ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

KPSC Recruitment Scam: ಜೈಲಿನಲ್ಲಿರುವ ಕೆಪಿಎಸ್‌ಸಿ ಖದೀಮರು ಇಡಿ ವಶಕ್ಕೆ: ಗಂಗ್ವಾರ್‌, ಕನ್ನಾಳೆ ಇ.ಡಿ ಇಕ್ಕಳದಲ್ಲಿ

ಆರೋಪಿಗಳಿಬ್ಬರೂ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿ ದ್ದರು. ವಿಚಾರಣೆಗಾಗಿ ಅವರನ್ನು ವಶಕ್ಕೆ ಪಡೆದಿರುವ ಇಡಿ, ಬಳಿಕ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆದಿದೆ. ಕಳೆದ ನಾಲ್ಕು ದಿನಗಳಿಂದ ಇಡಿ ಅಧಿಕಾರಿಗಳು ಇಬ್ಬರೂ ಆರೋಪಿಗಳನ್ನು ಜೈಲಿನ ಸುದೀರ್ಘ ವಿಚಾರಣೆಗೆ ಒಳಪಡಿಸಿದ್ದರು.

ಗಂಗ್ವಾರ್‌, ಕನ್ನಾಳೆ ಇ.ಡಿ ಇಕ್ಕಳದಲ್ಲಿ

-

Profile
Ashok Nayak Sep 20, 2026 9:58 AM

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ನೇಮಕಾತಿ ಅಕ್ರಮ ಪ್ರಕರಣದ ತನಿಖೆ ವೇಗ ಪಡೆದುಕೊಂಡಿದ್ದು ಜೈಲಿನಲ್ಲಿರುವ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಹಾಗೂ ಮಧ್ಯವರ್ತಿ ಬಸವರಾಜ್ ಕನ್ನಾಳೆರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಬಂಧಿಸಿದೆ. ಈ ನಡುವೆ ಪ್ರಕರಣ ರಾಜಕೀಯ ಮೇಲಾಟಕ್ಕೂ ಕಾರಣವಾಗಿದ್ದು, ಇಬ್ಬರು ಸಚಿವರ ಕೈವಾಡವಿದೆ ಎಂದು ಪ್ರತಿಪಕ್ಷ ಆರೋಪಿಸಿದೆ.

ಆರೋಪಿಗಳಿಬ್ಬರೂ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿ ದ್ದರು. ವಿಚಾರಣೆಗಾಗಿ ಅವರನ್ನು ವಶಕ್ಕೆ ಪಡೆದಿರುವ ಇಡಿ, ಬಳಿಕ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆದಿದೆ. ಕಳೆದ ನಾಲ್ಕು ದಿನಗಳಿಂದ ಇಡಿ ಅಧಿಕಾರಿಗಳು ಇಬ್ಬರೂ ಆರೋಪಿಗಳನ್ನು ಜೈಲಿನ ಸುದೀರ್ಘ ವಿಚಾರಣೆಗೆ ಒಳಪಡಿಸಿದ್ದರು.

ಇದನ್ನೂ ಓದಿ: KPSC Recruitment Scam: ಕೆಪಿಎಸ್‌ಸಿಯನ್ನೂ ಮೀರಿಸಿದೆ ಕೊಪ್ಪಳ ವಿವಿ, ನೇಮಕಾತಿ ಅಕ್ರಮ, ಲಂಚವೇ ಪರಪಂಚ

ಆದರೆ, ಅಧಿಕಾರಿಗಳ ಪ್ರಶ್ನೆಗಳಿಗೆ ಸರಿಯಾಗಿ ಸ್ಪಂದಿಸದೆ ವಿಚಾರಣೆಗೆ ಅಸಹಕಾರ ತೋರಿದ ಹಿನ್ನೆಲೆಯಲ್ಲಿ, ಇಡಿ ಅಧಿಕಾರಿಗಳು ಇಬ್ಬರನ್ನೂ ಬಂಧಿಸಿ, ತಡರಾತ್ರಿ ಇ.ಡಿ ಸ್ಪೆಷಲ್ ಕೋರ್ಟ್ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೆ ಪಡೆದು ಇಡಿ ಕಚೇರಿಯಲ್ಲಿ ಹಣದ ವಹಿವಾಟು ಹಾಗೂ ಅಕ್ರಮ ಹಣ ವರ್ಗಾವಣೆಯ ಕುರಿತು ಇಡಿ ತನಿಖೆ ನಡೆಸುತ್ತಿದೆ.

