೆ ಗಮನ ಹರಿಸಲಿ ಎಂದು ಒತ್ತಾಯಿಸಿದರು.

ಬಿಡದಿ ಟೌನ್‍ಶಿಪ್ ಜತೆಗೆ ಕನಕಪುರದಲ್ಲಿ ವಿಮಾನನಿಲ್ದಾಣ ಮಾಡಲು ಹೊರಟಿದ್ದಾರಲ್ಲವೇ? ಇವೆರಡೂ ಒಟ್ಟೊಟ್ಟಿಗೆ ಸೇರಿಕೊಂಡಿದೆ. ಡಿ.ಕೆ. ಶಿವಕುಮಾರ್ ಅವರ ಸಾವಿರಾರು ಎಕರೆ ಜಮೀನು ಅಲ್ಲಿದೆ ಎಂದು ಜನಸಾಮಾನ್ಯರೂ ಮಾತನಾಡುತ್ತಿದ್ದಾರೆ. ಮುಖ್ಯಮಂತ್ರಿಗಳಿಗೆ ರೈತರ ಬಗ್ಗೆ ಆಸಕ್ತಿ ಇರಬೇಕೇ ವಿನಾ, ರಿಯಲ್ ಎಸ್ಟೇಟ್ ಬಗ್ಗೆ ಅಲ್ಲ. ರಿಯಲ್ ಎಸ್ಟೇಟ್ ವಿಷಯ ಮರೆತು ರೈತರ ಬಗ್ಗೆ ಆಲೋಚಿಸಿದರೆ ಬಿಡದಿಯಲ್ಲಿ ರೈತರು ಬೀದಿಗಿಳಿದು ಹೋರಾಟ ಮಾಡುವ ಪರಿಸ್ಥಿತಿ ನಿರ್ಮಾಣ ಆಗುತ್ತಿರಲಿಲ್ಲ ಎಂದು ಟೀಕಿಸಿದರು.

ಮುಖ್ಯಮಂತ್ರಿಗಳ ಆದ್ಯತೆ ಏನೆಂದು ಇದರಲ್ಲೇ ಗೊತ್ತಾಗುತ್ತದೆ. ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದ ತಕ್ಷಣ ಬಿಡದಿ ಟೌನ್‍ಶಿಪ್, ಕನಕಪುರದಲ್ಲಿ ವಿಮಾನ ನಿಲ್ದಾಣದ ನೆನಪಾಗಿದೆ. ಇದರ ಬಗ್ಗೆ ನಾವು ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಿದ್ದೇನೆ ಎಂದು ಹೇಳಿದರು.

ಸಿಎಂ ಆದ್ಯತೆಯನ್ನು ಸ್ಪಷ್ಟಪಡಿಸಲಿ

ಮುಖ್ಯಮಂತ್ರಿಗಳು ತಮ್ಮ ಆದ್ಯತೆ ರಿಯಲ್ ಎಸ್ಟೇಟೋ ಅಥವಾ ರೈತರೇ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿದರು. ಟೌನ್‍ಶಿಪ್ ಆಗಬೇಕು, ಬೆಂಗಳೂರು ಅಭಿವೃದ್ಧಿ ಆಗಬೇಕು, ಯುವಕರಿಗೆ ಉದ್ಯೋಗ ಸಿಗಬೇಕೆಂಬುದನ್ನು ನಾನು ಅಲ್ಲಗಳೆಯುವುದಿಲ್ಲ. ಆದರೆ, ರೈತರ ಮೇಲೆ ದಬ್ಬಾಳಿಕೆ ಮಾಡಿ ಆಗಬಾರದು. ಶೇ.70 ರೈತರು ಜಮೀನು ನೀಡುವ ಪ್ರದೇಶದಲ್ಲಿ ಅಲ್ಲಿ ಭೂಸ್ವಾಧೀನ ಮಾಡಬೇಕು. ದಬ್ಬಾಳಿಕೆ ಮಾಡಿ, ಗೂಂಡಾಗಳನ್ನು ಬಿಟ್ಟು ರೈತರನ್ನು ಬೆದರಿಸುವುದು ಸರಿಯಲ್ಲ. ರಾಜ್ಯದ ಮುಖ್ಯಮಂತ್ರಿಗಳು ಎಚ್ಚೆತ್ತುಕೊಳ್ಳಬೇಕೆಂದು ಆಗ್ರಹಿಸಿದರು. ಇದನ್ನು ಬಿಜೆಪಿ ಗಂಭೀರವಾಗಿ ತೆಗೆದುಕೊಂಡಿದೆ. ನಾವು ರೈತರ ಪರವಾಗಿ ಇರುತ್ತೇವೆ ಎಂದರು.‌

ಬಿಡದಿ ರೈತ ಮಹಿಳೆಯರ ಪೊರಕೆ ಸೇವೆ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಗಂಟೆ: ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ

ಕಲಬುರಗಿಯ ಕೇಂದ್ರ ಕಾರಾಗೃಹದಿಂದ 3 ಕೈದಿಗಳು ತಪ್ಪಿಸಿಕೊಂಡ ಕುರಿತ ಪ್ರಶ್ನೆಗೆ ಉತ್ತರ ನೀಡಿದ ಅವರು, ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆಯವರು ಸದ್ಯ ಅಮೆರಿಕ- ಇರಾನ್ ನಡುವಿನ ಯುದ್ಧದ ವಿಚಾರದಲ್ಲಿ ಬ್ಯುಸಿ ಇದ್ದಾರೆ. ಆದಷ್ಟು ಬೇಗ ಅದನ್ನು ಇತ್ಯರ್ಥ ಮಾಡಿ ತಮ್ಮ ಜಿಲ್ಲೆಯ- ತಮ್ಮ ಇಲಾಖೆ ಬಗ್ಗೆ ಗಮನ ಹರಿಸಬೇಕು ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.