Eklavya Series: ಎಐನಲ್ಲಿ ಮೂಡಿ ಬರಲಿದೆ ‘ಏಕಲವ್ಯ’ ವೆಬ್ ಸರಣಿ!
Eklavya Series: ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಿಕೊಂಡು ಮನರಂಜನಾ ಕ್ಷೇತ್ರದಲ್ಲಿ ಹೊಸ ಪ್ರಯೋಗಕ್ಕೆ Lionsgate Play ಮುಂದಾಗಿದೆ. ತನ್ನ ಮೊದಲ AI ಆಧಾರಿತ ಮೂಲ ವೆಬ್ ಸರಣಿ ‘Eklavya’ವನ್ನು ಘೋಷಿಸಿರುವ ಸಂಸ್ಥೆ, ಈ ಸರಣಿಯಲ್ಲಿ ನಾಯಕನ ಪಾತ್ರ ನಿರ್ವಹಿಸಲಿರುವ ತನ್ನ ಮೊದಲ AI ನಟ ‘Yug R.Ai’ ಅವರನ್ನು ಪರಿಚಯಿಸಿದೆ.
ಏಕಲವ್ಯ ಸಿನಿಮಾ -
ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಿಕೊಂಡು ಮನರಂಜನಾ ಕ್ಷೇತ್ರದಲ್ಲಿ ಹೊಸ ಪ್ರಯೋಗಕ್ಕೆ Lionsgate Play ಮುಂದಾಗಿದೆ. ತನ್ನ ಮೊದಲ AI ಆಧಾರಿತ ಮೂಲ ವೆಬ್ ಸರಣಿ ‘Eklavya’ವನ್ನು ಘೋಷಿಸಿರುವ ಸಂಸ್ಥೆ, ಈ ಸರಣಿಯಲ್ಲಿ ನಾಯಕನ ಪಾತ್ರ ನಿರ್ವಹಿಸಲಿರುವ ತನ್ನ ಮೊದಲ AI ನಟ ‘Yug R.Ai’ ಅವರನ್ನು ಪರಿಚಯಿಸಿದೆ.
Lionsgate Play ಸಂಸ್ಥೆಯ ಸಂಸ್ಥಾಪಕ ಹಾಗೂ ಸಿಇಒ ರೋಹಿತ್ ಜೈನ್ ಅವರು ಸರಣಿಯ ಮೊದಲ ಲುಕ್ ಬಿಡುಗಡೆ ಮಾಡಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ವಿಭು ಪುರಿ ನಿರ್ದೇಶನದ ಈ ಸರಣಿಯ ಚಿತ್ರೀಕರಣ ಹಾಗೂ ನಿರ್ಮಾಣ ಕಾರ್ಯ ಪ್ರಸ್ತುತ ನಡೆಯುತ್ತಿದೆ. 2027ರಲ್ಲಿ Lionsgate Play ಆ್ಯಪ್ನ Tiger TV ಮೂಲಕ ಪ್ರತ್ಯೇಕವಾಗಿ ಪ್ರಸಾರವಾಗಲಿದೆ.
ಭಾರತೀಯ ಪೌರಾಣಿಕ ಕಥೆಗೆ AI ಸ್ಪರ್ಶ
ಭಾರತೀಯ ಪೌರಾಣಿಕ ಕಥೆಯ ಏಕಲವ್ಯನ ಜೀವನವನ್ನು ಆಧರಿಸಿ ಈ ವೆಬ್ ಸರಣಿ ರೂಪಿಸಲಾಗುತ್ತಿದೆ. ಗುರುಗಳಿಂದ ತಿರಸ್ಕಾರಕ್ಕೆ ಒಳಗಾದರೂ ಛಲ, ಪರಿಶ್ರಮ ಮತ್ತು ಆತ್ಮವಿಶ್ವಾಸದಿಂದ ಬಿಲ್ಲುಗಾರಿಕೆಯಲ್ಲಿ ಅಪ್ರತಿಮ ಸಾಧನೆ ಮಾಡಿದ ಬಾಲಕನ ಕಥೆಯನ್ನು ಈ ಸರಣಿ ಒಳಗೊಂಡಿದೆ.