ಇದಕ್ಕೂ ಮುನ್ನ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ, ಪಶು ವೈದ್ಯಾಧಿಕಾರಿಗಳ ಹುದ್ದೆ ಕೊಡಿಸುವುದಾಗಿ ಹೇಳಿ ಅಭ್ಯರ್ಥಿಗಳಿಂದ 11 ಕೋಟಿ ರು.ಗಳಿಗೂ ಹೆಚ್ಚು ಹಣ ಸಂಗ್ರಹಿಸಲಾಗಿದೆ ಎಂಬುದನ್ನು ಪತ್ತೆ ಹಚ್ಚಿದೆ ಎಂದು ಮೂಲಗಳು ತಿಳಿಸಿವೆ. ಇನ್ನೂ ಕೆಲವು ಬ್ಯಾಂಕ್ ಖಾತೆಗಳ ಪರಿಶೀಲನೆ ಬಾಕಿ ಇದ್ದು, ಕೆಲವರು ನಗದು ರೂಪದಲ್ಲಿಯೂ ಹಣ ನೀಡಿರುವ ಶಂಕೆ ಇದೆ ಎಂದು ತನಿಖಾ ಮೂಲಗಳು ಹೇಳಿವೆ.

ಅಕ್ರಮ ಹಣದಿಂದ ಆಸ್ತಿ ಖರೀದಿ ಆರೋಪ: ತನಿಖೆಯಲ್ಲಿರುವ ಆರೋಪಿಗಳಾದ ಬಸವ ರಾಜ್ ಕನ್ನಾಳೆ ಹಾಗೂ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರು ಅಕ್ರಮವಾಗಿ ಸಂಗ್ರಹಿಸಿದ ಹಣದಲ್ಲಿ ಆಭರಣ, ವಾಹನ ಹಾಗೂ ಫ್ಲ್ಯಾಟ್ ಖರೀದಿಸಿದ್ದಾರೆ. ಆರೋಪಿ ಗಳನ್ನು ಸಿಐಡಿ ಪೊಲೀಸರು 10 ದಿನಗಳ ಕಾಲ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದರು. ಬಳಿಕ ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಜ್ಞಾನೇಂದ್ರ ಕುಮಾರ್ ಗಂಗ್ವಾರ ಅವರು ತಮ್ಮ ಆಪ್ತ ಗೆಳತಿಗೆ ದುಬಾರಿ ಆಭರಣಗಳನ್ನು ಉಡುಗೊರೆಯಾಗಿ ನೀಡಿರುವುದೂ ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.

ಹೊರರಾಜ್ಯದ ಮಳಿಗೆಯೊಂದರಲ್ಲಿ ಸುಮಾರು 26 ಲಕ್ಷ ರು. ಮೌಲ್ಯದ ಚಿನ್ನಾಭರಣ ಖರೀದಿಸಿರುವ ದಾಖಲೆಗಳು ಈ ಹಿಂದೆ ಪತ್ತೆಯಾಗಿದ್ದವು. ತನಿಖೆ ಮುಂದುವರಿಸಿದಾಗ ಬೆಂಗಳೂರಿನ ಪ್ರತಿಷ್ಠಿತ ಮಳಿಗೆ ಯೊಂದರಲ್ಲಿ ಮತ್ತೊಂದು 30 ಲಕ್ಷ ರು. ಮೌಲ್ಯದ ಆಭರಣ ಖರೀದಿಸಿರುವ ದಾಖಲೆಗಳು ಸಿಕ್ಕಿವೆ ಎಂದು ತಿಳಿದುಬಂದಿದೆ. ಹೀಗಾಗಿ, ಪ್ರಕರಣದಲ್ಲಿ ಅಭ್ಯರ್ಥಿಗಳಿಂದ ಸಂಗ್ರಹಿಸಲಾಗಿದೆ ಎನ್ನಲಾದ ಹಣದಲ್ಲಿ ಒಟ್ಟು 56 ಲಕ್ಷ ರು. ಮೌಲ್ಯದ ಆಭರಣಗಳನ್ನು ಜ್ಞಾನೇಂದ್ರ ಕುಮಾರ್ ಖರೀದಿಸಿದ್ದಾರೆ.

