ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವಿಪಕ್ಷ, ಸಿಜೆಪಿ ಪ್ರತಿಭಟನೆ ನಡುವೆ ಚುನಾವಣಾ ಆಯೋಗಕ್ಕೆ ಆನೆ ಬಲ; ಬೆಂಬಲಕ್ಕೆ ಧಾವಿಸಿದ 124 ಮಾಜಿ ಐಎಎಸ್, ಐಎಫ್‌ಎಸ್ ಅಧಿಕಾರಿಗಳು

Vote Chori Allegations: ಮತಗಳ್ಳತನದ ಬಗ್ಗೆ ಯಾವುದೇ ಸಾಕ್ಷ್ಯವಿಲ್ಲದೆ ಆರೋಪ ಮಾಡಿದರೆ ಪ್ರಜಾಪ್ರಭುತ್ವದ ಸಂಸ್ಥೆಗಳ ಮೇಲಿನ ಜನರ ನಂಬಿಕೆ ಕಡಿಮೆಯಾಗಬಹುದು ಎಂದು ಮಾಜಿ ಅಧಿಕಾರಿಗಳು ಎಚ್ಚರಿಸಿದ್ದಾರೆ. ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿದೆ ಮತ್ತು ಮತಗಳ್ಳತನ ಮಾಡಲಾಗಿದೆ ಎಂದು ಆರೋಪಿಸುತ್ತಿರುವ ವಿರೋಧ ಪಕ್ಷಗಳ ಪ್ರತಿಭಟನೆಗಳ ನಡುವೆಯೇ ನಾಗರಿಕರನ್ನು ಉದ್ದೇಶಿಸಿ ಪತ್ರ ಬರೆಯಲಾಗಿದೆ.

ಚುನಾವಣಾ ಆಯೋಗವನ್ನು ಸಮರ್ಥಿಸಿಕೊಂಡ ಮಾಜಿ ಅಧಿಕಾರಿಗಳು

ಸಾಂದರ್ಭಿಕ ಚಿತ್ರ -

Priyanka P
Priyanka P Oct 10, 2026 8:08 PM

ನವದೆಹಲಿ, ಅ. 10: ಭಾರತೀಯ ಆಡಳಿತ ಸೇವೆ ಮತ್ತು ಭಾರತೀಯ ವಿದೇಶಾಂಗ ಸೇವೆಯ 124 ಮಾಜಿ ಅಧಿಕಾರಿಗಳು, ಭಾರತೀಯ ಚುನಾವಣಾ ಆಯೋಗ (Election Commission of India) ಮತ್ತು ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ಸಮರ್ಥಿಸಿ ಬಹಿರಂಗ ಪತ್ರ ಬಿಡುಗಡೆ ಮಾಡಿದ್ದಾರೆ. ಚುನಾವಣಾ ಅಕ್ರಮಗಳ ಆರೋಪಗಳಿಗೆ ವಿಶ್ವಾಸಾರ್ಹ ಸಾಕ್ಷ್ಯಗಳು ಇರಬೇಕು ಎಂದು ಅವರು ಹೇಳಿದ್ದಾರೆ. ಮತಗಳ್ಳತನದ ಬಗ್ಗೆ ಯಾವುದೇ ಸಾಕ್ಷ್ಯವಿಲ್ಲದೆ ಆರೋಪ ಮಾಡಿದರೆ ಪ್ರಜಾಪ್ರಭುತ್ವದ ಸಂಸ್ಥೆಗಳ ಮೇಲಿನ ಜನರ ನಂಬಿಕೆ ಕಡಿಮೆಯಾಗಬಹುದು ಎಂದು ಮಾಜಿ ಅಧಿಕಾರಿಗಳು ಎಚ್ಚರಿಸಿದ್ದಾರೆ.

ಮತದಾರರ ಪಟ್ಟಿಯಲ್ಲಿ ಅಕ್ರಮಗಳು ನಡೆದಿವೆ ಮತ್ತು ಮತಗಳ್ಳತನ ಮಾಡಲಾಗಿದೆ ಎಂದು ಆರೋಪಿಸುತ್ತಿರುವ ವಿರೋಧ ಪಕ್ಷಗಳ ಪ್ರತಿಭಟನೆಗಳ ನಡುವೆಯೇ, ಭಾರತದ ನಾಗರಿಕರನ್ನು ಉದ್ದೇಶಿಸಿ ಈ ಪತ್ರವನ್ನು ಬರೆಯಲಾಗಿದೆ.

ಮುಖ್ಯ ಚುನಾವಣಾ ಅಧಿಕಾರಿ ಜ್ಞಾನೇಶ್‌ ಕುಮಾರ್‌ ಅವರ ರಾಜೀನಾಮೆಗೆ ಆಗ್ರಹಿಸಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿಭಟನೆ ನಡೆದ ಬೆನ್ನಲ್ಲೇ ಈ ಪತ್ರ ಹೊರ ಬಿದ್ದಿದೆ. ಪ್ರತಿಭಟನೆಯಲ್ಲಿ ಪಾಲ್ಗೊಳ್ಳಂಡ ನಾಲ್ವರು ಮಾಜಿ ಮುಖ್ಯಮಂತ್ರಿಗಳು ಸೇರಿ ಹಲವು ವಿಪಕ್ಷದ ನಾಯಕರನ್ನು ಶನಿವಾರ (ಅ. 10) ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಚುನಾವಣಾ ಆಯೋಗ ಬೆಂಬಲಿಸಿ ಮಾಜಿ ಅಧಿಕಾರಿಗಳ ಬಹಿರಂಗ ಪತ್ರ:



ತಮ್ಮ ವೃತ್ತಿಜೀವನದ ಬಹುಭಾಗವನ್ನು ಚುನಾವಣೆಗಳನ್ನು ನಡೆಸುವ ಮತ್ತು ಅವುಗಳ ಬಗ್ಗೆ ಅಧ್ಯಯನ ಮಾಡುವ ಕಾರ್ಯದಲ್ಲಿ ಕಳೆದಿದ್ದೇವೆ ಎಂದು ಮಾಜಿ ಅಧಿಕಾರಿಗಳು ಹೇಳಿದ್ದಾರೆ. ಇದರಲ್ಲಿ ಮತದಾರರ ಪಟ್ಟಿಗಳನ್ನು ಸಿದ್ಧಪಡಿಸುವುದು ಹಾಗೂ ವಿದ್ಯುನ್ಮಾನ ಮತಯಂತ್ರಗಳನ್ನು ಸಂಗ್ರಹಿಸಿಡುವ ಭದ್ರತಾ ಕೊಠಡಿಗಳಿಗೆ ರಕ್ಷಣೆ ಒದಗಿಸುವ ಕಾರ್ಯವೂ ಸೇರಿದೆ.

ಬಹಿರಂಗ ಪತ್ರ ಬರೆದು ಚುನಾವಣಾ ಆಯೋಗ ದುರ್ಬಲಗೊಳಿಸುವ ಪ್ರಯತ್ನಕ್ಕೆ 42 ಮಾಜಿ ನ್ಯಾಯಾಧೀಶರಿಂದ ಕಳವಳ

“ನಾವು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವರಲ್ಲ. ಯಾವುದೇ ಸಾಕ್ಷ್ಯವಿಲ್ಲದೆ ಚುನಾವಣೆಗಳನ್ನು ಅಕ್ರಮವಾಗಿ ತಿರುಚಲಾಗಿದೆ ಎಂದು ಆರೋಪ ಮಾಡಲಾಗುತ್ತಿದೆ. ಇಂತಹ ಆರೋಪಗಳನ್ನು ಮತ್ತೆ ಮತ್ತೆ ಮಾಡುವುದರಿಂದ ಪ್ರಜಾಪ್ರಭುತ್ವದ ಮೇಲೆ ಜನರ ವಿಶ್ವಾಸಕ್ಕೆ ಧಕ್ಕೆಯಾಗುತ್ತದೆ” ಎಂದು ಪತ್ರದಲ್ಲಿ ಬರೆಯಲಾಗಿದೆ.

ಚುನಾವಣಾ ನಿರ್ವಹಣೆಯಲ್ಲಿ ಸುಧಾರಣೆಗಳಾಗಿರುವುದಕ್ಕೆ ಉದಾಹರಣೆಯಾಗಿ 2025ರ ಬಿಹಾರ ವಿಧಾನಸಭಾ ಚುನಾವಣೆಯನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಬಿಹಾರದ ಇತಿಹಾಸದಲ್ಲೇ ಮೊದಲ ಬಾರಿಗೆ ಮರುಮತದಾನ ನಡೆಸುವ ಅಗತ್ಯ ಉಂಟಾಗಿರಲಿಲ್ಲ ಎಂದು ಅವರು ಹೇಳಿದ್ದಾರೆ. ಅಲ್ಲದೆ 1951ರ ಬಳಿಕ ಅತಿ ಹೆಚ್ಚು ಮತದಾನ ದಾಖಲಾಗಿದ್ದು, ಮಹಿಳೆಯರೂ ದಾಖಲೆಯ ಸಂಖ್ಯೆಯಲ್ಲಿ ಮತದಾನದಲ್ಲಿ ಪಾಲ್ಗೊಂಡಿದ್ದರು ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಚುನಾವಣಾ ಆಯೋಗದ ವಿರುದ್ಧ ವಿಪಕ್ಷಗಳು ತಮ್ಮ ಹೋರಾಟವನ್ನು ತೀವ್ರಗೊಳಿಸಿರುವ ಸಂದರ್ಭದಲ್ಲಿ ಮಾಜಿ ಅಧಿಕಾರಿಗಳು ಈ ಪತ್ರವನ್ನು ಬಿಡುಗಡೆ ಮಾಡಿದ್ದಾರೆ. ಶನಿವಾರ ದೆಹಲಿಯಲ್ಲಿ ನಡೆದ ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳಲು ಮುಂದಾದಾಗ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಕೇರಳದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ತ್ರಿಪುರಾದ ಮಾಜಿ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಸೇರಿ ಹಲವು ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.