NICE Road: ನೈಸ್ ರಸ್ತೆ ಹಗರಣದ ವಿರುದ್ಧ ಇಡೀ ರಾಜ್ಯದ ಜನರು ಎದ್ದು ನಿಲ್ಲಬೇಕು: ಎಚ್‌ಡಿಕೆ ಕರೆ
ನೈಸ್ ರಸ್ತೆಗಾಗಿ 20 ವರ್ಷದಿಂದ ರೈತರ ಭೂಮಿ ವಶಕ್ಕೆ ಪಡೆದು ಇನ್ನೂ ಪರಿಹಾರದ ದುಡ್ಡು ಕೊಟ್ಟಿಲ್ಲ. ಅಭಿವೃದ್ಧಿ ಹೆಸರಲ್ಲಿ ರೈತರ ಭೂಮಿ ವಶಪಡಿಸಿಕೊಂಡು 20 ವರ್ಷದಿಂದ ಅನಧಿಕೃತವಾಗಿ ಟೋಲ್ ಸಂಗ್ರಹ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
-
ರಾಮನಗರ, ಆಗಸ್ಟ್ 23: ನಾವು ಕೈಮುಗಿಯುವುದು ಸಂಸ್ಕೃತಿಯ ಪ್ರತೀಕ, ಪೂಜನೀಯ ಬೃಂದಾವನಕ್ಕೆ. ಆದರೆ ಕಾಂಗ್ರೆಸ್ ನಾಯಕರದ್ದು ಸೂಟ್‌ಕೇಸ್ ಸಂಸ್ಕೃತಿ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಮಾಜಿ ಸಂಸದ ಡಿ.ಕೆ.ಸುರೇಶ್ ಹಾಗೂ ಸಚಿವ ಎಚ್.ಸಿ. ಬಾಲಕೃಷ್ಣ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ರಾಮನಗರ ತಾಲೂಕಿನ ಅಕ್ಕೂರು ಗ್ರಾಮದಲ್ಲಿ ಶನಿವಾರ ಬೆಳಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಅವರು, ಇಬ್ಬರು ಮಹಾನ್ ನಾಯಕರು, ಅಭಿವೃದ್ಧಿಯ ಹರಿಕಾರರು ನಮ್ಮ ಬಗ್ಗೆ ಹೇಳಿಕೆ ಕೊಟ್ಟಿದ್ದಾರೆ. ನಾವು ಮಾಡೋದೆಲ್ಲ ಅನಾಚಾರ, ಮನೆ ಮುಂದೆ ಬೃಂದಾವನ ಅಂದಿದ್ದಾರೆ. ಹೌದು. ನಾವು ಪೂಜಿಸುವುದು ಸಂಸ್ಕೃತಿಯ ಪ್ರತೀಕವಾದ ಬೃಂದಾವನವನ್ನು. ಆದರೆ ಅವರದ್ದು ಸೂಟ್‌ಕೇಸ್ ಬೃಂದಾವನ. ಎಲ್ಲಿ ಭೂಮಿ ಸಿಗುತ್ತದೆಯೋ ಅಲ್ಲೆಲ್ಲ ಲಪಟಾಯಿಸಿ ಬೃಂದಾವನ ಕಟ್ಟುವುದು ಅವರ ಸಂಸ್ಕೃತಿ ಎಂದು ಸಚಿವರು ಲೇವಡಿ ಮಾಡಿದರು.