ಅಷ್ಟೆ ಅಲ್ಲದೆ, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರಿಯ ವಿಮಾನ ನಿಲ್ದಾಣದ ಬಳಿ ತಮ್ಮ ಅಣ್ಣನ ಹೆಸರಿನಲ್ಲಿ ಐಷಾರಾಮಿ ವಿ ಖರೀದಿಸಿರುವುದು ಸಿಐಡಿ ತನಿಖೆ ವೇಳೆ ಬೆಳಕಿಗೆ ಬಂದಿದೆ. ಕಿಂಗ್‌ಪಿನ್ ಕನ್ನಾಳೆ ಕಳ್ಳಾಟ: ಪ್ರಕರಣದ ಪ್ರಮುಖ ಮಧ್ಯವರ್ತಿ ಬಸವರಾಜ್ ಕನ್ನಾಳೆ, ಕೆಲವು ಅಭ್ಯರ್ಥಿಗಳಿಂದ ಹಣವನ್ನು ಬ್ಯಾಂಕ್ ವರ್ಗಾವಣೆ ಸೇರಿದಂತೆ ವಿವಿಧ ಮಾರ್ಗಗಳ ಮೂಲಕ ಪಡೆದಿರುವುದರ ಕುರಿತು ಸಿಐಡಿ ಮಾಹಿತಿ ಸಂಗ್ರಹಿಸಿದೆ.

12 ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಅಕ್ರಮ ಅನುಕೂಲ ಪಡೆಯಲು ಹಣ ಪಾವತಿಸಿರುವ ಬಗ್ಗೆ ತನಿಖೆಯಲ್ಲಿ ಸುಳಿವು ಸಿಕ್ಕಿದೆ. ಕೆಲವು ಅಭ್ಯರ್ಥಿಗಳಿಂದ ಪಡೆದ ಹಣವನ್ನು ವಿವಿದೆಡೆ ಹೂಡಿಕೆ ಮಾಡಿದ್ದಾನೆ ಎನ್ನಲಾಗಿದ್ದು, ಹಣದ ವಹಿವಾಟು, ಬ್ಯಾಂಕ್ ದಾಖಲೆಗಳು, ಸಿಸಿ ಟಿವಿ ದೃಶ್ಯಗಳು ಮತ್ತು ಕರೆ ವಿವರಗಳನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಅಭ್ಯರ್ಥಿಗಳಿಂದ ಪಡೆದ ಹಣವನ್ನು ಬೇನಾಮಿ ಖಾತೆಗಳಿಗೆ ವರ್ಗಾಯಿಸಿಕೊಳ್ಳುತ್ತಿದ್ದ. ಅಕ್ರಮ ಹಣದ ವರ್ಗಾವಣೆ ವ್ಯವಹಾರಕ್ಕೆ ಬೀದರ್‌ನ ಓಂ ಶ್ರೀ ಲಕ್ಷ್ಮೀ ಸೌಹಾರ್ದ ಸೊಸೈಟಿ ಸೇರಿದಂತೆ ಇತರೆ ಬ್ಯಾಂಕ್‌ಗಳಲ್ಲಿ 13 ಖಾತೆಗಳನ್ನು ನಿಭಾಯಿಸುತ್ತಿದ್ದ. ಈ ಖಾತೆಗಳಲ್ಲಿದ್ದ ಹಣವೂ ಸೇರಿ ಒಟ್ಟು 67 ಲಕ್ಷ ರು. ಜಪ್ತಿ ಮಾಡಲಾಗಿದೆ.

