ಆತ್ಮವಿಶ್ವಾಸಕ್ಕಿಂತ ದೊಡ್ಡ ಸಂಪತ್ತು ಈ ಜಗತ್ತಿನಲ್ಲಿ ಬೇರೆ ಇಲ್ಲ: ರಾಘವೇಶ್ವರ ಭಾರತೀ ಶ್ರೀ
Sri Raghaveshwara Bharathi Swamiji: ನಾವು ಮಾಡುವ ಕೆಲಸದಲ್ಲಿ ಯಶಸ್ಸು ಸಾಧ್ಯ ಎನ್ನುವ ಆತ್ಮವಿಶ್ವಾಸ ಇದ್ದರೆ ಆ ಕೆಲಸದಲ್ಲಿ ಸಾಧನೆ ಖಚಿತ. ಆರಂಭದಲ್ಲಿಯೇ ಸಾಧ್ಯವಾ.. ಸಾಧ್ಯವಿಲ್ಲ ಎನ್ನುವ ಅನುಮಾನಗಳು ಹುಟ್ಟಿದರೆ ಒಂದು ಹೆಜ್ಜೆಯನ್ನೂ ಮುಂದಿಡುವುದಕ್ಕೆ ಸಾಧ್ಯವಿಲ್ಲ ಎಂದು ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಹೇಳಿದರು.

-

ಸಾಗರ: ಆತ್ಮವಿಶ್ವಾಸಕ್ಕಿಂತ ದೊಡ್ಡ ಸಂಪತ್ತು ಈ ಜಗತ್ತಿನಲ್ಲಿ ಬೇರೆ ಯಾವುದೂ ಇಲ್ಲ ಎಂದು ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ (Sri Raghaveshwara Bharathi Swamiji) ಹೇಳಿದರು. ಸಾಗರದ ಶ್ರೀರಾಘವೇಶ್ವರ ಭವನದಲ್ಲಿ ಕಳೆದ 15 ದಿನಗಳಿಂದ ನಡೆದ 'ನವರಾತ್ರ ನಮಸ್ಯಾ' ಸಮಾರೋಪ ಧಾರ್ಮಿಕ ಸಭೆಯಲ್ಲಿ ಶನಿವಾರ ಶ್ರೀಗಳು ಆಶೀರ್ವಚನ ನೀಡಿದರು.
ನಾವು ಮಾಡುವ ಕೆಲಸದಲ್ಲಿ ಯಶಸ್ಸು ಸಾಧ್ಯ ಎನ್ನುವ ಆತ್ಮವಿಶ್ವಾಸ ಇದ್ದರೆ ಆ ಕೆಲಸದಲ್ಲಿ ಸಾಧನೆ ಖಚಿತ. ಆರಂಭದಲ್ಲಿಯೇ ಸಾಧ್ಯವಾ.. ಸಾಧ್ಯವಿಲ್ಲ ಎನ್ನುವ ಅನುಮಾನಗಳು ಹುಟ್ಟಿದರೆ ಒಂದು ಹೆಜ್ಜೆಯನ್ನೂ ಮುಂದಿಡುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ ಶ್ರೀಗಳು, ಸಾಗರದ ನವರಾತ್ರ ನಮಸ್ಯಾ ಅನೇಕ ಸಾಧ್ಯತೆಗಳನ್ನು ಇಲ್ಲಿ ನಿರ್ಮಾಣ ಮಾಡಿದೆ. ಅತ್ಯಂತ ಹೆಚ್ಚು ಚಿಂತೆ ಮಾಡುವ ಸಮಾಜದ ಭವಿಷ್ಯದ ಕುರಿತು ದೊಡ್ಡ ಸಮಾಧಾನ ಹಾಗೂ ಈ ಕಾರ್ಯಕ್ರಮದಲ್ಲಿ ಭವಿಷ್ಯದ ಉತ್ತರ ಸಿಕ್ಕಿದೆ. ಹಿರಿಯರ ಜತೆ ಮುಂದಿನ ಭವಿಷ್ಯದ ಪೀಳಿಗೆಯೂ ಅಸಂಖ್ಯಾತವಾಗಿ ತೊಡಗಿಕೊಂಡಿರುವುದು ಒಳ್ಳೆಯ ಬೆಳವಣಿಗೆ ಎಂದರು.

ನವರಾತ್ರಿಯ ಶರದೃತು ಎಂದರೆ ಅದು ಸ್ವಚ್ಛ ಆಗಸದ ಪರಿಶುದ್ಧ ಕಾಲ. ಕಾರ್ಮೋಡ ಕಳೆದು, ಕೆಸರು ನೀರು ಹರಿದು ಹೋಗಿ ತಿಳಿ ನೀರು ಉಳಿಯುವ ಕಾಲ. ಅಂತೆಯೇ ಇಲ್ಲಿಯ ನವರಾತ್ರಿ ಅದ್ಭುತ ಎನ್ನುವ ರೀತಿ ಸಂಪನ್ನಗೊಂಡಿದೆ. ಆದರೆ ಇದರ ಮೂಲವನ್ನು ಮರೆಯಬಾರದು ಈ ಎಲ್ಲ ಕಾರ್ಯದ ಹಿಂದೆ ಅಗೋಚರವಾಗಿರುವ ಶಕ್ತಿ ಇದೆ ಅದು ಜಗನ್ಮಾತೆ ಅಂತಹ ತಾಯಿಯ ಸ್ಮರಿಸುವುದನ್ನು ಮರೆತರೆ ಮುಂದೆ ಯಾವ ಕಾರ್ಯಕ್ಕೂ ಪ್ರೇರಣೆ ದೊರೆಯುವುದಿಲ್ಲ. ಶಕ್ತಿ ಪ್ರೇರಣೆ ನೀಡಿದರೆ ಎಲ್ಲವೂ ಸುಲಭ ಹಾಗಾಗಿ ಶಕ್ತಿಯ ಪ್ರೇರಣೆಯ ಮೂಲವಾದ ತಾಯಿಯನ್ನು ಮರೆಯಬಾರದು ಎಂದರು.
ನವರಾತ್ರ ನಮಸ್ಯಾ ಸಮಿತಿ ಕಾರ್ಯಾಧ್ಯಕ್ಷ ಗುರುಮೂರ್ತಿ ಹೆಗಡೆ ಕಲ್ಸೆಮನೆ ಸಭಾಪೂಜೆ ನೆರವೇರಿಸಿದರು. ಕಾರ್ಯದರ್ಶಿ ಪ್ರಸನ್ನ ಹೆಗಡೆ ಕೆರೆಕೈ ಕಾರ್ಯಕ್ರಮದ ಅಂಕಿಅಂಶ - ಕಾರ್ಯಕ್ರಮದ ತಯಾರಿ ಹಾಗೂ ಕಾರ್ಯಕ್ರಮದ ವೈಶಿಷ್ಟ್ಯತೆಗಳ ಕುರಿತಾಗಿ ಅವಲೋಕನ ಮಾಡಿದರು.
ರಾಘವೇಂದ್ರ ಮಧ್ಯಸ್ಥ, ರಮೇಶ್ ಹೆಗಡೆ ಗುಂಡೂಮನೆ, ವಿಷ್ಣು ಭಟ್, ಶ್ರೀನಾಥ ಸಾರಂಗ, ಮುರಳಿ ಗೀಜಗಾರು, ಸುಬ್ರಮಣ್ಯ ಐಸಿರಿ ಮತ್ತಿತರರು ಇದ್ದರು. ಧಾರವಾಡ ಜಿಲ್ಲೆಯ ಶ್ರೀ ಶಿವಾನಂದ ಭಾರತೀ ಸ್ವಾಮೀಜಿ ಆಗಮಿಸಿ ಶ್ರೀಮಠದ ಗೌರವ ಸ್ವೀಕರಿಸಿದರು.
ಈ ಸುದ್ದಿಯನ್ನೂ ಓದಿ | ಇನ್ನೊಬ್ಬರಿಗೆ ಕಷ್ಟ ಕೊಟ್ಟು ಖುಷಿ ಪಡುವವರು ರಕ್ಕಸರು: ರಾಘವೇಶ್ವರ ಶ್ರೀ
ಶ್ರೀಚಕ್ರ ಪೂಜೆ - ಸಂಸದ ಬಿ.ವೈ. ರಾಘವೇಂದ್ರ ಭಾಗಿ
ಶುಕ್ರವಾರ ಸಂಜೆ 'ನವರಾತ್ರ ನಮಸ್ಯಾ'ದ ಅಂಗವಾಗಿ ಶ್ರೀಗಳ ಸಾನ್ನಿಧ್ಯದಲ್ಲಿ ವಿಶೇಷ ಶ್ರೀಚಕ್ರ ಪೂಜೆ ಸಂಪನ್ನವಾಯಿತು. ಕೇರಳದ ಅನಂತ ಪದ್ಮನಾಭ ದೇವಾಲಯದ ಅರ್ಚಕರಾದ ವೇ.ಬ್ರ. ವಿನೀತ್ ತಂತ್ರಿಗಳು ಮತ್ತು ತಂಡದವರು ಶ್ರೀಚಕ್ರ ಪೂಜೆಯನ್ನು ನೆರವೇರಿಸಿದರು. ಶಿವಮೊಗ್ಗ ಸಂಸದರಾದ ಬಿ.ವೈ. ರಾಘವೇಂದ್ರ ಅವರು ಶ್ರೀಚಕ್ರಪೂಜೆಯಲ್ಲಿ ಭಾಗವಹಿಸಿ, ರಾಘವೇಶ್ವರ ಭಾರತೀ ಶ್ರೀಗಳಿಂದ ಆಶೀರ್ವಾದ ಪಡೆದರು.