Panchakshari Hiremath: ಹಿರಿಯ ಸಾಹಿತಿ ಡಾ. ಪಂಚಾಕ್ಷರಿ ಹಿರೇಮಠ ಇನ್ನಿಲ್ಲ
ಡಾ. ಪಂಚಾಕ್ಷರಿ ಹಿರೇಮಠ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. 100ಕ್ಕೂ ಹೆಚ್ಚು ಉಪಯುಕ್ತ ಕೃತಿಗಳನ್ನು ಸಾರಸ್ವಲೋಕಕ್ಕೆ ಕೊಡುಗೆ ನೀಡಿದ್ದಾರೆ. ಅವರ ಹಲವಾರು ಕೃತಿಗಳು ವಿದೇಶಿ ಭಾಷೆಗಳಲ್ಲಿ ಅನುವಾದಗೊಂಡಿರುವುದು ವಿಶೇಷ.

ಡಾ. ಪಂಚಾಕ್ಷರಿ ಹಿರೇಮಠ

ಧಾರವಾಡ : ಕನ್ನಡದ ಹಿರಿಯ ಸಾಹಿತಿ ಡಾ. ಪಂಚಾಕ್ಷರಿ ಹಿರೇಮಠ (92) ಅವರು (Dr. Panchakshari Hiremath passes away) ನಿಧನರಾಗಿದ್ದಾರೆ. ಅವರು ಅಪ್ಪಟ ದೇಶಪ್ರೇಮಿ, ಸ್ವಾತಂತ್ರ‍್ಯ ಹೋರಾಟಗಾರ, ಬಹುಭಾಷಾ ವಿಶಾರದ,ಕವಿ, ಕಥೆಗಾರ, ಪ್ರಬಂಧಕಾರ, ವಿಮರ್ಶಕ, ಅನುವಾದಕ, ವಾಗ್ಮಿಯಾಗಿದ್ದರು. ಕರ್ನಾಟಕ ವಿಶ್ವವಿದ್ಯಾಲಯದ (Karnataka University) ಕನ್ನಡ ವಿಭಾಗದ ನಿವೃತ್ತ ಪ್ರಾಧ್ಯಾಪಕರಾಗಿದ್ದ ಅವರು ಧಾರವಾಡದ (dharwad news) ಜಯನಗರ ನಿವಾಸಿಯಾಗಿದ್ದರು.
ಅವರಿಗೆ ಪತ್ನಿ, ಇಬ್ಬರು ಪುತ್ರರು, ಪುತ್ರಿ ಇದ್ದಾರೆ. ಕೊಪ್ಪಳ ಜಿಲ್ಲೆಯ ಬಿಸರಹಳ್ಳಿಯಲ್ಲಿ 1933ರ ಜ. 6ರಂದು ಜನಿಸಿದ ಪಂಚಾಕ್ಷರಿ ಹಿರೇಮಠ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ಹಿರೇಮಠರ ಅಂತ್ಯಕ್ರಿಯೆ ಮಾರ್ಚ್ 15 ರ ಇಂದು ಸಂಜೆ 4 ಗಂಟೆಗೆ ಕೊಪ್ಪಳ ಜಿಲ್ಲೆ ಬಿಸರಳ್ಳಿ ಗ್ರಾಮದಲ್ಲಿ ಜರುಗಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ. ಹಿರೇಮಠರು 19 ಕಾವ್ಯ ಸಂಕಲನಗಳು, 11 ಕಥಾ ಸಂಕಲನಗಳು, ಉರ್ದು ಮತ್ತು ಹಿಂದಿಯಿಂದ ಕನ್ನಡಕ್ಕೆ ತಂದ 8 ಅನುವಾದಿತ ಕಾದಂಬರಿಗಳು, 13 ಪ್ರಬಂಧ ಮತ್ತು ವಿಮರ್ಶೆಯ ಕೃತಿಗಳು, 7 ಚಿಂತನ ಸಾಹಿತ್ಯ ಕೃತಿಗಳು, 6 ಜೀವನ ಚರಿತ್ರೆಗಳು, 3 ಪತ್ರ ಸಾಹಿತ್ಯ ಕೃತಿಗಳು, 2 ಚರಿತ್ರೆಗಳು, 7 ಮಕ್ಕಳ ಸಾಹಿತ್ಯ ಕೃತಿಗಳು, 5 ಅನುವಾದಿತ ನಾಟಕಗಳು, ಸಂಪಾದನೆಯ 8 ಕೃತಿಗಳು, ಹಿಂದಿ, ತೆಲುಗು ಹಾಗೂ ಆಂಗ್ಲ ಭಾಷೆಗೆ ಭಾಷಾಂತರಗೊಂಡ 8 ಕೃತಿಗಳು ಸೇರಿ 100ಕ್ಕೂ ಹೆಚ್ಚು ಉಪಯುಕ್ತ ಕೃತಿಗಳನ್ನು ಸಾರಸ್ವಲೋಕಕ್ಕೆ ಕೊಡುಗೆ ನೀಡಿದ್ದಾರೆ. ಅವರ ಹಲವಾರು ಕೃತಿಗಳು ವಿದೇಶಿ ಭಾಷೆಗಳಲ್ಲಿ ಅನುವಾದಗೊಂಡಿರುವುದು ವಿಶೇಷ.
ಸಿಎಂ ಸಿದ್ದರಾಮಯ್ಯ ಸಂತಾಪ
ಹಿರಿಯ ಸಾಹಿತಿ, ವಿದ್ವಾಂಸ, ವಿದ್ಯಾ ವಾಚಸ್ಪತಿ ಡಾ. ಪಂಚಾಕ್ಷರಿ ಹಿರೇಮಠ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ಹೈದರಾಬಾದ್ -ಕರ್ನಾಟಕ ವಿಮೋಚನಾ ಚಳವಳಿ ಮತ್ತು ಸ್ವಾತಂತ್ರ್ಯ ಹೋರಾಟ ಸ್ಮರಿಸಿ ನುಡಿ ನಮನ ಸಲ್ಲಿಸಿದ್ದಾರೆ. ಬಹುಭಾಷಾ ವಿದ್ವಾಂಸರಾಗಿದ್ದ ಡಾ. ಹಿರೇಮಠ ಅವರು ಕನ್ನಡಕ್ಕೆ ವಿವಿಧ ಭಾಷೆಯ ಕೃತಿಗಳನ್ನು ಅನುವಾದ ಮಾಡಿದ್ದಾರೆ. ನೂರಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ ಮೇರು ಸಾಹಿತಿಯಾಗಿದ್ದಾರೆ. ಅವರ ನಿಧನದಿಂದ ಕನ್ನಡ ಸಾಹಿತ್ಯ ಲೋಕಕ್ಕೆ ನಷ್ಟವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ: E Khata: ರಾಜ್ಯದ ಗ್ರಾಮೀಣ ಆಸ್ತಿಗಳಿಗೂ ಇ-ಖಾತಾ: ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