ಶಾಂತಾ ಹೊಸಮನಿಗೆ ಸಿಐಡಿ ಉರುಳು

ಕೆಪಿಎಸ್‌ಸಿ ಪಶು ವೈದ್ಯಾಧಿಕಾರಿ ನೇಮಕಾತಿಯಲ್ಲಿ ಅಕ್ರಮ ಪ್ರಕರಣ ಸಂಬಂಧ ಸಿಐಡಿ ಅಧಿಕಾರಿ ಗಳು ಶಾಂತಾ ಹೊಸಮನಿ ವಿಚಾರಣೆ ನಡೆಸಿದ್ದಾರೆ. ಮತ್ತೊಂದೆಡೆ ಮನೆಗಳ ಪರಿಶೀಲನೆ ಕಾರ್ಯ ಕೂಡ ನಡೆದಿದ್ದು, ಬೆಂಗಳೂರಿನ ಹಾಗೂ ದಾವಣಗೆರೆ ಮನೆಗಳಲ್ಲಿ ಪರಿಶೀಲನೆ ಸಾಗಿದೆ. ಶಾಂತಾ ಹೊಸಮನಿ ಸಿಐಡಿ ವಿಚಾರಣೆಗೆ ಹಾಜರಾದ ನಂತರ ಶುಕ್ರವಾರ ದಾವಣಗೆರೆ ಮನೆಯಲ್ಲಿ ಶೋಧ ನಡೆಸಲಾಗಿದೆ. ಈ ಮೊದಲು ಬೆಂಗಳೂರಿನ ಮನೆಯಲ್ಲಿ ಶೋಧ ನಡೆಸಿದ್ದ ಇಡಿ ಅಽಕಾರಿಗಳು ಈ ವೇಳೆ ಎರಡು ಮೊಬೈಲ್ ಹಾಗೂ ಒಂದು ಟ್ಯಾಬ್ ಜಪ್ತಿ ಮಾಡಿದ್ದು, ಇವುಗಳ ಡಾಟಾ ಮರಳಿ ಸಂಗ್ರಹಿಸಲು ಎಫ್ಎಸ್‌ಐಎಲ್‌ಗೆ ಕಳುಹಿಸಿದ್ದಾರೆ

ಇಬ್ಬರು ಸಚಿವರ ಕೈವಾಡ? ‌

ಕೆಪಿಎಸ್‌ಸಿ ಹಗರಣದಲ್ಲಿ ಇಬ್ಬರು ರಾಜೀನಾಮೆ ನೀಡಿದರೂ ಅಚ್ಚರಿ ಪಡಬೇಕಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದ್ದಾರೆ. ಈ ಹಗರಣದಲ್ಲಿ ಬಂಧನಕ್ಕೊಳಗಾದವರು ಯಾರಿಗೆ ಕರೆ ಮಾಡಿದ್ದಾರೆ ಎಂಬ ದಾಖಲೆಗಳಿದ್ದು, ಇನ್ನೂ ಇಬ್ಬರು ಸಚಿವರು ರಾಜೀನಾಮೆ ನೀಡಬೇಕಿದೆ. ಯಾವ ಸಚಿವರ ಆಪ್ತ ಸಹಾಯಕರು ಕರೆ ಮಾಡಿದ್ದಾರೆ ಎಂಬ ದಾಖಲೆ ನನ್ನ ಬಳಿ ಇದೆ. ನಮ್ಮ ಹೋರಾಟದಿಂದ ಒಂದು ವಿಕೆಟ್ ಬೀಳಿಸಿದ್ದೇವೆ. ಬಿಜೆಪಿ ನಾಯಕರು ಶಾಮೀಲಾಗಿದ್ದರೆ ಬಂಧನ ಮಾಡಲಿ ಎಂದಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, ಅಶೋಕ ಅವರು ಗಾಳಿಯಲ್ಲಿ ಗುಂಡು ಹೊಡೆಯೋದು ಬೇಡ. ಅವರ ಬಳಿ ದಾಖಲೆ ಇದ್ದರೆ ಬಿಡುಗಡೆ ಮಾಡಲಿ. ಅಶೋಕ್ ಅವರೇ ಫೋನ್ ಕೊಟ್ಟು ಕಳಿಸಿದ್ರಂತಾ? ನನ್ ವಿಕೆಟ್ ತೆಗೀತೀನಿ ಅಂತ ಅಂದ್ರಲ್ಲ ಎಲ್ಲಿ ಎಂದು ಪ್ರಶ್ನಿಸಿದರು.