ಇದನ್ನೂ ಓದಿ: Sai Pallavi: ಮತ್ತೊಮ್ಮೆ ಶಾರ್ಟ್ ಹೇರ್ ಲುಕ್ನಲ್ಲಿ ಮಿಂಚಿದ ಸಾಯಿ ಪಲ್ಲವಿ!
ಈ ಯೋಜನೆಯ ವಿಶೇಷತೆ ಎಂದರೆ, ಪಾತ್ರಗಳ ಸೃಷ್ಟಿ ಹಾಗೂ ಸರಣಿಯ ದೃಶ್ಯ ಜಗತ್ತನ್ನು ರೂಪಿಸಲು AI ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. AI ಆಧಾರಿತ ಮೂಲ ಸರಣಿಗಳ ನಿರ್ಮಾಣಕ್ಕೆ Lionsgate Play ಮುಂದಾಗಿದ್ದು, ‘Eklavya’ ಈ ಹೊಸ ಪ್ರಯತ್ನದ ಮೊದಲ ಹೆಜ್ಜೆಯಾಗಿದೆ.
ಗೂಗಲ್ ಕ್ಲೌಡ್ ಜೊತೆ ಮಹತ್ವದ ಒಪ್ಪಂದ
ಈ ಸರಣಿಯ ಘೋಷಣೆಯೊಂದಿಗೆ Lionsgate Play ಮತ್ತು Google Cloud ನಡುವೆ ದೀರ್ಘಕಾಲೀನ ಕಾರ್ಯತಂತ್ರದ ಪಾಲುದಾರಿಕೆಯೂ ಆರಂಭವಾಗಿದೆ.
ಈ ಸಹಯೋಗದ ಮೂಲಕ Lionsgate Playನ ಕಥೆ ಹೇಳುವ ಪರಿಣತಿ ಮತ್ತು Google Cloudನ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಒಟ್ಟುಗೂಡಿಸಿ ಭಾರತೀಯ ಪ್ರೇಕ್ಷಕರಿಗಾಗಿ ಹೊಸ ಮಾದರಿಯ ಮೂಲ ಮನರಂಜನಾ ಕಾರ್ಯಕ್ರಮಗಳನ್ನು ನಿರ್ಮಿಸುವ ಉದ್ದೇಶ ಹೊಂದಲಾಗಿದೆ.
‘Eklavya’ ಸರಣಿಯು ಕನ್ನಡ ಸೇರಿದಂತೆ ಹಲವು ಭಾರತೀಯ ಹಾಗೂ ಅಂತಾರಾಷ್ಟ್ರೀಯ ಭಾಷೆಗಳಲ್ಲಿ ಲಭ್ಯವಾಗಲಿದೆ ಎಂದು ಸಂಸ್ಥೆ ತಿಳಿಸಿದೆ. ಮೊದಲ ಸೀಸನ್ನಲ್ಲಿ ಒಟ್ಟು ಎಂಟು ಸಂಚಿಕೆಗಳಿದ್ದು, ಮುಂದಿನ ದಿನಗಳಲ್ಲಿ ಹಲವು ಸೀಸನ್ಗಳ ಫ್ರಾಂಚೈಸಿಯಾಗಿ ವಿಸ್ತರಿಸುವ ಯೋಜನೆಯೂ ಇದೆ.
ತಂತ್ರಜ್ಞಾನಕ್ಕಿಂತ ಕಥೆಯೇ ಮುಖ್ಯ: ರೋಹಿತ್ ಜೈನ್
Lionsgate Play ಸಂಸ್ಥೆಯ ಸಂಸ್ಥಾಪಕ ಮತ್ತು ಸಿಇಒ ರೋಹಿತ್ ಜೈನ್ ಮಾತನಾಡಿ, ತಂತ್ರಜ್ಞಾನದಲ್ಲಿನ ಪ್ರತಿಯೊಂದು ಹೊಸ ಬೆಳವಣಿಗೆಯೂ ಕಥೆಗಾರರಿಗೆ ಹೊಸ ಅವಕಾಶಗಳನ್ನು ತೆರೆದಿದೆ. ಈಗ AI ತಂತ್ರಜ್ಞಾನವು ಹಿಂದೆಂದಿಗಿಂತಲೂ ವೇಗವಾಗಿ ಹೊಸ ಸಾಧ್ಯತೆಗಳನ್ನು ಸೃಷ್ಟಿಸುತ್ತಿದೆ ಎಂದು ಹೇಳಿದ್ದಾರೆ.
ಆದರೆ, ಕೇವಲ ತಂತ್ರಜ್ಞಾನದಿಂದ ತೆರೆಯ ಮೇಲೆ ಅದ್ಭುತವನ್ನು ಸೃಷ್ಟಿಸಲು ಸಾಧ್ಯವಿಲ್ಲ. ಉತ್ತಮ ಕಥೆಗಳು ಮತ್ತು ಅದರ ಹಿಂದೆ ಕೆಲಸ ಮಾಡುವ ಸೃಜನಶೀಲ ತಂಡವೇ ನಿಜವಾದ ಮ್ಯಾಜಿಕ್ ಸೃಷ್ಟಿಸುತ್ತದೆ. ಬರಹಗಾರರು, ಕಲಾವಿದರು ಮತ್ತು ನಿರ್ದೇಶಕರನ್ನೊಳಗೊಂಡ ಬಲಿಷ್ಠ ತಂಡದ ಮೂಲಕ ಪ್ರತಿಯೊಂದು AI ಸರಣಿಯನ್ನು ರೂಪಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
‘Eklavya’ ನಮ್ಮ ಮಹತ್ವಾಕಾಂಕ್ಷೆಯ ಮೊದಲ ಹೆಜ್ಜೆಯಾಗಿದ್ದು, ಎಂಟು ಸಂಚಿಕೆಗಳ ಮೊದಲ ಸೀಸನ್ ಮುಂದಿನ ದಿನಗಳಲ್ಲಿ ಹಲವು ಸೀಸನ್ಗಳ ಸರಣಿಯಾಗಿ ಬೆಳೆಯುವ ಉದ್ದೇಶ ಹೊಂದಿದೆ. Yug R.Ai ಕೇವಲ ಆರಂಭವಷ್ಟೇ ಎಂದು ರೋಹಿತ್ ಜೈನ್ ಹೇಳಿದ್ದಾರೆ.
ಕಲ್ಪನೆಗೆ ಮಿತಿಯಿಲ್ಲದ ಹೊಸ ಪ್ರಯೋಗ: ನಿರ್ದೇಶಕ ವಿಭು ಪುರಿ
ಸರಣಿಯ ನಿರ್ದೇಶಕ ವಿಭು ಪುರಿ ಮಾತನಾಡಿ, ಏಕಲವ್ಯನಿಗೆ ಗುರು ಸಿಗದಿದ್ದರೂ ಆತ ತನ್ನ ಪರಿಶ್ರಮದಿಂದ ಬಿಲ್ಲುಗಾರಿಕೆಯನ್ನು ಕರಗತ ಮಾಡಿಕೊಂಡನು. ಅದೇ ರೀತಿಯಲ್ಲಿ ಈ ಸರಣಿಯೂ ನನಗೆ ಒಂದು ಹೊಸ ಪ್ರಯೋಗವಾಗಿದೆ ಎಂದು ಹೇಳಿದ್ದಾರೆ.