ನೈಸ್ ರಸ್ತೆಗಾಗಿ 20 ವರ್ಷದಿಂದ ರೈತರ ಭೂಮಿ ವಶಕ್ಕೆ ಪಡೆದು ಇನ್ನೂ ಪರಿಹಾರದ ದುಡ್ಡು ಕೊಟ್ಟಿಲ್ಲ. ಟೇಪ್ ಹಿಡಿದುಕೊಂಡು ಅಳತೆ ಮಾಡಿ ಭೂಮಿ ಲಪಟಾಯಿಸಿ ದೋಖಾ ಮಾಡುವವರು ಅವರು. ಅಭಿವೃದ್ಧಿ ಹೆಸರಲ್ಲಿ ರೈತರ ಭೂಮಿ ವಶಪಡಿಸಿಕೊಂಡು 20 ವರ್ಷದಿಂದ ಅನಧಿಕೃತವಾಗಿ ಟೋಲ್ ಸಂಗ್ರಹ ಮಾಡುತ್ತಿದ್ದಾರೆ. ಇದು ಕರ್ನಾಟಕದ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಹಗರಣ. ಆ ರಸ್ತೆ ರಾಷ್ಟ್ರೀಯ ಹೆದ್ದಾರಿ ಅಲ್ಲ, ರಾಜ್ಯ ಸರ್ಕಾರಕ್ಕೆ ಸೇರಿದ್ದು. ಅಲ್ಲಿ ಟೋಲ್ ಸಂಗ್ರಹ ಮಾಡುತ್ತಿರುವುದೇ ಅಕ್ರಮ. ಸರ್ಕಾರ ಕೂಡಲೇ ಟೋಲ್ ಸಂಗ್ರಹಕ್ಕೆ ತಡೆಯೊಡ್ಡಬೇಕು ಎಂದು ಆಗ್ರಹಿಸಿದರು.
ನೈಸ್ ಹಗರಣದ ವಿರುದ್ಧ ಇಡೀ ರಾಜ್ಯದ ಜನರು ಎದ್ದು ನಿಲ್ಲಬೇಕು
ನೈಸ್ ವಿರುದ್ಧ ನಾನು ಕೇವಲ ಜೆಡಿಎಸ್ ಕಾರ್ಯಕರ್ತರನ್ನು ಎತ್ತಿಕಟ್ಟುತ್ತಿಲ್ಲ, ಇಡೀ ರಾಜ್ಯದ ಜನರೇ ಎದ್ದು ನಿಲ್ಲಬೇಕಾಗಿದೆ. ಅಂತಹ ದೊಡ್ಡ ಹಗರಣ ನಡೆದಿದೆ. ಜನ ನಮ್ಮನ್ನು ಆಯ್ಕೆ ಮಾಡಿರುವುದು ಈ ದುರಾಡಳಿತವನ್ನು ಪ್ರಶ್ನೆ ಮಾಡಲು. ರೈತರ ಭೂಮಿಯನ್ನು ಲಪಟಾಯಿಸುವ ಕೆಲಸ ನಡೆದರೆ ಅದರ ಬಗ್ಗೆ ದನಿ ಎತ್ತಲು ಜನರು ನಮಗೆ ಶಕ್ತಿ ಕೊಟ್ಟಿದ್ದಾರೆ ಎಂದು ಸಚಿವರು ಹೇಳಿದರು.
600 ಕೋಟಿ ವಿಚಾರ ಎತ್ತಬೇಡ ಎಂದು ಕಾಲು ಹಿಡಿದಿದ್ದವನು ಈಗ ನನಗೆ ಪಾಠ ಮಾಡುತ್ತಾನಾ?
ಸಚಿವ ಎಚ್.ಸಿ.ಬಾಲಕೃಷ್ಣ ವಿರುದ್ಧ ಕಿಡಿಕಾರಿದ ಕೇಂದ್ರ ಸಚಿವರು, ಪಾಪ.. ಈಗಿನ ಇಲ್ಲಿಯ ಶಾಸಕ ಹಿಂದೆ ನನ್ನ ಜತೆಯಲ್ಲೇ ಇದ್ದ. ಆ ಸಮಯದಲ್ಲಿ ಗುತ್ತಿಗೆದಾರರೊಬ್ಬರು ₹600 ಕೋಟಿ ಕೆಲಸ ಮಾಡಿ ಹಣ ಸಿಗದೇ ಇದ್ದಾಗ, ಅಯ್ಯಯ್ಯೋ ಅಣ್ಣ.. ಆ ವಿಷಯ ಎತ್ತಬೇಡಣ್ಣ ಎಂದು ಕಾಲು ಹಿಡಿದುಕೊಳ್ಳಲು ಬಂದಿದ್ದ. ಅದನ್ನು ಅವರು ನೆನಪಿಸಿಕೊಳ್ಳಬೇಕು. ಇವನಿಂದ ನಾನು ಕಲಿಯಬೇಕಾ ಎಂದು ತೀವ್ರ ವಾಗ್ದಾಳಿ ನಡೆಸಿದರು.
20 ವರ್ಷದಿಂದ ರೈತರಿಗೆ ಪರಿಹಾರವಿಲ್ಲ, ಇದು ಅಭಿವೃದ್ಧಿಯಲ್ಲ ಭೂ ದರೋಡೆ
ನೈಸ್ ರಸ್ತೆಗಾಗಿ 20 ವರ್ಷಗಳಿಂದ ಭೂಮಿ ನೀಡಿದ ರೈತರಿಗೆ ಪರಿಹಾರದ ಹಣ ನೀಡಿಲ್ಲ. 4,000 ಕುಟುಂಬಗಳಿಗೆ ನಿವೇಶನ ನೀಡುವುದಾಗಿ ಹೇಳಿ ಕೊಡಲಿಲ್ಲ. ಇದೆಲ್ಲವನ್ನು ನೋಡಿಯೇ ನಾನು ಧ್ವನಿ ಎತ್ತಿದ್ದೇನೆ, ಅಭಿವೃದ್ಧಿಗೆ ಅಡ್ಡಿಪಡಿಸಬೇಕು ಎಂದು ಅಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ರೈತರು ಇನ್ನೂ ಎಷ್ಟು ವರ್ಷ ಕಾಯಬೇಕು? ನೈಸ್ ರಸ್ತೆ ನಿರ್ಮಿಸಲು ಇನ್ನೆಷ್ಟು ವರ್ಷ ಬೇಕು? ಈಗಾಗಲೇ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೆ ನಿರ್ಮಾಣವಾಗಿದೆ. ಹಿಂದೆ ಮಾಯಗನಹಳ್ಳಿ ಬಳಿ ಶಾಲಾ ಬಸ್ ಅಪಘಾತದಲ್ಲಿ 8 ಮಕ್ಕಳು ಮೃತಪಟ್ಟಾಗ, ಬೆಂಗಳೂರು-ಮೈಸೂರು ನಡುವೆ ಉತ್ತಮ ರಸ್ತೆ ನಿರ್ಮಿಸಬೇಕು ಎಂದು ಮಾಜಿ ಪ್ರಧಾನಿ ದೇವೇಗೌಡರು ತೀರ್ಮಾನಿಸಿದ್ದರು. ಜನರಿಗೆ ಒಳ್ಳೆಯದು ಮಾಡಬೇಕು ಎಂದು ಕೆಲಸ ಮಾಡಿದವರು ನಾವು. 20 ವರ್ಷದಿಂದ ರೈತರಿಗೆ ಪರಿಹಾರ ಕೊಡಬೇಡಿ ಎಂದು ದೇವೇಗೌಡರು ಹೇಳಿದ್ದರೇ? ಇವರು ಮಾಡುತ್ತಿರುವ ಅಕ್ರಮದ ವಿರುದ್ಧ ಧ್ವನಿ ಎತ್ತಲು ಜನರು ನಮಗೆ ಶಕ್ತಿ ನೀಡಿದ್ದಾರೆ ಎಂದು ಹೇಳಿದರು.
ಕುಮಾರಸ್ವಾಮಿ ಪಾಪದ ಕೊಳೆಯನ್ನು ನಾವು ತೊಳೆಯುತ್ತಿದ್ದೇವೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ ಅವರು, ಕೊಳೆ ನಾ? ಎಲ್ಲಿದೆ ಕೊಳೆ? ನಾವು ರಾಮನಗರಕ್ಕೆ ಬಂದಾಗ ಕನಕಪುರ ಹೇಗಿತ್ತು? ಕನಕಪುರದಲ್ಲಿ ಬೀದಿ ದೀಪದ ಕಂಬ ಕೂಡ ಇರಲಿಲ್ಲ. ದೇವೇಗೌಡರು ಕನಕಪುರಕ್ಕೆ ವಿದ್ಯುತ್ ಸಂಪರ್ಕ ಕೊಡಿಸುವಾಗ ಇವರು ಎಲ್ಲಿದ್ದರು? ಕೊತವಾಲನಿಗೆ ಎಂಡ ಕೊಡಲು ಬಾರ್‌ನಲ್ಲಿ ಕೂತಿದ್ದರು ಎಂದು ಡಿಕೆ ಬ್ರದರ್ಸ್ ವಿರುದ್ಧ ವಾಗ್ದಾಳಿ ನಡೆಸಿದರು.