Tumakuru Dasara Logo: ತುಮಕೂರು ದಸರಾ ಮಹೋತ್ಸವ ಅದ್ದೂರಿ ಆಚರಣೆಗೆ ಸಿದ್ಧತೆ: ಸೆ. 15ರಂದು ಲಾಂಛನ ಬಿಡುಗಡೆ
ನಗರದ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ತುಮಕೂರು ದಸರಾ ಉತ್ಸವ ಆಚರಣೆಯ ಪೂರ್ವಭಾವಿ ಸಭೆಯ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಕಳೆದ ಎರಡು ವರ್ಷಗಳ ಯಶಸ್ಸಿನ ಹಿನ್ನೆಲೆಯಲ್ಲಿ ಈ ಬಾರಿಯೂ ಸಮಿತಿಯ ಸದಸ್ಯರೊಂದಿಗೆ ಸಭೆ ನಡೆಸಿ ಸಿದ್ಧತೆಗಳನ್ನು ಅಂತಿಮಗೊಳಿಸಲಾಗಿದೆ
-
ತುಮಕೂರು: ರಾಜ್ಯದ ನಾಡಹಬ್ಬ ಮೈಸೂರು ದಸರಾ ಮಾದರಿಯಲ್ಲೇ ಈ ಬಾರಿಯೂ ತುಮಕೂರು ದಸರಾ ಉತ್ಸವ(Tumkur Dasara Festival)ವನ್ನು ಅತ್ಯಂತ ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ. ಪರಮೇಶ್ವರ್(Dr G Parameshwar) ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ತುಮಕೂರು ದಸರಾ ಉತ್ಸವ ಆಚರಣೆಯ ಪೂರ್ವಭಾವಿ ಸಭೆಯ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಕಳೆದ ಎರಡು ವರ್ಷಗಳ ಯಶಸ್ಸಿನ ಹಿನ್ನೆಲೆಯಲ್ಲಿ ಈ ಬಾರಿಯೂ ಸಮಿತಿಯ ಸದಸ್ಯರೊಂದಿಗೆ ಸಭೆ ನಡೆಸಿ ಸಿದ್ಧತೆಗಳನ್ನು ಅಂತಿಮಗೊಳಿಸಲಾಗಿದೆ ಎಂದರು.
ದಸರಾ ಮಹೋತ್ಸವದ ಪ್ರಮುಖ ಮುಖ್ಯಾಂಶಗಳು: ದಿನಾಂಕಗಳು: ಅಕ್ಟೋಬರ್ 11ರಂದು ನಗರದ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಧ್ವಜಾರೋಹಣ ಮತ್ತು ಮಹಾ ಮಂಗಳಾರತಿಯೊಂದಿಗೆ ದಸರಾ ಉತ್ಸವಕ್ಕೆ ಅಧಿಕೃತ ಚಾಲನೆ ಸಿಗಲಿದ್ದು, ಅಕ್ಟೋಬರ್ 21ರವರೆಗೆ ವಿಧ್ಯುಕ್ತವಾಗಿ ಜರುಗಲಿದೆ.
ಇದನ್ನೂ ಓದಿ: G Parameshwar: ಬಾಬಾಸಾಹೇಬರ ದೂರದೃಷ್ಟಿಯ ಚಿಂತನೆಗಳು ದೇಶದ ಪ್ರಗತಿಗೆ ಬುನಾದಿ: ಡಿಸಿಎಂ ಡಾ.ಜಿ.ಪರಮೇಶ್ವರ
ಲಾಂಛನ ಬಿಡುಗಡೆ: ಸಿದ್ಧಗೊಂಡಿರುವ ಪ್ರಸ್ತಾವನೆಯಂತೆ ಸೆ.15ರಂದು ತುಮಕೂರು ದಸರಾ ಉತ್ಸವದ ಅಧಿಕೃತ ಲಾಂಛನವನ್ನು ಬಿಡುಗಡೆ ಮಾಡಲಾಗುವುದು.
ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು: ಒಂಬತ್ತು ದಿನಗಳ ಕಾಲ ನವದುರ್ಗೆಯರ ಪೂಜೆ, ಪ್ರತಿದಿನ ಹೋಮ-ಹವನಗಳು ನಡೆಯಲಿವೆ. ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಯುವ ದಸರಾ, ಮಹಿಳಾ ದಸರಾ, ವಸ್ತುಪ್ರದರ್ಶನ, ಫಲಪುಷ್ಪ ಪ್ರದರ್ಶನ ಹಾಗೂ ಕವಿಗೋಷ್ಠಿಗಳು ಆಯೋಜನೆಗೊಳ್ಳಲಿವೆ.
ವಿಶೇಷ ಆಕರ್ಷಣೆಗಳು: ನಗರದಾದ್ಯಂತ ಅದ್ಧೂರಿ ದೀಪಾಲಂಕಾರ ಮಾಡಲಿದ್ದು, ಸಾರ್ವಜನಿಕರು ರಾತ್ರಿ ವೇಳೆ ಇದನ್ನು ವೀಕ್ಷಿಸಲು ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಅಮಾನಿಕೆರೆಯಲ್ಲಿ ಶಾಶ್ವತ ವಾಗಿರುವ ಅತಿದೊಡ್ಡ "ಲೈಟ್ ಆ್ಯಂಡ್ ಸೌಂಡ್" ಕಾರಂಜಿ, ಹೆಲಿಕಾಪ್ಟರ್ ರೈಡ್, ಪಂಜಿನ ಕವಾಯತು ಮತ್ತು ಡ್ರೋನ್ ಶೋ ಪ್ರಮುಖ ಆಕರ್ಷಣೆಯಾಗಲಿವೆ. ಕ್ರೀಡಾಸಕ್ತರಿಗಾಗಿ 9 ವಿಭಿನ್ನ ಕ್ರೀಡೆಗಳಿಗೆ ಅವಕಾಶ ಕಲ್ಪಿಸಲಾಗಿದೆ.
ಎತ್ತಿನಹೊಳೆ ಯೋಜನೆ ಹಾಗೂ ಇತರೆ ಅಭಿವೃದ್ಧಿ ಕಾರ್ಯಗಳು: ಸಭೆಯ ಬಳಿಕ ಮಾತನಾಡುತ್ತಾ, ಎತ್ತಿನಹೊಳೆ ಕುರಿತು ಮಹತ್ವದ ಮಾಹಿತಿಯನ್ನು ಹಂಚಿಕೊಂಡ ಅವರು, ಅರಣ್ಯ ಪ್ರದೇಶದಲ್ಲಿ ಬಾಕಿ ಉಳಿದಿದ್ದ 500 ಮೀಟರ್ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಅಕ್ಟೋಬರ್ ವೇಳೆಗೆ ಪ್ರಾಯೋಗಿಕವಾಗಿ (ಟ್ರಯಲ್ ರನ್) ತುಮಕೂರಿಗೆ ಎತ್ತಿನಹೊಳೆ ನೀರು ಹರಿಸುವ ಗುರಿ ಹೊಂದಲಾಗಿದೆ ಎಂದರು.
ಸರಕಾರಿ ಮೆಡಿಕಲ್ ಕಾಲೇಜು: ರಾಜ್ಯದಲ್ಲಿ ಘೋಷಣೆಯಾಗಿರುವ 6 ಹೊಸ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ತುಮಕೂರೂ ಒಂದಾಗಿದ್ದು, ಇದನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮಾದರಿಯಲ್ಲಿ ಕೈಗೆತ್ತಿಕೊಳ್ಳಲು ಕೇಂದ್ರ ಸರ್ಕಾರದ ಸೂಚನೆಯಂತೆ ಕ್ರಮ ವಹಿಸಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಶುಭಕಲ್ಯಾಣ್, ಸಿಇಒ ಅಶ್ವಿಜ, ಎಸ್ಪಿ ಅಶೋಕ್ ಇದ್ದರು.