ಇಷ್ಟು ವರ್ಷಗಳ ವೃತ್ತಿಜೀವನದಲ್ಲಿ ದೊಡ್ಡ ಕಲ್ಪನೆಗಳನ್ನು ಸೀಮಿತ ಬಜೆಟ್ ಮತ್ತು ಸಮಯದೊಳಗೆ ರೂಪಿಸುವ ಸವಾಲು ಎದುರಿಸಿದ್ದೇನೆ. ಆದರೆ ‘Eklavya’ ಸರಣಿಯಲ್ಲಿ ಮೊದಲ ಬಾರಿಗೆ ಕಲ್ಪನೆಗೆ ತಕ್ಕಷ್ಟು ವಿಶಾಲವಾದ ಅವಕಾಶ ದೊರೆತಿದೆ. ಪ್ರತಿಯೊಂದು ದೃಶ್ಯ, ಭಾವನೆ ಮತ್ತು ಪಾತ್ರಗಳ ಅಭಿವ್ಯಕ್ತಿಯ ಹಿಂದೆ ನಮ್ಮ ತಂಡದ ಪರಿಶ್ರಮವಿದೆ ಎಂದು ಅವರು ತಿಳಿಸಿದ್ದಾರೆ.
ವಿಭು ಪುರಿ ಈ ಹಿಂದೆ ‘Heeramandi’, ‘Taj: Divided by Blood’, ‘Gustaakh Ishq’ ಮತ್ತು ‘Hawaizaada’ ಸೇರಿದಂತೆ ಹಲವು ಗಮನಾರ್ಹ ಯೋಜನೆಗಳಲ್ಲಿ ಕೆಲಸ ಮಾಡಿದ್ದಾರೆ. ಅಲ್ಲದೆ, ಹಲವಾರು ದೊಡ್ಡ ಜಾಹೀರಾತು ಅಭಿಯಾನಗಳನ್ನೂ ನಿರ್ದೇಶಿಸಿದ್ದಾರೆ.
2027ರಲ್ಲಿ ವಿಶ್ವದ ಪ್ರೇಕ್ಷಕರ ಮುಂದೆ ಏಕಲವ್ಯ
ಭಾರತೀಯ ಕಥೆಗಳನ್ನು ಜಾಗತಿಕ ಪ್ರೇಕ್ಷಕರಿಗೆ ತಲುಪಿಸುವ Lionsgate Playನ ಪ್ರಯತ್ನದ ಭಾಗವಾಗಿ ‘Eklavya’ ಸರಣಿ ಮೂಡಿಬರುತ್ತಿದೆ. Tiger TV ಮೂಲಕ ಈ ಸರಣಿಯನ್ನು ಪ್ರೇಕ್ಷಕರಿಗೆ ತಲುಪಿಸಲು ಸಂಸ್ಥೆ ಯೋಜಿಸಿದೆ.
ಇದನ್ನೂ ಓದಿ: Sukesh Chandrashekhar: ನೆಟ್ಫ್ಲಿಕ್ಸ್ನಲ್ಲಿ ವಂಚಕ ಸುಕೇಶ್ ಚಂದ್ರಶೇಖರ್ ಕರಾಳ ಕಥೆ; ಸ್ಟ್ರೀಮಿಂಗ್ ಯಾವಾಗಿನಿಂದ?
ಭಾರತೀಯ ಪೌರಾಣಿಕ ಕಥೆ, ಆಧುನಿಕ AI ತಂತ್ರಜ್ಞಾನ ಮತ್ತು ಹೊಸ ತಲೆಮಾರಿನ ಡಿಜಿಟಲ್ ಮನರಂಜನೆಯ ಸಂಗಮವಾಗಿರುವ ‘Eklavya’ ಸರಣಿ 2027ರಲ್ಲಿ ಬಿಡುಗಡೆಯಾಗಲಿದೆ. AI ನಟನ ಮೂಲಕ ಭಾರತೀಯ ಮನರಂಜನಾ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಆರಂಭವಾಗಲಿದೆಯೇ ಎಂಬ ಕುತೂಹಲ ಈಗ ಹೆಚ್ಚಾಗಿದೆ.