ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Mysuru Dasara 2026: ದಸರಾ ಮಹೋತ್ಸವಕ್ಕೆ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜು; ನಾಳೆ ಬೆಳಗ್ಗೆ ಗವಿಸಿದ್ದೇಶ್ವರ ಶ್ರೀಗಳಿಂದ ಉದ್ಘಾಟನೆ

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆಯ ಧಾರ್ಮಿಕ ವಿಧಿವಿಧಾನಗಳು ಅಂತಿಮ ಹಂತಕ್ಕೆ ಬಂದಿದ್ದು, ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ನೇತೃತ್ವದಲ್ಲಿ ಚಾಮುಂಡೇಶ್ವರಿ ತಾಯಿಯ ಉತ್ಸವ ಮೂರ್ತಿಯ ಶುದ್ಧಿ ಕಾರ್ಯ ನೆರವೇರಿದೆ. ನಾಳೆ ಬೆಳಗ್ಗೆ ಚಾಮುಂಡೇಶ್ವರಿ ದೇವಾಲಯದ ಆವರಣದಲ್ಲಿ ನಿರ್ಮಿಸಿರುವ ಭವ್ಯ ವೇದಿಕೆಯಲ್ಲಿ ಉದ್ಘಾಟನಾ ಕಾರ್ಯಕ್ರಮ ಜರುಗಲಿದೆ.

ದಸರಾ ಮಹೋತ್ಸವಕ್ಕೆ ನಾಳೆ ಬೆಳಗ್ಗೆ ಗವಿಸಿದ್ದೇಶ್ವರ ಶ್ರೀಗಳಿಂದ ಉದ್ಘಾಟನೆ

-

Prabhakara R
Prabhakara R Oct 10, 2026 8:02 PM

ಮೈಸೂರು: 416ನೇ ಸಾಲಿನ ದಸರಾ ಮಹೋತ್ಸವಕ್ಕೆ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗಿದೆ. ಚಾಮುಂಡಿ ಬೆಟ್ಟ ಹಾಗೂ ಅರಮನೆ ಎರಡೂ ಕಡೆಗಳಲ್ಲಿ ಸಿದ್ಧತೆಗಳು ಅಂತಿಮ ಹಂತಕ್ಕೆ ತಲುಪಿದ್ದು, ನಾಳೆ ಬೆಳಗ್ಗೆ ನಾಡಹಬ್ಬವನ್ನು ಕೊಪ್ಪಳದ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಗಳು ಉದ್ಘಾಟಿಸಲಿದ್ದಾರೆ.

ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆಯ ಧಾರ್ಮಿಕ ವಿಧಿವಿಧಾನಗಳು ಅಂತಿಮ ಹಂತಕ್ಕೆ ಬಂದಿದ್ದು, ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ನೇತೃತ್ವದಲ್ಲಿ ಚಾಮುಂಡೇಶ್ವರಿ ತಾಯಿಯ ಉತ್ಸವ ಮೂರ್ತಿಯ ಶುದ್ಧಿ ಕಾರ್ಯ ನೆರವೇರಿದೆ.

ಅರಮನೆಯಿಂದ ತರಲಾಗಿರುವ ಮಹಿಷ ಮರ್ದಿನಿ ಅವತಾರದ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಗಿದ್ದು, ನವರಾತ್ರಿಯ ಪ್ರತಿದಿನ ಪ್ರಾಣ ಪ್ರತಿಷ್ಠಾಪನೆ ಮಾಡಿ, ವಿಶೇಷ ಪೂಜೆ ನಡೆಯಲಿದೆ. ನಾಳೆ ಬೆಳಗ್ಗೆ ಚಾಮುಂಡೇಶ್ವರಿ ದೇವಾಲಯದ ಆವರಣದಲ್ಲಿ ನಿರ್ಮಿಸಿರುವ ಭವ್ಯ ವೇದಿಕೆಯಲ್ಲಿ ಕಾರ್ಯಕ್ರಮ ಜರುಗಲಿದೆ.

ನಾಳೆ ಬೆಳಗ್ಗೆ 11:50 ರಿಂದ 12:13ರ ಧನುರ್ ಲಗ್ನದಲ್ಲಿ ನಾಡಹಬ್ಬ ದಸರಾ ಮಹೋತ್ಸವ ಉದ್ಘಾಟನೆಗೊಳ್ಳಲಿದೆ. ಕೊಪ್ಪಳದ ಗವಿಮಠದ ಶ್ರೀಗಳು ಈ ಬಾರಿಯ ದಸರಾ ಉದ್ಘಾಟಕರಾಗಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸೇರಿ ಹಲವು ಸಚಿವರು, ಶಾಸಕರು ಉಪಸ್ಥಿತರಿರಲಿದ್ದಾರೆ.

ವಿಶೇಷವೆಂದರೆ ಈ ಬಾರಿ 100ಕ್ಕೂ ಹೆಚ್ಚು ಧರ್ಮಗುರುಗಳು ಭಾಗಿಯಾಗುತ್ತಿದ್ದು, ವಿವಿಐಪಿ, ವಿಐಪಿ ಹಾಗೂ ಸಾರ್ವಜನಿಕರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಚಾಮುಂಡಿ ಬೆಟ್ಟದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಇನ್ನೊಂದೆಡೆ, ಅಂಬಾವಿಲಾಸ ಅರಮನೆಯಲ್ಲೂ ಸಾಂಪ್ರದಾಯಿಕ ರಾಜಮನೆತನದ ವಿಧಿವಿಧಾನಗಳು ಆರಂಭವಾಗಿವೆ. ನಾಳೆ ಬೆಳಗ್ಗೆ 6 ರಿಂದ 7:12ರೊಳಗೆ ಸಿಂಹಾಸನಕ್ಕೆ ಸಿಂಹ ಜೋಡಣೆ ಕಾರ್ಯ ನೆರವೇರಲಿದೆ. ಬಳಿಕ ಬೆಳಗ್ಗೆ 8:35 ರಿಂದ 9:05ರವರೆಗೆ ರಾಜವಂಶಸ್ಥರಾದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‌ಗೆ ಕಂಕಣಧಾರಣೆ ನಡೆಯಲಿದೆ. ತದನಂತರ ಬೆಳಗ್ಗೆ 11:45 ರಿಂದ 12:05ರವರೆಗೆ ಸಿಂಹಾಸನಾರೋಹಣದೊಂದಿಗೆ ಅರಮನೆಯಲ್ಲಿ ಖಾಸಗಿ ದರ್ಬಾರ್ ಅಧಿಕೃತವಾಗಿ ಆರಂಭವಾಗಲಿದೆ.