ನಟ ಸುದೀಪ್ ತಾಯಿ ಹೆಸರಲ್ಲಿ ವಂಚನೆ: ಕ್ರಿಕೆಟ್ ಟೂರ್ನಿ ನಡೆಸುವುದಾಗಿ ಲಕ್ಷಾಂತರ ರೂ. ಸಂಗ್ರಹಿಸಿ ವ್ಯಕ್ತಿ ಎಸ್ಕೇಪ್
ಶಿರಾ ತಾಲೂಕಿನ ದೊಡ್ಡಗುಳ ಗ್ರಾಮದಲ್ಲಿ ʼಎರಡು ರಾಜ್ಯ ಒಂದು ಕಪ್ʼ ಎಂಬ ಹೆಸರಿನಲ್ಲಿ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸುವುದಾಗಿ ಪ್ರಶಾಂತ್ ಎಂಬಾತ ಸ್ಥಳೀಯರನ್ನು ಮತ್ತು ಕ್ರೀಡಾಪಟುಗಳನ್ನು ಸಂಪರ್ಕಿಸಿದ್ದನು. ಆಹ್ವಾನ ಪತ್ರಿಕೆಯಲ್ಲಿ ಕಿಚ್ಚ ಸುದೀಪ್ ಹಾಗೂ ಅವರ ತಾಯಿ ಸರೋಜಾ ಅವರ ಭಾವಚಿತ್ರಗಳನ್ನು ಮುದ್ರಿಸಿ, ಸಾರ್ವಜನಿಕರಲ್ಲಿ ನಂಬಿಕೆ ಹುಟ್ಟಿಸಿ, ಹಣ ವಸೂಲಿ ಮಾಡಿ ಪರಾರಿಯಾಗಿದ್ದಾನೆ.
-
ತುಮಕೂರು/ಶಿರಾ : ಕನ್ನಡದ ಸ್ಟಾರ್ ನಟ ಕಿಚ್ಚ ಸುದೀಪ್ (Actor Sudeep) ಅವರ ತಾಯಿ ದಿವಂಗತ ಸರೋಜಾ ಸಂಜೀವ್ ಅವರ ಹೆಸರನ್ನು ದುರುಪಯೋಗಪಡಿಸಿಕೊಂಡು, ಕ್ರಿಕೆಟ್ ಪಂದ್ಯಾವಳಿ (cricket tournament) ಆಯೋಜಿಸುವುದಾಗಿ ನಂಬಿಸಿ ಸಾರ್ವಜನಿಕರು ಹಾಗೂ ಕ್ರೀಡಾಪಟುಗಳಿಂದ ಲಕ್ಷಾಂತರ ರೂ. ಹಣ ಪಡೆದು ವಂಚಿಸಿರುವ ಗಂಭೀರ ಆರೋಪ ತುಮಕೂರು ಜಿಲ್ಲೆಯಲ್ಲಿ ಕೇಳಿಬಂದಿದೆ.
ಘಟನೆಯ ಹಿನ್ನೆಲೆ ಏನು?
ಶಿರಾ ತಾಲೂಕಿನ ದೊಡ್ಡಗುಳ ಗ್ರಾಮದಲ್ಲಿ "ಎರಡು ರಾಜ್ಯ ಒಂದು ಕಪ್" ಎಂಬ ಹೆಸರಿನಲ್ಲಿ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸುವುದಾಗಿ ಪ್ರಶಾಂತ್ ಎಂಬಾತ ಸ್ಥಳೀಯರನ್ನು ಮತ್ತು ಕ್ರೀಡಾಪಟುಗಳನ್ನು ಸಂಪರ್ಕಿಸಿದ್ದನು. ಟೂರ್ನಿಯ ಆಹ್ವಾನ ಪತ್ರಿಕೆಯಲ್ಲಿ ಕಿಚ್ಚ ಸುದೀಪ್ ಹಾಗೂ ಅವರ ತಾಯಿ ಸರೋಜಾ ಅವರ ಭಾವಚಿತ್ರಗಳನ್ನು ಮುದ್ರಿಸಿ, ಸಾರ್ವಜನಿಕರಲ್ಲಿ ನಂಬಿಕೆ ಹುಟ್ಟಿಸಿದ್ದನು.
ಹಣ ವಸೂಲಿ ಮಾಡಿ ಪರಾರಿಯಾದ ವಂಚಕ
ಪಂದ್ಯಾವಳಿಯಲ್ಲಿ ಭಾಗವಹಿಸಲು ನೋಂದಣಿ ಮಾಡಿಕೊಳ್ಳುವಂತೆ ಪ್ರಶಾಂತ್ ಒಟ್ಟು 27 ಕ್ರಿಕೆಟ್ ತಂಡಗಳಿಂದ ಹಣ ವಸೂಲಿ ಮಾಡಿದ್ದನು. ವಿವಿಧ ತಂಡಗಳಿಂದ 15,000 ರೂ., 19,000 ರೂ. ಹಾಗೂ 13,000 ರೂ.ಗಳಂತೆ ಹಂತ ಹಂತವಾಗಿ ಹಣ ಕಲೆಕ್ಟ್ ಮಾಡಲಾಗಿದ್ದು, ಒಟ್ಟು ಸುಮಾರು ಒಂದೂವರೆ ಲಕ್ಷ ರೂಪಾಯಿಗೂ ಅಧಿಕ ಹಣವನ್ನು ಸಂಗ್ರಹಿಸಿದ್ದನು.
ಅಕ್ಟೋಬರ್ 9 ರಂದೇ ಈ ಕ್ರಿಕೆಟ್ ಪಂದ್ಯಾವಳಿ ಆರಂಭವಾಗಬೇಕಿತ್ತು. ಆದರೆ, ಟೂರ್ನಿ ಆರಂಭಗೊಳ್ಳುವ ಕೆಲವೇ ಕ್ಷಣಗಳ ಮೊದಲು ಪ್ರಶಾಂತ್ ಸಂಗ್ರಹಿಸಿದ ಹಣದೊಂದಿಗೆ ನಾಪತ್ತೆಯಾಗಿದ್ದಾನೆ.
ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಸಂಗ್ರಹಿಸಿದ ಲಕ್ಷಾಂತರ ರೂಪಾಯಿ ಹಣದೊಂದಿಗೆ ಪ್ರಶಾಂತ್ ಪರಾರಿಯಾಗಿರುವುದು ಗೊತ್ತಾಗುತ್ತಿದ್ದಂತೆ, ಮೋಸಹೋದ ಆಯೋಜಕರು ಮತ್ತು ಕ್ರೀಡಾಪಟುಗಳು ಆಘಾತಕ್ಕೊಳಗಾಗಿದ್ದಾರೆ. ಈ ಸಂಬಂಧ ಪ್ರಶಾಂತ್ ವಿರುದ್ಧ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ದೂರು ದಾಖಲಾಗಿದ್ದು, ತಲೆಮರೆಸಿಕೊಂಡಿರುವ ವಂಚಕನಿಗಾಗಿ ಪೊಲೀಸರು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ.